ಭಾರತ ಧರ್ಮಛತ್ರವಲ್ಲ : ಕಂದಾಯ ಸಚಿವ ಆರ್.ಅಶೋಕ್

ಕುಮಟಾ : ಯಾರು ಬೇರೆ ದೇಶಗಳಿಂದ ಬಂದಿದ್ದಾರೆ ಪೌರತ್ವ ಇಲ್ಲದವರು ವಾಪಸ್ ಹೋಗಬೇಕು. ಎಲ್ಲರನ್ನೂ ಉಳಿಸಿಕೊಳ್ಳೋಕೆ ಭಾರತ ಧರ್ಮಛತ್ರ ಅಲ್ಲ ಅಂತ ಕಂದಾಯ ಸಚಿವ ಆರ್.ಅಶೋಕ್ ಗುಡುಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರ್.ಅಶೋಕ್, ಮಂಗಳೂರು ಏರ್‌ಪೋರ್ಟ್ ನಲ್ಲಿ ಬಾಂಬ್ ಇಟ್ಟ ಪ್ರಕರಣವನ್ನ ಪೊಲೀಸರ ಅಣಕು ಪ್ರದರ್ಶನ ಎಂದ ಕುಮಾರಸ್ವಾಮಿ ಹೇಳಿಕೆ ಖಂಡನೀಯ. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಗಳು ಅವರಿಗೆ ಶೋಭೆ ತರಲ್ಲ. ಬಾಂಬ್ ಇಡುವಂತಹ ಕೃತ್ಯ ಯಾರೇ ಮಾಡಿರಲಿ ಭಯೋತ್ಪಾದಕರು ಭಯೋತ್ಪಾದಕರೇ. ಪೊಲೀಸರ ಮೇಲೆ ಗೂಬೆ ಕೂರಿಸುವಂತದ್ದು ಅಕ್ಷಮ್ಯ ಅಪರಾಧ. ಇಂತಹ ಹೇಳಿಕೆಗಳಿಂದ ಮುಂದೊಂದು ದಿನ ಜೆಡಿಎಸ್ ಪಕ್ಷವನ್ನ ಜನ ಅಣಕು ಪಕ್ಷ ಎಂದು ತೀರ್ಮಾನ ಮಾಡುತ್ತಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಹೇಳಿಕೆಗಳನ್ನ ನೀಡುವುದು ಸಮಾಜಕ್ಕೆ ಒಳ್ಳೆಯದಲ್ಲ ಎಂದರು.

ಬಾಂಗ್ಲಾ ವಲಸಿಗರ ಕುರಿತ ಸಿದ್ಧರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಇಡೀ ಜಗತ್ತಿಗೆ ಗೊತ್ತಿದೆ ಬಾಂಗ್ಲಾ ವಲಸಿಗರು ಕಳೆದ 30 ವರ್ಷಗಳಿಂದ ವಲಸೆ ಬಂದಿದ್ದಾರೆ. ಅಂತಹವರಿಗೆ ಶೆಡ್ ಹಾಕಿಕೊಟ್ಟು, ರೇಷನ್ ಕಾರ್ಡ್ ನೀಡಿ ಓಟ್ ಹಾಕಿಸಿಕೊಂಡಿದ್ದು ಕಾಂಗ್ರೆಸ್ ಚಾಳಿ. ಸಿದ್ಧರಾಮಯ್ಯ ಹೇಳಿಕೆ ಅವರ ಅಭ್ಯಾಸ ಬಲವನ್ನ ತೋರಿಸುತ್ತಿದೆ. ಸಿದ್ಧರಾಮಯ್ಯ ಭಾರತವನ್ನ ಬಾಂಗ್ಲಾ, ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಭಾರತ ಭಾರತವಾಗಿಯೇ ಉಳಿಯಬೇಕು. ಇದಕ್ಕೆ ಯಾವುದೇ ಅವಕಾಶ ನೀಡಲ್ಲ ಎಂದರು.

About the author

Adyot

Leave a Comment