ಕುಮಟಾ : ಕೆಟ್ಟು ನಿಂತಿದ್ದ ಸರ್ಕಾರಿ ಬಸ್ ಗೆ ಲಾರಿಯೊಂದು ಢಿಕ್ಕಿ ಹೊಡೆದು, ಬೇರೆ ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಢಿಕ್ಕಿ ಹೊಡೆದ ಘಟನೆ ಕುಮಟಾ ತಾಲೂಕಿನ ಬರ್ಗಿಯಲ್ಲಿ ನಡೆದಿದೆ.
ಕಾರವಾರದಿಂದ ಕುಮಟಾಕ್ಕೆ ಬರುತ್ತಿದ್ದ ಸರ್ಕಾರಿ ಬಸ್ ಕೆಟ್ಟು ನಿಂತಿದ್ದರಿಂದ ಕೆಳಗಿಳಿದು ನಿಂತು ಬೇರೆ ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಢಿಕ್ಕಿ ಹೊಡೆದ ಲಾರಿ ನಂತರ ಬಸ್ ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಪಕ್ಕದಲ್ಲಿದ್ದ ಕಂದಕಕ್ಕೆ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ ಲಾರಿ ಚಾಲಕ ಸೇರಿ 9 ಜನ ಪ್ರಯಾಣಿಕರು ಗಾಯಗೊಂಡಿರದ್ದಾರೆ. ತೀವ್ರ ಗಾಯಗೊಂಡ 3 ಜನ ಆಶಾ ಕಾರ್ಯಕರ್ತೆಯರನ್ನು ಮಣಿಪಾಲಿಗೆ ಕಳುಹಿಸಲಾಗಿದ್ದು, ತೀವ್ರ ಗಾಯಗೊಂಡಿದ್ದ ಇನ್ನಿಬ್ಬರನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ. ಕಾರವಾರಕ್ಕೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದ ಸಿದ್ದಾಪುರ ತಾಲೂಕಿನ ಐವರು ಆಶಾ ಕಾರ್ಯಕರ್ತೆಯರು ಕೂಡ ಇದರಲ್ಲಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇತರ ಗಾಯಾಳುಗಳು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಕುಮಟಾ ಶಾಸಕ ದಿನಕರ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.