ಆದ್ಯೋತ್ ನ್ಯೂಸ್ ಡೆಸ್ಕ್ :
ಸಿದ್ದಾಪುರ : ಆದ್ಯೋತ್ ನ್ಯೂಸ್ ನ ಆಪ್ ಬಿಡುಗಡೆ ಸಿದ್ದಾಪುರದಲ್ಲಿ ನಡೆಯಿತು. ಕೊರೊನಾ ಕಾರಣದಿಂದಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಿದ್ದಾಪುರ ತಹಸೀಲ್ದಾರ್ ಮಂಜುಳಾ ಭಜಂತ್ರಿ ಹಾಗೂ ಪಿ.ಎಸ್.ಐ ಮಂಜುನಾಥ್ ಬಾರ್ಕಿ ಅವರು ಆದ್ಯೋತ್ ನ್ಯೂಸ್ ಆಪ್ ಬಿಡುಗಡೆ ಮಾಡಿದರು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ಲಭ್ಯವಿದ್ದು, https://play.google.com/store/apps/details?id=com.adyot.news ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಶಿರಸಿ : ಲಾಕ್ ಡೌನ ಆದೇಶ ಉಲ್ಲಂಘನೆ ಮಾಡಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ 5 ಜನರನ್ನು ಬಂಧಿಸಿ ಅವರ ಕಾರನ್ನು ಜಪ್ತಿ ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ.
ಕೋವಿಡ್ 19 ವೈರಸ್ ಹರಡುವ ಭೀತಿಯಿಂದ ಜಿಲ್ಲೆಯಾದ್ಯಂತ ಕಲಂ 144 ಸಿ.ಅರ್.ಪಿ.ಸಿ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಲಾಕ್ ಡೌನ ಆದೇಶ ಉಲ್ಲಂಘಿಸಿ ನೀಲೇಕಣಿ ಹತ್ತಿರ ಅನಾವಶ್ಯಕವಾಗಿ ಕಾರಿನಲ್ಲಿ ಓಡಾಡಿಕೊಂಡು ತಿರುಗುತ್ತಿದ್ದ ಶಿರಸಿಯ ರಾಘವೇಂದ್ರ ಸಿದ್ದಣ್ಣ ಕಂಬಳಿ, ರಾಹುಲ್ ರಾಮಚಂದ್ರ ಕೊಪ್ಪದ, ಅರ್ಜುನ ವಿನಾಯಕ ಕಾಂತು, ಅಕ್ಷಯ ರಾಜು ಬಡಗಣೆ, ಶ್ರೀಧರ ಗೋಪಾಲ ರಾಣಗೇರ ಇವರನ್ನು ಬಂಧಿಸಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಿದ್ದಾಪುರ : ಕೊರೊನಾ ವೈರಸ್ ಕಾರಣದಿಂದ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದ್ದು ಇದರಿಂದಾಗಿ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ ಆದರೆ ಇದು ಅನಿವಾರ್ಯವಾಗಿದ್ದು ಇದರಿಂದಾಗಿ ತಾಲೂಕಿನಲ್ಲಿ ಯಾರೂ ಉಪವಾಸ ಬೀಳದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸಿದ್ದಾಪುರದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಈಗಾಗಲೇ ತಾಲೂಕಿನ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅನವಶ್ಯಕವಾಗಿ ಜನರು ಓಡಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಜನರಿಗೆ ಅವಶ್ಯಕವಾಗಿರುವ ವಸ್ತುಗಳನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಔಷಧಗಳ ಸಂಗ್ರಹವಿದ್ದು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಂಗನಖಾಯಿಲೆ ಕಡಿಮೆಯಾಗಿದ್ದು ಕಳೆದ ವರ್ಷ ಮಂಗನಖಾಯಿಲೆಯಿಂದ ಮರಣ ಹೊಂದಿದ ಆರು ಜನರಿಗೆ ಹಾಗೂ ಈ ವರ್ಷ ಮರಣ ಹೊಂದಿದ ಒಬ್ಬರಿಗೆ ತಲಾ ಎರಡು ಲಕ್ಷ ರೂಪಾಯಿ ಮಂಜೂರಾಗಿದೆ. ಕೊರೊನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಲಾಕ್‍ಡೌನ್ ಮುಂದುವರಿಯುವ ಎಲ್ಲಾ ಲಕ್ಷಣಗಳಿವೆ. ಅಧಿಕಾರಿಗಳು ಇದಕ್ಕಾಗಿ ಸಿದ್ದತೆಯನ್ನು ಮಾಡಿಕೊಂಡು ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಅವಶ್ಯಕವಿರುವಲ್ಲಿ ಟ್ಯಾಂಕರ್ ಮೂಲಕ ನೀರನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಸಭೆಯಲ್ಲಿ ತಹಸೀಲ್ದಾರ ಮಂಂಜುಳಾ ಭಜಂತ್ರಿ, ತಾಪಂ ಮುಖ್ಯಾಧಿಕಾರಿ ಪ್ರಶಾಂತ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಉಪಸ್ಥಿತರಿದ್ದರು.
ಸಿದ್ದಾಪುರ : ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ನಮ್ಮ ದೇಶದಲ್ಲೂ ಹರಡುತ್ತಿದ್ದು ನಮ್ಮ ದೇಶದ ಪ್ರದಾನಿ ಹಾಗೂ ರಾಜ್ಯದ ಮುಖ್ಯಂತ್ರಿಗಳು ಕೊರೊನಾ ಸಮರಕ್ಕೆ ಕರೆಕೊಟ್ಟಿದ್ದು ಮುಸ್ಲಿಂ ಬಾಂಧವರು ಈ ಸಮರಕ್ಕೆ ಕೈಜೋಡಿಸಬೇಕು ಎಂದು ತಾಲೂಕಾ ಪಂಚಾಯತ್ ಸದಸ್ಯ ನಾಸೀರ್ ವಲ್ಲಿ ಖಾನ್ ಮುಸಲ್ಮಾನರಲ್ಲಿ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಪೀಡಿತರು ಹೆಚ್ಚಿನವರು ಮುಸಲ್ಮಾನರೇ ಅಗಿರುವುದು ದುರದೃಷ್ಟಕರವಾಗಿದೆ. ಆದರೆ ಕೊರೊನಾ ಪೀಡಿತರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಆಶಾಕಾರ್ಯಕರ್ತರ ಮೇಲೆ ಹಿಂಸೆ ನಿಡುತ್ತಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದ್ದು ಇದು ವಿಷಾದಕರವಾಗಿದೆ. ಇದರಿಂದ ಇಡೀ ಮುಸ್ಲಿಂ ಸಮುದಾಯವನ್ನು ಸಂಶಯದಿಂದ ನೋಡುವಂತೆ ಮಾಡಿದೆ. ನಮ್ಮೆಲ್ಲರ ಸೇವೆ ಸಲ್ಲಿಸುತ್ತಿರುವವರನ್ನು ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದೆ. ಕೊರೊನಾ ವೈರಸ್‍ಗೆ ಜಾತಿ, ಧರ್ಮ, ಸಿರಿವಂತ, ಬಡವ ಎಂಬ ಭೇದವಿಲ್ಲ. ಈ ಮಹಾಮಾರಿ ಓಡಿಸಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಶುಕ್ರವಾರ ನಡೆಯಲಿರುವ ಶಹಬಾನ್ ಹಬ್ಬವನ್ನು ಮನೆಯಲ್ಲೇ ಮಾಡಬೇಕು. ಮಸಿದಿಗೆ ಹೋಗುವುದಾಗಲಿ, ಗುಂಪಾಗಿ ನಿಂತು ಚರ್ಚೆ ಮಾಡುವುದಾಗಲಿ ಮಾಡಬಾರದು ಎಂದು ನಾಸೀರ್ ವಲ್ಲಿ ಖಾನ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.