ತೇಜಸ್ವಿ ಎಂಬ ವಿಸ್ಮಯ…..
ನಾನು ಯಾವುದೋ ಕಾರಣಕ್ಕೆ ಬೆಂಗಳೂರಿಗೆ ಹೋದವನು ಊರಿಗೆ ಬಸ್ ಹಿಡಿಯಲು ಮೆಜೆಸ್ಟಿಕ್ ಬಸ್ ಸ್ಟಾಂಡ್‍ಗೆ ಬಂದಿದ್ದೆ. ಶಿರಸಿ- ಕಾರವಾರ ಕಡೆ ಹೋಗುವ ಬಸ್ಸುಗಳ ಪ್ಲಾಟಪಾರಂನಲ್ಲಿ ವಿಚಾರಿಸಿದಾಗ ನಾನು ಹೋಗಬೇಕಿದ್ದ ಬಸ್ ಸ್ವಲ್ಪ ತಡವಾಗುತ್ತದೆ ಎನ್ನುವ ಮಾಹಿತಿ ಸಿಕ್ಕಿತು. ಕೂರಲು ಆ ಪ್ಲಾಟಫಾರಂನಲ್ಲಿ ಕಲ್ಲು ಬೆಂಚ್‍ಗಳೆಲ್ಲ ಭರ್ತಿಯಾಗಿದ್ದವು. ಎಷ್ಟು ಹೊತ್ತು ನಿಂತಿರೋದು ಅಂತಾ ಪಕ್ಕದ ಪ್ಲಾಟ್ ಫಾರಂ ಕಡೆ ಹೋದೆ. ಅಲ್ಲಿದ್ದ ಆಸನವೊಂದರ ತುದಿಯಲ್ಲಿ ಕೂರಲು ಜಾಗ ಸಿಕ್ಕಿತ್ತು. ಅದೇ ಪಕ್ಕದ ಬೆಂಚ್‍ನಲ್ಲಿ ಈ ಸಹೋದರಿಯರು ಕೂತಿದ್ದರು. ಸ್ವಲ್ಪ ಹೊತ್ತಿನ ನಂತರ ಅದೇತಕ್ಕೋ ನಮ್ಮ ನಡುವೆ ಮಾತುಗಳು ಶುರುವಾಗಿದ್ದವು. ನನಗೆ ಬಸ್‍ಸ್ಟಾಂಡುಗಳಲ್ಲಾಗಲೀ, ಬಸ್‍ನಲ್ಲಾಗಲೀ ಮತ್ತೊಬ್ಬರ ಜೊತೆ ಮಾತನಾಡುವದು ಇಷ್ಟವಾಗುವದಿಲ್ಲ. ಸುಮ್ಮನೆ ನನ್ನ ಪಾಡಿಗೆ ಮ್ಯಾಗಜೀನ್‍ಗಳನ್ನೋ, ಪುಸ್ತಕವನ್ನೋ ಓದುತ್ತಿರಲು ಮನಸ್ಸು ಬಯಸುತ್ತದೆ. ಆದರೆ ಅವತ್ತು ಅದ್ಯಾತಕ್ಕೋ ಅವರ ಜೊತೆ ಮಾತಿಗೆ ತೊಡಗಿದಾಗ ಅವರ ಊರು ‘ಮೂಡಿಗೆರೆ’ ಅನ್ನೋದು ಗೊತ್ತಾಯಿತು.
‘ನಿಮ್ಮ ಊರಿಗೆ ನಾನು ಆಗಾಗ ಬರ್ತೀರ್ತೆನೆ’ ಅಂದೆ. ‘ಹೌದಾ, ಅಲ್ಯಾರು ನೆಂಟರಿದ್ದಾರಾ?’ಅಂದಳು ಒಬ್ಬಳು. ಅಷ್ಟರಲ್ಲಾಗಲೇ ನನ್ನ ಮುಖಭಾವದಿಂದ ಖುಷಿಯನ್ನು ಗಮನಿಸಿದ್ದರೇನೋ? ‘ ನೆಂಟ್ರು, ಪಂಟ್ರು ಯಾರೂ ಇಲ್ಲ. ತೇಜಸ್ವಿಯವರನ್ನ ಕಾಣೋಕೆ ನಾಲ್ಕಾರು ಬಾರಿ ಬಂದಿದ್ದೆ’ ಎಂದೆ. ಯಾರು ತೇಜಸ್ವಿಯವರಾ!, ಕೆ.ಪಿ.ಪೂರ್ಣಚಂದ್ರ ತೇಜಸ್ವಿ?’ ಎಂದು ಗಾಭರಿ ಬಿದ್ದಂತೇ ಮತ್ತೊಬ್ಬಳು ಪ್ರಶ್ನಿಸಿದಳು. ಅವರು ಸಣ್ಣಗೆ ಕುಮಟಿ ಬಿದ್ದದ್ದನ್ನು ಕಂಡು ಅಚ್ಚರಿಯಾಯ್ತು. ‘ ಅವರೇ, ಯಾಕೆ ಹಾಗೇ ಕೇಳ್ತಿರಲ್ಲ?’ ಎಂದು ಪ್ರಶ್ನಿಸಿದೆ.
‘ ಅವರು ಪ್ರಸಿದ್ಧ ಸಾಹಿತಿಗಳಲ್ವಾ? ನಮಗೂ ಕಾಲೇಜಲ್ಲಿ ಅವರ ಕಾದಂಬರಿ ಟೆಕ್ಸ್ಟಾಗಿತ್ತು’ ಎಂದು ಅವರಲ್ಲೊಬ್ಬಳು ಹೇಳಿದಾಗ ನನ್ನ ಮುಸುಡಿ ನೋಡಿ ಸುಳ್ಳು ಹೇಳ್ತಿದೀನಿ ಅಂದ್ಕೊಂಡ್ರೇನೋ ಅನ್ನಿಸಿತು. ಅಂಥ ಹೆಸರಾಂತ ಮನುಷ್ಯನ ಜೊತೆ ಇವನಿಗೆಲ್ಲಿ ಲಿಂಕು ಕಂಡಿರಬೇಕೆನೋ ಅಂದುಕೊಂಡೆ.
ಆ ಅರ್ಥ ಬರುವ ರೀತಿಯಲ್ಲಿ ನಾನು ಮತ್ತೆ ಪ್ರಶ್ನಿಸಿದಾಗ ‘ಛೇ, ಹಾಗಲ್ಲ, ಅವರು ಹೆಚ್ಚು ಯಾರ ಜೊತೆಗೂ ಮಾತಾಡಲ್ವಂತಲ್ಲಾ, ನಮ್ಮಲ್ಲಿ ಅವರ ಬಗ್ಗೆ ಹಾಗೇ ಆಡ್ಕೋತಾರೆ’ ಎಂದಳು.
ನಂತರದಲ್ಲಿ ಅವರಿಂದ ತಿಳಿದ ಪ್ರಕಾರ ಅವರ ಊರು ಮೂಡಿಗೆರೆ ದಾಟಿ, ಹ್ಯಾಂಡಪೋಷ್ಠ ಎನ್ನುವ ಮಾರ್ಗಗಳು ಕವಲೊಡೆಯುವ ಸರ್ಕಲ್‍ನಿಂದ ನಾಲ್ಕಾರು ಕಿಮೀ. ದೂರದ ಊರೆಂತಲೂ, ಅವರು ಊರಿಂದ ಕಾಲೇಜಿಗೆ ಬಸ್ಸಿನಲ್ಲಿ ಬರುವಾಗ ದಾರಿಯಲ್ಲಿ ಮತ್ತು ಪೇಟೆಯಲ್ಲಿ ಸ್ಕೂಟರ್ ಅಥವಾ ಜೀಪ್‍ನಲ್ಲಿ ಹೋಗುತ್ತಿದ್ದ ತೇಜಸ್ವಿಯವರನ್ನು ನೋಡಿದ್ದೆವೆಂತಲೂ ಹೇಳಿದರು. ಅಲ್ಲಿಯ ದೊಡ್ಡ ಕಾಫಿ ಗೌಡರುಗಳು ತೇಜಸ್ವಿ ಬಗ್ಗೆ ಭಯಮಿಶ್ರಿತ ಗೌರವ ಇಟ್ಟುಕೊಂಡಿದ್ದರೂ ತಮ್ಮ ಲೆವೆಲ್‍ಗೆ ತಕ್ಕಂತೆ ನಡೆದುಕೊಳ್ಳೋದಿಲ್ಲ ಎಂದು ಅಸಮಾಧಾನ ತೋರಿಸುತ್ತಾರೆಂತಲೂ ವಿವರಿಸಿದರು. ನನಗೆ ನಗು ಬಂತು. ‘ಯಾಕೆ’ ಎನ್ನುವ ಅವರ ಪ್ರಶ್ನೆಗೆ ‘ ಎಲ್ಲ ಊರಲ್ಲೂ ಹಾಗೇ. ಊರಲ್ಲಿ ಯಾರಿಗೂ ಒಬ್ಬ ವ್ಯಕ್ತಿಯ ಮಹತ್ವ ಗೊತ್ತಿರುವದಿಲ್ಲ. ದೀಪದ ಬುಡ ಕತ್ತಲೆ ಅಂತಾರಲ್ಲಾ ಹಾಗೇ’ ಎಂದೆ. ‘ನಮಗಂತೂ ಅವರ ಬಗ್ಗೆ ಬಾಳ ಗೌರವ ಇದೆ’ ಎಂದು ಆ ಹೆಣ್ಣುಮಕ್ಕಳು ಹೇಳಿದ್ದು ಸತ್ಯವೆಂದು ಅವರ ಮುಖಭಾವವೇ ಹೇಳುತ್ತಿತ್ತು. ತೇಜಸ್ವಿ ಮತ್ತು ಮೂಡಿಗೆರೆ ಅನ್ನುವದು ಆ ಕ್ಷಣದಲ್ಲಿ ಅಪರಿಚಿತರಾಗಿದ್ದ ನಮ್ಮ ನಡುವೆ ಆತ್ಮೀಯತೆಯನ್ನು ಮೂಡಿಸಿತ್ತು. ಆವರೆಗೆ ಪರಸ್ಪರ ಕೇಳರಿಯದ, ನೋಡಿರದ ನಮ್ಮ ನಡುವೆ ಅದೆಷ್ಟೋ ಕಾಲದಿಂದ ಪರಿಚಿತರು ಎನ್ನುವ ಅನುಬಂಧವನ್ನ ಹುಟ್ಟಿಸಿತ್ತು.
ನಂತರದಲ್ಲಿ ನನ್ನ ವಿಳಾಸವನ್ನು ಪಡೆದುಕೊಂಡು, ತಮ್ಮ ಬೆಂಗಳೂರಿನ ವಿಳಾಸವನ್ನು ಕೊಟ್ಟು ಆ ಸಹೋದರಿಯರು ತಮ್ಮ ಬಸ್ ಹತ್ತಿದ್ದರು. ಅಷ್ಟರ ನಂತರದಲ್ಲಿ ಬೆಂಗಳೂರಿಗೆ ಹೋದಾಗ ಒಂದೆರಡು ಬಾರಿ ಅವರ ರೂಮ್‍ಗೂ ಹೋಗಿದ್ದೆ. ಆಗಾಗ್ಗೆ ಕಷ್ಟ-ಸುಖ ಹಂಚಿಕೊಳ್ಳುವ ಪತ್ರ ವ್ಯವಹಾರವಂತೂ ಇದ್ದೇ ಇತ್ತು.
ಅದಾಗಿ ಮಾರನೇ ವರ್ಷ ಆ ಸಹೋದರಿಯರ ಅಕ್ಕನ ಮದುವೆ ನಿಶ್ಚಿತವಾಗಿತ್ತು. ನನಗೆ ಬರಲೇಬೇಕು ಎನ್ನುವ ಕಟ್ಟಪ್ಪಣೆ ಸಹಿತ ಆಹ್ವಾನವಿತ್ತು. ನನಗೆ ಆ ಮದುವೆಗೆ ಹೋಗಲು ಕೆಲವೊಂದು ತೊಂದರೆಗಳಿದ್ದರೂ ಅವನ್ನು ಆದಷ್ಟು ನಿವಾರಿಸಿಕೊಂಡು ಮೂಡಿಗೆರೆಗೆ ಹೋದೆ. ತೇಜಸ್ವಿಯವರನ್ನು ಕಾಣಬಹುದು ಎನ್ನುವದು ಒಂದಾದರೆ, ಆ ಹೆಣ್ಣುಮಕ್ಕಳಿಗೆ ಬೇಸರ ಮಾಡಬಾರದು ಎನ್ನುವದು ಮತ್ತೊಂದು. ಅದರ ಜೊತೆಗೆ ಅಲ್ಲಿನ ಜನಜೀವನ, ಕೌಟುಂಬಿಕ ವ್ಯವಸ್ಥೆ, ಮದುವೆ ಮುಂತಾದ ಮಂಗಲ ಕಾರ್ಯಗಳ ವಿಧಾನ ಹೇಗಿರುತ್ತದೆ ಎನ್ನುವದನ್ನು ತಿಳಿಯುವ ಕುತೂಹಲವೂ ಇತ್ತು. ತೇಜಸ್ವಿ ತಮ್ಮ ಕರ್ವಾಲೋ ಕಾದಂಬರಿಯಲ್ಲಿ ಮಂದಣ್ಣನ ಮದುವೆ ವರ್ಣನೆ ಮಾಡಿದ್ದರಲ್ಲ, ಆ ಥರದ ಸ್ವಾರಸ್ಯಕರ ಘಟನೆಗಳನ್ನ ಕಾಣಬಹುದು ಎನ್ನುವ ನಿರೀಕ್ಷೆಯೂ ಇತ್ತು.
ಈ ಎಲ್ಲವೂ ಸೇರಿಕೊಂಡು ನಾನು ಆ ಮದುವೆಗೆ ಹೋಗಲೇಬೇಕು ಎನ್ನುವ ಒತ್ತಡವನ್ನು ಸೃಷ್ಟಿಸಿದ್ದವು. ಮೊದಲೇ ಪತ್ರದಲ್ಲಿ ತಿಳಿಸಿದಂತೆ ಮೂಡಿಗೆರೆಗೆ ಹೋದವನು ಒಂದೆರಡು ದಿನ ಅಲ್ಲಿ ಉಳಿಯಬೇಕಾದ ಸಾಧ್ಯತೆ ಇದ್ದುದರಿಂದ ಲಾಡ್ಜ ಒಂದರಲ್ಲಿ ರೂಮ್ ಹಿಡಿದೆ. ಅಲ್ಲಿನ ಕಾಯಿನ್ ಬೂತ್‍ನಿಂದ ಆ ಹೆಣ್ಣುಮಕ್ಕಳ ಮನೆಗೆ ಫೋನ್ ಮಾಡಿ,ನಾನು ಬಂದಿರುವುದಾಗಿ ತಿಳಿಸಿದೆ. ಮತ್ತು ಲಗ್ನ ನಡೆಯುವ ಮಾರನೆಯ ದಿನ ಬೆಳಿಗ್ಗೆಅಲ್ಲಿಗೆ ಬರುವದಾಗಿಯೂ ತಿಳಿಸಿದಾಗ ಫೋನ್ ತೆಗೆದುಕೊಂಡಿದ್ದ ಆ ಹೆಣ್ಣುಮಗಳು ಅದಕ್ಕೆ ಸುತಾರಾಂ ಒಪ್ಪಲಿಲ್ಲ. ಲಗ್ನದ ಮನೆಯಾದ್ದರಿಂದ ನೆಂಟರಿಷ್ಟರು ಅವರು,ಇವರು ಬಂದಿರುತ್ತಾರೆ, ನನ್ನಿಂದ ಯಾಕೆ ತೊಂದರೆ ಎಂದರೂ ಕೇಳದೇ ನಾನುಳಿದ ಲಾಡ್ಜ ಹೆಸರು ತಿಳಿದುಕೊಂಡು, ಮೂಡಿಗೆರೆಗೆ ಶಾಮಿಯಾನಾ, ಊಟದ ಟೇಬಲ್ ಮುಂತಾಗಿ ಕೆಲವೊಂದು ವಸ್ತುಗಳನ್ನು ಒಯ್ಯಲು ತನ್ನ ಅಣ್ಣ ಬರುತ್ತಿರುವದಾಗಿಯೂ, ಅವನ ಜೊತೆ ಬರಲೇಬೇಕೆಂದು ಒತ್ತಾಯಿಸಿದಳು. ನಾನು ಹೂಂ ಎಂದು ಸುಮ್ಮನಾದೆ. ತೇಜಸ್ವಿಯವರ ಮನೆಗೆ ಫೋನ್ ಮಾಡಿದಾಗ ಅವರು ಊರಲ್ಲಿ ಇಲ್ಲವೆಂತಲೂ, ಬರುವದು ನಾಲ್ಕಾರು ದಿನ ತಡವಾಗಬಹುದೆಂತಲೂ ತಿಳಿಯಿತು. ಒಂದು ಕ್ಷಣ ಪೆಚ್ಚನಾದರೂ ಮೂಡಿಗೆರೆ ಪೇಟೆ ಸುತ್ತಾಡಿ, ನಂತರ ಪುಸ್ತಕವೊಂದನ್ನು ಹಿಡಿದು ರೂಮಿನಲ್ಲಿ ಮಲಗಿಬಿಟ್ಟೆ.
ಸಂಜೆ ಸುಮಾರು ಏಳುವರೆಯ ಹೊತ್ತಿಗೆ ರೂಮಿನ ಬಾಗಿಲು ತಟ್ಟುವ ಸದ್ದು ಕೇಳಿ ‘ ಇದ್ಯಾರಪ್ಪಾ, ಈ ಊರಲ್ಲಿ ನನ್ನ ಅರಸಿ ಬಂದವರು? ಎಂದು ಬಾಗಿಲು ತೆರೆದೆ. ನಾನು ಬೆಳಿಗ್ಗೆ ಆ ಹೆಣ್ಣುಮಗಳು ಹೇಳಿದ್ದನ್ನ ಮರೆತೇಬಿಟ್ಟಿದ್ದೆ. ಬಾಗಿಲು ತೆರೆದಾಗ ಸುಮಾರು ನಲವತ್ತರ ಪ್ರಾಯದ ವ್ಯಕ್ತಿಯೊಬ್ಬರು ‘ ತನ್ನನ್ನು ತಂಗಿಯರು ಕಳಿಸಿದ್ದಾಗಿಯೂ, ಲಾಡ್ಜ ಕೌಂಟರಿನಲ್ಲಿ ವಿಚಾರಿಸಿ, ನಾನಿರುವ ರೂಮಿನ ವಿವರ ಪಡೆದು ಬಂದಿದ್ದಾಗಿಯೂ’ ಹೇಳಿ ತನ್ನ ಜೊತೆ ಬರಬೇಕೆಂದು ಸೂಚಿಸಿದರು.
ಬೆಳಿಗ್ಗೆ ಫೋನ್‍ನಲ್ಲಿ ಆ ಕ್ಷಣಕ್ಕೆ ತಪ್ಪಿಸಿಕೊಳ್ಳಲು ಹೂಂ ಅಂದಿದ್ದೆನೇ ಹೊರತು ಹೋಗಬೇಕೆಂದಾಗಿರಲಿಲ್ಲ. ಆ ಹೆಣ್ಣುಮಕ್ಕಳು ಪಟ್ಟುಬಿಡದೇ ನನ್ನನ್ನ ಕರೆತರಲು ಕಳುಹಿಸಿದ್ದರು. ಆ ವ್ಯಕ್ತಿ ತೀರಾ ಆಧುನಿಕನಾಗಿರದೇ, ಅಪ್ಪಟ ಗ್ರಾಮೀಣನಲ್ಲದ, ಪೇಟೆ ಸಂಸ್ಕøತಿಯನ್ನ ಅಷ್ಟಿಷ್ಟು ರೂಢಿಸಿಕೊಂಡವರಂತೇ ಕಂಡರು. ಆ ಹೆಣ್ಣುಮಕ್ಕಳು ಹಿಂದೆ ಯಾವಾಗಲೋ ಅಣ್ಣನ ಬಗ್ಗೆ ಒಂದಷ್ಟು ವಿವರ ಕೊಡುವಾಗ ತಮ್ಮ ಅಣ್ಣ ಒಳ್ಳೆಯ ಮನಸ್ಸಿನವನು, ಸ್ವಲ್ಪ ಹೆಚ್ಚೇ ಅನ್ನಬಹುದಾದ ಮುಗ್ದ, ಅಪ್ಪನ ದರ್ಪಕ್ಕೆ ಆತ ಬೆದರಿದ್ದಾನೆ ಎಂದೆಲ್ಲ ಹೇಳಿದ್ದರು. ನಾನು ಬೆಳಿಗ್ಗೆ ಬರುತ್ತೇನೆ ಅಂದರೂ ಆತ ತನ್ನ ಹಠ ಬಿಡಲೇ ಇಲ್ಲ. ‘ಇಲ್ಲಿಂದ ಹತ್ತಾರು ಮೈಲಿ ದೂರವಾಗುತ್ತದೆ. ಬೆಳಿಗ್ಗೆ ಹುಡುಕಿಕೊಂಡು ಬರಲು ಕಷ್ಟ, ಮತ್ತೆ ನಿಮ್ಮನ್ನ ಬಿಟ್ಟು ಹೋದರೆ ತಂಗಿಯರಿಂದ ನಾನು ಬೈಸಿಕೊಳ್ಳಬೇಕು’ ಎಂದೆಲ್ಲ ವರಾತ ಹಚ್ಚಿಬಿಟ್ಟರು. ಸುಮಾರು ಹೊತ್ತಿನ ತನಕ ನಮ್ಮಿಬ್ಬರ ಮಧ್ಯೆ ಚರ್ಚೆ ನಡೆದು ‘ ಕೆಳಗಡೆ ಟ್ರಾಕ್ಟರಿನಲ್ಲಿ ಶಾಮಿಯಾನಾ, ಊಟದ ಟೇಬಲ್,ಕುರ್ಚಿ, ಒಂದಿಷ್ಟು ಅಗತ್ಯ ವಸ್ತುಗಳಿದ್ದು ಅದನ್ನ ಮನೆಗೆ ಒಯ್ಯಬೇಕು. ಟ್ರಾಕ್ಟರ್‍ನವನನ್ನು ನಿಲ್ಲಿಸಿ ಬಂದಿದ್ದೇನೆ. ನೀವು ಹೊರಡದಿದ್ದರೆ ನನಗೆ ಕಷ್ಟವಾಗುತ್ತದೆ’ ಎಂದು ಸಣ್ಣನೆಯ ಸ್ವರದಲ್ಲಿ ಹೇಳಿದಾಗ ‘ ಈತ ಎಷ್ಟು ಹೊತ್ತಾದರೂ ನನ್ನನ್ನ ಬಿಡುವ ಗಿರಾಕಿಯಲ್ಲ’ ಅನಿಸಿತು. ಆಗಲೇ ಎಂಟೂವರೆಯಾಗುತ್ತ ಬಂದಿತ್ತು. ನನ್ನ ಲಗೇಜ್ ಹೆಗಲಿಗೇರಿಸಿ ಹೊರಬಂದವನನ್ನ ಟ್ರಾಕ್ಟರ್ ಡ್ರೈವರ್ ಪಕ್ಕದ ಸೀಟಿನಲ್ಲಿ ಕೂರಿಸಿದರು.
ಅಷ್ಟರ ನಂತರ ಹೊರಟಿತು ನಮ್ಮ ಸವಾರಿ. ಆ ಟ್ರಾಕ್ಟರಿನ ಕರ್ಕಶ ಶಬ್ದ, ಹೊಗೆ ವಾಸನೆ, ಎತ್ತೆತ್ತಿ ಕುಕ್ಕುತ್ತ ಹೋಗುವ ರೀತಿಗೆ ಅದರಿಂದ ಇಳಿದು ನಡೆದುಕೊಂಡಾದರೂ ಹೋಗುವಾ ಅನ್ನಿಸಿಬಿಟ್ಟಿತ್ತು.( ಟ್ರಾಕ್ಟರಿನಲ್ಲಿ ಕುಳಿತು ಹೋದವರಿಗೆ ಈ ಕಷ್ಟ ಗೊತ್ತೇ ಇರುತ್ತೆ) ಮೂಡಿಗೆರೆ ಕಳೆದು, ಹ್ಯಾಂಡಪೋಷ್ಠ ದಾಟಿ, ಆ ನಂತರದ ಅರ್ಧಮೇಲಿಗೊಂದರಂತೆ ಇದ್ದ ಬೀದಿ ದೀಪದ ಮಂದ ಬೆಳಕು, ಅದಿಲ್ಲವಾದಲ್ಲಿ ದಟ್ಟ ಕತ್ತಲೆಯಲ್ಲಿ ಯಾವುದೋ ಅಪರಿಚಿತ, ಅದೃಶ್ಯ ಲೋಕಕ್ಕೆ ಸಾಗುವವರಂತೆ ನಾವು ಹೋಗುತ್ತಿದ್ದೆವು. ಆ ಭ್ರಮಾ ವಾಸ್ತವದ ಸುತ್ತೆಲ್ಲ ಆ ಟ್ರಾಕ್ಟರ್‍ನ ಕರ್ಣ ಕಠೋರ ಸಪ್ಪಳ, ಅದು ಮುಂದೆ ಮಾರು ದೂರ ಚೆಲ್ಲುತ್ತಿದ್ದ ಹೆಡ್‍ಲೈಟಿನ ಬೆಳಕು ಬಿಟ್ಟರೆ ಬೇರೆನೂ ಇರಲಿಲ್ಲ. ನನಗೋ ಆ ಥರದ ವಿಭಿನ್ನ ಅನುಭವದ ಜೊತೆಗೆ ಹೋಗಿ ತಲುಪುವಷ್ಟರಲ್ಲಿ ದೇಹದ ಅಂಗಾಗಗಳೆಲ್ಲ ನುಜ್ಜುಗುಜ್ಜಾಗುವ ಎಲ್ಲ ಸಾಧ್ಯತೆಗಳು ಕಂಡುಬಂದವು. ಅಂತೂ, ಇಂತೂ ತಿರುವು ಮುರುವಿನ ಹಾದಿಯಲ್ಲಿ ಸಾಗಿದ ನಮ್ಮ ರಥ ಒಂದೆಡೆ ನಿಂತಾಗ ಸಮಾಧಾನವೆನ್ನಿಸಿತು. ನಾವು ಹೊರಟು ಇಲ್ಲಿಗೆ ತಲುಪುವಷ್ಟರಲ್ಲಿ ಸಹಸ್ರಮಾನಗಳೇ ಕಳೆದಿರಬಹುದು ಎನ್ನುವ ಅನಿಸಿಕೆಯೂ ಬಂತು.
ಟ್ರಾಕ್ಟರ್ ನಿಲ್ಲುತ್ತಿದ್ದಂತೇ ರಸ್ತೆ ಪಕ್ಕದ ಸ್ವಲ್ಪ ಎತ್ತರದ ಮೇಲಿದ್ದ ಮನೆ ಕಂಡಿತು. ಆ ಮನೆಯಲ್ಲಿ, ಏರಿ ಹೋಗುವ ಮೆಟ್ಟಿಲು ಸಾಲುಗಳ ಎರಡೂ ಮಗ್ಗುಲಲ್ಲಿ ಜಗಮಗಿಸುತ್ತಿದ್ದ ವಿದ್ಯುತ್ ದೀಪಮಾಲೆ ನಾವು ಲಗ್ನದ ಮನೆಗೆ ಬಂದು ತಲುಪಿದ್ದನ್ನು ಖಚಿತಪಡಿಸುವಂತಿದ್ದವು. ನಾವು ಇಳಿಯುವ ಮುಂಚೆಯೇ ಮನೆಯಿಂದ ಬಂದ ಆ ಹೆಣ್ಣುಮಕ್ಕಳು ನಾನು ಬಂದದ್ದನ್ನ ಧೃಢಪಡಿಸಿಕೊಂಡರು. ಅವರ ಮತ್ತು ಅವರ ಸಂಬಂಧಿಕರ ಚಿಕ್ಕಪುಟ್ಟ ಮಕ್ಕಳ ಮೇಳ ನನ್ನನ್ನ ಅವರ ಮನೆಯಂಗಳಕ್ಕೆ ಕರೆದೊಯ್ಯಿತು. ಒಂದು ಕ್ಷಣ ನನಗೆ ಮುಜುಗುರವೆನ್ನಿಸಿತು. ಒಂದು ರೀತಿಯಲ್ಲಿ ನಾಳೆ ಬೆಳಿಗ್ಗೆ ಬರುವ ಮದುಮಗನಿಗೆ ದೊರೆಯುವ ಸ್ವಾಗತದಂತೆ ಇತ್ತು ನನ್ನನ್ನು ಸ್ವಾಗತಿಸಿದ್ದು. ಪುಣ್ಯಕ್ಕೆ ತುತ್ತೂರಿ, ಡೋಲುಗಳ ವಾದ್ಯಮೇಳವಾಗಲಿ, ಹೆಂಗಸರ ಹಾಡುಗಳಾಗಲೀ, ಅವರುಡುವ ರೇಷ್ಮೆ ಮುಂತಾದ ಹೊಸ ಸೀರೆಗಳ ಸರಬರ ಸದ್ದಾಗಲೀ ಇರಲಿಲ್ಲ. ಅಲ್ಲಿದ್ದ ಎಲ್ಲರೂ ನನ್ನನ್ನ ಯಾವುದೋ ಲೋಕದಿಂದ ಆಗಮಿಸಿದ ಜೀವಿಯಂತೆ ಮಿಕಿ ಮಿಕಿ ನೋಡುತ್ತಿದ್ದುದು ಮತ್ತಷ್ಟು ಕಂಗಾಲು ಮಾಡಿತ್ತು. ಅಷ್ಟರಲ್ಲಿ ಜಗಲಿಯ ಮೂಲೆಯ ಮಂಚವೊಂದರ ಮೇಲೆ ಮಲಗಿದ್ದ ವ್ಯಕ್ತಿಯ ಸ್ವರ ಆ ಭಾವಲೋಕವನ್ನ ಬದಲಾಯಿಸಿತು. ‘ ಪೇಟೆಯಿಂದ ಟ್ರಾಕ್ಟರ್ ಬಂತಾ? ಇಷ್ಟೊತ್ತು ಯಾಕಾಯ್ತು?’ ಎನ್ನುವ ಪ್ರಶ್ನೆಗೆ ಯಾರೋ ಹೌದು ಎಂದರು.
(ಮುಂದುವರಿಯುವುದು)
ಗಂಗಾಧರ ಕೊಳಗಿ
ಚನ್ನಾಗಿ ಬರುತ್ತಿದೆ.ಓದಲು ಪ್ರೇರೇಪಿಸುತ್ತದೆ.ಅಭಿನಂದನೆಗಳು.