ಆದ್ಯೋತ್ ನ್ಯೂಸ್ ಡೆಸ್ಕ್ : ಮಂಗನಕಾಯಿಲೆ ಪ್ರದೇಶಗಳಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನ ಒದಗಿಸೋಕೆ ರಾಜ್ಯ ಸರ್ಕಾರ ಸಿದ್ಧವಾಗಿದೆ ಅಂತ ಕಾರ್ಮಿಕ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಜಿಲ್ಲೆಯ ಕೆ.ಎಫ್.ಡಿ ಹಾಟ್ ಸ್ಪಾಟ್ ಆದ ಸಿದ್ದಾಪುರ ತಾಲೂಕಿನ ಕ್ಯಾದಗಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್, ಜಿಲ್ಲೆಯ ಘಟ್ಟದ ಮೇಲಿನ ಭಾಗಗಳಲ್ಲಿ ಕೊರೊನಾ ಸಮಸ್ಯೆಯಿಲ್ಲ. ಆದ್ರೆ ಈ ಭಾಗದಲ್ಲಿ ಮಂಗನಕಾಯಿಲೆಯ ಆತಂಕ ಹೆಚ್ಚಾಗಿದೆ. ಈ ಭಾಗಕ್ಕೆ ದನಗಳ ಉಣುಗಿನ ಹತೋಟಿಗಾಗಿ ಅವಶ್ಯವಿರುವ ಲಸಿಕೆಯ ಕೊರತೆಯಿದೆ ಅನ್ನೋದು ತಿಳಿದು ಬಂದಿದೆ. ಲಸಿಕೆಯನ್ನ ಇನ್ನೆರಡು ದಿನಗಳಲ್ಲಿ ಒದಗಿಸಲಾಗುವುದು. ವೆಂಟಿಲೇಟರ್ ಹೊಂದಿರೋ ಆಂಬುಲೆನ್ಸ್ ಅತಿ ಅವಶ್ಯಕವಾಗಿ ಬೇಕಾಗಿದ್ದು, ಈ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಒದಗಿಸಲಾಗುವುದು. ಅದೇ ರೀತಿ ಇಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿದ್ದು, ಇದು ಶೀಘ್ರವಾಗಿ ಆಗದ ಕೆಲಸವಾದ್ದರಿಂದ, ಇದನ್ನು ಆರೋಗ್ಯ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಪಂಚಾಯತ್ ಸದಸ್ಯ ನಾಗರಾಜ ನಾಯ್ಕ, ಎಸಿ ಡಾ.ಈಶ್ವರ್ ಉಳ್ಳಾಗಡ್ಡಿ, ಡಿ.ವೈ.ಎಸ್.ಪಿ ಗೋಪಾಲಕೃಷ್ಣ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್, ತಹಸೀಲ್ದಾರ್ ಮಂಜುಳಾ ಭಜಂತ್ರಿ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಜರಿದ್ದರು.