ಆದ್ಯೋತ್ ಸುದ್ದಿ ನಿಧಿ : ಪ್ರಧಾನಿ ಮೋದಿಯವರ ಲಾಕ್ ಡೌನ್ ನಿರ್ಣಯ ನಮ್ಮಲ್ಲಿ ಕೊರೊನಾ ಹರಡದಿರಲು ಕಾರಣವಾಗಿದೆ. ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ ಮತ್ತಷ್ಟು ರೋಗ ಹಬ್ಬುತ್ತಿದೆ. ನಾವು ಕೊರೊನಾ ಜೊತೆ ಜೀವಿಸುವ ಅವಶ್ಯಕತೆಯಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸಿದ್ದಾಪುರದ ಅಂಬೇಡ್ಕರ್ ಭವನದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕಿಟ್ ವಿತರಿಸಿ ಮಾತನಾಡಿದ ಕಾಗೇರಿ, ಕೊರೊನಾ ಜೊತೆ ಇಂದು ನಾವು ಜೀವಿಸಿ ಜಯಿಸಬೇಕಾಗಿದೆ. ಜನರು ಇದನ್ನು ಮಾನಸಿಕವಾಗಿ ಅರ್ಥ ಮಾಡಿಕೊಳ್ಳಬೇಕು. ಜನಜೀವನ ಸುಸೂತ್ರವಾಗಿ ನಡೆಯಲೇಬೇಕಂದ್ರೆ ಲಾಕ್ ಡೌನ್ ರಿಲಾಕ್ಸೇಷನ್ ಅಗತ್ಯವಾಗಿತ್ತು. ಜನಸಂದಣಿಯನ್ನು ಕಡಿಮೆ ಮಾಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಶುದ್ಧವಾದ ಮಾಸ್ಕ್ ಹಾಕಿಕೊಳ್ಳಿ. ಸ್ವಯಂ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಲಾಕ್ ಡೌನ್ ನ 2 ತಿಂಗಳುಗಳಲ್ಲಿ ಜನಜೀವನ ತುಂಬಾ ಕಷ್ಟಪಟ್ಟಿದೆ. ಈ ಕಷ್ಟದ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ತುಂಬಾ ಸಹಾಯ ಮಾಡಿವೆ. ಎಲ್ಲಾ ವರ್ಗದ ಜನರಿಗೂ ಕಷ್ಟದ ಸಂದರ್ಭದಲ್ಲಿ ಸರ್ಕಾರಗಳು ನೆರವಿಗೆ ಬಂದಿವೆ. ಸಿದ್ದಾಪುರದಲ್ಲಿ 868 ಕಿಟ್ ವಿತರಣೆಯಾಗಿವೆ. ಆದ್ದರಿಂದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಇಂದು ಕಾರ್ಮಿಕ ಇಲಾಖೆಯಿಂದ 750 ಕಿಟ್ ವಿತರಣೆಯಾಗಲಿದೆ. ಒಟ್ಟೂ ಕ್ಷೇತ್ರಕ್ಕೆ 10,000 ಕಿಟ್ ವಿತರಣೆಯಾಗಲಿದೆ. ಇಂದಿಗೂ ಸರ್ಕಾರದಲ್ಲಿ ವಿತರಣೆಗಾಗಿ ಆಹಾರದ ಸೌಲಭ್ಯ ಇದೆ. ಆರೋಗ್ಯ ಸೇತು ಆಪ್ ಅನ್ನು ಎಲ್ಲರೂ ಡೌನ್ಲೋಡ್ ಮಾಡಿಕೊಳ್ಳಿ. ಏನಾದರೂ ರೋಗದ ಲಕ್ಷಣಗಳಿದ್ದಲ್ಲಿ ಕೂಡಲೇ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ನಾಗರಾಜ ನಾಯ್ಕ, ತಹಸೀಲ್ದಾರ್ ಮಂಜುಳಾ ಭಜಂತ್ರಿ, ಸಿ.ಪಿ.ಐ ಪ್ರಕಾಶ್ ಹಾಗೂ ರವಿ ಹೆಗಡೆ ಹೂವಿನಮನೆ ಸೇರಿದಂತೆ ಪಟ್ಟಣ ಪಂಚಾಯತ್ ದ ಎಲ್ಲಾ ವಾರ್ಡ್ ನ ಸದಸ್ಯರುಗಳು ಹಾಜರಿದ್ದರು.