ಆದ್ಯೋತ್ ಅಂಕಣದಲ್ಲಿ ಕೊಳಗಿ ನೆನಪು

ತೇಜಸ್ವಿ ಎಂಬ ವಿಸ್ಮಯ…..
ಹೊಸ ಜಾಗ, ಅಪರಿಚಿತ ಜನಸಮೂಹ ಅದೂ ಅಲ್ಲದೇ ಕತ್ತಲ ರಾತ್ರಿಯಲ್ಲಿ ಅಲ್ಲಿಗೆ ಬಂದು ನಿಗೂಢ ಲೋಕಕ್ಕೆ ಕಾಲಿಟ್ಟ ಅನಿಸಿಕೆಗಳೆಲ್ಲ ಏಕಕಾಲಕ್ಕೆ ಮುತ್ತಿಕೊಂಡವು.
ಆ ಮದುವೆ ಮನೆಯ ನೂರಾರು ಜನರ ನಡುವೆ ನನ್ನ ಪರಿಚಿತರು ಆ ಮೂವರು ಹೆಣ್ಣುಮಕ್ಕಳು ಮಾತ್ರ. ಉಳಿದವರೆಲ್ಲ ನನ್ನನ್ನ ಮಿಕಿ ಮಿಕಿ ನೋಡುತ್ತಿದ್ದುದು ನನಗೆ ಒಂಥರಾ ಮುಜುಗುರ ತಂದಿತು. ನನ್ನ ಒದ್ದಾಟ ತಿಳಿದಿರಬೇಕು, ನನ್ನನ್ನು ಮನೆಯ ಉಪ್ಪರಿಗೆಗೆ ಕರೆದೊಯ್ದರು. ಮಲೆನಾಡಿನಲ್ಲಿ ಮೆತ್ತಿ, ಉತ್ತರ ಕರ್ನಾಟಕದಲ್ಲಿ ಅಟ್ಟ ಎಂದು ಕರೆಯಿಸಿಕೊಳ್ಳುವ ಉಪ್ಪರಿಗೆಯಲ್ಲಿ ನನ್ನ ಠಿಕಾಣಿಗೆ ವ್ಯವಸ್ಥೆ ಮಾಡಿದಾಗ ಸಮಾಧಾನವೆನ್ನಿಸಿತು.

ಬೆಳಿಗ್ಗೆ ಎಚ್ಚರಾಗುವಷ್ಟರಲ್ಲೇ ಕೆಳಗಡೆ ಕೋಲಾಹಲ ಶುರುವಾಗಿತ್ತು. ಮದುವೆಯ ಗದ್ದಲ ನಿಧಾನಕ್ಕೆ ಹೆಚ್ಚಾಗುತ್ತಿತ್ತು. ಅಪ್ಪಟ ಮಲೆನಾಡಿನ ಕಾಫಿ ತಂದ ಆ ಹುಡುಗಿಯರು ‘ಬೇಗ ಸ್ನಾನ ಮುಗಿಸಿ’ಎಂದರು. ಯಾವತ್ತೂ ಸ್ನಾನಕ್ಕೆ ಸಾಕಷ್ಟು ಹೊತ್ತು ತೆಗೆದುಕೊಳ್ಳುವ ನಾನು ಅವತ್ತು ಲಗುಬಗೆಯಿಂದ ಪ್ರಾತ:ವಿಧಿಗಳನ್ನೆಲ್ಲ ಮುಗಿಸಿಬಿಟ್ಟೆ. ಆ ಮನೆ ಮಲೆನಾಡಿನ ಶೈಲಿಯ ಸ್ವಲ್ಪ ಹಳತು ಎನ್ನಬಹುದಾದ ಮನೆ, ಆದರೆ ವಿಶಾಲವಾಗಿತ್ತು. ಮನೆಯ ಸುತ್ತ ಕಾಫಿ ತೋಟ. ಚೂರು ಪಾರು ಅವನ್ನೆಲ್ಲ ಗಮನಿಸಿ ಹೊರಬಂದ ನನ್ನನ್ನು ಮದುವೆ ಮಂಟಪವಿದ್ದ ಮನೆಯೆದುರಿನ ಅಂಗಳಕ್ಕೆ ಕರೆತಂದು ಅಲ್ಲೊಂದು ಛೇರ್ ಮೇಲೆ ಕೂತಿದ್ದವರಿಗೆ ನನ್ನ ಪರಿಚಯಿಸಿದರು.
ಆ ಯಜಮಾನ ಹಳೆಯ ತಲೆಮಾರಿನ ಅಪ್ಪಟ ಕಾಫಿ ಗೌಡರೇ! ಸ್ವಲ್ಪ ಸಣಕಲು ಎನ್ನಬಹುದಾದ ದೇಹದ ಆತ ಅಷ್ಟರಲ್ಲಾಗಲೇ ಸ್ನಾನ ಮುಗಿಸಿ, ಬಟ್ಟೆ ತೊಟ್ಟು ಸಿದ್ಧರಾಗಿ ಕೂತಿದ್ದು ಗಮನಕ್ಕೆ ಬಂತು. ತಲೆಗೆ ಗಾಂಧಿ ಟೋಪಿ ತರಹದ ಕಪ್ಪನೆಯ ಟೋಪಿ, ಬಿಳಿ ಅಂಗಿ, ಅದರ ಮೇಲೆ ಕಾಲರ್ ಇದ್ದ ಕಪ್ಪು ಕೋಟು, ಬೆಳ್ಳನೆಯ ಅಡ್ಡ ಪಂಚೆ ತೊಟ್ಟು ಕೂತ ಆ ಯಜಮಾನರಿಗೆ ‘ಇವರು ನಮ್ಮ ಅಪ್ಪ’ ಎಂದು ನನ್ನನ್ನೂ ಅವರಿಗೆ ಪರಿಚಯಿಸಿದರು.

ಹಿಂದಿನ ದಿನ ನಾನು ಬಂದಾಗ ತಡ ರಾತ್ರಿಯಾಗಿದ್ದರ ಜೊತೆಗೆ ಆ ಯಜಮಾನರು ಅಷ್ಟರಲ್ಲಾಗಲೇ ತೀರ್ಥಸೇವನೆ ಮುಗಿಸಿ ಮಲಗಿದ್ದರಿಂದ ನಾನು ಬರುವದು ಗೊತ್ತಿದ್ದರೂ, ಬಂದಿದ್ದು ಅವರಿಗೆ ಗೊತ್ತೇ ಇರಲಿಲ್ಲ. ಒಮ್ಮೆ ಅಪಾಧಮಸ್ತಕ ನೋಡಿ ಕುಶಲೋಪರಿ ಕೇಳಿ ‘ ನೀವು ಬ್ರಾಹ್ಮಣರಲ್ವಾ?’ ಎಂದರು. ನಾನು ಯಾವತ್ತೂ ಜಾತಿಯನ್ನು ಮುಂದುಮಾಡಿಕೊಂಡು ಬಂದವನಲ್ಲ. ಜಾತಿಯ ಶ್ರೇಷ್ಠತೆಯನ್ನ ಹೇಳಿಕೊಂಡವನೂ ಅಲ್ಲ. ನನ್ನ ಜಾತಿ ನನಗೆ ಮುಖ್ಯವೇ ಅಲ್ಲ ಎಂದು ಬದುಕುತ್ತಿದ್ದವನಿಗೆ ಈ ಪ್ರಶ್ನೆ ರಾಚಿ ಬಿಟ್ಟಿತು. ತಲೆ ಅಲ್ಲಾಡಿಸಿದೆ. ಅವರು ಸ್ವಲ್ಪ ಬಿಗಿ ಮತ್ತು ಜಾಪಿನ ಮನುಷ್ಯ ಎನ್ನುವದು ಅಷ್ಟರಲ್ಲೇ ಅರ್ಥವಾಗಿತ್ತು. ಜಾಪು ಅಂದರೆ ಒಂಥರಾ ಒಣ ಠೇಂಕಾರ. ನಮ್ಮೂರಲ್ಲಿ, ನಿಮ್ಮೂರಲ್ಲಿ ಎಲ್ಲ ಕಡೆಗೂ ಇಂಥವರಿರುತ್ತಾರೆ. ಇವರು ಸ್ವಭಾವತ: ಒಳ್ಳೆಯವರೇ, ಆದರೆ ತಮ್ಮ ಪ್ರತಿಷ್ಠೆ ತೋರಿಸಲು ಹಾಗೆ ವರ್ತಿಸುತ್ತಾರೆನೋ?
ನನ್ನ ಊರಿನ ಕಡೆಯ ವಿಷಯಗಳನ್ನು ಕ್ಲುಪ್ತವಾಗಿ ತಿಳಿದುಕೊಂಡು ‘ ನೀವು ಹೊಸಬರು, ಏನಾದರೂ ತೊಂದರೆಯಾದರೆ ಬೇಜಾರು ಮಾಡ್ಕೋಬೇಡಿ’ ಎಂದು ನನಗೆ ಸೂಚಿಸಿ, ತಮ್ಮ ಮಗಳಿಗೆ’ ಇವರಿಗೆ ಊಟದ ವ್ಯವಸ್ಥೆ ಎಲ್ಲಿ ಮಾಡೀದಿಯಾ? ನಮ್ಮ ಊಟ ಅವ್ರಿಗೆ ಸರಿಯಾಗಲ್ಲ, ಭಟ್ರ ಮನೆಗೆ ಹೇಳಿ ಊಟ,ತಿಂಡಿ ವ್ಯವಸ್ಥೆ ಮಾಡ್ಸು’ ಎಂದು ಆದೇಶ ನೀಡಿಬಿಟ್ಟರು.

ಈ ಘಟನೆಯ ಬಗ್ಗೆ ನಾನು ಹೆಚ್ಚು ವ್ಯಾಖ್ಯಾನ ಮಾಡಲು ಹೋಗುವದಿಲ್ಲ. ಆ ಮೂಲಕ ಆ ಹಿರಿಯರ ನಂಬಿಕೆ, ಭಾವನೆಗಳಿಗೆ ಧಕ್ಕೆ ತರಲಾರೆ. ಅಪ್ಪನ ಎದುರು ಹೂಂ ಎಂದ ಆ ತ್ರಿಪುರ ಸುಂದರಿಯರು ಅಪ್ಪನ ಗಮನಕ್ಕೆ ಬಾರದಂತೆ ತಾವೇ ಪ್ರತ್ಯೇಕವಾಗಿ ನನಗೆ ಅಡುಗೆ ಮಾಡಿ ಊಟ ಹಾಕಿದರೆ ಹೊರತು ಭಟ್ಟರ ಮನೆಗೆ ಕಳುಹಿಸಲಿಲ್ಲ.
ನಾನು ಅಲ್ಲಿನ ವಿವಾಹದಲ್ಲಿ ದಿಬ್ಬಣವನ್ನು ಎದುರುಗೊಳ್ಳುವ ರೀತಿ, ಅವರ ಹಾಡು,ಹಸೆ, ಭೋಜನದ ತಯ್ಯಾರಿ, ಬಂದ ನೆಂಟರಿಷ್ಠರ ನಡವಳಿಕೆ, ತಮ್ಮ ಆಡ್ಯಸ್ತಿಕೆಯನ್ನು ಮೆರೆಸುವ ಅವರ ಶೈಲಿ, ಊಟ ಬಡಿಸುವ ವಿಧಾನ.. ಬಹುತೇಕ ಎಲ್ಲ ವಿಧಾನ, ಸಂಪ್ರದಾಯಗಳನ್ನು ದೂರದಲ್ಲಿ ಕೂತು ಎಲ್ಲವನ್ನ ಗಮನಿಸಿದೆ. ಒಂದು ಸಹಜ, ಸುಂದರ ಕೌಟುಂಬಿಕ ಸಾಮರಸ್ಯ ಅಲ್ಲಿ ಕಾಣುತ್ತಿತ್ತು. ಎಲ್ಲಾದರೂ ಮಂದಣ್ಣನ ಲಗ್ನದಂತೆ ಏನಾದರೂ ತಮಾಷೆ ಜರುಗುಬಹುದು ಎಂದು ಆಶೆಪಟ್ಟುಕೊಂಡಿದ್ದು ಕೊನೆಗೂ ಈಡೇರಲಿಲ್ಲ.
ಲಗ್ನ ಮುಗಿದು, ದಿಬ್ಬಣ ಹೋಗಿ, ನೆಂಟರಿಷ್ಠರು ಹಲವರು ತೆರಳಿದರೂ ಸಾಕಷ್ಟು ಮಂದಿ ಇದ್ದೇ ಇದ್ದರು. ನನಗೆ ಬೋನಿನಲ್ಲಿ ಸಿಕ್ಕ ಇಲಿಯ ಥರ ಚಡಪಡಿಕೆ ಆಗುತ್ತಿತ್ತು. ಆ ಯಜಮಾನರು ಸಂಜೆ ಕಂಡವರು ‘ನೀವು ನಾಳೆ ಗಂಡಿನ ಮನೆಗೆ ಬರ್ತೀರಾ?’ ಎಂದಾಗ ಇಲ್ಲ ಎಂದು ತಪ್ಪಿಸಿಕೊಂಡುಬಿಟ್ಟೆ.
ಮರುದಿನ ಒಂದಿಬ್ಬರು ಅಜ್ಜಿಯರನ್ನು ಮನೆಯಲ್ಲಿ ಬಿಟ್ಟು ಉಳಿದವರೆಲ್ಲ ಗಂಡಿನ ಮನೆಗೆ ಹೋದರು. ಮನೆಯಲ್ಲಿ ಬೆಳಿಗ್ಗೆಯೇ ನನಗೆ ಊಟ ರೆಡಿ ಮಾಡಿಟ್ಟು ಹೋಗಿದ್ದರಿಂದ ಸಮಸ್ಯೆಯಿರಲಿಲ್ಲ. ನನ್ನ ಜೊತೆಗೆ ಅವರ ನೆಂಟರ ಹುಡುಗನನ್ನು ಬಿಟ್ಟು ಹೋಗಿದ್ದರಿಂದ ನನಗೆ ವೇಳೆ ಕಳೆಯಲು ತೊಂದರೆಯಾಗಲಿಲ್ಲ.
ಆ ಹೆಣ್ಣುಮಕ್ಕಳ ಅಣ್ಣ ಹಾಗೂ ಆಸುಪಾಸಿನವರು ತೇಜಸ್ವಿ ಆಗಾಗ್ಗೆ ಮೀನು ಹಿಡಿಯಲು ಊರ ಹಿಂದಿನ ಮಳಲಹೊಳೆ ಎನ್ನುವ ಹಳ್ಳದ ಕಡೆ ಬರುತ್ತಾರೆ, ದಿನಗಟ್ಟಲೆ ಗಾಳ ಹಾಕಿ ಕೂತಿರುತ್ತಾರೆಂತಲೂ ಹೇಳಿದ್ದರು. ಕೆಲವೊಮ್ಮೆ ಕೋವಿ ಶಿಕಾರಿಗೆ ಅಡ್ಡಾಡುವಾಗಲೂ ಕಾಣ ಸಿಗುತ್ತಾರೆಂದೂ, ಆದರೆ ಅವರ ಜೊತೆ ಮಾತನಾಡಲು ಭಯವಾಗಿ, ಸುಮ್ಮನೆ ಮುಳುಗ್ನಕ್ಕು ದಾಟಿ ಕೊಳ್ಳುತ್ತೇವೆಂದೂ ಹೇಳಿದ್ದರು. ಯಾಕೋ, ಏನೋ? ಅವರಲ್ಲಿ ತೇಜಸ್ವಿಯವರ ಬಗ್ಗೆ ಸಣ್ಣನೆಯ ಭಯ ಇತ್ತು. ಅದು ಅವರ ಮೇಲಿನ ಗೌರವಕ್ಕೆ ಮೂಡಿರಲೂ ಸಾಕು.
ತೇಜಸ್ವಿ ತಮ್ಮ ಬರಹಗಳಲ್ಲಿ ಕಾಡಿನ ನಡುವೆ ಹರಿದುಹೋದ ಎಣ್ಣೆಹೊಳೆ ಎನ್ನುವ ಹೊಳೆಯಲ್ಲಿ ಮೀನು ಹಿಡಿಯಲು ಹೋದಾಗ ಆವರೆಗೆ ನೋಡಿರದ ಮೀನೊಂದು ಅವರನ್ನು ಕಂಗಾಲು ಮಾಡಿದ್ದರ ಬಗ್ಗೆ, ಚಿಕ್ಕಪುಟ್ಟ ಹೊಳೆ,ಹಳ್ಳಗಳ ದಂಡೆಗುಂಟ ಓಡಾಡಿದ್ದರ ಬಗ್ಗೆ ಓದಿದ್ದರಿಂದ ಇವರೆಲ್ಲರ ಮಾತುಗಳು ಸತ್ಯವೆಂದೇ ತೋರಿತು. ಅವರೊಮ್ಮೆ ಹೊಳೆಯೊಂದರಲ್ಲಿ ಮಹಷೀರ್ ಎನ್ನುವ ಮೀನಿಂದ ಪಟ್ಟ ಪಜೀತಿಯ ಬಗ್ಗೆ ಬರೆದದ್ದನ್ನು ಓದಿ ಅದು ಸ್ವಂತ ಅನುಭವವೇನೋ? ಎನ್ನುವಷ್ಟು ಅನುಭವಿಸಿದ್ದೆ. ಆವರೆಗೆ ನಮ್ಮೂರ ಹುಡುಗರು ಕೆರೆಯಲ್ಲಿ ಗಾಳ ಹಾಕುವದನ್ನು ನೋಡಿದ್ದೇನೆ ಹೊರತು ಸ್ವತ: ಗಾಳ ಹಾಕಿ ಕೂತಿರಲಿಲ್ಲ. ಅದನ್ನು ಓದಿದ ನಂತರ ನನ್ನ ಬಂಟನಾಗಿದ್ದ ಬಸವಣ್ಣಿಯ ಜೊತೆ ಊರ ಹತ್ತಿರದ ಕಬ್ನೀರಿನ ಹೊಳೆ, ವರದಾ ನದಿಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವದನ್ನು ಕಲಿತುಕೊಂಡೆ. ಮೀನಿಗೆ ಹುಳ ಚುಚ್ಚಿ ಗಾಳ ಕೊಡುವವನು ಬಸವಣ್ಣಿ, ನಂತರ ಮೀನು ಕಚ್ಚಿಕೊಂಡ ನಂತರ ಮೇಲೆ ಎತ್ತಿದಾಗ ಬಿಡಿಸುವವನೂ ಅವನೇ. ನನ್ನದೇನಿದ್ದರೂ ಸುಮ್ಮನೆ ಕೂತು ನೀರಿನಲ್ಲಿ ಗಾಳ ಇಳಿಬಿಟ್ಟಿರುವದಷ್ಟೇ. ಅದೊಂದು ಅದ್ಭುತ ಅನುಭವವಂತೂ ಹೌದು, ಅದರಲ್ಲೂ ನನ್ನಂಥ ಪರಮ ಆಲಸಿಗಳಿಗೆ ಹೇಳಿ ಮಾಡಿಸಿದ ಕೆಲಸ.

ಹಾಗಾಗಿ ಆ ಹುಡುಗನನ್ನು ಕರೆದುಕೊಂಡು ಮಳಲಹೊಳೆಯತ್ತ ಹೋದೆ. ಆ ಹುಡುಗನಿಗೂ ಅಲ್ಲೆಲ್ಲ ಓಡಾಡಿ ಪರಿಚಯವಿದ್ದ ಕಾರಣ ತಲೆಬಿಸಿ ಇರಲಿಲ್ಲ. ಅದು ತೀರಾ ದೊಡ್ಡದಾಗಿರದಿದ್ದರೂ ಹಳ್ಳಕ್ಕಿಂತ ದೊಡ್ಡದಾದ, ಬೇಸಿಗೆಯಲ್ಲೂ ಸಾಕಷ್ಟು ನೀರು ಇರುವ ಹೊಳೆಯಂತೆ ತೋರಿತು. ಆ ಹೊಳೆಯ ಉದ್ದಕ್ಕೂ ಒಂದಷ್ಟು ದೂರ ಓಡಾಡಿ, ದಾಟಲು ಸಾಧ್ಯವಾಗುವ ಜಾಗದಲ್ಲಿ ಆಚೆ ದಂಡೆಗೂ ದಾಟಿ ಸುಮಾರು ಹೊತ್ತಿನ ತನಕ ಸುತ್ತಾಡಿದೆ. ಆ ಸಮಯದಲ್ಲಿ ತೇಜಸ್ವಿ ಊರಿನಲ್ಲೇ ಇಲ್ಲ ಎನ್ನುವದು ಮರೆತುಹೋಗಿ, ಇಲ್ಲೆಲ್ಲೋ ಗಾಳ ಹಾಕಿ ಕೂತಿರಬಹುದಾದ ತೇಜಸ್ವಿ ಕಾಣಸಿಗುತ್ತಾರೆ ಎನ್ನುವ ಭ್ರಾಂತಿಯೋ, ಆಶಯವೋ? ನನ್ನಲ್ಲಿತ್ತು. ಸುಮಾರು ಹೊತ್ತಿನ ತನಕ ಸುತ್ತಾಡಿ ಆ ಬಿಸಿಲ ಬಳಲಿಕೆಗೆ ಸುಸ್ತಾಗಿ ಮನೆಯಿಂದ ತಂದ ಟವೆಲ್ಲ ಸುತ್ತಿ ಆ ಹೊಳೆಯ ನೀರಿನಲ್ಲಿ ಕುತ್ತಿಗೆಯ ತನಕ ಮುಳುಗಿ, ದಡದಂಚಿನ ನೀರಲ್ಲಿ ಆರಾಮಾಗಿ ಮಲಗಿ ಸುಧಾರಿಸಿಕೊಂಡೆವು. ಯಾರ ಕಾಟವೂ ಇಲ್ಲದೇ, ಯಾವುದರ ಹಂಗೂ ಇಲ್ಲದೇ ತಣ್ಣನೆಯ ನೀರಲ್ಲಿ ಮೈ ಅದ್ದಿಕೊಂಡು ಮಲಗಿದಾಗ ಸಿಗುವ ಸ್ವರ್ಗಸುಖ ಅನುಭವಿಸಿಯೇ ಅರಿಯಬೇಕು.
ಅದೆಷ್ಟೋ ಹೊತ್ತು ಅಲ್ಲಿ ಕಾಲ ಕಳೆದು ಮನೆಗೆ ಬಂದ ನಮಗೆ ಆ ಅಜ್ಜಿಯರೇ ಊಟ ಬಡಿಸಿದರು. ಅವರ ಮನೆಯ ಸುತ್ತಲಿನ ಕಾಫಿ ತೋಟ ಸುತ್ತಾಡುವಷ್ಟರಲ್ಲಿ ಗಂಡಿನ ಮನೆಗೆ ಹೋದ ದಿಬ್ಬಣದ ದಂಡು ವಾಪಸ್ಸಾಯಿತು. ಮತ್ತೆ ಆ ಹೆಣ್ಣುಮಕ್ಕಳು, ಅವರ ನೆಂಟರ ಹುಡುಗ,ಹುಡುಗಿಯರು, ಚಿಳ್ಳೆ,ಪಿಳ್ಳೆಗಳೆಲ್ಲ ಸೇರಿ ಮೂಡಿಗೆರೆಗೆ ಹೋಗುವ ರಸ್ತೆಯಲ್ಲಿ ಸಂಚಾರ ಹೋದೆವು. ನಾವು ಹೋಗುವಾಗ ವಿಶ್ರಾಂತಿ ಪಡೆಯುತ್ತಿದ್ದ ಯಜಮಾನರು ಸಂಜೆ ಬರುವಷ್ಟರಲ್ಲಿ ಅಂಗಳದಲ್ಲಿ ಚೇರ್ ಹಾಕಿ ಕೂತಿದ್ದರು. ನಾನು ಅವರೆದುರಿನ ಮನೆಯ ಕಟ್ಟೆಯ ಮೇಲೆ ಕೂತಾಗ ಮಾತಿಗೆ ಶುರುವಿಟ್ಟರು. ‘ ಅಲ್ಲಾ, ನಿಮಗೆ ಹ್ಯಾಗೆ ತೇಜಸ್ವಿಯವರ ಪರಿಚಯ?’ಎಂದರು.
ನಾನು ಅವರ ಕತೆ, ಕಾದಂಬರಿ, ಲೇಖನಗಳಿಂದ ಪ್ರಭಾವಿತನಾಗಿದ್ದನ್ನು, ಅವರ ಮನೆಗೆ ಬಂದದ್ದು ಸೇರಿದಂತೆ ಎಲ್ಲ ಗತ ಪ್ರವರಗಳನ್ನು ಮತ್ತೆ ಅವರ ಕಿವಿಗೆ ಹಾಕಿದೆ. ಅದು ಎಷ್ಟರ ಮಟ್ಟಿಗೂ ಪ್ರಭಾವ ಬೀರದಿದ್ದುದು ಆ ಕ್ಷಣಕ್ಕೇ ಅರಿವಿಗೆ ಬಂತು. ಅದು ಅವರು ಆಗಲೇ ಸ್ವಲ್ಪವಾಗಿ ಸೇವಿಸಿದ್ದ ಶಕ್ತಿಮದ್ದಿನ ಪರಿಣಾಮ ಇರಬಹುದೇ? ಅಂದುಕೊಂಡೆ.

‘ ಅಲ್ಲಾ, ನಿಮ್ಮಂತ ಹುಡುಗ್ರು ಅವನ ಹಿಂದೆ ಬಿದ್ದು ಹಾಳಾಗ್ತಿರೇನ್ರಿ? ಅವನಿಗೆ ಮಂಗಾಟ. ಮೀನು ಹಿಡಿಯೋದು, ಶಿಕಾರಿ ಮಾಡೋದು, ಅದೇನೋ ಬರೆಯೋದಂತೆ, ಇಂಥವೇ ಎಲ್ಲ. ಹಗಲೆಲ್ಲ ಸುತ್ತಾಡೋ ಬದಲು ತೋಟ ಚೆನ್ನಾಗಿ ಮಾಡ್ಕೋಳ್ಳೋಕೆ ಆಗಲ್ವೇನ್ರಿ?..ಎಂದೆಲ್ಲ ಶುರುವಿಟ್ಟರು. ಅಷ್ಟರಲ್ಲಾಗಲೇ ತೇಜಸ್ವಿ ಆ ಭಾಗದ ಕಾಫಿ ಬೆಳೆಗಾರರು ತನ್ನ ಬಗ್ಗೆ ಆಡಿಕೊಳ್ಳುವದನ್ನು ತಾವೇ ಬರೆದ ಕಾರಣದಿಂದ ಅದೇನೂ ಅನಿರೀಕ್ಷಿತವಾಗಿರಲಿಲ್ಲ. ಇಂಥ ನನ್ನ ಊರಿನ, ನೆಂಟರಿಷ್ಠರ ಹಿರಿಯರು ಬೆನ್ನ ಹಿಂದೆ ಇದಕ್ಕಿಂತ ಹೀನಾಯವಾದ ಮಾತುಗಳನ್ನ ಆಡಿದ್ದರ ಬಗ್ಗೆ ನನ್ನ ಕಿವಿಗೆ ಬಿದ್ದಿತ್ತು. ಅದೂ ಆ ಹಿರಿಯರ ತಪ್ಪೂ ಅಲ್ಲ. ಕಷ್ಟಪಟ್ಟು ಬದುಕು ಕಟ್ಟಿಕೊಂಡು ಬಂದಿರಬಹುದಾದ ಅವರಿಗೆ ಹೊಸಕಾಲದ ಹುಡುಗರ ವರ್ತನೆಗಳು ವಿಚಿತ್ರವಾಗಿ, ಜೀವನಾಶದ ದಾರಿಯಾಗಿ ಕಂಡಿರಲೂ ಸಾಕು, ಆದರೆ ನನ್ನ ಅಪ್ಪ ಇದಕ್ಕೆಲ್ಲ ವಿಭಿನ್ನವಾದ ಮನುಷ್ಯನಾಗಿದ್ದನ್ನ ನೆನಪಿಸಿಕೊಂಡಾಗ ಈ ಹಿರಿಯರೂ ಒಂದಿಷ್ಟು ಉದಾರ ಮನೋಭಾವವನ್ನ ತಳೆಯಬಹುದಿತ್ತು ಅನ್ನಿಸುತ್ತದೆ. ಬದುಕಿನಲ್ಲಿ ಕೇವಲ ಹಣಗಳಿಕೆ, ಅಂತಸ್ತು, ಪ್ರತಿಷ್ಠೆ, ಅಧಿಕಾರ ಇಂಥವುಗಳಿಗೇ ಆದ್ಯತೆ ನೀಡುವ ಮನಸ್ಸುಗಳು ಮಾತ್ರ ಹೀಗೆ ಯೋಚಿಸಲು ಸಾಧ್ಯ. ತೇಜಸ್ವಿ ತನ್ನ ಹವ್ಯಾಸ,ವರ್ತನೆ,ನಡವಳಿಕೆಗಳಿಂದ ಎತ್ತರಕ್ಕೆ ಬೆಳೆದರೇ ಹೊರತು ಕುಗ್ಗಲಿಲ್ಲ.
ನಾನು ಆ ಯಜಮಾನರಿಗೆ ಪ್ರತಿಯಾಡಲಿಲ್ಲ, ಗೌರವದ ಕಾರಣದಿಂದ. ಮನಸ್ಸಿಗೆ ನೋವಾದರೂ ತಡೆದುಕೊಂಡೆ. ಆ ಹೆಣ್ಣುಮಕ್ಕಳೂ ತುಂಬಾ ನೊಂದುಕೊಂಡಿದ್ದರು.
ಆದರೆ ಲಗ್ನದ ಸಮಯದಲ್ಲಿ ಸಿಗದ, ನನ್ನ ಮನಸ್ಸಿನ ನೋವುಗಳನ್ನೆಲ್ಲ ತೊಳೆದುಬಿಟ್ಟ ಪ್ರಹಸನವೊಂದು ಆ ಸಂಜೆ ಆ ಉಪ್ಪರಿಗೆಯಲ್ಲಿ ಮನೆಯಲ್ಲಿದ್ದ ಎಲ್ಲ ನೆಂಟರಿಷ್ಠರೂ ಸೇರಿದಂತೆ- ಯಜಮಾನರೊಬ್ಬರನ್ನ ಬಿಟ್ಟು- ಎಲ್ಲರ ಸಮ್ಮುಖದಲ್ಲಿ ನಡೆಯಿತು.
(ಮುಂದುವರಿಯುವದು)
ಗಂಗಾಧರ ಕೊಳಗಿ

About the author

Adyot

1 Comment

  • ಕುತೂಹಲಕರವಾಗಿದೆ… ಮುಂದನ ಕಂತಿಗೆ ಕಾಯುವೆ

Leave a Comment