ಆದ್ಯೋತ್ ಸುದ್ದಿನಿಧಿ: ಕೊರೊನಾ ಸಂಭಂಧವಾಗಿ ದೇಶಾದ್ಯಂತ ಮೇ 3ನೇ ದಿನಾಂಕದವರೆಗೆ ಲಾಕ್ ಡೌನ್ ಘೋಷಿಸಿದ್ದು ಕರ್ನಾಟಕ ರಾಜ್ಯದ ಹಲವು ಭಾಗದಲ್ಲಿ ಅದು ಹಾಸ್ಯಾಸ್ಪದವಾಗಿದೆ. ಹಾಟ್ ಸ್ಪಾಟ್ ಎಂದು ಗುರುತಿಸಿರುವ ಪ್ರದೇಶದಲ್ಲೇ ಬಿಂದಾಸ್ ಓಡಾಟ ಕಂಡು ಬರುತ್ತಿದೆ.
ಲಾಕ್ ಡೌನ್ ಜಾರಿಗೆ ತರಬೇಕಾದ ಪೊಲೀಸ್ ಸಿಬ್ಬಂದಿ ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಯದೆ ಗೊಂದಲಗೊಂಡಿದ್ದಾರೆ. ಪಾದಾಚಾರಿಗಳನ್ನ, ಸಣ್ಣ-ಪುಟ್ಟ ವ್ಯಾಪಾರಿಗಳನ್ನ, ಅಟೋ ಚಾಲಕರನ್ನ, ದ್ವಿಚಕ್ರ ವಾಹನದಲ್ಲಿ ಓಡಾಡುವವರನ್ನ ಗದರಿಸುತ್ತ ಅವರ ಮೇಲೆ ಲಾಠಿ ಬೀಸುವುದು,ಕೇಸ್ ದಾಖಲಿಸುವುದು ಮಾಡುತ್ತ ಶೌರ್ಯ ಪ್ರದರ್ಶಿಸುತ್ತಿದ್ದಾರೆ. ಅದೇ ಕಾರಲ್ಲಿ ಬರುವ ಸುಶೀಕ್ಷಿತರೆನಿಸಿಕೊಂಡವರಿಂದ, ರಾಜಕಾರಣಿಗಳಿಂದ, ಸಿಲೆಬ್ರೆಟಿಗಳೆನಿಸಿಕೊಂಡವರಿಂದ ಬಯ್ಯಿಸಿಕೊಳ್ಳುತ್ತ, ಹಲ್ಲೆ ಮಾಡಿಸಿಕೊಳ್ಳುತ್ತ ಅವರನ್ನು ಗದರಿಸಿದೆ ಕೇಸ್ ದಾಖಲಿಸದೆ ಬಿಟ್ಟು ಕಳುಹಿಸುತ್ತಿದ್ದಾರೆ.
ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ. ಮದುವೆ, ನಾಮಕರಣದಂತಹ ಸಮಾರಂಭಗಳನ್ನು ನಡೆಸುವಂತಿಲ್ಲ. ಯಾವುದೇ ಕಾರಣಕ್ಕೂ ನಾಲ್ಕು ಜನರಿಗಿಂತ ಹೆಚ್ಚು ಸೇರುವಂತಿಲ್ಲ ಎಂದೆಲ್ಲ ಲಾಕ್ ಡೌನ್ ನಿಯಮಗಳನ್ನು ರೂಪಿಸಲಾಗಿದೆ.
ಆದರೆ ಕೆಲವರು ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ತಮ್ಮ ಧಾರ್ಮಿಕ ಆಚರಣೆಯನ್ನು ಮಾಡುತ್ತಿದ್ದಾರೆ.
ರಾಜಕಾರಣಿಗಳು ಯಾವುದೇ ಹಿಂಜರಿಕೆ ಇಲ್ಲದೆ ಮದುವೆ, ನಾಮಕರಣ, ಹುಟ್ಟುಹಬ್ಬದಂತಹ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಇವರ ಮೇಲೆ ಯಾವುದೇ ಕ್ರಮಗಳಾಗುತ್ತಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರವಂತೂ ಲಾಕ್ ಡೌನ್ ವಿಚಾರದಲ್ಲಿ ಗೊಂದಲದ ಗೂಡಾಗಿದೆ. ಬೆಳಿಗ್ಗೆ ಒಂದು ಆದೇಶ, ಮಧ್ಯಾಹ್ನ ಒಂದು ಆದೇಶ, ಸಂಜೆ ಇನ್ನೊಂದು ಆದೇಶ ನೀಡುವ ಮೂಲಕ ಅಧಿಕಾರಿಗಳನ್ನ ಗೊಂದಲಗೊಳಿಸುತ್ತಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಹೇಳಿದರೆ, ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥನಾರಾಯಣ, ಲಕ್ಷ್ಮಣ ಸವದಿ ಇನ್ನೊಂದು ಹೇಳುತ್ತಾರೆ. ಆರೋಗ್ಯ ಮಂತ್ರಿ ಶ್ರೀರಾಮುಲು ನಿರ್ದೇಶನ ಬಂದ ಮರುಘಳಿಗೆಯಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರ ಇನ್ನೊಂದು ನಿರ್ದೇಶನ ನೀಡುತ್ತಾರೆ. ಸರಕಾರದಲ್ಲಿರುವ ಈ ಪ್ರಮುಖರು ಆಯಕಟ್ಟಿನಲ್ಲಿರುವ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಪ್ರಯತ್ನದಿಂದಾಗಿ ಕಟ್ಟುನಿಟ್ಟಾಗಿ ಜಾರಿಯಾಗಬೇಕಿದ್ದ ಲಾಕ್ ಡೌನ್ ಕೆಲವರಿಗಷ್ಟೆ ಸೀಮಿತವಾಗಿರುವುದಲ್ಲದೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ.
ಭಾರತಕ್ಕೆ ಕೊರೊನಾ ತಂದವರು ವಿಮಾನದಲ್ಲಿ ಓಡಾಡುವ ಶ್ರೀಮಂತರು. ಆದರೆ ಅದರ ಕಷ್ಟದ ಫಲವನ್ನು ಅನುಭವಿಸುತ್ತಿರುವವರು ಬಡವರು ಎಂದು ಹೇಳುತ್ತಿರುವುದು ಅಕ್ಷರಶಃ ಸತ್ಯವಾಗಿದೆ.