ಆದ್ಯೋತ್ ಲೊಕಲ್ ನ್ಯೂಸ್

ಆದ್ಯೋತ್ ನ್ಯೂಸ್ ಡೆಸ್ಕ್: ಸಿದ್ದಾಪುರ ತಾಲೂಕಿನಲ್ಲಿ ಶುಕ್ರವಾರ ಬೀಸಿದ ಗಾಳಿ-ಮಳೆಗೆ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ವಾಜಗದ್ದೆ, ಹೂಕಾರ, ಮತ್ತಿಗಾರ, ಹಾರ್ಸಿಕಟ್ಟಾ ಸೇರಿದಂತೆ ಹಲವು ಭಾಗದಲ್ಲಿ ಗಾಳಿಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. 2 ಟಿ.ಸಿ ಗಳು ಹಾಳಾಗಿದ್ದು ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಲು ಕಾರ್ಯೋನ್ಮುಖರಾಗಿದ್ದಾರೆ.


ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಕಲ್ಲಬ್ಬೆಯ ಸತೀಶ ಗೌಡ,ಹೂಕಾರಿನ ಮಂಜುನಾಥ ನಾಯ್ಕ ಇವರ ಮನೆಯ ಮೇಲೆ ಮರ ಬಿದ್ದು ಜಖಂಗೊಂಡಿದೆ. ಬಾಲಚಂದ್ರ ನಾಯ್ಕ ಎನ್ನುವವರ ಮನೆಯ ಮೇಲೆ ವಿದ್ಯುತ್ ತಂತಿ ಬಿದ್ದು ಹಾನಿಯಾಗಿದೆ. ಅಲ್ಲದೆ ನೂರಾರು ಅಡಿಕೆ ಮರಗಳು ಹತ್ತಕ್ಕೂ ಹೆಚ್ಚು ತೆಂಗಿನಮರಗಳು ಮುರಿದು ಬಿದ್ದಿದೆ.ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಮೇಲ್ಚಾವಣಿ ಹಾರಿ ಹೋಗಿದ್ದು 50 ಚೀಲ ಪಶು ಆಹಾರ ಹಾಗೂ ಪಡಿತರ ವಿತರಣೆಗೆ ತಂದಿದ್ದ 40 ಚೀಲ ಅಕ್ಕಿ ಮಳೆಯಿಂದ ಹಾನಿಯಾಗಿದೆ.

ಮಂಗನಖಾಯಿಲೆ ಹಾವಳಿ: ಸಿದ್ದಾಪುರ ತಾಲೂಕಿನ ಕೊರ್ಲಕೈ ಹಾಗೂ ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮಂಗನಖಾಯಿಲೆಯ ಅಟ್ಟಹಾಸ ಮುಂದುವರಿದಿದ್ದು ಜೋಗಿನಮಠದ ನಾಲ್ಕು ವರ್ಷದ ಬಾಲಕನಲ್ಲಿ ಮಂಗನಖಾಯಿಲೆ ಸೊಂಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಇದೇ ಆರೋಗ್ಯ ಕೇಂದ್ರದ ಜಿಡ್ಡಿ ಗ್ರಾಮದ ಯುವತಿಗೆ ಹಾಗೂ ದೊಡ್ಮನೆ ಆರೋಗ್ಯ ಕೇಂದ್ರದ ಮಾದಲಮನೆ ಯುವತಿ, ಸಂಪೇಸರದ ಮಹಿಳೆಗೂ ಮಂಗನಖಾಯಿಲೆ ಇರುವುದು ಖಚಿತವಾಗಿದ್ದು ತಾಲೂಕಿನಲ್ಲಿ ಇಲ್ಲಿಯವರೆಗೆ 23 ಜನರಿಗೆ ಮಂಗನಖಾಯಿಲೆ ಕಾಣಿಸಿಕೊಂಡಿದೆ. ಒಬ್ಬರು ಮರಣ ಹೊಂದಿದ್ದು 18 ಜನರು ಗುಣಮುಖರಾಗಿದ್ದಾರೆ.ಎರಡು ಜನರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎರಡು ಜನರು ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ವರ್ಷ ಮಂಗನಖಾಯಿಲೆ ಪೀಡಿತರಿಗೆ ಹಾಗೂ ಶಂಕಿತರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗಿತ್ತು. ಆದರೆ ಈ ಬಾರಿ ಉಚಿತ ಚಿಕಿತ್ಸೆಯನ್ನು ನಿರಾಕರಿಸಲಾಗಿದೆ. ಮಂಗನಖಾಯಿಲೆ ಪೀಡಿತರು ಬಡವರಾಗಿದ್ದು ಚಿಕಿತ್ಸೆ ಪಡೆಯಲು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಉಚಿತ ಚಿಕಿತ್ಸೆ ನೀಡುವಂತಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಳೆದ ವರ್ಷ ಮಂಗನಖಾಯಿಲೆಯಿಂದ ಮರಣ ಹೊಂದಿದ ಆರು ಜನರಿಗೆ ಹಾಗೂ ಈ ವರ್ಷ ಮರಣ ಹೊಂದಿದ ಒಬ್ಬರಿಗೆ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಲಾಗಿದೆ ಎಂದು ಸ್ಥಳೀಯ ಶಾಸಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದು ಕಳೆದ ವರ್ಷದಂತೆ ಈ ವರ್ಷವೂ ಮಣಿಪಾಲದಲ್ಲಿ ಮಂಗನಖಾಯಿಲೆ ಪೀಡಿತರಿಗೆ ಉಚಿತ ಚಿಕಿತ್ಸೆ ಸಿಗುವಂತೆ ಮಾಡಲು ಸೋಮವಾರ ಸಂಬಂಧಿಸಿದವರೊಂದಿಗೆ ಮಾತನಾಡುತ್ತೇನೆ ಎಂದು ಅವರು ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.

About the author

Adyot

Leave a Comment