ಹುಬ್ಬಳ್ಳಿ : ಗಾಳಿಪಟದ ಉತ್ಸವ ಅಂದ್ರೇನೇ ಹಾಗೆ. ಕಣ್ಣಿಗೆ ಮುದ ನೀಡಿ ಮನಸ್ಸನ್ನ ಸೂರೆ ಮಾಡೋ ಹಬ್ಬ. ಸಂಸದ ಪ್ರಹ್ಲಾದ ಜೋಶಿ ಹಾಗೂ ಕ್ಷಮತಾ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ರಸ್ತೆಯ ಮೈದಾನದಲ್ಲಿ 3ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು.
30ಕ್ಕೂ ಅಧಿಕ ವೃತ್ತಿಪರ ಗಾಳಿಪಟ ತರಬೇತುದಾರರು, ಪುಟಾಣಿಗಳಿಂದ ಹಿಡಿದು ವಯೋವೃದ್ಧರೂ ಕೂಡಾ ಈ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಇನ್ನು 110 ಅಡಿ ಉದ್ದದ ನಾಗರ ಹಾವನ್ನು ಹೋಲುವ 3ಡಿ ಗಾಳಿಪಟ, 3 ಡಿ ಡ್ರಾಗನ್, 3 ಡಿ ಅಕ್ಟೋಪಸ್, ಟೈಗರ್ ಶೇಪ್, 3ಡಿ ರಾರಯಬಿಟ್, ಲೇಡಿ ಬಗ್ ಗಾಳಿಪಟ ಹಾಗೂ ವಿಶೇಷ ವಿನ್ಯಾಸದ ಎಲ್.ಇ.ಡಿ ಗಾಳಿಪಟಗಳನ್ನು ಆಕಾಶದೆತ್ತರಕ್ಕೆ ತೇಲಿ ಬಿಡಲಾಯಿತು. ಅದೇ ರೀತಿ ಪ್ಲಾಸ್ಟಿಕ್, ಹಾಳೆ, ಬಟ್ಟೆ ಸಹಿತ ನಾನಾ ವಸ್ತುಗಳಿಂದ ತಯಾರಿಸಿದ್ದ ಗಾಳಿಪಟಗಳನ್ನು ಹಾರಿ ಬಿಡಲಾಯಿತು. ಇನ್ನು ತಾವೇ ತಯಾರಿಸಿದ ಗಾಳಿಪಟಕ್ಕೆ ದಾರ ಕಟ್ಟಿ ಬಾನಲ್ಲಿ ತೇಲಿ ಬಿಟ್ಟಾಗ ಪೋಷಕರು, ಹೆತ್ತವರು ಮಕ್ಕಳನ್ನು ಹುರಿದುಂಬಿಸಿ ಪ್ರೋತ್ಸಾಹಕೊಟ್ಟರು.
ಆಯೋಜಕರೇ ಸ್ವತಃ ಆಸಕ್ತರಿಗೆ ಉಚಿತವಾಗಿ ಗಾಳಿಪಟ, ದಾರ ನೀಡಿ ಹುರಿದುಂಬಿಸಿದ್ದು ಶ್ಲಾಘನೀಯವಾಗಿತ್ತು. ಗಾಳಿಪಟ ಉತ್ಸವದ ಜತೆ ಜತೆಗೆಯೇ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಬಗೆಯ ಸ್ಫರ್ಧೆಗಳನ್ನ ಆಯೋಜಿಸಲಾಗಿತ್ತು. ಇನ್ನು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಆಸ್ಟ್ರೇಲಿಯಾ, ಮಲೇಶಿಯಾ, ಕೆನಡಾ, ಸಿಂಗಾಪೂರ್, ಟರ್ಕಿ, ಹಾಲೆಂಡ್ ಸೇರಿದಂತೆ 12 ದೇಶಗಳ ನುರಿತ 30 ವೃತ್ತಿಪರ ಗಾಳಿಪಟ ವಿನ್ಯಾಸಗಾರರು ಪಾಲ್ಗೊಂಡಿದ್ದರು.