ಆದ್ಯೋತ್ ನ್ಯೂಸ್ ಡೆಸ್ಕ್: ಕೊರೊನಾ ರೋಗವನ್ನು ತಡೆಯುವುದಕ್ಕಾಗಿ ಸರಕಾರ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ್ದು ಅನುಮತಿ ಇಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಓಡಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಲ್ಲದೆ ಇದನ್ನು ಉಲ್ಲಂಘಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲು ಅವಕಾಶವಿದೆ.
ಪೊಲೀಸ್ ಚೆಕ್ ಬಂದಿಯೂ ಸಾಕಷ್ಟು ಇದೆ. ಆದರೂ ಕೆಲವರು ಕೊರೊನಾ ಸೊಂಕಿತ ಪ್ರದೇಶವಾದ ಭಟ್ಕಳ, ಬೆಳಗಾವಿ ಸೇರಿದಂತೆ ವಿವಿಧ ಪ್ರದೇಶದಿಂದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ, ಯಲ್ಲಾಪುರ ಭಾಗಕ್ಕೆ ಬರುತ್ತಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯದ ಜೊತೆಗೆ ಆತಂಕವನ್ನೂ ಉಂಟುಮಾಡುತ್ತಿದೆ. ಸಾಕಷ್ಟು ಬಂದೋಬಸ್ತ್ ಮಾಡಲಾಗಿದೆ ಎನ್ನುವ ಪೊಲೀಸ್ ಇಲಾಖೆಯ ಮೇಲೆ ಅನುಮಾನದ ಕಣ್ಣು ಬೀಳುತ್ತಿದೆ.
ಈ ಮಧ್ಯೆ ಉತ್ತರಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಡಿವೈಎಸ್ಪಿ
ಜಿ.ಟಿ.ನಾಯಕ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮಾನವೀಯ ನೆಲೆಯಲ್ಲಿ ಪಾಸ್ ಪಡೆದು ಅನವಶ್ಯಕವಾಗಿ ಶಿರಸಿ ನಗರವನ್ನು ಪ್ರವೇಶಿಸಲು ಯತ್ನಿಸಿದ ಹಾವೇರಿ ಮೂಲದ ವೈದ್ಯರೊಬ್ಬರನ್ನು ಚಿಪಗಿ ಚೆಕ್ ಪೋಸ್ಟ ನಲ್ಲಿ ತಡೆದ ಜಿ.ಟಿ.ನಾಯಕ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಲ್ಲದೆ ಅವರನ್ನು ವಾಪಸ್ ಕಳಿಸಿದ್ದಾರೆ.
ಈಗಾಗಲೇ ಭಟ್ಕಳದಿಂದ ಸಿದ್ದಾಪುರ ತ್ಯಾಗಲಿ ಮಾವಿನಕೊಪ್ಪಕ್ಕೆ ಬಂದಿದ್ದ ಮೊಹಿದ್ದೀನ್ ಅಬು ಸಾಬ್, ಗದಗ ಮುಳಗುಂದದಿಂದ ಸಿದ್ದಾಪುರ ಪಟ್ಟಣದ ಕನ್ನಳ್ಳಿಗೆ ಬಂದಿದ್ದ ಮಂಜುನಾಥ ಪ್ರದಾನಪ್ಪ ಬಡ್ನಿ, ಬೆಂಗಳೂರಿನಿಂದ ಸಿದ್ದಾಪುರ ಇಟಗಿ ಹರಗಿಯ ನಾರಾಯಣ ಈರಾ ನಾಯ್ಕ ಎನ್ನುವವರ ಮೇಲೆ ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಲಾಗಿದೆ.
ಆದರೆ ಸಿದ್ದಾಪುರ ಎ.ಪಿ.ಎಂ.ಸಿ.ಭಾಗದಲ್ಲಿ ಬಾಡಿಗೆ ಇರುವ ಪ್ರಿನ್ಸಿಪಾಲ್ ಒಬ್ಬರು ಬೆಳಗಾವಿ ಚಿಕ್ಕೋಡಿಯಿಂದ ಮೂರು ದಿನದ ಹಿಂದೆ ಬಂದಿದ್ದು ಬಿಂದಾಸ್ ಓಡಾಡುತ್ತಿದ್ದಾರೆ. ಸ್ಥಳೀಯರು ಈ ಬಗ್ಗೆ ತಾಲೂಕು ಆಡಳಿತಕ್ಕೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ಒಂದು ಕಾನೂನು ಉನ್ನತ ಸ್ಥಾನದಲ್ಲಿರುವವರಿಗೆ ಒಂದು ಕಾನೂನು ಮಾಡದೆ ಕಾನೂನಿನ ದೃಷ್ಠಿಯಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
👍👌👌👌👍