ತೇಜಸ್ವಿ ಎಂಬ ವಿಸ್ಮಯ…..
ಏಲಕ್ಕಿ ಮಲೆನಾಡಿನ ಕೃಷಿಕರಿಗೆ ಅಪರಿಚಿತವೇನಲ್ಲ. ಹಾಗಂತ ಮಲೆನಾಡಿನಲ್ಲಿ ಬದುಕುವ ಎಲ್ಲರಿಗೂ ಏಲಕ್ಕಿ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ ಎನ್ನುವಂತೆಯೂ ಇಲ್ಲ. ಆದರೆ ಅದನ್ನು ಬಹುತೇಕ ಎಲ್ಲರೂ ನೋಡಿಯೇ ನೋಡಿರುತ್ತಾರೆ. ಮಿಶ್ರ ಬೆಳೆಗಳನ್ನು ಬೆಳೆಯುವ ಅಡಕೆ ಬೇಸಾಯಗಾರರಂತೂ ಏಲಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗದಿದ್ದರೂ ಮನೆ ಖರ್ಚಿಗೆ ಎಂದು ನಾಲ್ಕಾರು ಏಲಕ್ಕಿ ಹಿಂಡನ್ನಾದರೂ ಬೆಳೆದಿರುತ್ತಾರೆ.
ತಂಪು ವಾತಾವರಣ, ತೇವಾಂಶ ಹೆಚ್ಚಿರುವ ಪ್ರದೇಶದಲ್ಲಿ ಸೊಂಪಾಗಿ ಬೆಳೆಯುವ ಏಲಕ್ಕಿ ಮಣ್ಣಿನ ಗುಣವನ್ನೂ ಅವಲಂಬಿಸಿರುತ್ತದೆ. ಮಲೆನಾಡಿನ ದಟ್ಟಕಾಡಿನ ಗುಡ್ಡಬೆಟ್ಟದ ನಡುವಿನ ಕಣಿವೆಗಳಲ್ಲಿ ಸಾಂಪ್ರದಾಯಿಕವಾಗಿ ರೂಡಿಸಿದ ಅಡಕೆ ತೋಟಗಳಲ್ಲಿ ಹೆಚ್ಚಿನದಾಗಿ ಬೆಳೆಯುತ್ತಾರೆ. ಎರಡು ಸಾಲಿನ ಮಧ್ಯೆ ಇರುವ ಕಾದಿಗೆ ಎಂದು ಕರೆಯಲಾಗುವ ಸಣ್ಣ ತೋಡಿನ ಅಕ್ಕಪಕ್ಕ ನೆಟ್ಟು, ಬೆಳೆಸುವ ಯಾಲಕ್ಕಿ ಅಸಂಖ್ಯಾತ ಹಿಳ್ಳುಗಳಾಗಿ ಬೆಳೆದು, ಬುಡದಲ್ಲಿ ಕುಡಿಯೊಡೆದ ಉದ್ದನೆಯ ಬಳ್ಳಿಗಳಲ್ಲಿ ಹೂವಾಗಿ, ಕಾಯಾಗಿ ಬೆಳೆಯುತ್ತದೆ. ಆ ಕಾಯಿ ಒಂದೇ ಸಾರಿ ಹಣ್ಣಾಗದಿರುವ ಕಾರಣ ಹಣ್ಣಾದಂತೆಲ್ಲ ಕೊಯ್ದು ಒಣಗಿಸಲಾಗುತ್ತದೆ. ಅದನ್ನು ಒಣಗಿಸಲು ವಿಶೇಷ ಪದ್ಧತಿಯಿದೆ ಎಂದು ಕೇಳಿದ್ದೇನೆ ಹೊರತು ನೋಡಿಲ್ಲ. ಏಲಕ್ಕಿಯನ್ನು ಬೆಳೆಯದ ಪ್ರದೇಶದ ಜನರ ಅದರ ಕುರಿತಾಗಿ ಇರುವ ತಿಳುವಳಿಕೆಯ ಕೊರತೆಯನ್ನು ಹಾಸ್ಯ ಮಾಡುವ ಮಾತುಗಳನ್ನಂತೂ ಆಗೀಗ ಕೇಳುತ್ತಲೇ ಇರುತ್ತೇನೆ.
ನಮ್ಮಲ್ಲಿ ಹತ್ತಾರು ಕ್ವಿಂಟಲ್‍ನಷ್ಟು ಏಲಕ್ಕಿ ಬೆಳೆಯುವವರು ಇಲ್ಲದಿದ್ದರೂ ಒಂದೆರಡು ಕ್ವಿಂಟಲ್ ನಷ್ಟು ಬೆಳೆಯುವವರು ಇದ್ದೇ ಇದ್ದಾರೆ. ಆದರೆ ನಮ್ಮಲ್ಲಿಯ ತೋಟಗಾರರಲ್ಲಿ ಸೂಕ್ಷ್ಮವಾದ ತರತಮ ವ್ಯವಸ್ಥೆಯೊಂದು ಇರುವದನ್ನು ನಾನು ಗಮನಿಸಿದ್ದೇನೆ.( ಹಾಗೇನಿಲ್ಲ ಎಂದು ವಾದಿಸುವವರಿದ್ದರೆ ನನ್ನದು ದೃಷ್ಟಿ ದೋಷ ಎಂದು ಸುಮ್ಮನಿದ್ದು ಬಿಡಿ) ಅದು ಜಾತಿ,ಪಾತಿಗಳ ವರ್ಗೀಕರಣವಾಗಿರದೇ ಬೆಳೆಗಾರನ ಉತ್ಪನ್ನದ ಮೂಲಕ ಗಣಿಸುವಂಥದ್ದು. ಹೆಚ್ಚು ಅಡಕೆ ಬೆಳೆಯುವವರು ಸಾಕಷ್ಟಿದ್ದರೂ ಆ ವಲಯದಲ್ಲಿ ಏಲಕ್ಕಿ ಹೆಚ್ಚು ಬೆಳೆಯುವ ಬೆಳೆಗಾರನಿಗೆ ಕಿಮ್ಮತ್ತು ಜಾಸ್ತಿ. ಮತ್ತು ಅವನಲ್ಲೂ ಒಂಥರಾ ಒಳ ಅಹಂಕಾರ ಹಾಗೂ ತಾನು ಏಲಕ್ಕಿಯಿಂದ ಪಡೆದಿರಬಹುದಾದ ಸಂಪತ್ತನ್ನು ಮುಚ್ಚಿಟ್ಟುಕೊಳ್ಳುವ ಅವಸರವೊಂದು ಇದ್ದೇ ಇರುತ್ತದೆ. ಎರಡನೇ ಸ್ಥಾನ ಕಾಳು ಮೆಣಸು ಹೆಚ್ಚು ಬೆಳೆಯುವನದ್ದು. ಹಿಂದಿನ ತಲೆಮಾರಿನಲ್ಲಿ ಅದನ್ನು ಕಪ್ಪು ಬಂಗಾರ ಎಂದೇ ಕರೆಯುತ್ತಿದ್ದರಂತೆ. ಉತ್ಪಾದಿಸಿದ ಕಾಳುಮೆಣಸನ್ನು ಆಯಾ ವರ್ಷವೇ ಮಾರದೇ, ಹಾಗೇ ಇಟ್ಟುಕೊಂಡು ಒಳ್ಳೆಯ ದರ ಬರುವದನ್ನು ಕಾದು ಹತ್ತಾರು ವರ್ಷದ ನಂತರ ಮಾರುವ ಅಲಿಖಿತ ಪದ್ಧತಿಯೊಂದು ಚಾಲ್ತಿಯಲ್ಲಿ ಇತ್ತಂತೆ. ಆ ಕಾಳು ಮೆಣಸಿನಿಂದ ಬಂದ ಹಣವನ್ನು ಬೇರ್ಯಾವುದಕ್ಕೂ ವಿನಿಯೋಗಿಸದೇ ಬಂಗಾರದ ಆಭರಣ ಮಾಡಿಸುತ್ತಿದ್ದರಂತೆ. ಒಬ್ಬ ತೋಟಿಗನ ಬಳಿ ಇರಬಹುದಾದ ಬಂಗಾರದ ಶಿಲ್ಕನ್ನು ಆತ ಬೆಳೆಯುವ ಕಾಳು ಮೆಣಸಿನ ಪ್ರಮಾಣದ ಮೇಲೆ ಅಂದಾಜಿಸುವ ಕಿಲಾಡಿ ಕೆಲಸ ಮಾಡುವವರೂ ಇದ್ದರಂತೆ. ಓರ್ವ ಆತ್ಮೀಯ ಕಲಾವಿದರು ಒಂದು ಸ್ವಾರಸ್ಯಕರವಾದ ಸಂಗತಿ ಹೇಳಿದ್ದರು. ಹಿಂದೆಲ್ಲ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಜರುಗುವ ತಾಳಮದ್ದಳೆಯಲ್ಲಿ ಪ್ರಸಂಗದ ಮುಖ್ಯ ಪಾತ್ರಧಾರಿ ಆ ಸುತ್ತಲಿನ ಅತಿ ಹೆಚ್ಚು ಅಡಕೆ ತೋಟ ಇದ್ದವನದ್ದಾಗಿರುತ್ತಿತ್ತಂತೆ. ಉದಾಹರಣೆಗೆ ಕೃಷ್ಣ ಸಂಧಾನ ಪ್ರಸಂಗದಲ್ಲಿ ಧುರ್ಯೋಧನ ಅಥವಾ ಕೃಷ್ಣ, ಭೀಷ್ಮ ವಿಜಯದಲ್ಲಿ ಭೀಷ್ಮ ಮುಂತಾಗಿ. ಆ ನಂತರದ ಪಾತ್ರ ಅವನಿಗಿಂತ ಸ್ವಲ್ಪ ಕಡಿಮೆ ಆಸ್ತಿ ಇದ್ದವನದ್ದು. ಹೀಗೇ ಅವರವರ ಆಸ್ತಿ, ಫಸಲಿನ ಪ್ರಮಾಣದ ಮೇಲೆ ಅರ್ಥಗಾರಿಕೆ ಬರಲಿ, ಬಿಡಲಿ, ಪಾತ್ರಗಳು ಹಂಚಿಕೆಯಾಗುತ್ತಿದ್ದವಂತೆ. ಕಾಲಗರ್ಭದಲ್ಲಿ ಹುದುಗಿಹೋದ ಇಂಥ ಗಮ್ಮತ್ತಿನ ಸಂಗತಿಗಳು ಆಗೀಗ ಕೇಳಲು ದೊರೆತು ಒಂಥರಾ ಖುಷಿ ಹುಟ್ಟಿಸುತ್ತವೆ. ಅದೇ ರೀತಿ ಏಲಕ್ಕಿ ಖರೀದಿ ಮಾಡುವ ವ್ಯಾಪಾರಸ್ಥರದ್ದು ವಿಶೇಷವಾದ ಗತ್ತು ಇದ್ದೇ ಇರುತ್ತಿತ್ತು.( ಈಗ ಏಲಕ್ಕಿ ಬೆಳೆಯೂ ಕಡಿಮೆ, ಅದನ್ನೇ ಖರೀದಿಸುವ ವ್ಯಾಪಾರಸ್ಥರೂ ಇಲ್ಲ). ಏಲಕ್ಕಿ ಖರೀದಿ ಎನ್ನುವದು ಒಂದು ಜೂಜಿನಂತೆ ಎಂದು ತಂದೆಯವರು ಹೇಳುತ್ತಿದ್ದುದನ್ನ ಕೇಳಿದ್ದೆ.
ನಮ್ಮ ತೋಟದಲ್ಲಿ ಒಂದೆರಡು ಏಲಕ್ಕಿ ಗಿಡಗಳಿದ್ದು ಮನೆ ಬಳಕೆಗೂ ಸಾಕಾಗುವಷ್ಟು ದೊರೆಯುತ್ತಿರಲಿಲ್ಲ. ಏಡಿ, ಕೇರೆ ಹಾವು, ಹಕ್ಕಿಗಳು ಬೆಳೆದದ್ದನ್ನೂ ಸ್ವಾಹಾ ಮಾಡಿಬಿಡುತ್ತಿದ್ದವು. ಅಷ್ಟಾದರೂ ಅಮ್ಮ ಹೇಗೋ ಒಂದೆರಡು ಮುಷ್ಠಿಯಷ್ಟಾದರೂ ಏಲಕ್ಕಿ ಸಂಗ್ರಹಿಸಿಡುತ್ತಿದ್ದಳು. ತೇಜಸ್ವಿಯವರ ಲೇಖನವೊಂದರಲ್ಲಿ ‘ಏಲಕ್ಕಿ ಗಿಡದ ಬುಡವನ್ನು ಎಲ್ಲಾದ್ರೂ ಎಸೀರಿ, ತಾನೇ ಬೆಳೆಯುತ್ತೆ’ ಎಂದು ಬರೆದಿದ್ದನ್ನ ಓದಿ, ನನ್ನ ಆಗಿನ ಆರ್ಥಿಕ ಸಂಕಷ್ಠವನ್ನ ನೀಗಿಸಬಹುದಾದ ಸದವಕಾಶ ಇದು ಎಂತಲೇ ಭಾವಿಸಿಕೊಂಡೆ. ಅಡಕೆ ಗಿಡ ನೆಟ್ಟರೆ ಹತ್ತಾರು ವರ್ಷದ ನಂತರ ಬೆಳೆ ಬರುವ ಕಾರಣ, ಏಲಕ್ಕಿ ಒಂದೆರಡು ವರ್ಷದಲ್ಲಿ ಫಸಲು ಕೊಡುತ್ತದೆ ಎಂದು ಅದನ್ನು ಬೆಳೆಯುವ ಕುರಿತು ಪ್ಲಾನ್ ಮಾಡತೊಡಗಿದೆ. ತೇಜಸ್ವಿಯವರು ಸುಳ್ಳೇನೂ ಹೇಳಿರಲಿಲ್ಲ. ಕೊಂಕಿ ಕೋಟೆ ಎನ್ನುವ ದುರ್ಗಮ ಅರಣ್ಯದಲ್ಲಿ ತಾನೇ ತಾನಾಗಿ ಬೆಳೆದ ಏಲಕ್ಕಿ ಗಿಡಗಳನ್ನೂ, ಅದರ ಬುಡದಲ್ಲಿ ಬಿಟ್ಟ ಏಲಕ್ಕಿಯನ್ನೂ ನೋಡಿದ್ದೆ. ಏಲಕ್ಕಿ ಕಾಯಿಗಳನ್ನು ಹಾವು, ಇನ್ನಿತರ ಪ್ರಾಣಿ, ಪಕ್ಷಿಗಳು ತಿಂದುಳಿದು, ಅಲ್ಲಿ ದೊರೆತ ಒಂದೆರಡು ಕಾಯಿಗಳಿಂದ ಅದರ ಸುವಾಸನೆಯನ್ನೂ ಆಘ್ರಾಣಿಸಿದ್ದೆ. ಹಾಗಾಗಿ ಅಷ್ಟೇನೂ ತೇವಾಂಶವಿರದ ತೋಟವಾದರೂ, ಹೇಗಾದರೂ ಗುದ್ದಾಡಿ ಏಲಕ್ಕಿ ಬೆಳೆಸಬಹುದು ಎಂದು ನನಗೆ ನಾನೇ ಭರವಸೆ ಕೊಟ್ಟುಕೊಂಡಿದ್ದೆ. ಅದರ ಪೂರ್ವಭಾವಿ ಸಿದ್ಧತೆಯಾಗಿಯೇ ತೇಜಸ್ವಿಯವರನ್ನು ಕಾಣಲು ಮೂಡಿಗೆರೆಗೆ ಹೋಗಿದ್ದು.
ಅವತ್ತಿನ ಭೇಟಿ ಮೊದಲ ಬಾರಿಯಾಗಿದ್ದಕ್ಕೆ ನನ್ನಲ್ಲಿ ಹಿಂಜರಿಕೆ ಇತ್ತೇ ಹೊರತು ತೇಜಸ್ವಿಯವರು ಆ ಅಪರಿಚಿತತೆಯನ್ನು ತೋರಿಸಲೇ ಇಲ್ಲ. ಚಿಕ್ಕವನಾದ ನನ್ನ ಕುರಿತು ತಾತ್ಸಾರ ತೋರಿಸದೇ ಒಂದು ರೀತಿಯಲ್ಲಿ ಪಟ್ಟಾಂಗವನ್ನೇ ಹೊಡೆದುಬಿಟ್ಟರು. ಅವರ ಮಾತುಗಳಲ್ಲಿ ಇಂಗ್ಲೀಷ್ ತೂರಿ ಬರುತ್ತಿತ್ತಾದರೂ ಮಾತಿನ ಶೈಲಿ ಅಪ್ಪಟ ಗ್ರಾಮಸ್ಥನಂತೆ, ಕಾಫಿ ಗೌಡರ ಥರವೇ ಇತ್ತು. ನಮ್ಮ ಭಾಗದ ಅಡಕೆ, ಭತ್ತ ಇನ್ನಿತರ ಕೃಷಿಯ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಲೇ, ಮಧ್ಯೆ, ಮಧ್ಯೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದರು. ನಿಧಾನಕ್ಕೆ ಮೈ ಚಳಿ ಬಿಟ್ಟು ಮಾತನಾಡತೊಡಗಿದ್ದೆ. ಅವರಿವರಿಂದ ಕೇಳಿದ ಮಾತುಗಳು( ಶಿವರಾಮ ಕಾರಂತರ ಕುರಿತು ಆಗಿದ್ದಂತೆ) ಸುಳ್ಳು ಅನಿಸಿತು. ‘ತೇಜಸ್ವಿ ಮೂಡಿ ಮನುಷ್ಯ, ಮಾತನಾಡೋದೇ ಇಲ್ಲ. ಅದಕ್ಕೆ ಮನೆಗೆ ನಿರುತ್ತರ ಅಂತಾ ಹೆಸರಿಟ್ಟಿಕೊಂಡಿದಾರೆ. ಸಹನೆ ಕಡಿಮೆ’ ಎಂದೆಲ್ಲ ಕೇಳಿ ಬೇರೆಯದೇ ಆದ ವ್ಯಕ್ತಿತ್ವವನ್ನ ಕಲ್ಪಿಸಿಕೊಂಡಿದ್ದು ನನ್ನದೇ ತಪ್ಪು ಎಂದು ಅನಿಸಿತು. ನಿಜಕ್ಕೂ ನನ್ನ ಅದೃಷ್ಟ, ತೇಜಸ್ವಿ ಅವತ್ತು ಒಳ್ಳೇ ಮೂಡ್‍ನಲ್ಲಿದ್ದರು. ( ನನ್ನ ಅದೃಷ್ಟ ಕೈ ಕೊಟ್ಟಿದ್ದು ಅಂದರೆ ಸ್ವಂತ ಬದುಕಿಗೆ ಹೊರತು ಈ ಥರದ ಅನುಭವಗಳಿಗೆ ಅಲ್ಲ) ಆ ಮೊದಲು ಓದುತ್ತ ಬಂದ ಲಂಕೇಶ್ ಪತ್ರಿಕೆಯಲ್ಲಿನ ಅವರ ಬರಹಗಳ ಬಗ್ಗೂ ನನ್ನ ಅಭಿಪ್ರಾಯ ಮಂಡಿಸುತ್ತ ಹೋದಂತೆ ಕೃಷಿಯಿಂದ ಕಾಡು, ಪರಿಸರದ ದಿಕ್ಕಿನತ್ತ ಸಾಗಿದರು. ಆಗ ನಾನು ಓದಿದ, ನೋಡಿದ ತುಷಾರದ ಫೊಟೊ ಸಿರೀಸ್ ಬಗ್ಗೆ, ಕರ್ವಾಲೋ ಓದಿದ್ದರ ಕುರಿತು ಹೇಳಿದಾಗ ಅವರಿಗೆ ಖುಷಿಯಾದ್ದು ಗೊತ್ತಾಗುವಂತೆ ಮುಖದ ಭಾವನೆಯಲ್ಲಿ ವ್ಯಕ್ತಗೊಳಿಸಿದರು. ಆಗಲೇ ಅವರೊಡನೆ ಮಾತನಾಡತೊಡಗಿ ಸುಮಾರು ಎರಡು ತಾಸುಗಳಾಗುತ್ತ ಬಂದಿತ್ತು. ಎಂದಿನಂತೆ ನನ್ನಿಂದ ಅವರಿಗೆ ತೊಂದರೆಯಾಗಬಹುದೇನೋ ಎನ್ನುವ ಭಾವನೆ ಬರತೊಡಗಿತು. ನಿಧಾನಕ್ಕೆ ಹೊರಡುವ ಲಕ್ಷಣ ತೋರಿಸಿದೆ. ‘ ಹೊರಡ್ತೀರಾ, ಹೇಗೆ ಹೋಗ್ತೀರಿ’ ಎಂದು ಕೇಳಿದರು. ಬರುವಾಗ ತೀರ್ಥಹಳ್ಳಿ ಮೇಲೆ ಬಂದೆ, ಈಗ ಶಿವಮೊಗ್ಗಕ್ಕೆ ಹೋಗ್ತೀನಿ, ಅಲ್ಲಿ ಬೆಂಗಳೂರಿನಿಂದ ಬರುವ ನಮ್ಮ ಕಡೆಯ ಬಸ್ಸುಗಳು ಸಿಗುತ್ತವೆ’ ಎಂದೆ. ಹೊರಟು ಹೊರಗಡೆ ಬಂದ ನನ್ನನ್ನ ಕರೆದು ಮನೆಯ ಹಿಂದಿನ ತೋಟದ ಕಡೆ ಕರೆದುಕೊಂಡು ಹೋದರು. ಅಲ್ಲಿನ ಸಣ್ಣ ತಗ್ಗಿನ ಪ್ರದೇಶದಲ್ಲಿ ಕಾಫಿ ತೋಟದ ನಡುವಿನಲ್ಲಿ ಏಲಕ್ಕಿ ಗಿಡಗಳಿದ್ದವು. ‘ನೋಡ್ರಿ, ಹೇಗೆ ಬೆಳೆದಿದಾವೆ ಅಂತಾ, ಅವಕ್ಕೆ ತುಂಬಾ ತಂಪು ಬೇಕು ಕಣ್ರೀ, ಹಾಗಿದ್ದರೆ ಚೆನ್ನಾಗಾಗ್ತಾವೆ’ ಎಂದು ವಿವರಣೆ ನೀಡಿದರು. ಅಷ್ಟು ಹೊತ್ತು ಆದರೂ ಅವರ ಸಂಗಾತಿ ನಾಯಿ ಮಾತ್ರ ಕಾಣಲಿಲ್ಲ. ಧೈರ್ಯ ಮಾಡಿ ಕೇಳಿಯೇ ಬಿಟ್ಟೆ. ‘ ಇಲ್ಲೆಲ್ಲೋ ಹೋಗಿರ್ಬೇಕು, ಮುಂಡೆಗಂಡಂದು’ ಎಂದು ಮುಗುಳ್ನಗುತ್ತ ಬೈಯ್ದವರು ‘ ಆ ಕಿವಿ ಬಗ್ಗೆನಾ ಕೇಳಿದ್ದು, ಈಗ ಅದಿಲ್ಲ’ ಎಂದು ಮೌನವಾದರು. ‘ಹ್ಯಾಂಡ್ ಪೋಷ್ಟ ಸರ್ಕಲ್‍ಗೆ ಹೋದ್ರೆ ಯಾವಾದ್ರೂ ಆಟೋ ಸಿಗುತ್ತೆ ಮೂಡಿಗೆರೆಗೆ’ ಎಂದ ತೇಜಸ್ವಿಯವರಿಗೆ ಹಾಗೇ ಅಲ್ಲೇ ವಿದಾಯ ಹೇಳಿ ತುಸು ದೂರದ ಗೇಟಿನ ಬಳಿ ಬಂದೆ.
ಆಗ ಗಮನಕ್ಕೆ ಬಂದಿತ್ತು. ಆ ಗೇಟ್ ಅತಿ ಸಾಧಾರಣವಾದ ಗೇಟ್ ಅದು . ಎಸ್ಟೇಟುಗಳ ಗೇಟುಗಳಿರಲಿ,ಆಧುನಿಕವಾದ ಮನೆಗಳಿಗೂ ಮನೆಗಿಂತ ಅಬ್ಬರದ ಗೇಟು ಹಾಕಿಸುವವವರ ನಡುವೆ ತೇಜಸ್ವಿಯವರ ಮನೆ ಗೇಟು ಅವರಂತೆ ಸರಳವಾಗಿತ್ತು. ತಿರುಗಿ ನೋಡಿದೆ. ದೂರದ ಮನೆಯ ವರಾಂಡದಲ್ಲಿ ಪ್ಯಾಂಟಿನ ಎರಡೂ ಜೇಬಿಗೆ ಕೈ ಹಾಕಿಕೊಂಡು ಇತ್ತ ನೋಡುತ್ತಲೇ ಇದ್ದರು ತೇಜಸ್ವಿ. ಸರಿಯಾಗಿ ಗೇಟು ಹಾಕಿಕೊಂಡು ಹೋಗ್ತಾನೋ, ಇಲ್ವೋ ಎಂದು ಗಮನಿಸುತ್ತಿರಬಹುದೆಂಬ ಆತಂಕದಲ್ಲಿ ಮತ್ತೆರಡು ಬಾರಿ ಎಳೆದು ಜಗ್ಗಿ ಸರಿ ಹಾಕಿದೆ.
ಶಿವರಾಮ ಕಾರಂತರಂತೆ, ಪೂರ್ಣಚಂದ್ರ ತೇಜಸ್ವಿಯವರಂತೆ ಪರಿಸರ, ಕಾಡು, ಪ್ರಕೃತಿಯನ್ನು ಅನುಭವಜನ್ಯವಾಗಿ ಕಂಡವರು ಈಗ – ಈ ಕಾಲದಲ್ಲಿ ತೀರಾ ಕಡಿಮೆ. ಎಲ್ಲೂ ಕಾಣಿಸಿಕೊಳ್ಳದೇ ಎಲೆಮರೆಯ ಕಾಯಿಯಂತೆ ಅನುಭವಿಸುತ್ತಿರುವವರು ಹಲವರಿದ್ದಾರೆ. ನನಗೆ ಗೊತ್ತಿದ್ದರೂ ಹೇಳಲಾರೆ. ಯಾಕೆಂದರೆ ಅವರ ಏಕಾಂತಕ್ಕೆ, ಅವರ ಆಶಯಕ್ಕೆ ಚ್ಯುತಿ ಮಾಡಲು ನನಗೆ ಮನಸ್ಸಾಗುತ್ತಿಲ್ಲ. ಇವತ್ತಿನ ಇನ್‍ಸ್ಟಂಟ್ ಕಾಲದಲ್ಲಿ ಅವರನ್ನು ಗೋಳಿಗೆ ಸಿಕ್ಕಿಸಲು ಸುತಾರಾಂ ಇಷ್ಟವಿಲ್ಲ. ತಮ್ಮ ಅನುಭವ, ಸ್ವಂತ ಶ್ರಮದಿಂದ ಅಪಾರ ಸಾಧನೆ ಮಾಡಿದ, ತಮ್ಮ ಒಳಗಣ್ಣಿನಲ್ಲಿ ಅದ್ಭುತವಾದ ಲೋಕದರ್ಶನವನ್ನು ಪಡೆದ ಇಂಥವರ ನಡುವೆ ಸಾಮಾಜಿಕ ಜಾಲತಾಣದ, ಹಳೆಯ ದಾಖಲೆಗಳ ಮೂಲಕ ಮಿಂಚುವ ಆಧುನಿಕ ದಾರ್ಶನಿಕರೂ ನಮ್ಮ ನಡುವೆ ಇದ್ದಾರೆ. ಆದರೆ ಆ ಕಾಲದ ಹಿರಿಯರಿಗೆ ಅವರ ಬರಹ ಅಥವಾ ಮತ್ಯಾವುದೋ ವಿಷಯವನ್ನ ಓದಿ, ಅನಿಸಿಕೆ ವ್ಯಕ್ತಪಡಿಸಿದರೆ ಯಾವ ಆಧುನಿಕ ಸಂವಹನ, ಸಂಪರ್ಕವಿಲ್ಲದ ಆ ಕಾಲದಲ್ಲಿ ತಡವಾದರೂ ತಪ್ಪದೇ ಪತ್ರದ ಮೂಲಕ ಉತ್ತರಿಸುತ್ತಿದ್ದರಲ್ಲ, ಆ ಮಹನೀಯರು ನಿತ್ಯ ವಂದನೀಯರು.
ಮನೆಗೆ ಬಂದವನು ಒಂದೆರಡು ದಿನ ಬಿಟ್ಟು ತೇಜಸ್ವಿಯವರಿಗೆ ನನ್ನ ಮೊದಲ ಪತ್ರ ಬರೆದೆ; ಅವರಿಂದ ಸಾಕಷ್ಟು ಧೀರ್ಘವಾದ ಮಾರುತ್ತರವೂ ಬಂತು.(2-1-1992). ಅದರಲ್ಲಿ ‘ನೀವು ಬಂದಾಗ ನನಗೆ ಕೊಂಚವೂ ಪುರುಸೊತ್ತು ಇರಲಿಲ್ಲ. ಅಷ್ಟೊಂದು ಕೆಲಸ, ಜವಾಬ್ದಾರಿಗಳನ್ನು ಮೈ ಮೇಲೆ ಎಳೆದುಕೊಂಡು, ಉಸಿರಾಡಲೂ ಸಮಯವಿಲ್ಲದೇ ಲಾಟರಿ ಹೊಡೆಯುತ್ತಿದ್ದೇನೆ’ ಎಂದು ತಮ್ಮ ಮಾಮೂಲಿ ಭಾಷಾಶೈಲಿಯಲ್ಲಿ ಬರೆದಿದ್ದರು. ಅಷ್ಟೊಂದು ಒತ್ತಡಗಳಿದ್ದರೂ ಸುಮಾರು ಎರಡು-ಎರಡೂವರೆ ತಾಸು ನನ್ನೊಂದಿಗೆ ಮಾತು,ಕಥೆ ನಡೆಸಿದ್ದರು ಆ ಪುಣ್ಯಾತ್ಮ. ಆ ಪತ್ರದಲ್ಲಿ ನನ್ನಲ್ಲಿರಬಹುದಾದ ಕೆಲವು ನ್ಯೂನ್ಯತೆಗಳನ್ನು ಗುರುತಿಸಿ ‘ ನೀವು ನಿಮ್ಮ ಬದುಕಿನ ಬಗ್ಗೆ, ಪರಿಸರದ ಬಗ್ಗೆ ವಿಪರೀತ ಮಹಾತ್ವಾಕಾಂಕ್ಷೆ ಇಟ್ಟುಕೊಂಡು ಇದು ಯಾವಾಗಲೂ ರೋಮಾಂಚಕವಾಗಿರುತ್ತದೆ ಎಂದು ತಿಳಿದು ಈ ತೊಂದರೆಗೆ ಸಿಕ್ಕಿ ಬಿದ್ದಿರೋ ಏನೋ? ಜೀವನದ ಬಹಳಷ್ಟು ಭಾಗ ಬೋರಿಂಗ್ ಮತ್ತು ಪುನರಾವರ್ತನೆಗಳು ಎನ್ನುವದು ಒಂದು ಮಟ್ಟದಲ್ಲಿ ನಿಜ. ಇದನ್ನು ಮೀರುವದಕ್ಕೆ ಬಹಿರಂಗದಲ್ಲಿ ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳುವದರೊಂದಿಗೆ ಅಂತರಂಗದಲ್ಲಿ ನಮ್ಮ ದೃಷ್ಟಿಕೋನವನ್ನು ತಿದ್ದಿಕೊಳ್ಳುವದರಲ್ಲೂ ನಾವು ಪ್ರಯತ್ನಿಸಬೇಕಲ್ಲವೇ? ನಿಮ್ಮಂತೆ ನನಗೂ ಅನೇಕ ಸಂದರ್ಭಗಳಲ್ಲಿ ಏನೆಲ್ಲಾ ಅನ್ನಿಸುತ್ತದೆಯಾದ್ದರಿಂದ ಇದೆಲ್ಲಾ ಮನುಷ್ಯನಿಗೆ ಅನಿವಾರ್ಯ ಎಂದೆನ್ನಿಸಿದೆ. ಬೇಸರ, ದುಗುಡ ಇತ್ಯಾದಿಗಳು ಎಲ್ಲರಿಗೂ ತಮ್ಮ ಜೀವನದಲ್ಲಿ ಆಗಾಗ್ಗೆ ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿ ಎಂದು ನಿಮಗೆ ಹೇಳಬಲ್ಲೆ’ ಎಂದು ಬರೆದಿದ್ದರು ( ಅವರು ಬರೆದ ಎಲ್ಲವನ್ನೂ ಇಲ್ಲಿ ಹೇಳದೇ ಕೆಲವಷ್ಟನ್ನೇ ದಾಖಲಿಸಿದ್ದೇನೆ). ಮತ್ತೊಬ್ಬನ ಮಾನಸಿಕ ಕ್ಲೇಶ, ಅವನು ಎದುರಿಸುತ್ತಿರುವ ಕಷ್ಟಗಳಿಗೆ ಸಮಾಧಾನ ಕೊಡಲು ಇಷ್ಟು ಮಾತುಗಳು ಸಾಕಲ್ಲವೇ? ಓರ್ವ ಪ್ರಾಮಾಣಿಕ ಗುರು, ಅತ್ಯಾಪ್ತ ಬಂಧು, ಸಹೃದಯಿ ಸ್ನೇಹಿತ..ಎಲ್ಲವೂ ಆಗಿ ಅತ್ಯಂತ, ಸರಳವಾಗಿ, ಸ್ಪಷ್ಟವಾಗಿ ಹೇಳಿದ್ದರು. ಒರ್ವ ಸುಪ್ರಸಿದ್ಧ ಸಾಹಿತಿಯಾಗಿದ್ದು, ಯಾವ ಹಮ್ಮು,ಬಿಮ್ಮು ಇಲ್ಲದೇ ನನ್ನಂಥ ಕಿರಿಯನಿಗೆ ಉತ್ತರಿಸಿದ್ದರು. ಅವರು ಹೇಳಿದ್ದರಲ್ಲಿ ನಾನೆಷ್ಟು ಪಾಲಿಸಿದ್ದೇನೋ ಗೊತ್ತಿಲ್ಲ, 28 ವರ್ಷಗಳ ಹಿಂದೆ ಅವರು ಬರೆದ ಮೊದಲ ಪತ್ರವನ್ನು ಒಳಗೊಂಡು ಹಲವು ಪತ್ರಗಳನ್ನ ಜತನದಿಂದ ಕಾದಿಟ್ಟುಕೊಂಡು ಆಗಾಗ್ಗೆ ಮರು ಓದುತ್ತೇನೆ. ಬದುಕಿನ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ, ಮಾನಸಿಕ ಕ್ಷೋಬೆ ಹೈರಾಣು ಮಾಡುತ್ತಿದ್ದ ವೇಳೆಯಲ್ಲಿ ಏನೂ ಅಲ್ಲದ ನನ್ನ ಮನಸ್ಸನ್ನು ಅರ್ಥ ಮಾಡಿಕೊಂಡು ಸಂತೈಸದೆಯೇ ಸಂತೈಸಿದ ಆ ಮಾತುಗಳನ್ನು ಓದುವಾಗ ಎದೆ, ಮನಸ್ಸು ಭಾರವಾಗುತ್ತದೆ. ಕಣ್ಣು ಹನಿಗೂಡುತ್ತದೆ. ಜೀವನದಲ್ಲಿ ಒಂದಿಷ್ಟು ಕಾಲವಾದರೂ ಇಂಥವರ ಸಂಪರ್ಕ, ಸಂಗ ಪಡೆದುಕೊಂಡೆನಲ್ಲ ಎನ್ನುವ ಧನ್ಯತೆಯೂ ಆಗುತ್ತದೆ.
(..ಮುಂದುವರೆಯುವದು..)
ಗಂಗಾಧರ ಕೊಳಗಿ