ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ತೇಜಸ್ವಿ ಎಂಬ ವಿಸ್ಮಯ……
ತೇಜಸ್ವಿಯವರ ಬದುಕು ಎಷ್ಟು ಸರಳವೋ, ಸ್ಪಷ್ಟವೋ ಹಾಗೇ ಅವರ ಬರವಣಿಗೆಯೂ ಎನ್ನುವದರಲ್ಲಿ ಎರಡು ಮಾತಿಲ್ಲ. ತೇಜಸ್ವಿ ಆರಂಭದಲ್ಲಿ ಬರೆದ ‘ಲಿಂಗ ಬಂದ’ ಎನ್ನುವ ಕಥೆಯಿಂದ ತೊಡಗಿ, ಆ ನಂತರದ ಬಹುತೇಕ ಎಲ್ಲ ಬರವಣಿಗೆಯನ್ನ ಓದಿದ್ದರೂ ಈಗಲೂ ನನ್ನನ್ನ ಕಾಡುವದು ಅವರ ‘ ಸ್ವರೂಪ’ ಎನ್ನುವ ಕೃತಿ. ಆಕಾರದಲ್ಲಿ ಅದು ಸಣ್ಣ ಪುಸ್ತಕ- ದೇವನೂರು ಮಹಾದೇವರ ‘ಒಡಲಾಳ’ ಕೃತಿಯ ಸೈಜಿನದು.( ಇಂಥ ಆಕಾರದಲ್ಲಿ ಚಿಕ್ಕದಿರುವ ಪುಸ್ತಕಗಳ ಬಗ್ಗೆ ಒಂಥರಾ ಕುತೂಹಲ, ಯಾಕೆಂದರೆ ಚಿಕ್ಕವಾದರೂ ನಾಲ್ಕೈದು ನೂರು ಪುಟಗಳ ದಪ್ಪ ಪುಸ್ತಕಗಳು ಮಾಡುವ ಪರಿಣಾಮಕ್ಕಿಂತ ತೀವ್ರವಾಗಿ ಅವುಗಳಿಂದ ಪಡೆದಿರುವ ಕಾರಣಕ್ಕೆ. ಸ್ವರೂಪ, ಒಡಲಾಳ, ಅನಂತಮೂರ್ತಿಯವರ ಸಂಸ್ಕಾರ ಮುಂತಾಗಿ). ತೇಜಸ್ವಿಯವರ ಎಲ್ಲ ಬರಹಗಳೂ ಮಹತ್ವದ್ದು ಮತ್ತು ಸದಾ ಜೀವಂತವೇ. ನೀಳ್ಗತೆಯಾಗಿಯೂ, ಕಾದಂಬರಿಯಾಗಿಯೂ ಭಾವಿಸಿಕೊಳ್ಳಬಹುದಾದ ‘ಸ್ವರೂಪ’ ಪ್ರಾಯಶ: ಅವರ ಉಳಿದೆಲ್ಲ ಕೃತಿಗಳಿಗಿಂತ ಭಿನ್ನವಾದ, ಒಂದು ವಿಶಿಷ್ಠವಾದ ಬರವಣಿಗೆಯ ತಂತ್ರವನ್ನ ಅಳವಡಿಸಿಕೊಂಡದ್ದು. ಹೆಚ್ಚಿನ ಅಧ್ಯಯನ ಮಾಡಿದ್ದೂ ನಗರವನ್ನು ತೊರೆದು ಹಳ್ಳಿಯಲ್ಲಿ ಕೃಷಿಕನಾಗಿ ಬದುಕುತ್ತಿರುವ ವ್ಯಕ್ತಿಯೊರ್ವ, ತನ್ನೂರಿಗೆ ಬಂದ ಗೆಳೆಯನ ಜೊತೆ ಈಡೀ ಬದುಕನ್ನು ಹಂಚಿಕೊಳ್ಳುತ್ತಾನೆ. ಅದೂ ಕಾಡುಪ್ರಾಣಿಯ ಭೇಟೆಗೆ ಪೊದೆಯ ಮರಸುನಲ್ಲಿ ಕುಳಿತಾಗ. ಈಡೀ ಕಥನದಲ್ಲಿ ಈ ವ್ಯಕ್ತಿ ಮಾತ್ರ ಮಾತನಾಡುತ್ತಾನೆ- ಒಂದು ರೀತಿಯ ಸ್ವಗತದಲ್ಲಿ. ತೇಜಸ್ವಿ ಸ್ವರೂಪದಲ್ಲಿ ನಮ್ಮೆದುರು ಬಿಚ್ಚಿಡುವ ಸತ್ಯಗಳಿದ್ದಾವಲ್ಲ, ಅವನ್ನು ಅರಗಿಸಿಕೊಳ್ಳುವದು ನಿಜಕ್ಕೂ ಕಷ್ಟ. ದೇಶ,ಕಾಲಗಳ ಜೊತೆ ಜೊತೆಗೆ ಬದುಕಿನ ಅಸಹಜತೆ, ವಿಶಿಷ್ಠತೆ, ನಶ್ವರತೆಗಳನ್ನ ಎಷ್ಟೊಂದು ಸಲೀಸಾಗಿ ವ್ಯಕ್ತಪಡಿಸುತ್ತಾರೆ ಅಂದರೆ ಓರ್ವ ಆಧ್ಯಾತ್ಮಿಕ ದಾರ್ಶನಿಕನಂತೆ. ಸಾಹಿತ್ಯ ಕ್ಷೇತ್ರದ, ಅಕಾಡೆಮಿಕ್ ವಲಯದ, ನಗರ ಬದುಕಿನ ಸಂಕೀರ್ಣತೆ ಮತ್ತು ಮುಖವಾಡದ ಹಿಂದಿನ ಕರಾಳ ಸತ್ಯಗಳನ್ನ ತಮ್ಮದೇ ಶೈಲಿಯಲ್ಲಿ ಓದುಗರೆದುರು ತೆರೆದಿಡುತ್ತಾರೆ.. ಸ್ವರೂಪ ನನ್ನನ್ನು ತುಂಬ ಪ್ರಭಾವಿಸಿದ ಕಾರಣದಿಂದ ಇಲ್ಲಿ ಪ್ರಸ್ತಾವಿಸಿದೆ.

ನನ್ನ ಸೋದರ ಮಾವನ ಮಗಳು(ಸೋದರತ್ತಿಗೆ) ಇರುವದು ಪುತ್ತೂರು ಸಮೀಪದ ಮಿತ್ತೂರು ಎನ್ನುವಲ್ಲಿ. ವರ್ಷದಲ್ಲಿ 2-3 ಬಾರಿಯಾದರೂ ಅಲ್ಲಿಗೆ ನನ್ನ ಭೇಟಿ ಇದ್ದದ್ದೇ. ಶಿರಸಿಯಿಂದ ನೇರವಾಗಿ ಪುತ್ತೂರಿಗೆ ಬಸ್ ಇದ್ದದ್ದರಿಂದ ನಾನು ಅದರಲ್ಲೇ ಸಂಚರಿಸುತ್ತಿದ್ದೆ. ತೇಜಸ್ವಿಯವರ ಭೇಟಿಯ ನಂತರ ನನ್ನ ಓಡಾಟದ ಜಾಡು ಬದಲಾಯಿತು. ಹೋಗುವಾಗ ಅಥವಾ ಬರುವಾಗ ಮೂಡಿಗೆರೆಗೆ ಹೋಗಿ ತೇಜಸ್ವಿಯವರನ್ನು ಕಂಡು ಬರುತ್ತಿದ್ದೆ.
ಯಾಕೋ? ಮೊದಲಿನಿಂದಲೂ ನನಗೆ ಬೇರೆಯವರ ಮನೆಗೆ ಪದೇ,ಪದೇ ಹೋಗಲು ಹಿಂಜರಿಕೆ. ನನ್ನ ಭೇಟಿಯಿಂದ ಕುಟುಂಬದ ಉಳಿದವರಿಗೆ ಕಿರಿಕಿರಿಯಾದೀತು ಎನ್ನುವ ಆತಂಕ. ಹಾಗಾಗಿ ಮೂಡಿಗೆರೆಯಲ್ಲಿ ಇಳಿದು, ತೇಜಸ್ವಿಯವರ ಮನೆಗೆ ಫೋನ್ ಮಾಡುತ್ತಿದ್ದೆ. ತೇಜಸ್ವಿ ಇದ್ದರೆ ಅವರೇ ಫೋನ್ ತೆಗೆದುಕೊಳ್ಳುತ್ತಿದ್ದರು. ಇಲ್ಲವಾದರೆ ಅವರ ಶ್ರೀಮತಿಯವರು ತೇಜಸ್ವಿ ಇದ್ದಾರೋ,ಇಲ್ಲವೋ ಎಂದು ತಿಳಿಸುವದರ ಜೊತೆಗೆ ಎಲ್ಲಿಗೆ ಹೋಗಿದ್ದಾರೆ ಎನ್ನುವದನ್ನೂ ತಿಳಿಸುತ್ತಿದ್ದರು.
ಒಮ್ಮೆ ಮಿತ್ತೂರಿನಿಂದ ಮೂಡಿಗೆರೆಗೆ ಬಂದು ತೇಜಸ್ವಿಯವರ ಮನೆಗೆ ಫೋನ್ ಮಾಡಿದೆ. ಫೋನ್ ತೆಗೆದುಕೊಂಡ ಅವರ ಶ್ರೀಮತಿ ಅವರು ಮೂಡಿಗೆರೆಗೆ ಹೋಗಿದ್ದಾರೆ ಎಂದರು. ‘ನಾನು ಮೂಡಿಗೆರೆಯಲ್ಲೇ ಇದ್ದೇನೆ’ ಅಂದಾಗ ‘ನಿಮಗೆ ಅಲ್ಲಿ ಸಿಗಬಹುದು’ ಎಂದರು. ‘ಎಲ್ಲಿ ಸಿಗಬಹುದು?’ ಎನ್ನುವ ನನ್ನ ಪ್ರಶ್ನೆಗೆ ‘ ಪೊಲೀಸ್ ಸ್ಟೇಶನ್ ಎದುರುಗಡೆ ಇರುವ ಐಯಂಗಾರಿ ಬೇಕರಿಯಲ್ಲಿ ಸಿಕ್ಕರೂ ಸಿಗಬಹುದು, ಇಲ್ಲವಾದ್ರೆ ಅವರನ್ನೇ ಕೇಳಿದ್ರೆ ಎಲ್ಲಿ ಹೋದ್ರೂ ಅಂತಾ ಹೇಳ್ತಾರೆ’ ಎಂದು ಕ್ಲೂ ಕೊಟ್ಟರು.

ತೇಜಸ್ವಿಯವರ ಬರಹಗಳಲ್ಲಿ ಬರುವ ವಿವರಣೆಯಿಂದ ಮೂಡಿಗೆರೆಯಲ್ಲಿ ಅವರು ಭೆಟ್ಟಿಯಾಗುವ ವ್ಯಕ್ತಿಗಳು, ಭೇಟಿ ಕೊಡುವ ಸ್ಥಳಗಳ ಬಗ್ಗೆ ಸುಮಾರಾದ ಊಹೆ ಇತ್ತು. ಅಲ್ಲಿನ ಅನುಭವಗಳನ್ನೆಲ್ಲ ತಮ್ಮದೇ ವಿಶಿಷ್ಠ ಹಾಸ್ಯದ ಶೈಲಿಯಲ್ಲಿ ಬರೆದದ್ದನ್ನ ಓದಿದ್ದೆ. ಪರಿಚಯದವರ್ಯಾರಾದರೂ ಕಂಡರೆ ನಡು ರಸ್ತೆಯಲ್ಲೇ ಕೈ ಅಡ್ಡ ಮಾಡಿ ನಿಲ್ಲಿಸಿ, ಇಬ್ಬರಿಗೂ ಪ್ರಯೋಜನಕ್ಕೆ ಬಾರದ ಒಣ ಹರಟೆ ಹೊಡೆಯುವದಲ್ಲದೇ, ಮಾತನಾಡುವಾಗ ಸುಮ್ಮನಿರದೇ, ಸ್ಕೂಟರಿನ ಕನ್ನಡಿ ತಿರುವುವದೋ, ಅದರ ಅಂಗಾಗ ಸವರುವದೋ ಮಾಡುತ್ತಿದ್ದುದನ್ನ ವಿವರಿಸುತ್ತ ‘ಅವರಿಗೆ ಏನೂ ಸಿಗದಿದ್ದರೆ ನಮ್ಮ ಶರ್ಟಿನ ಗುಂಡಿಗಳನ್ನು ತಿರುಪಲು ಮುಂದಾಗುತ್ತಾರೆ’ ಎಂದು ಬರೆದದ್ದನ್ನ ಓದಿ ಬಿದ್ದು,ಬಿದ್ದು ನಕ್ಕಿದ್ದೆ. ಅವರ ಕರ್ವಾಲೋ, ಚಿದಂಬರ ರಹಸ್ಯ,ಜುಗಾರಿ ಕ್ರಾಸ್ ಮುಂತಾದ ಕಾದಂಬರಿಗಳಲ್ಲಿ ಬರುವ ಪೇಟೆಯ ವರ್ಣನೆಗಳೆಲ್ಲ ಬಹುತೇಕ ಮೂಡಿಗೆರೆಯದೇ.
ಅವರು ಪೇಟೆಗೆ ಹೋದರೆ ದೊಡ್ಡ ಮನುಷ್ಯರ ಅಂಗಡಿಯಲ್ಲೋ,ಹೋಟೆಲ್‍ಲ್ಲೋ ಕೂರದೇ, ಸಾಮಾನ್ಯ ದರ್ಜೆಯ ಅಂಗಡಿ, ವ್ಯಕ್ತಿಗಳನ್ನ ಭೇಟಿಯಾಗ್ತಾರೆ ಎಂದು ಕೇಳಿದ್ದೆ. ಹಾಗಾಗಿ ಇದೊಂದು ಅದನ್ನು ಗುರುತಿಸುವ ಅವಕಾಶ ಸಿಕ್ಕಿತು ಎಂದು ಖುಷಿಯಾಯಿತು.
ಆಗಿನ ಮೂಡಿಗೆರೆ ಮಲೆನಾಡಿನ ಟಿಪಿಕಲ್ ಶೈಲಿಯ ಪೇಟೆಯ ಥರವೇ ಇದ್ದರೂ ಮಾರ್ಡನ್ ಆಗುತ್ತ ,ಸುಧಾರಣೆಯ ದಾರಿಯಲ್ಲಿತ್ತು. ಸುತ್ತೆಲ್ಲ ಕಾಫಿ ಬೆಳೆಗಾರರೇ ಜಾಸ್ತಿ ಇದ್ದರಲ್ಲ, ಹಾಗಾಗಿ ಆಧುನಿಕತೆಯನ್ನ, ಅದರಲ್ಲೂ ಹತ್ತಿರವೇ ಇರುವ ಮಂಗಳೂರು, ಇತ್ತ ಚಿಕ್ಕಮಗಳೂರು ನಗರಗಳ ಪ್ರಭಾವವನ್ನ ಮೈಗೂಡಿಸಿಕೊಳ್ಳುತ್ತಿತ್ತು. ಅಲ್ಲಿದ್ದ ಅರ್ಧದಷ್ಟು ಅಂಗಡಿ, ಲಾಡ್ಜ,ಹೋಟೆಲ್‍ಗಳೆಲ್ಲ ಮಲೆಯಾಳಿಗಳದ್ದೇ ಎನ್ನುವದು ಮೇಲ್ನೋಟಕ್ಕೆ ಗೋಚರವಾಗುತ್ತಿತ್ತು. ಸಾಕಷ್ಟು ಉತ್ತಮವಾಗಿದ್ದ ಬಸ್ ಸ್ಟಾಂಡ್ ಎದುರಲ್ಲೇ ಒಂದು ಸರ್ಕಲ್ ಇದ್ದು ಅಲ್ಲಿ ಪೇಟೆಯ ಮುಖ್ಯ ಮಾರ್ಗ ಕವಲೊಡೆದಿತ್ತು. ಆ ಮಾರ್ಗದಲ್ಲಿ ನಾಲ್ಕು ಹೆಜ್ಜೆ ಹೋದರೆ ಪೊಲೀಸ್ ಸ್ಟೇಶನ್, ಅದರೆದುರಲ್ಲಿ ಇದ್ದ ಬೇಕರಿಯವರ ಬಳಿ ತೇಜಸ್ವಿಯವರ ಬಗ್ಗೆ ಕೇಳಿದೆ. ನನ್ನ ಪರಿಚಯ ಕೇಳಿ ‘ ಅಯ್ಯೋ, ಬಂದಿದ್ರು, ಸುಮಾರು ಹೊತ್ತು ಕೂತಿದ್ರು. ಈಗೊಂದು ಅರ್ಧ,ಮುಕ್ಕಾಲು ಗಂಟೆ ಮೊದಲು ಪೇಟೆ ಕಡೆ ಹೋದ್ರು’ ಎಂದರು.’ ಪೇಟೆಯಲ್ಲಿ ಎಲ್ಲಿ ಸಿಗಬಹುದು?’ ಎಂದು ನನ್ನ ಮಾಮೂಲಿ ಪ್ರಶ್ನೆ ಇಟ್ಟೆ. ‘ ಇದೇ ರಸ್ತೆಯಲ್ಲಿ ಮುಂದೆ ಒಂದು ಸೆಲೂನ್ ಸಿಗುತ್ತದೆ, ಅಲ್ಲಿ ಇರಬಹುದು ನೋಡಿ’ ಎಂದು ಆ ಸೆಲೂನ್ ಹೆಸರು ಹೇಳಿದ. ಅಲ್ಲಿಂದ ರಸ್ತೆಗಿಳಿದ ನಾನು ಅತ್ತ ನೋಡಿದೆ. ಸುಮಾರು ಅರ್ಧ ಕಿಲೋಮೀಟರ್ ನೇರವಾಗಿದ್ದ ಆ ಮಾರ್ಗ ಮುಂದೆ ತಿರುವು ಪಡೆದಿತ್ತು. ಅದೇ ಮಾರ್ಗದಲ್ಲಿ ಸೆಲೂನ್ ಬೋರ್ಡ ನೋಡುತ್ತ ಬಂದವನಿಗೆ ಆ ಸೆಲೂನ್ ಸಿಕ್ಕಿತು. ಒಳಗೆ ಇರ್ತಾರೆ ಎಂದು ಹಣಕಿ ನೋಡಿದವನಿಗೆ ಅವರು ಕಾಣಲಿಲ್ಲ. ಯಾರೋ ಒಂದೆರಡು ಗಿರಾಕಿ ಇದ್ದರು. ಅಪರಿಚಿತನಾದ ನನ್ನ ನೋಡಿದ ಸೆಲೂನ್‍ನವ ‘ಬನ್ನಿ,ಬನ್ನಿ ಐದು ನಿಮಿಷ, ಇವರದ್ದು ಆಗುತ್ತೆ’ ಎಂದು ಆಹ್ವಾನಿಸಿದ. ‘ ನಾನು ತೇಜಸ್ವಿಯವರನ್ನ ಭೆಟ್ಟಿಯಾಗ್ಲಿಕ್ಕೆ ಬಂದೆ. ಇಲ್ಲಿ ಬಂದಿದ್ರಾ?’ ಎಂದಾಗ ತನಗಾದ ಸಣ್ಣ ಬೇಸರಿಕೆಯನ್ನ ಹತ್ತಿಕ್ಕಿ ಮುಖ ಅರಳಿಸಿ ‘ ಹೌದು, ಇಲ್ಲೇ ಕೂತು ಮಾತಾಡಿ ಹೋದ್ರು, ಹೋಗಿ 10-15 ನಿಮ್ಷ ಆಯ್ತು ಅಷ್ಟೇ’ ಎಂದ. ಅವನಿಗೆ ತೇಜಸ್ವಿಯವರ ಬಗ್ಗೆ ಇರುವ ಗೌರವ, ಪ್ರೀತಿ ಮಾತಿನಲ್ಲಿ, ಮುಖದಲ್ಲಿ ಎದ್ದು ಕಾಣುತ್ತಿತ್ತು. ಪ್ರಾಯ:ಶ ಅವನೇನೂ ಅವರ ಕಾದಂಬರಿಗಳನ್ನ, ಕಥೆಗಳನ್ನ ಓದಿರಲಾರ. ಅವರ ಒಡನಾಟ, ತನ್ನಂಥ ಸಾಮಾನ್ಯನ ಅಂಗಡಿಗೂ ಅವರು ಬಂದು ಕೂತು ಹೋಗುತ್ತಾರಲ್ಲ! ಎನ್ನುವ ಭಾವನೆಯೇ ಅವನಿಗೆ ಹೆಮ್ಮೆ ತಂದಿರಲೂ ಸಾಕು.
ನನಗೋ ಒಂಥರಾ ಮಾಯಾಮೃಗದ ಬೆನ್ನುಹತ್ತಿದ ಅನುಭವವಾಗತೊಡಗಿತ್ತು. ಅವರ ಮಿಸ್ಸಿಂಗ್ ಲಿಂಕ್ ಕೃತಿಗಳ ಘಟನೆಗಳಂತೆ, ಸ್ವಲ್ಪದರಲ್ಲೇ ಅವರು ತಪ್ಪಿಹೋಗುತ್ತಿದ್ದರು. ಆ ಬಿರು ಬಿಸಿಲಿನಲ್ಲೂ ಅವರನ್ನು ಬೆನ್ನು ಬಿಡದೇ ಹೋಗುವ ಸವಾಲನ್ನ ನಾನೇ ಎತ್ತಿಕೊಂಡೆ. ಕುರ್ಚಿಯಲ್ಲಿ ಕೂತ ಗಿರಾಕಿಯ ಕೂದಲು ಕತ್ತರಿಸುತ್ತಲೇ ನನ್ನ ಮುಖಭಾವವನ್ನ ಗಮನಿಸಿರಬೇಕು. ‘ಇಲ್ಲೇ ಪೇಟೆಯಲ್ಲಿ ಸಿಕ್ಕರೂ ಸಿಕ್ಕಿಯಾರು’ ಎಂದ. ‘ಮತ್ತೆ ನಾನು ‘ ಎಲ್ಲಿ ಸಿಗಬಹುದು?’ಎಂದೆ. ಈ ಪ್ರಶ್ನೆ ಬಾಯಿಪಾಠವಾಗುತ್ತೇನೋ ಅನಿಸಿತು. ತನ್ನ ಕೆಲಸವನ್ನ ಅಲ್ಲೇ ನಿಲ್ಲಿಸಿ, ಕೈಯಲ್ಲಿದ್ದ ಕತ್ತರಿ ಸಮೇತ ರಸ್ತೆಗೆ ಬಂದ ಆತ ‘ ಓ ಅಲ್ಲಿ, ಒಂದು ಸಣ್ಣ ಗೂಡಂಗಡಿ ಥರ ಕಾಣುತ್ತದೆಯಲ್ಲ, ಆ ಚಪ್ಪಲಿ ರಿಪೇರಿ ಅಂಗಡಿಯಲ್ಲಿ ಕೂತಿದ್ದರೂ ಇರಬಹುದು’ ಎಂದ.

ತೇಜಸ್ವಿ ಅಲ್ಲಿ ಕೂತಿರ್ತಾರಾ? ಎಂದು ನನಗೆ ಅಚ್ಚರಿಯಾದರೂ ನೋಡೇ ಬಿಡುವಾ ಎಂದು ಅವನಿಗೆ ಧನ್ಯವಾದ ಹೇಳಿ ಮುಂದೆ ಹೋದೆ. ಆಗಲೇ ಮಧ್ಯಾಹ್ನ ಒಂದೂವರೆ,ಎರಡು ಗಂಟೆಯಾಗುತ್ತ ಬಂದಿತ್ತು. ಹಾಗೇ ಮುಂದಕ್ಕೆ ಹೋಗಿ ಚಪ್ಪಲಿ ರಿಪೇರಿಯವನ ಅಂಗಡಿಯೆದುರು ನಿಂತೆ. ತುಂಬ ಸಣ್ಣದಾದ ಅಂಗಡಿ, ಅದು, ಗಿರಾಕಿಗಳು ಬಂದರೆ ಕೂರಲು ಮರದ ಹಲಗೆಯ ಸಾದಾ ಬೆಂಚಿನ ತರದ ಆಸನವಿತ್ತೇ ಹೊರತು ಕುರ್ಚಿಗಳಿರಲಿಲ್ಲ. ತೇಜಸ್ವಿ ಆ ಬೆಂಚಿನ ಮೇಲೇ ಕೂತು ಈತನ ಬಳಿ ಅದೇನು ಕಥೆ ಹೇಳಿಯಾರು? ಎನ್ನುವ ವಿಸ್ಮಯವೂ ಆಯಿತು. ನನ್ನ ಮಾಮೂಲಿ ಪ್ರಶ್ನೆಗೆ ‘ ಅಯ್ಯಾ, ಈಗೊಂದು ಐದು ನಿಮಿಷದ ಹಿಂದೆ ಹೋದ್ರಲ್ಲಾ, ಸುಮಾರು ಹೊತ್ತು ಕೂತಿದ್ರು’ ಎಂದ ಆತ. ಏನು ಹೇಳಬೇಕು ತೋಚದೇ ‘ಚಪ್ಪಲಿ ರಿಪೇರಿ ಮಾಡಿಸೋಕೆ ಬಂದಿದ್ರಾ?’ ಎಂದಿದ್ದಕ್ಕೆ ‘ಇಲ್ಲಾ, ಪೇಟೆಗೆ ಬಂದಾಗ ಆಗೀಗ ಬರ್ತಿರ್ತಾರೆ. ಸುಮ್ನೆ ಒಂದಿಷ್ಟು ಮಾತಾಡಿ ಹೋಗ್ತಾರೆ. ಅಂಥವರು ನನ್ನ ಇಂಥ ಅಂಗಡಿಲೀ ಕೂತು ಹೋಗ್ತಾರಲ್ಲ, ಅದೇ ನಂಗೆ ಖುಷಿ’ ಅಂದ. ‘ಮತ್ತೆ ಪೇಟೆಯಲ್ಲಿ ಎಲ್ಲಾದರೂ ಸಿಗಬಹುದಾ?’ ಎಂದಿದ್ದಕ್ಕೆ ‘ಸಿಗಲಿಕ್ಕಿಲ್ಲ. ಸುಮಾರು ಹೋತ್ತಾಗೋಯ್ತು, ಮನೆಗೆ ಹೋಗ್ತೀನಿ ಅಂತಿದ್ರು’ ಎಂದಾಗ ಇನ್ನು ಅವರನ್ನು ಅರಸುವದು ಬೇಡ ಎಂದು ನಿರ್ಧರಿಸಿದೆ.

ಅಂತೂ ಅವತ್ತು ನನಗೆ ಮಿಸ್ಸಾಗಿ ಹೋದ್ರು. ಮತ್ತೆ ಅವರಿಗೆ ಫೋನ್ ಮಾಡೋದಾಗ್ಲಿ, ಮನೆಗೆ ಹೋಗೋದಾಗ್ಲಿ ಬೇಡ ಎಂದು ನಿರ್ಧರಿಸಿ ಬಸ್ ಹತ್ತಿದೆ. ಊರಿಗೆ ಬಂದವನು ಈ ಬಗ್ಗೆ ಬರೆದೆ. ಅದಕ್ಕೆ ತಕ್ಷಣವೇ ಉತ್ತರಿಸಿದರು. .( ತೇಜಸ್ವಿ ಬರೆದ ಆ ಪತ್ರವನ್ನ ಈ ಲೇಖನ ಸರಣಿಯ ಮೊದಲ ಕಂತಿನಲ್ಲಿ ಪ್ರಕಟಿಸಿದ್ದೆ).
ಈ ಘಟನೆ ಎರಡು ಕಥೆ ಬರೆದದ್ದಕ್ಕೇ, ನಾಲ್ಕಾರು ಲೇಖನ ಬರೆದಿದ್ದಕ್ಕೇ ನಾನು ಗ್ರೇಟ್ ಅಂತಾ ಕಾಲರ್ ಹಾರಿಸಿಕೊಂಡು ಓಡಾಡುವ ನನ್ನಂಥವನಿಗೆ ಒಂದು ಪಾಠವನ್ನು ಕಲಿಸಿಕೊಟ್ಟಿದೆ. ಸಾಮಾನ್ಯ ಅಂದುಕೊಂಡವರಲ್ಲಿ ಇರುವ ಅಸಾಮಾನ್ಯತೆಯನ್ನ, ಅವರಲ್ಲಿ ಹೊರಗೆ ಕಾಣದಂತೆ ಹುದುಗಿಕೊಂಡ ವಿಶಿಷ್ಠತೆಯನ್ನ ಗುರುತಿಸುವಲ್ಲಿ ತೇಜಸ್ವಿಯವರಿಗೆ ಸಹಾಯಕವಾದದ್ದು ಇಂಥ ಒಡನಾಟಗಳೇ ಆಗಿರಬಹುದು.
ಅವರ ಬರಹಗಳ¯ಲ್ಲಿ ಬರುವ ಮಾರ, ಬಿರ್ಯಾನಿ ಕರಿಯಪ್ಪ, ಹಾವುಗೊಲ್ಲರ ಎಂಕ್ಟ, ಪ್ಯಾರ, ಗಾರೆ ಸೀನಪ್ಪ.. ಇಂಥ ಪಾತ್ರಗಳೆಲ್ಲ ನಮ್ಮ ಬದುಕಿನಲ್ಲೂ ಬಂದಿರುತ್ತಾರೆ. ಅಥವಾ ನಾವು ಅವರ ಬದುಕಿನಲ್ಲಿ ಹಾದು ಹೋಗಿರುತ್ತೇವೆ. ಆದರೆ ನಾವು ಅವರನ್ನೆಲ್ಲ ಗ್ರಹಿಸಿರುವದಿಲ್ಲ. ಗಮನಿಸಿದರೂ ಅವರು ಯಕಶ್ಚಿತ್ ಜನ ಎಂದು ನೆನಪಿನಿಂದ ಡಿಲೀಟ್ ಮಾಡಿರ್ತೇವೆ. ನಮ್ಮ ನೆನಪಿನಲ್ಲಿರುವವರು ನಾವು ಯಾವಾಗಲಾದರೂ ಭೇಟಿಯಾದ ಶ್ರೀಮಂತರು, ದೊಡ್ಡ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು, ಹೆಸರಾಂತ ಸಾಹಿತಿಗಳು ಇಂಥವರೇ. ತನ್ನ ಪಾಡಿಗೆ ತಾನು ಶ್ರಮವಹಿಸಿ ದುಡಿವ ರೈತ, ಆದಷ್ಟು ಪ್ರಾಮಾಣಿಕವಾಗಿ ವ್ಯವಹರಿಸುತ್ತ ಅಂದಿನ ಅನ್ನವನ್ನು ಅಂದು ಸಂಪಾದಿಸಿಕೊಳ್ಳುವ ಚಪ್ಪಲಿ ರಿಪೇರಿಯವ, ಬೀದಿ ಬದಿ ವ್ಯಾಪಾರಿ, ಗೂಡಂಗಡಿಯವ.. ಇವರ ಜೊತೆ ಮಾತನಾಡಿದರೆ ನಮ್ಮ ಪ್ರತಿಷ್ಠೆಗೆಲ್ಲಿ ಧಕ್ಕೆಯಾಗುವದೋ ಎಂದು ಸದಾ ಜಾಗರೂಕರಾಗಿರುವ ನಮಗೆ ಅವನ್ನೆಲ್ಲ ಮೀರಿ ಬದುಕಿದ ತೇಜಸ್ವಿ ಮುಖ್ಯರಾಗೇ ಆಗುತ್ತಾರೆ. ನಾನು ಕೇಳಿದಂತೆ, ತಿಳಿದಂತೆ ಕನ್ನಡ ಸಾಹಿತಿಗಳಲ್ಲಿ ಶಿವರಾಮ ಕಾರಂತರು, ತೇಜಸ್ವಿ, ಈಗಲೂ ನಮ್ಮ ನಡುವೆ ಇರುವ ದೇವನೂರು ಮಹಾದೇವ ಇಂಥ ಗುಣ,ಸ್ವಭಾವ ಹೊಂದಿದವರು.
ತೇಜಸ್ವಿಯವರ ಕಾದಂಬರಿಗಳಲ್ಲಿ, ಕತೆಗಳಲ್ಲಿ ಅವರ ಸ್ವಾನುಭವಗಳು ಕಥನದ ಅಂಶಗಳಾಗಿ ನಿರೂಪಿತವಾಗಿದ್ದರೂ ದಟ್ಟವಾಗಿ ವ್ಯಕ್ತವಾಗುವದು ‘ಕಿರಗೂರಿನ ಗಯ್ಯಾಳಿಗಳು, ಪರಿಸರದ ಕತೆ, ಪಾಕ ಕ್ರಾಂತಿ’ ಮುಂತಾದ ಕೃತಿಗಳಲ್ಲಿ. ವಾಚಾಳಿಯೆನ್ನಿಸದ ವಿವರಣೆ, ಲಘುವೆನ್ನಿಸದ ಹಾಸ್ಯ, ಕಾಣದ್ದನ್ನು ಬಗೆದು ನೋಡುವ ಕ್ರಮ, ಭಾಷೆಯ ಬಳಕೆ ಇವೆಲ್ಲ ಹೊಸ ಬರಹಗಾರರಿಗೆ ಒಂದು ದಾರಿ ದೀಪವಿದ್ದಂತೆ. ಅವರ ಕಾದಂಬರಿಗಳಂತೂ ಅತ್ಯುತ್ತಮ ಪತ್ತೇದಾರಿ ಕಾದಂಬರಿಯಾಗಿ ಬಿಡಬಹುದಾದ ಅಪಾಯವನ್ನು ಮೀರಿ ಅತ್ತುತ್ತಮ ಸೃಜನಶೀಲ ಕೃತಿಯಾದಂಥವು.

ಇದಾದ ನಂತರದಲ್ಲಿ ಅಕಸ್ಮಾತಾಗಿ ಅದೇ ಮೂಡಿಗೆರೆ ಸಮೀಪದ ಮೂವರು ಸಹೋದರಿಯರ ಪರಿಚಯವಾಯಿತು. ಅವರು ಬೆಂಗಳೂರಿನಲ್ಲಿ ಗಾರ್ಮೆಂಟ್ ಕೆಲಸದಲ್ಲಿದ್ದರು. ಅವರ ತಂದೆ ಸಾಕಷ್ಟು ಸ್ಥಿತಿವಂತರಾಗಿದ್ದರೂ ಮನೆಯಲ್ಲಿ ಅತ್ತಿಗೆಯ ಕಿರಿ ಕಿರಿಗೆ ಬೇಸತ್ತು- ಪದವಿಯಾಗಿದ್ದರೂ- ಬೇರ್ಯಾವ ಕೆಲಸ ಸಿಗದ ಕಾರಣಕ್ಕೆ ಆ ಕೆಲಸ ಹಿಡಿದಿದ್ದರು. ಒಟ್ಟಿಗೇ ರೂಮ್ ಮಾಡಿಕೊಂಡಿದ್ದರು ಎನ್ನುವದು ನಂತರ ತಿಳಿಯಿತು. ಅವರ ಪರಿಚಯ ಹೇಗಾಯಿತು ಎಂದು ಸ್ಪಷ್ಟವಾದ ನೆನಪಿಲ್ಲ, ಪ್ರಾಯ:ಶ ಮೆಜೆಸ್ಟಿಕ್ ಬಸ್ ಸ್ಟಾಂಡ್‍ನಲ್ಲಿ ಆಗಿರಬೇಕು. ಮಾತನಾಡುತ್ತ ‘ತಮ್ಮ ಊರು ಯಾವುದು?’ ಎಂದು ಕೇಳಿದಾಗ ಅವರಲ್ಲೊಬ್ಬಳು ‘ ಮೂಡಿಗೆರೆ’ ಅಂದಳು. ನನ್ನ ಮನಸ್ಸು ಜಗ್ಗೆಂದಿತು! ನಾನು ಅಕ್ಷರಶಃ
ರೋಮಾಂಚಿತನಾಗಿಬಿಟ್ಟೆ. ಆ ಕ್ಷಣ ತೇಜಸ್ವಿಯವರೇ ಎದುರಿಗೆ ಪ್ರತ್ಯಕ್ಷವಾದಷ್ಟು.
(ಮುಂದುವರಿಯುವದು..)
ಗಂಗಾಧರ ಕೊಳಗಿ

About the author

Adyot

1 Comment

  • ಮತ್ತೆ ಮತ್ತೆ ಓದಬೇಕೆನಿಸುವ ಕೊಳಗಿಯವರ ಸತ್ಯ ಸಂಗತಿಗಳು. ಅಭಿನಂದನೆಗಳು

Leave a Comment