ಆದ್ಯೋತ್ ಲೋಕಲ್ ನ್ಯೂಸ್

ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ನೆರಳೆಮನೆಯಲ್ಲಿ ಶನಿವಾರ ಅರಣ್ಯ ಅಧಿಕಾರಿಗಳು ದೌರ್ಜನ್ಯ ಮಾಡಿ ನಾರಾಯಣ ದುರ್ಗಾ ನಾಯ್ಕ ಎನ್ನುವ ಬಡವನ ಮನೆ ಕಿತ್ತು ಹಾಕಿರುವ ಘಟನೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಉತ್ತರ ಕನ್ನಡ ಜಿಲ್ಲಾ ಘಟಕ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಹೇಳಿದರು.


“ತಮ್ಮ ಜೀವನೋಪಾಯಕ್ಕಾಗಿ ಮೂರು ಎಕರೆಗಿಂತ ಕಡಿಮೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಬಡವರನ್ನು ಒಕ್ಕಲೆಬ್ಬಿಸುವುದಿಲ್ಲ” ಎಂದು ರಾಜ್ಯ ಸರ್ಕಾರವು ಉಚ್ಚ ನ್ಯಾಯಾಲಯಕ್ಕೆ ಬಹಳ ಹಿಂದೆಯೇ (2015 ರಲ್ಲಿ) ಅಫಿಡವಿಟ್ ಸಲ್ಲಿಸಿದೆ. ಹಾಗಿದ್ದರೂ, ಈಗಿನ ಲಾಕ್‌ಡೌನ್ ಸಂದರ್ಭದಲ್ಲಿ ಇಷ್ಟು ಅಮಾನವೀಯವಾಗಿ ಗುಡಿಸಲು ಕಿತ್ತು ಹಾಕಿ ಒಕ್ಕಲೆಬ್ಬಿಸಿರುವುದು ಅಮಾನವೀಯವಾದದ್ದು ಮತ್ತು ಅಕ್ಷಮ್ಯವಾದದ್ದು. ಈ ಕೂಡಲೇ ಅರಣ್ಯ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಈ ಬಡವನಿಗೆ ಸರಕಾರವೆ ಮನೆ ಕಟ್ಟಿಕೊಡಬೇಕು ತಕ್ಷಣ ಈ ಎಲ್ಲಾ ಅರಣ್ಯ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಎಂದು ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಆಗ್ರಹಿಸಿದ್ದಾರೆ.

ಆಶಾಕಾರ್ಯಕರ್ತೆಯರಿಗೆ ಛತ್ರಿವಿತರಣೆ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಶನಿವಾರ ತಾಲೂಕಿನ ಆಶಾಕಾರ್ಯಕರ್ತೆಯರಿಗೆ ಲಯನ್ಸ್ ಕ್ಲಬ್, ವರ್ತಕರ ಸಂಘ ಸೇರಿದಂತೆ ವಿವಿಧ ಹತ್ತಕ್ಕೂ ಹೆಚ್ಚು ಸಂಘಟನೆಗಳ ಸಹಕಾರದೊಂದಿಗೆ ಛತ್ರಿ ವಿತರಣೆ ನಡೆಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಮಂಜುಳಾ ಭಜಂತ್ರಿ, ಕೊರೊನಾ ಲಾಕ್ ಡೌನ್ ಕಾರಣ ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿದೆ. ರೋಗದ ಕಾರಣ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಆದರೆ ಆಶಾ ಕಾರ್ಯಕರ್ತೆಯರು ದಿಟ್ಟತನದಿಂದ ಇಂತಹ ಸಮಯದಲ್ಲೂ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇವರ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಪಟ್ಟಣದ ವಿವಿಧ ಸಂಘಟನೆಯವರು ಅವರಿಗೆ ಅತ್ಯವಶ್ಯಕವಾಗಿರುವ ಛತ್ರಿಯನ್ನು ನೀಡುವ ಮೂಲಕ ನೆರಳನ್ನು ಒದಗಿಸುತ್ತಿದ್ದಾರೆ ಇದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.


ಲಯನ್ಸ್ ಅಧ್ಯಕ್ಷ ಸಿ.ಎಸ್. ಗೌಡರ್ ಮಾತನಾಡಿ, ತಾಲೂಕಿನಲ್ಲಿರುವ 148 ಆಶಾ ಕಾರ್ಯಕರ್ತೆಯರಿಗೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ನೀಡಲಾಗುತ್ತಿದೆ ಅತಿ ಕಡಿಮೆ ಸಂಬಳದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ನೆರವು ನೀಡುವುದು ಸಮಾಜದ ಕರ್ತವ್ಯವಾಗಿದೆ.ಈಗಾಗಲೇ ವರ್ತಕರ ಸಂಘದವರಿಂದ ಸ್ಥಳೀಯ ಆಡಳಿತದ ನೆರವಿನೊಂದಿಗೆ ಸವಿತಾ ಸಮಾಜ, ವಿಶ್ವಕರ್ಮಸಮಾಜ ಹಾಗೂ ದೋಬಿ ಕೆಲಸ ಮಾಡುವ ಮಡಿವಾಳ ಸಮಾಜದವರಿಗೆ ಆಹಾರ ಧಾನ್ಯದ ಕಿಟ್ ನೀಡಲಾಗಿದೆ ಅವಶ್ಯಕವುಳ್ಳವರಿಗೆ ಆಹಾರಧಾನ್ಯದ ಕಿಟ್ ನೀಡಬಯಸುವ ದಾನಿಗಳು ತಹಸೀಲ್ದಾರ,ತಾಪಂ ಮುಖ್ಯಾಧಿಕಾರಿ, ಸಿ.ಡಿ.ಪಿ.ಒ ಹಾಗೂ ಲಯನ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹುಲೆಕಲ್,ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್,ಸಿಡಿಪಿಒ ಸುಶೀಲಾ ಮೊಗೇರ,ತಾಪಂ ಮುಖ್ಯಾಧಿಕಾರಿ ಪ್ರಶಾಂತ,ಉಪತಹಸೀಲ್ದಾರ ಎನ್.ಐ.ಗೌಡರ್,ನಾಗರಾಜ ನಾಯ್ಕಡು,ಲ.ರಾಘವೇಂದ್ರ ಭಟ್ಟ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment