ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ತೇಜಸ್ವಿ ಎನ್ನುವ ವಿಸ್ಮಯ*****
” ಏನು, ಏಲಕ್ಕಿ ಗಿಡ ಬೆಳೆಯೋದು ಹೇಗೆ ಅಂತ ಕೇಳೋಕೆ ಅಷ್ಟು ದೂರದಿಂದ ಬಂದ್ರಾ?’ ಅರ್ಧ ಆಶ್ಚರ್ಯ, ಇನ್ನರ್ಧ ಸಣ್ಣನೆಯ ಸಿಟ್ಟು ಮುಖಭಾವದಲ್ಲಿ ವ್ಯಕ್ತವಾಗುತ್ತಿದ್ದರೂ, ಧ್ವನಿಯಲ್ಲಿ ಮಾತ್ರ ಸಖೇದಾಶ್ಚರ್ಯವನ್ನು ತುಳುಕಿಸುತ್ತ ಪ್ರಶ್ನೆ ಕೇಳಿದವರು ತೇಜಸ್ವಿ. – ಅದೇ ನಮ್ಮೆಲ್ಲರಿಗೂ ಅಂಥದ್ದೇ ವಿಸ್ಮಯವನ್ನ, ಅಚ್ಚರಿಯನ್ನು ಉಂಟು ಮಾಡಿದ, ಈಗಲೂ ನೆನಪಾದಾಗ ಅಂಥ ಭಾವನೆಯನ್ನು ವಿಸ್ತರಿಸುತ್ತಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ.

ನಾನು ಅವರ ಮನೆಯ ವರಾಂಡದಲ್ಲಿ ನಿಂತಿದ್ದೆ. ಬೆಳಿಗ್ಗೆ ಸಿದ್ದಾಪುರದಿಂದ ಹೊರಟು, ಸಾಗರ, ತೀರ್ಥಹಳ್ಳಿ ಮಾರ್ಗವಾಗಿ ಮೂಡಿಗೆರೆ ತಲುಪಿ, ಅಲ್ಲಿಂದ ಆಟೋದಲ್ಲಿ ಹ್ಯಾಂಡ್‍ಪೋಷ್ಟ ಎನ್ನುವ ಊರಲ್ಲದ (ಈಗ ಸಾಕಷ್ಟು ಮನೆಗಳಾಗಿವೆ) ಒಂದಿಷ್ಟು ಮನೆಗಳಿರುವ ತಾಣದಲ್ಲಿ ಬಂದು,ಅಲ್ಲಿಂದ ತೇಜಸ್ವಿಯವರ ತೋಟದ ಗೇಟಿನೆದುರು ಇಳಿದು, ಅಳುಕುತ್ತಲೇ ಅವರ ಮನೆಯೆದುರು ನಿಂತಾಗ ಮಧ್ಯಾಹ್ನ ಎರಡೂವರೆ- ಮೂರು ಗಂಟೆ.
ಯಾರೋ ಬಂದರೆಂದು ಗೊತ್ತಾಗಿರಬೇಕು; ಬಾಗಿಲು ತೆರೆಯಿತು. ತೇಜಸ್ವಿಯವರೇ ಬಾಗಿಲು ತೆರೆದದ್ದು. ಸದಾ ಬೇರೆಯವರಿಗೆ ಅಚ್ಚರಿ ಉಂಟು ಮಾಡುವ ಅವರಿಗೂ ಒಂಥರಾ ಅಚ್ಚರಿಯಾಗಿರಬೇಕು. ಆ ಹೊತ್ತಿನಲ್ಲಿ ಮುಂಚಿತವಾಗಿ ತಿಳಿಸದೇ ಬಂದದ್ದರ ಅಸಮಾಧಾನದ ಜೊತೆ ಅಪರಿಚಿತವಾದ ಮುಖ ಕಂಡದ್ದಕ್ಕಿರಬೇಕು. ಅದ್ಯಾವುದನ್ನು ತೋರಿಸಿಕೊಳ್ಳದೇ ‘ ಬನ್ನಿ’ ಎಂದರು. ಮೆಟ್ಟಿಲು ಹತ್ತಿ, ಎದುರಿನ ಜಗಲಿಯಲ್ಲಿ ನಿಂತೆ. ಮನಸ್ಸಿನೊಳಗೆ ಸಮ್ಮಿಶ್ರ ಭಾವನೆಗಳ ಕೋಲಾಹಲ. ತುಂಬ ದಿನಗಳಿಂದ ಕಾಣಬೇಕೆಂದು ಕಾತರಿಸುತ್ತಿದ್ದ ಅಪೂರ್ವ ಮನುಷ್ಯನನ್ನು ಕಂಡ ಆಹ್ಲಾದ ಬೆರೆತ ಖುಷಿ, ಅವರ ಸಾನಿಧ್ಯದಲ್ಲಿ ನಿಂತ ಧನ್ಯತೆಯ ಜೊತೆಗೆ ನನಗೆ ಮಾಮೂಲಿಯಾಗಿರುವ ಹಿಂಜರಿಕೆ, ತಪ್ಪು ತಿಳಿದು ಬೈಯಿಸಿಕೊಳ್ಳಬೇಕಾಗುತ್ತೇನೋ? ಎನ್ನುವ ಭಯ.
ಸದ್ಯ ಏನೂ ಗದರಲಿಲ್ಲ, ಕನ್ನಡಕವನ್ನು ಒಮ್ಮೆ ಸರಿಪಡಿಸಿಕೊಂಡು, ಗಡ್ಡವನ್ನ ಸವರುತ್ತ ‘ಬನ್ನಿ’ ಎಂದು ಮತ್ತೆ ಕರೆದು ಒಳಗೆ ಕರೆದೊಯ್ದರು.

ಅರೆ ವರ್ತುಲಾಕಾರದ,ಕಿಡಕಿಯ ಬದಲಾಗಿ ಒಂದು ಪಾಶ್ರ್ವದ ಗೋಡೆಗೆ ಕಿಡಕಿಯ ಬದಲಾಗಿ, ಸಂಪೂರ್ಣ ಗ್ಲಾಸ್ ಜೋಡಿಸಿದ ಕೊಠಡಿ ಅದು. ಅಲ್ಲಿದ್ದ ಕುರ್ಚಿಯ ಮೇಲೆ ಕೂತವನ ಬಳಿ ಎದುರಿನ ಕುರ್ಚಿಯ ಮೇಲೆ ಕೂತು ನನ್ನ ಪ್ರವರ ಕೇಳತೊಡಗಿದರು. ಆವಾಗಲೇ ಅವರಿಂದ ಈ ಮೇಲಿನ ಉದ್ಗಾರ ಬಂದದ್ದು.
‘ಅಲ್ರೀ, ಶಿರಸಿ ಸಿದ್ದಾಪುರ ಎಲ್ಲಿ, ಇದೆಲ್ಲಿ? ಅಷ್ಟು ದೂರದಿಂದ ಏಲಕ್ಕಿ ಸಸಿ ಹ್ಯಾಗೆ ಬೆಳೆಸೋದು ಎಂತಾ ಕೇಳೋದಕ್ಕೆ ಬಂದಿದೀರಲ್ಲಾ? ಎಂತಾ ಹುಡುಗಾಟ’ ಎಂದು ಸಣ್ಣನೆ ನಕ್ಕರು. ಅಷ್ಟರಲ್ಲಿ ಅವರ ಮನೆಯವರು ಕಾಫಿ ತಂದರು.
ನಾನು ಕುರ್ಚಿಯ ತುದಿಯಲ್ಲಿ ಕೂತಿದ್ದೆ. ಸರಿಯಾಗಿ ಒರಗಿ ಕೂರಲು ಸಣ್ಣ ಭಯ. ಕಾಫಿ ತಂದಿಟ್ಟಾಗಲೇ ಅದರ ಘಮ ಮೂಗನ್ನು ಅರಳಿಸಿಬಿಟ್ಟಿತ್ತು. ಆವರೆಗೆ ಇದ್ದ ತುಡಿತಗಳೆಲ್ಲ ಸ್ವಲ್ಪ ಮಟ್ಟಿಗೆ ಶಮನವಾಗತೊಡಗಿತು. ‘ ತಗೋಳ್ಳಿ’ ಎಂದವರು ತಾವೂ ಒಂದು ಗುಟುಕು ಕುಡಿದರು. ಬೆಳಗಿನ ತಿಂಡಿ ಬಿಟ್ಟರೆ ಮತ್ತೇನೂ ತಿನ್ನದೇ ಹಸಿವು ಕಟ್ಟಿಕೊಂಡಿದ್ದೆ. ಅದರಲ್ಲೂ ಆಗಲೇ ಆ ಪರಿಮಳಕ್ಕೆ ವಶನಾಗಿದ್ದ ನಾನು ಕಾಫಿ ಗುಟುಕರಿಸಿದೆ. ವಾಹ್! ಎಂಥ ರುಚಿಯಾದ ಕಾಫಿ!. ಸತ್ಯವಾಗಿ ಹೇಳುತ್ತೇನೆ. ಆ ನಂತರ ಚಿಕ್ಕಮಗಳೂರು, ಕೊಡಗು ಮುಂತಾದೆಡೆಗಳಲ್ಲಿ ರುಚಿಯಾದ ಹೋಟೆಲ್ ಕಾಫಿ ಬಿಡಿ, ಮನೆಯಲ್ಲಿ ಮಾಡಿದ ಕಾಪಿಯನ್ನುü ಸಾಕಷ್ಟು ಕುಡಿದಿದ್ದೇನೆ. ಇದರ ಸ್ವಾದ ಮಾತ್ರ ಅದ್ಯಾವುದಕ್ಕೂ ಇಲ್ಲ. ಈಗಲೂ ನೆನಪಿಸಿಕೊಂಡರೆ ಅದರ ರುಚಿ,ಘಮ ನನ್ನ ನಾಲಗೆಯ ಮೇಲಿದೆ.
ಕಾಫಿ ಕುಡಿದು ಮುಗಿಯುವದರೊಳಗೆ ತೇಜಸ್ವಿ ನನ್ನ ಬಗ್ಗೆ ವಿವರಗಳನ್ನು ಪಡೆದುಕೊಂಡಿದ್ದರು. ನನಗೆ ಅವರ ಪ್ರಶ್ನೆಗಳನ್ನ ಕೇಳಿ, ಅದಕ್ಕೆ ಉತ್ತರಿಸಬೇಕೋ? ಅಥವಾ ಆ ಕಾಫಿಯ ರುಚಿಯನ್ನ ಅನುಭವಿಸಬೇಕೋ? ಎನ್ನುವ ಗೊಂದಲ. ನನ್ನ ತೋಟದ ಬೆಳೆ, ಕೃಷಿಯ ಕುರಿತು ಕೇಳಿಸಿಕೊಂಡವರು ‘ಅಲ್ರೀ, ನಿಮ್ಮಲ್ಲಿ ಏಲಕ್ಕಿ ಬೆಳಿತಾರಲ್ಲಾ, ನಿಮಗೆ ಅದೇನೂ ಹೊಸತಲ್ಲವಲ್ಲ. ಇಷ್ಟು ದೂರ ಅದಕ್ಕೇಕೆ ಬರೋಕೋದ್ರಿ?’ ಎಂದರು. ಅವರಿಗೆ ಇನ್ನೂ ನನ್ನ ಬರುವಿಕೆ ಪ್ರಶ್ನಾರ್ಥಕವಾಗೇ ಇತ್ತೇನೋ?
ಪ್ಲಾಶ್ ಬ್ಯಾಕ್-
ಅಷ್ಟರಲ್ಲಾಗಲೇ ತೇಜಸ್ವಿ ತಮ್ಮ ಬರವಣಿಗೆಯ ಮೂಲಕ ಪರಿಚಿತರಾಗಿದ್ದರು. ಲಂಕೇಶ್ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ಪರಿಸರದ ಕಥೆಗಳು, ಈ ಅದ್ಭುತ ಜಗತ್ತು, ಕೆನೆತ್ ಅಂಡರಸನ್‍ರ ಹುಲಿ ಶಿಕಾರಿ, ಜಿಮ್ ಕಾರ್ಬೆಟ್‍ರ ಚಿರತೆ ಶಿಕಾರಿ ಭಾವಾನುವಾದ, ಕಿರಗೂರಿನ ಗಯ್ಯಾಳಿಗಳು ಕಿರು ಕಾದಂಬರಿ ಮುಂತಾದವುಗಳ ಮೂಲಕ ಮನಸ್ಸನ್ನ ಸೆಳೆದುಬಿಟ್ಟಿದ್ದರು.
ನಾನು ಮೊಟ್ಟ ಮೊದಲು ಅವರ ಹೆಸರು ಕೇಳಿದ್ದು ಅಥವಾ ಓದಿದ್ದು ತುಷಾರ ಮಾಸ ಪತ್ರಿಕೆಯಲ್ಲಿ. ಒಂದು ಸಂಚಿಕೆಯಲ್ಲಿ ಕಪ್ಪು-ಬಿಳಿಪು ಫೋಟೊಗಳ ಮತ್ತು ಕ್ಲುಪ್ತವಾದ ಶಿರ್ಷೀಕೆಗಳಿದ್ದ ಪೋಟೊ ಸರಣಿಯಿತ್ತು. ಎಲ್ಲ ಫೋಟೊಗಳೂ ಮಳೆಗಾಲದ ಮುಂಚಿನ ಮತ್ತು ಮಳೆ ಹಿಡಿಯವ ಕಾಲದ ಮಲೆನಾಡಿನ ಚಿತ್ರಣಗಳು. ಪ್ರಕೃತಿಯ ಛಾಯಾಚಿತ್ರದ ಜೊತೆ ಆ ಸಂದರ್ಭದಲ್ಲಿ ಮಲೆನಾಡಿನ ಜನಜೀವವನ್ನು ಪರಿಣಾಮಕಾರಿಯಾಗಿ ವಿವರಿಸುವಂಥಹ ಚಿತ್ರಗಳು. ಅವೆಲ್ಲ ಪೂರ್ತಿಯಾಗಿ ನೆನಪಿಲ್ಲದಿದ್ದರೂ ಪಶ್ಚಿಮಘಟ್ಟದ ಎತ್ತರದ ಪರ್ವತದ ಮೇಲೆ ಮುಂಗಾರು ಮೋಡ ಹಾದು ಬರುತ್ತಿರುವದು ಮತ್ತು ಪೇಟೆಯಲ್ಲಿ ಖರೀದಿಸಿದ ವಸ್ತುಗಳನ್ನು ಸಣ್ಣ ಮೂಟೆ ಕಟ್ಟಿ ತಲೆ ಮೇಲೆ ಇಟ್ಟುಕೊಂಡ ಹಳ್ಳಿಯ ರೈತನೊಬ್ಬ ತೆರಳುತ್ತಿರುವ ಫೋಟೊ. ಆಕಾಶದತ್ತ ನೆಟ್ಟ ಆ ರೈತನ ಕಣ್ಣ ನೋಟದಲ್ಲಿ ಮಳೆ ಬರಬಹುದೇ? ಎನ್ನುವ ಪ್ರಶ್ನೆ ಮತ್ತು ಬಂದು ಬಿಟ್ಟರೆ ಎನ್ನುವ ಆತಂಕ, ಮುಖಭಾವದಲ್ಲಿ ಬೇಗ ಮನೆ ಸೇರಬೇಕೆಂಬ ಧಾವಂತವಿದ್ದಂತೆ ನನಗೆ ಕಂಡಿತ್ತು.( ಫೋಟೊ ಅಥವಾ ಬರಹಗಳು ಅವರವರ ಭಾವಕ್ಕೆ, ಅವರವರ ಬಕುತಿಗೆ ಅಲ್ಲವೇ? ನನಗೆ ಕಂಡದ್ದು ಮಾತ್ರ ನಿಜವಲ್ಲವಲ್ಲ). ಆ ಫೊಟೊ ಎಷ್ಟು ಸ್ಪುಟವಾಗಿತ್ತು ಅಂದರೆ ಆ ರೈತನ ಸುಸ್ತುಗಳನ್ನ ಮುಖದ ನೆರಿಗೆಗಳು ವ್ಯಕ್ತಪಡಿಸುತ್ತಿದ್ದವು. ನನಗೆ ಅಚ್ಚರಿಯಾದದ್ದು ಅದೆಲ್ಲಕ್ಕಿಂತ ಆ ರೈತ ತುಟಿಯಲ್ಲಿ ಕಚ್ಚಿಕೊಂಡಿದ್ದ ಬೀಡಿ ಅರ್ಧ ಸುಟ್ಟು, ಸುಟ್ಟ ಬೀಡಿಯ ಬೂದಿಯೂ ಅದಕ್ಕೇ ಅಂಟಿಕೊಂಡದ್ದನ್ನ (ವಿವರಣೆ ಕಷ್ಟವಾದದ್ದರಿಂದ ಉದಾ: ಸುಡುತ್ತಿರುವ ಅಗರಬತ್ತಿಯ ತುದಿಗೆ ಅಂಟಿಕೊಂಡಿರುತ್ತಲ್ಲ, ಆ ಥರಾ) ಅವರು ಚಿತ್ರಿಸಿದ್ದರು. ಅದು ನನ್ನನ್ನು ಒಂದು ಅತ್ಯುತ್ತಮ ಬರಹಕ್ಕಿಂತ ಹೆಚ್ಚು ಆಕರ್ಷಿಸಿತ್ತು. ಅಷ್ಟರ ನಂತರ ತುಷಾರದಲ್ಲೇ ಓದಿದ ‘ ಕರ್ವಾಲೋ’. ಚಿಕ್ಕವನಿದ್ದ ನಾನು ಈ ತಿಂಗಳ ಓದಿನ ನಂತರ ಮತ್ತೊಂದು ತಿಂಗಳವರೆಗೂ ಕಾದ ಚಡಪಡಿಕೆ ಈಗಲೂ ನೆನಪಿದೆ. ಆ ನಂತರ ಅವರನ್ನು ಓದತೊಡಗಿದ್ದು ಲಂಕೇಶ್ ಪತ್ರಿಕೆಯಲ್ಲೇ.
ಆ ನಂತರದಲ್ಲಿ ಅವರದೊಂದು ಪುಸ್ತಕ ಸಿಕ್ಕಿತು.

ಪ್ರಸಿದ್ಧ ಕೃಷಿ ತಜ್ಞ ಪುಕುವೋಕಾ ಅವರ ‘ ‘ಸಹಜ ಕೃಷಿ’ ಎನ್ನುವ ಪುಸ್ತಕವನ್ನು ತೇಜಸ್ವಿ ಪ್ರಕಟಿಸಿದ್ದರು. ಬದುಕಿನ ದಿಕ್ಕು ಬದಲಾದ ಸಂಕಟ, ತಳಮಳ, ಹೊಸ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅನಿವಾರ್ಯತೆ, ಒತ್ತಡ, ಹಣಕಾಸಿನ ಬಿಕ್ಕಟ್ಟು, ಅದನ್ನು ಪರಿಹರಿಸಿಕೊಳ್ಳುವ ಚಿಂತೆ.. ಇವೆಲ್ಲ ಹದಿಹರಯದಿಂದ ಯೌವನಕ್ಕೆ ದಾಟಿಕೊಳ್ಳುತ್ತಿದ್ದ ನನ್ನನ್ನು ಹಿಂಡಿಹಿಪ್ಪೆ ಮಾಡುತ್ತಿದ್ದವು. ಸಮೃದ್ಧ ಕೌಟುಂಬಿಕ ವ್ಯವಸ್ಥೆ ಅಥವಾ ಇನ್ನೂ ಗಟ್ಟಿಯಾಗಿರುವ ಅಪ್ಪ-ಅಮ್ಮನ ನೆರಳಲ್ಲಿದ್ದ ಸರೀಕ ಗೆಳೆಯರ ನಡುವೆ ನಾನು ಬಯಲ ಬಿರುಗಾಳಿಯಲ್ಲಿ ಸಿಕ್ಕ ಗಾಳಿಪಟವಾಗಿದ್ದೆ. ಅಬ್ಬರದ ಮಳೆ,ಗಾಳಿಗೆ ಕಿತ್ತು ಹೋದ ಗೂಡನ್ನು ಮರಿಹಕ್ಕಿಯಾದ ನಾನೇ ಮತ್ತೆ ಕಟ್ಟಿಕೊಳ್ಳಬೇಕಿತ್ತು. ಇಂಥ ಹೊತ್ತಲ್ಲಿ ನನಗೆ ಸಿಕ್ಕಿದ್ದು ಈ ಪುಸ್ತಕ.
****
ಗಂಗಾಧರ ಕೊಳಗಿ
( ಮುಂದುವರಿಯುವುದು)

About the author

Adyot

Leave a Comment