ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ತೇಜಸ್ವಿ ಎಂಬ ವಿಸ್ಮಯ…….

ತೇಜಸ್ವಿಯವರ ಮನೆಗೆ ಹೋದಾಗ ನಾನು ಗಮನಿಸಿದ್ದು ಅಲ್ಲಿನ ಸರಳತೆ ಮತ್ತು ನಿರಾಡಂಬರತೆ. ಕನ್ನಡದ ಸುಪ್ರಸಿದ್ಧ ಸಾಹಿತಿ, ಕುವೆಂಪು ಅವರ ಮಗ, ಮೇಲಾಗಿ ಕಾಫಿ ಬೆಳೆಗಾರ ಇಂಥ ಹಲವಾರು ಹಿರಿಮೆಗಳಿದ್ದ ತೇಜಸ್ವಿ ನನ್ನ ಕಲ್ಪನೆಗಳನ್ನೆಲ್ಲ ಉಲ್ಟಾ,ಪಲ್ಟಾ ಮಾಡಿ, ನನ್ನೊಳಗೇ ನನ್ನನ್ನು ನಗೆಪಾಟಲಿಗೆ ಈಡು ಮಾಡಿದ್ದರು.

ಅವರು ಹೇಗಿದ್ದರೆಂದರೆ ಸಾದಾ,ಸೀದಾ ನಮ್ಮೆಲ್ಲರಂತೆ. ಗೊತ್ತಿಲ್ಲದವರು ಯಾರಾದರೂ ಅವರನ್ನು ನೋಡಿದರೆ ಈತ ಅಸಾಮಾನ್ಯ ಎಂದು ಗುರ್ತು ಹಚ್ಚುವಂತೆಯೇ ಇರಲಿಲ್ಲ. ಅಷ್ಟಾದ ಸೊಗಸುಗಾರಿಕೆಯಾಗಲೀ, ಎದುರಿನವರನ್ನು ಇಂಪ್ರೆಸ್ ಮಾಡುವ ಉಡುಪಿನ ಶೈಲಿ, ನಡವಳಿಕೆ ಇವ್ಯಾವದು ಅವರಲ್ಲಿರಲಿಲ್ಲ. ನೇರಾ ನೇರ. ಅವರ ಮನೆಯೂ ಅಷ್ಟೇ. ಬಹುತೇಕ ಕಾಫಿ ಬೆಳೆಗಾರರಂತೆ ಅಥವಾ ಆರ್ಥಿಕವಾಗಿ ಅನುಕೂಲ ಇದ್ದವರಂತೆ ಮಹಡಿ ಮನೆಯಾಗಿರದೇ, ಒಂಥರಾ ಫಾರ್ಮಹೌಸ್ ರೀತಿಯಲ್ಲಿತ್ತು. ಮಧ್ಯೆ ಸ್ವಲ್ಪ ಗ್ಯಾಪ್ ಇದ್ದು ಆ ಕಡೆ ಅವರ ಅಡುಗೆಮನೆ, ಸ್ವಂತ ಬಳಕೆಯ ಕೊಠಡಿಗಳಿದ್ದವೇನೋ? ಈ ಕಡೆ ಅಗಲವಾದ ಹಜಾರ, ಸುತ್ತೆಲ್ಲ ಅಗಲವಾದ ಗ್ಲಾಸ್ ಜೋಡಿಸಿದ ಕಿಡಕಿ, ಒಂದು ಗೋಡೆಯ ಪಕ್ಕ ಟೇಬಲ್ ಟೆನ್ನಿಸ್ ಆಟದ ಟೇಬಲ್, ಈಕಡೆ ಕುರ್ಚಿಗಳು, ಟೀಪಾಯ್ ಇದ್ದವು. ಮನೆ ಪಕ್ಕದ ಸಂಶೋಧನಾ ಕೇಂದ್ರದ ವಿಜ್ಞಾನಿ ಸ್ನೇಹಿತರ ಜೊತೆ ಆಡಲು ಉಪಯೋಗಿಸುತ್ತಿದ್ದ ಟೇಬಲ್ ಟೆನಿಸ್ ಟೇಬಲ್ ಬಹುತೇಕ ತೇಜಸ್ವಿಯವರ ಬರವಣಿಗೆಯ ಟೇಬಲ್ ಆಗಿಯೂ ಪರಿವರ್ತಿತವಾಗುತ್ತಿತ್ತಂತೆ. ನಾನು ಕಂಡ ಕೆಲವೇ ಪ್ರಸಿದ್ಧ ವ್ಯಕ್ತಿಗಳಂತೆ ತೇಜಸ್ವಿ ಕೂಡ ಸಹಜವಾದ ವ್ಯಕ್ತಿತ್ವ ಹೊಂದಿದ್ದರೂ, ಒಂದು ರೀತಿಯಲ್ಲಿ ಅವರಿಗಿಂತ ಭಿನ್ನವಾದ ವಿಸ್ಮಯವನ್ನ ಉಂಟು ಮಾಡುವ ಮನುಷ್ಯನಾಗಿದ್ದರು. ಗದರಿಕೆ, ತುಸು ಕೋಪ, ಅಷ್ಟೇ ಆತ್ಮೀಯತೆ..ಅವರ ಮೊದಲ ಭೇಟಿಯಲ್ಲೇ ನನ್ನನ್ನು ಸೆಳೆದುಬಿಟ್ಟಿತು.

ಆ ನಂತರದಲ್ಲಿ ನಾನು ಏಲಕ್ಕಿ ಕೃಷಿಗೆ ಕೈ ಹಾಕಿ ಸುಟ್ಟುಕೊಂಡದ್ದು ಮತ್ತೊಂದು ಕಥೆ. ನಾನು ದುಡ್ಡು, ಕಾಸು ಸಿದ್ಧತೆ ಮಾಡಿಕೊಂಡು ಏಲಕ್ಕಿ ಸಸಿಗಳ ಹುಡುಕಾಟಕ್ಕೆ ತೊಡಗಿದರೆ ಅಷ್ಟೊತ್ತಿಗಾಗಲೇ ಮಾರಾಟಕ್ಕೆ ಸಸಿಗಳನ್ನು ಬೆಳೆಸಿದ್ದವರ ಸಸಿಗಳೆಲ್ಲ ಖಾಲಿಯಾಗಿದ್ದವು. ಒಬ್ಬರ ಬಳಿ ಇದ್ದ ಸಸಿಗಳನ್ನು ನೋಡಲು ಹೋದರೆ ಅವರು ಒಂಥರಾ ಬೀಕಲಾಗಿ ಕಡ್ಡಿಗಳಂತಿದ್ದವು. ಆ ಪುಣ್ಯಾತ್ಮ ಆ ಸಸಿಗಳ ಗುಣಗಾನ ಮಾಡಿ, ಇಂಥ ಸಸಿಗಳೇ ದೊಡ್ಡದಾಗುತ್ತ ಪುಷ್ಠವಾಗಿ ಬೆಳೆಯುತ್ತವೆಯೆಂತಲೂ, ದಷ್ಟಪುಷ್ಠವಾದ ಸಸಿಗಳನ್ನ ನೆಟ್ಟರೆ ಕಾಯಿ ಬಿಡುವದು ಕಡಿಮೆ ಎಂತಲೂ ನನ್ನ ತಲೆ ಸವರಿದ. ಇವಕ್ಕೆ ಈಗಾಗಲೇ ಸಾಕಷ್ಟು ಬೇಡಿಕೆ ಇದೆಯೆಂದೂ, ಇದನ್ನು ಬಿಟ್ಟರೆ ಮತ್ತೆ ಸಿಗಲಾರದು ಎಂದು ಒಂದು ರೀತಿಯಲ್ಲಿ ಬ್ಲಾಕ್‍ಮೇಲ್ ಮಾಡಿದ್ದಕ್ಕೆ ಇದು ಬಿಟ್ಟರೆ ಮತ್ತೆಲ್ಲೂ ಸಿಗಲಾರದು ಎಂದು ಅವನ್ನೇ ಖರೀದಿಸಿ, ಲಗ್ಗೇಜ್ ಆಟೋದಲ್ಲಿ ಹಾಕಿಕೊಂಡು ಬಂದು ನೆಟ್ಟೆ. ಹಾಗೇ ಕೊಗರುತ್ತ ಬೆಳೆದವು. ಗೊಬ್ಬರ, ಪಂಪ್ ಇಲ್ಲದ್ದಕ್ಕೆ ಕೊಡದಲ್ಲಿ ಹೊತ್ತು ನೀರು ಹಾಕಿ ಪೋಷಣೆ ಮಾಡಿದೆ. ಮೊಳ ಎತ್ತರ ಬೆಳೆಯುತ್ತಿದ್ದಂತೆ ಮಂಗಗಳು ಗಂಟು ಬಿದ್ದವು. ಸಣ್ಣ ಸಸಿಗಳ ಕಾಂಡವನ್ನ ಸೀಳಿ, ಸೀಳಿ ಹಾಕಿಬಿಟ್ಟವು. ಎಷ್ಟೇ ಕಾದರೂ, ನಾನಿಲ್ಲದ ವೇಳೆಯಲ್ಲಿ ತೋಟಕ್ಕೆ ನುಗ್ಗಿ ವಾರ ಕಳೆಯುವಷ್ಟರಲ್ಲಿ ಏಲಕ್ಕಿ ಗಿಡಗಳನ್ನೆಲ್ಲ ಸರ್ವನಾಶ ಮಾಡಿಬಿಟ್ಟವು. ಅಲ್ಲಿಗೆ ನನ್ನ ಏಲಕ್ಕಿ ಕೃಷಿಯ ಹುಮ್ಮಸ್ಸೆಲ್ಲ ಇಳಿದುಹೋಗಿ, ಒಂದಿಷ್ಟು ಹಣ ಗಳಿಸಲು ಹೋಗಿ, ಸಾವಿರಾರು ರೂಪಾಯಿ ಕಳೆದುಕೊಂಡು ಪೆಕರನಾಗಿಬಿಟ್ಟೆ. ಅದು ವಿಫಲ ಪ್ರಯೋಗವಾದರೂ ಅನುಭವದ ಖಜಾನೆಯಲ್ಲಿ ಅದು ಸೇರಿಕೊಂಡಿತಲ್ಲ, ಅದೇ ಸಮಾಧಾನ. ಸೋಲಾಗಲೀ, ಗೆಲುವಾಗಲೀ, ಅದು ನಮ್ಮ ಅನುಭವಪೂರ್ವಕವಾಗಿ ಬಂದರೆ ಸತ್ಯ ಎನ್ನುವ ಆಧ್ಯಾತ್ಮ ಚಿಂತನೆಗೆ ಶರಣಾದೆ.
ಈ ಎಲ್ಲದರ ಮಧ್ಯೆ ಮತ್ತೊಮ್ಮೆ ತೇಜಸ್ವಿಯವರ ಬಳಿ ಹೋದೆ. ಆ ಸಾರಿ ನನ್ನ ಸಹೋದರಿ ವನಜಾ ತಾನೂ ತೇಜಸ್ವಿಯವರನ್ನ ನೋಡಬೇಕೆಂದು ನನ್ನೊಂದಿಗೆ ಬಂದಳು. ಆ ಬಾರಿ ಶಿವಮೊಗ್ಗದ ಮೂಲಕ ಹೋಗಿದ್ದರಿಂದ ಬೆಳಗಿನ ಹನ್ನೊಂದರ ಸುಮಾರಿಗೇ ಅಲ್ಲಿ ತಲುಪಿದ್ದೆವು. ಅದೃಷ್ಟಕ್ಕೆ ತೇಜಸ್ವಿ ಇದ್ದರು. ಅವರ ಮನೆ ಹಜಾರದಲ್ಲಿ ಕುಳಿತು ಮಾತನಾಡುತ್ತಿರಬೇಕಾದರೆ ಜೂಲು,ಜೂಲು ಕೂದಲಿನ ಸಾಕಷ್ಟು ಪುಷ್ಠವಾಗಿದ್ದ ಅವರ ಸಾಕುನಾಯಿ ನಿಧಾನಕ್ಕೆ ಒಳ ಪ್ರವೇಶ ಮಾಡಿ ನಮ್ಮ ಬಳಿ ಮೂಸಿ ನೋಡತೊಡಗಿತು. ‘ ನೋಡಿ, ಕಳ್ಳಮಗಂದು, ಪತ್ತೇದಾರಿ ಮಾಡ್ಲಿಕ್ಕೆ ಬಂದಿದೆ’ ಎಂದು ಸಣ್ಣ ಜೋಕ್ ಮಾಡಿ ಮಾತು ಮುಂದುವರಿಸಿದರು. ನಮ್ಮ ಮಾತು-ಕಥೆ ಮುಂದುವರಿದಿದ್ದರೂ ಆ ನಾಯಿ ಅಲ್ಲೇ ಸುತ್ತಾಡುತ್ತ, ನಮ್ಮ ಕಾಲುಗಳನ್ನು ಹೊಸೆಯುತ್ತ ಓಡಾಡುತ್ತಿದ್ದುದು ಸ್ವಲ್ಪ ಇರಿಸುಮುರುಸು ಆದಂತಾಗುತ್ತಿತ್ತು. ಅದನ್ನು ಗಮನಿಸಿದ ತೇಜಸ್ವಿ ಅದನ್ನು ಗದರಿಸಿ, ಪ್ರೀತಿಯಿಂದಲೇ ಅದರ ಕುತ್ತಿಗೆ ಪಟ್ಟಿ ಹಿಡಿದು ಹೊರ ಬಿಟ್ಟು ಬಂದರು. ಐದು ನಿಮಿಷವಾಗಿಲ್ಲ; ಅದು ಮತ್ತೆ ಕೊಠಡಿಗೆ ಬಂದು ಕಾಲು ಹೊಸೆಯತೊಡಗಿತು. ಮತ್ತೆ ಸಣ್ಣಗೆ ಅದಕ್ಕೇನೋ ಬೈಯ್ದು, ಮತ್ತೆ ಎಳೆದುಕೊಂಡು ಹೋಗಿ ಹೊರಕ್ಕೆ ಬಿಟ್ಟು, ಬಾಗಿಲ ಕದವನ್ನು ಮುಚ್ಚಿ ಬಂದರು. ಅದಾಗಿ ಸ್ವಲ್ಪ ಹೊತ್ತು ಕಳೆದಿಲ್ಲ, ಮತ್ತೆ ಅದು ಕದವನ್ನು ದೂಡಿಕೊಂಡೇ ಒಳಬಂತು. ‘ ಇವನದ್ದು ಇದೊಳ್ಳೇ ಕಾಟವಾಯ್ತಲ್ಲಾ’ ಎನ್ನುತ್ತ ನಸುಕೋಪದಲ್ಲಿ ತೇಜಸ್ವಿ ಅದನ್ನು ಮತ್ತೆ ಹೊರಕ್ಕೆ ಹಾಕಿ, ಈ ಬಾರಿ ಕದದ ಅಗುಳಿ ಹಾಕಿ ಬಂದರು. ಮತ್ತೆ ಸ್ವಲ್ಪ ಹೊತ್ತಿಗೆ ಕದ ಕೆರೆಯುವ ಸದ್ದು, ಆ ನಾಯಿ ಅಗುಳಿ ಹಾಕಿದ್ದಕ್ಕೆ ಹೊರಗಿನಿಂದ ರಂಪ ಮಾಡತೊಡಗಿತ್ತು. ದೊಡ್ಡದಾಗಿ ನಗುತ್ತ ತೇಜಸ್ವಿ ‘ ನೋಡಿ, ಅದಕ್ಕೆ ನೀವು ನನಗೆ ಆತ್ಮೀಯರಾಗಿರಬಹುದು ಅನ್ನಿಸಿರಬಹುದು. ಅದಕ್ಕೆ ಹಾಗೇ ಮಾಡ್ತಿದೆ. ಹಾಗೆಲ್ಲ ಮಾಡೋನಲ್ಲ, ಇವತ್ತು ಹೊಸ ಥರ’ ಎನ್ನುತ್ತ ಹೊರಗೆ ಹೋಗಿ ಅದಕ್ಕೆ ಗದರುತ್ತಲೇ ಪೆಟ್ಟು ಕೊಟ್ಟರೆಂದು ಕಾಣುತ್ತದೆ. ಕುಂಯ್ ಗುಡುತ್ತ ಹೋಯಿತು. ನಂತರ ಸುಮಾರು ಹೊತ್ತಿನ ತನಕ ನಾವು ಮಾತನಾಡುತ್ತಿದ್ದರೂ ಇತ್ತ ಸುಳಿಯಲಿಲ್ಲ. ಗ್ಲಾಸ್ ಕಿಡಕಿಯಾಚೆ ಹೊರಗಡೆಯಿದ್ದ ತೇಜಸ್ವಿಯವರು ಕಟ್ಟಿಸಿದ್ದ- ಪ್ರಾಯಶ: ಬಾತುಕೋಳಿ, ನೀರು ಕಾಗೆ ಮುಂತಾದವಕ್ಕೆಂದಿರಬೇಕು- ನೀರಿನ ಕೊಳದ ಸುತ್ತ ಸುಳಿದಾಡುತ್ತಿತ್ತು. ಮಾತಿನ ಮಧ್ಯೆ ತೇಜಸ್ವಿ ಅದನ್ನು ತೋರಿಸಿ ‘ ನೋಡಿ, ಆ ಕಳ್ಳನಿಗೆ ಇನ್ನೂ ನಿಮ್ಮ ಮೇಲೆ ಕುತೂಹಲ ಹೋಗಿಲ್ಲ. ಹೊರಕ್ಕೆ ಹಾಕಿದರೂ ಇಲ್ಲೇ ಸುಳಿದಾಡ್ತೀದಾನೆ’ ಎಂದು ನಕ್ಕರು. ಚೇತೋಹಾರಿಯಾದ ಆ ಘಟನೆ ಈಗಲೂ ನನ್ನ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ತೇಜಸ್ವಿ ಇಂಥವನ್ನು ಮರ್ಯಾದೆಗೆ ಕುಂದುಂಟು ಮಾಡುವ ಘಟನೆ ಅಂತಾ ಭಾವಿಸದೇ ಸಹಜವಾದ, ಸಲೀಸಾದ ವಿದ್ಯಮಾನಗಳು ಎಂದೇ ಭಾವಿಸುತ್ತಿದ್ದರೇನೋ? ಅದನ್ನೊಂದು ವಿನೋದದ ಸಂದರ್ಭವಾಗಿಯೂ ಅನುಭವಿಸಿ ಬಿಡುತ್ತಿದ್ದರು.

ಅವತ್ತೂ ಕೂಡ ಸ್ವಾಧಭರಿತ ಕಾಫಿ ನಮಗೆ ದೊರೆಯಿತು. ದಿನಕ್ಕೆ ಹತ್ತಾರು ಬಾರಿ ದಪ್ಪನೆಯ ಡಿಕಾಕ್ಷನ್ ಕಾಫಿ ಕುಡಿಯುವ ಕಾಫಿಭಕ್ತೆ ನನ್ನ ಅಕ್ಕ ಕೂಡ ಆ ಕಾಫಿಯ ರುಚಿಗೆ ಶರಣಾಗಿಬಿಟ್ಟಿದ್ದಳು.
ಅಷ್ಟರಲ್ಲಾಗಲೇ ತೇಜಸ್ವಿ ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದ ತಮ್ಮ ಬರಹಗಳನ್ನು ಪುಸ್ತಕ ರೂಪದಲ್ಲಿ ತರತೊಡಗಿದ್ದರು. ಅವರು, ಶ್ರೀರಾಮ್ ಮುಂತಾದವರು ‘ಪುಸ್ತಕ ಪ್ರಕಾಶನ’ ಆರಂಭಿಸಿ ಪುಸ್ತಕಗಳನ್ನು ಮುದ್ರಿಸುತ್ತಿದ್ದರು. ತೇಜಸ್ವಿ ಪತ್ರ ಬರೆದು, ಅದರ ವಿಳಾಸ ನೀಡಿದ್ದರು. ಪುಸ್ತಕ ರೂಪದಲ್ಲಿ ಬಂದ ‘ಕರ್ವಾಲೋ, ಚಿದಂಬರ ರಹಸ್ಯ, ಪರಿಸರದ ಕತೆ, ಜಿಮ್ ಕಾರ್ಬೇಟ್ ಮತ್ತು ಕೆನತ್ ಅಂಡರಸನ್ ಅವರ ಬೇಟೆ ಕುರಿತಾದ ಭಾವಾನುವಾದದ ಪುಸ್ತಗಳಲ್ಲದೇ ಮಿಲೇನಿಯಂ ಸರಣಿಯ ಪುಸ್ತಕಗಳು, ಈ ಅದ್ಭುತ ಜಗತ್ತು ಸರಣಿಯ ಪುಸ್ತಕಗಳನ್ನು ತರಿಸಿಕೊಂಡು ಓದಿದ್ದೆ. ನನ್ನ ಆರ್ಥಿಕ ಸ್ಥಿತಿಯ ಕುರಿತು ವಿಪರೀತವಾಗಿ ತಲೆ ಕೆಡಿಸಿಕೊಂಡು ಮಂಕಾಗಿದ್ದ ನಾನು ನಿಧಾನಕ್ಕೆ ಆ ಜಡಕಿನಿಂದ ಬಿಡಿಸಿಕೊಳ್ಳತೊಡಗಿದ್ದೆ. ‘ನಿನ್ನ ಕರ್ತವ್ಯವನ್ನ ನೀನು ಸರಿಯಾಗಿ ಮಾಡುತ್ತಹೋಗು, ಎಲ್ಲವೂ ಸರಿಯಾಗುತ್ತದೆ’ ಎನ್ನುವ ಆಧ್ಯಾತ್ಮಿಕ ಸಲಹೆಯ ಮಾತುಗಳನ್ನು ತೇಜಸ್ವಿ ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿ ಹೇಳಿದ್ದರು ಎಂದು ಈಗ ಅನ್ನಿಸುತ್ತದೆ.
ಹುಟ್ಟಿನಿಂದ ನೋಡುತ್ತ ಬಂದ ಕಾಡನ್ನು ಅಲೆಯುವದು, ಜೇನು ಹುಡುಕಲು, ಕೀಳಲು, ಹಕ್ಕಿ ಗೂಡು ಹುಡುಕುವದು, ಗಿಳಿಗೂಡು ಅರಸುವದು ಮುಂತಾದ ಚಿಕ್ಕಂದಿನ ಹವ್ಯಾಸವನ್ನು ರೂಡಿಸಿಕೊಳ್ಳತೊಡಗಿದೆ. ತೋಟದ ಕೆಲಸಕ್ಕೆ ಬರುತ್ತಿದ್ದವರ ಜೊತೆ ಕಾಡು, ಪರಿಸರ, ಹೊಳೆ, ಪ್ರಾಣಿ,ಪಕ್ಷಿ ಮುಂತಾದವುಗಳ ಬಗ್ಗೆ ಅವರದೇ ಧಾಟಿಯಲ್ಲಿ ಸಂಭಾಷಿಸುತ್ತ, ಅವರಲ್ಲಿದ್ದ ತಿಳುವಳಿಕೆಯನ್ನ ಗ್ರಹಿಸತೊಡಗಿದೆ. ನಾನು ಊಹಿಸಿರದೇ ಇದ್ದ ಜಗತ್ತೊಂದು ನನ್ನೆದುರು ತೆರೆದುಕೊಳ್ಳತೊಡಗಿತ್ತು. ಯಾವ ಪರಿಸರ ವಿಜ್ಞಾನಿಗೂ ಕಡಿಮೆಯಿಲ್ಲದ, ಅದನ್ನ ಆಧುನಿಕ ಅಥವಾ ಅಕಾಡೆಮಿಕ್ ಜಗತ್ತಿಗೆ ಅರ್ಥವಾಗುವಂತೆ ಹೇಳಲಾಗದ ಅನುಭವ ಭಂಡಾರ ಅವರಲ್ಲಿದ್ದುದನ್ನ ಕಂಡುಕೊಂಡೆ. ಬಸವಣ್ಣಿ, ಶೇರೆಗಾರ ರಾಮ, ರಾಮಚಂದ್ರ, ಗಣಪತಿ, ಜಟ್ಯಾ.. ಮುಂತಾದ ಘಟಾನುಘಟಿ ಗೆಳೆಯರು ನನಗೆ ದೊರೆತರು. ಅವರೊಂದಿಗೆ ಸುಖಾ ಸುಮ್ಮನೆ ಕಾಡು, ಹಕ್ಕಲುಗಳನ್ನು ಅಲೆಯುವದು, ಹೊಳೆ,ಹಳ್ಳದ ಅಂಚುಗಳಲ್ಲಿ ಓಡಾಡುವದು, ಹೊಳೆ ಬದಿಯ ಹಬೇವುಗಳಲ್ಲಿ ಸಂಜೆ ಹೊತ್ತು ಕೂತು, ಹೊಳೆಯಂಚಿನ ಮರಗಳಲ್ಲಿ ಗೊತ್ತು ಕೂರುವ ಹಕ್ಕಿ,ಪಕ್ಷಿಗಳನ್ನ ಗಮನಿಸುವದು ಮುಂತಾದ ನನ್ನ ನಡವಳಿಕೆಗಳು ಸುತ್ತಲಿನವರಿಗೆ ವಿಚಿತ್ರವಾಗಿ ಕಾಣತೊಗಿದ್ದು ನನ್ನ ಅನುಭವಕ್ಕೂ ಬರತೊಡಗಿತು. ಯಾರೂ, ಏನೂ ಹೇಳಿಕೊಳ್ಳಲಿ, ಯಾವ ಆರ್ಥಿಕ ತಜ್ಷನಾಗಲೀ, ಮಾನಸಿಕ ತಜ್ಞನಾಗಲೀ ನೀಡಲಾಗದೇ ಇದ್ದ ಸಲಹೆಗಳನ್ನ ನನ್ನ ಮಿತಿಯಲ್ಲಿ ಕಾಡು, ಪರಿಸರಗಳಿಂದ ಪಡೆದುಕೊಳ್ಳುತ್ತಿದ್ದೆ. ನನ್ನ ಆರ್ಥಿಕ ಪರಿಸ್ಥಿತಿ ಏಕಾಏಕಿಯಾಗಿ ಸುಧಾರಿಸದೇ ಇದ್ದರೂ, ಸಮಸ್ಯೆ, ಕಷ್ಟಗಳನ್ನು ಎದುರಿಸುವ ಒರಟುತನ ನನ್ನಲ್ಲಿ ಮೂಡತೊಡಗಿತು. ಈಡೀ ವಿಶ್ವದ ಎದುರು ಮರಳು ಕಣಕ್ಕಿಂತ ಕನಿಷ್ಠನಾದ ನಾನು ಸುಮ್ಮನೆ ಏನೆಲ್ಲಾ ಕಲ್ಪಿಸಕೊಂಡು ಒದ್ದಾಡುತ್ತಿದ್ದೆನಲ್ಲ ಎಂದು ಅನಿಸತೊಡಗಿತು.

ಆ ಸಂದರ್ಭದ ಹಲವು ಘಟನೆಗಳ ನಡುವೆ ಈಗಲೂ ವಿಸ್ಮಯ, ವಿಚಿತ್ರ ಅನ್ನಿಸುವ ಘಟನೆಯೊಂದು ನಗೆ ಉಕ್ಕಿಸುತ್ತದೆ. ತೋಟದ ಕೆಲಸ ಮಾಡಿಸುತ್ತಿದ್ದ ಶೇರೆಗಾರ ರಾಮ ತನಗೆ ಲಾಭವಾಗುವಂತಿದ್ದರೆ ಗುತ್ತಿಗೆ ಹಿಡಿಯುತ್ತಿದ್ದ, ನಫೆ ಆಗುತ್ತದೆ ಎಂದಾದರೆ ಆಳು ಸಂಬಳಕ್ಕೆ ಮಾಡಿಸುತ್ತಿದ್ದ. ತನ್ನ ತಂಡದಲ್ಲಿ ಬಹುಪಾಲು ಹೆಣ್ಣುಮಕ್ಕಳನ್ನೇ ಸೇರಿಸಿಕೊಳ್ಳುತ್ತಿದ್ದ. ಕಡಿಮೆ ಸಂಬಳಕ್ಕೆ ಬರುವ ಅವರು ಗಂಡಾಳುಗಳಂತೆಯೇ ಎದುರು ವಾದಿಸದೇ, ಹೆಚ್ಚಿನ ಪಗಾರ ಕೇಳದೇ, ಕಡಿಮೆ ಸಂಬಳಕ್ಕೆ ಹೆಚ್ಚಿನ ಕೆಲಸ ಮಾಡುತ್ತಾರೆ ಎನ್ನುವದು ಕಾರಣವಾಗಿತ್ತೇನೋ? ಆ ಹೆಣ್ಣುಮಕ್ಕಳು ಕಡಿಮೆಯೇನಿರಲಿಲ್ಲ, ಶೇರೆಗಾರನಾದ ರಾಮನಿಗೆ ಮುಖ,ಮುಸುಡಿ ನೋಡದೇ ಮಾತಿನಲ್ಲಿ ಜಾಡಿಸುತ್ತಿದ್ದರು. ರಾಮ ಆಗೆಲ್ಲ ಹುಳ್ಳಗೆ ನಗುತ್ತಿದ್ದನೇ ಹೊರತು ತಿರುಗಿ ಮಾತನಾಡುತ್ತಿರಲಿಲ್ಲ. ಎಲ್ಲರೂ ಹೆಣ್ಣುಮಕ್ಕಳಾಗುತ್ತಾರೆ ಒಂದೆರಡು ಮಂದಿ ಗಂಡಾಳುಗಳನ್ನು ತಂಡದಲ್ಲಿ ಇಟ್ಟುಕೊಳ್ಳುತ್ತಿದ್ದ. ಅವರೂ ಏನಾದರೂ ಒಂದು ಎಡವಟ್ಟು ಇದ್ದವರೇ. ಒಬ್ಬನಿಗೆ ಕೈ ಸೊಟ್ಟವಾದರೆ ಇನ್ನೊಬ್ಬನಿಗೆ ಕಾಲು ಕುಂಟು, ಇದೇ ಥರದವರು. ಆ ಸಮಯದಲ್ಲಿ ರಾಮ ಆಳುಗಳನ್ನು ಕೆಲಸಕ್ಕೆ ಹಚ್ಚಿ ‘ಈಗ ಬಂದೆ..’ಎಂದು ಪರಾರಿಯಾಗಿ ಬಿಡುತ್ತಿದ್ದ. ಆ ನಂತರ ಅವನ ಮುಖ ದರ್ಶನವಾಗುತ್ತಿದ್ದುದು ಎರಡು ದಿನದ ನಂತರವೇ.ಆ ಹೆಣ್ಣುಮಕ್ಕಳು ನನ್ನ ಕುರಿತು ಗೌರವದ ಜೊತೆಗೆ ಸಹೋದರಿಯರ ರೀತಿಯ ವಾತ್ಸಲ್ಯವನ್ನು ಇಟ್ಟುಕೊಂಡಿದ್ದರು. ಹಾಗಾಗಿ ಕೆಲಸ ಸಲೀಸಾಗಿ ಆಗುತ್ತಿತ್ತು. ರಾಮನ ಕುರಿತು ಅವರಲ್ಲಿ ಕೇಳಿದರೆ ಒಂದೆರಡು ದಿನ ಸಣ್ಣಗೆ ನಕ್ಕು ಸುಮ್ಮನಾದವರು ನಂತರ ಆತ ಸುಳ್ಳೂರು ಕಡೆಯ ಅವನ ನೆಂಟರ ಕಡೆಯ ಯಾವುದೋ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆಂದೂ, ಅವಳನ್ನು ಕಾಣಲು ಆಗಾಗ್ಗೆ ಹೋಗುತ್ತಾನೆಂತಲೂ ಹೇಳಿದ್ದರು. ನಾನು ಆ ಬಗ್ಗೆ ರಾಮನನ್ನು ಏನೂ ಕೇಳದೇ ಎಂದಾದರೂ ಬಂಡವಾಳ ಹೊರ ಬೀಳುತ್ತದೆ ಎಂದು ಕಾಯುತ್ತಿದ್ದೆ.

ಆಗ ತೋಟಕ್ಕಾಗಿ ಗುಡ್ಡದಲ್ಲಿ ಹಸಿ ಸೊಪ್ಪು ಕಡಿಸುತ್ತಿದ್ದೆ. ಮಧ್ಯಾಹ್ನ ಊಟ ಮುಗಿಸಿ ಬಂದಾಗ ಗುಡ್ಡದ ಮೇಲೆ ಸಣ್ಣದಾಗಿ ಗದ್ದಲ ಕೇಳತೊಡಗಿತ್ತು. ಏನಾಗಿರಬಹುದು? ಎನ್ನುವ ಕುತೂಹಲದಿಂದ ಗಡಿಬಿಡಿಯಲ್ಲಿ ಮೇಲೆ ಹೋಗಿ ನೋಡಿದರೆ ಇಬ್ಬರು ಗಂಡಾಳುಗಳ ಮಧ್ಯೆ ಜಗಳ ನಡೆಯುತ್ತಿತ್ತು. ಇಬ್ಬರೂ ಕೈಯಲ್ಲಿದ್ದ ಸೊಪ್ಪು ಕಡಿಯುವ ಕತ್ತಿಯನ್ನು ಖಡ್ಗದಂತೆ ಕುಣಿಸುತ್ತ, ಯುದ್ದೋನ್ಮಾದದ ಹಾವಭಾವದಲ್ಲಿ, ಅರ್ಥವಾಗದ ರೀತಿಯಲ್ಲಿ ಏನೇನೋ ಕೂಗಾಡುತ್ತಿದ್ದರು. ನನ್ನ ಕಂಡದ್ದೇ ಅವರ ಉಮೇದು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ನನಗೆ ಆತಂಕಕ್ಕಿಂತ ಆ ಕ್ಷಣದಲ್ಲಿ ಆಗಿದ್ದು ಆಶ್ಚರ್ಯ! ಯಾಕೆಂದರೆ ಅವರಲ್ಲಿ ಒಬ್ಬ ಕೆಪ್ಪ, ಆತನ ಕಿವಿ ಬುಡದಲ್ಲಿ ನಿಂತು ಕಿರುಚಿದರೂ ಕೇಳದ ಅಸಾಧ್ಯ ಕಿವುಡ. ಇನ್ನೊಬ್ಬ ಮಾತು ಸರಿಯಾಗಿ ಆಡಲಾಗದ ಮೂಕ, ಆತ ಮಾತನಾಡಿದರೇ ಶಬ್ದಗಳು ಬರದೇ, ಒಂದು ರೀತಿಯ ಕಿರುಚುವಿಕೆಯ ಸದ್ದು ಬರುತ್ತಿತ್ತು ಅಷ್ಟೇ. ಆ ಮೂಕರೂ ಕಿವುಡರಾಗಿರುತ್ತಾರೆ ಎಂದು ಕೇಳಿದ್ದೆ. ಇಬ್ಬರು ಕಿವುಡರು, ಒಬ್ಬನ ಮಾತು ಮತ್ತೊಬ್ಬನಿಗೆ ಕೇಳೋದಿಲ್ಲ. ಒಬ್ಬನಿಗಂತೂ ಮಾತೇ ಬರೋದಿಲ್ಲ. ಹಾಗಾದರೆ ಈ ಜಗಳ ಉತ್ಪತ್ತಿಯಾದ್ದು ಎಲ್ಲಿಂದ? ಹೇಗೆ? ಎನ್ನುವದು ನನಗೆ ಬಿಡಿಸಲಾಗದ ಒಗಟಾಗಿ ಕಾಣತೊಡಗಿತು. ಹೆಣ್ಣಾಳುಗಳು ಹೇಳಿದಂತೆ ಈ ಜಗಳ ಶುರುವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಆಯ್ತೆನ್ನುವದನ್ನ ಕೇಳಿದಾಗ ಮತ್ತಷ್ಟು ಅಚ್ಚರಿಯಾಯಿತು. ಇಲ್ಲಿಯವರೆಗೆ ಮಾತುಗಳನ್ನ ಕೇಳಿಸಿಕೊಳ್ಳದೇ, ಇಬ್ಬರೂ ಪರಸ್ಪರ ಏನನ್ನು ಉತ್ತರಿಸುತ್ತ ಬಂದರು? ಈತ ಹೇಳಿದ್ದನ್ನ ಆತ ಹೇಗೆ? ಏನೆಂದು ಅರ್ಥಮಾಡಿಕೊಳ್ಳುತ್ತಿದ್ದಾನೆ. ಮಾತೇ ಅಲ್ಲದ ಸಂಕೇತದ ಅಲೆಗಳು ಅವರ ನಡುವೆ ಸಂವಹನ ಕಲ್ಪಿಸುತ್ತಿದೆಯೇ? ಎಂದೆಲ್ಲ ಯೋಚನೆ ತಲೆ ಕೆಡಿಸತೊಡಗಿತು. ಇದು ಸದ್ಯ ಮುಗಿಯದ ಕದನ ಎನ್ನುವದು ಮನದಟ್ಟಾಗಿ ಅವನ್ನೆಲ್ಲ ನಂತರ ಚಿಂತನೆ ಮಾಡುವಾ ಎಂದು ಇಬ್ಬರ ನಡುವೆ ನಿಂತು ಗಟ್ಟಿಯಾಗಿ ಗದರಿದೆ. ನಾನು ಹೇಳಿದ್ದು ಅವರಿಗೆ ತಿಳಿಯಬೇಕಲ್ಲ, ಅಲ್ಲೇ ಇದ್ದ ಬಡಿಗೆಯನ್ನ ತೆಗೆದುಕೊಂಡು ಹೊಡೆಯುವಂತೆ ನಟಿಸಿದಾಗ ಅವರಿಬ್ಬರು ನಿಧಾನಕ್ಕೆ ತಣ್ಣಗಾದರು. ಮಾಡುತ್ತಿದ್ದ ಕೆಲಸವನ್ನ ಸ್ವಲ್ಪ ಕಾಲವಾದರೂ ನಿಲ್ಲಿಸಿ, ಕಳ್ಳ ಬೀಳುವ ಪ್ಲಾನ್ ಇದರ ಹಿಂದಿರಬಹುದೇ? ಎನ್ನುವ ಸಂದೇಹವೂ ಬಂತು. ಇಂಥವರನ್ನ ಕೆಲಸಕ್ಕೆ ತಂದ ರಾಮನ ಮೇಲೆ ಅಸಾಧ್ಯ ಸಿಟ್ಟೂ ಬಂತು. ಅವರಿಬ್ಬರ ಕದನ ಇವತ್ತಿಗೂ ಕುತೂಹಲವಾಗೇ ಉಳಿದಿದೆ. ಕಿವುಡರಾದ, ಓರ್ವ ಮೂಕನಾದ ವ್ಯಕ್ತಿಗಳ ನಡುವಿನ ಆ ಜಗಳ ಒಂದು ವಿಸ್ಮಯವಾಗೇ ಉಳಿದುಕೊಂಡಿದೆ. –
ಇದನ್ನು ಯಾಕೆ ಪ್ರಸ್ತಾವಿಸಿದೆ ಎಂದರೆ ಸಹಜವೆಂದು ತಳ್ಳಿ ಹಾಕಬಹುದಾದ, ಆ ಕ್ಷಣಕ್ಕಷ್ಟೇ ರಿಯಾಕ್ಟ ಮಾಡಿ ಬಿಡಬಹುದಾದ ಘಟನೆಗಳನ್ನು ಹಾಗೇ ನೋಡದೇ ಅವನ್ನು ಅನುಭವಿಸುವ, ಅದರ ಹಿಂದು-ಮುಂದಿನದನ್ನು ಶೋಧಿಸುವ ಕಣ್ಣು, ಮನಸ್ಸುಗಳನ್ನ ಪಡೆದದ್ದು ತೇಜಸ್ವಿಯವರ ಒಡನಾಟದಿಂದ ಮತ್ತು ಅವರ ಬರವಣಿಗೆ ಓದಿನಿಂದ ಎನ್ನುವ ಕಾರಣಕ್ಕೆ. ಹಲವರಿಗೆ ಇಂಥವುಗಳ ಬಗ್ಗೆ ತಾತ್ಸಾರ ಇರಬಹುದಾದರೂ ನನಗಂತೂ ಅಮೂಲ್ಯವೇ. ಬಸವಣ್ಣಿ, ಜಟ್ಯಾ ಮುಂತಾದ ಹಲವರಿಂದ ಇಂಥ ನೂರಾರು ಅನುಭವಗಳನ್ನ ಪಡೆದಿದ್ದೇನೆ. ಅವಕ್ಕೆಲ್ಲ ಕಾರಣ ತೇಜಸ್ವಿಯವರೇ. ಕ್ಯಾಮರಾಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಲೆನ್ಸಗಳನ್ನ ಜೋಡಿಸಿಕೊಳ್ಳುವಂತೆ ಸುತ್ತಲಿನ ಜಗತ್ತನ್ನ ಗ್ರಹಿಸಲು ಅಂಥ ಕೆಲವಾದರೂ ಲೆನ್ಸಗಳನ್ನ ಹೊಂದಲು ಕಾರಣವಾದ ತೇಜಸ್ವಿಯವರಿಗೆ ಧನ್ಯವಾದ ಹೇಳದೇ ಇರಲಾದೀತೆ?
ಮುಂದುವರಿಯುವದು…..
ಗಂಗಾಧರ ಕೊಳಗಿ

About the author

Adyot

1 Comment

Leave a Comment