ಕೊವಿಡ್ ಎದುರಿಸಲು ರೋಗ ನಿರೋಧಕ ಶಕ್ತಿ ಕುರಿತಾದ ಜಾಗೃತಿ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶಂಕರಮಠದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನೇತೃತ್ವದಲ್ಲಿ ತಾಲೂಕು ಆಡಳಿತ ಆಯೋಜಿಸಿದ ರೋಗನಿರೋಧಕ ಶಕ್ತಿ ವೃದ್ಧಿಸುವ ಕುರಿತಾದ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿಯವರು,
ಕೊರೊನಾ ರೋಗದ ಕುರಿತಾದ ಭೀತಿಯನ್ನು ನಿವಾರಿಸಿಕೊಳ್ಳುವದು, ಅದನ್ನು ಗುಣಪಡಿಸಿಕೊಳ್ಳುವ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವದು ಮುಖ್ಯವಾಗಿ ಅದನ್ನ ಎದುರಿಸುವ ರೋಗ ನಿರೀಧಕ ಶಕ್ತಿ ಹೆಚ್ಚಿಸಿಕೊಳ್ಳುವದು ಈ ಸಂದರ್ಭದಲ್ಲಿ ಅತಿ ಮುಖ್ಯವಾಗಿದೆ. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಜನಾಂದೋಲನವಾಗಿ ರೂಪುಗೊಳ್ಳಬೇಕಿದೆ.ಕೊರೊನಾ ಇಂದು ನಮ್ಮ ಸಾಮಾಜಿಕ,ಶೈಕ್ಷಣಿಕ, ಆಡಳಿತ ಮುಂತಾಗಿ ಎಲ್ಲ ವ್ಯವಸ್ಥೆಯನ್ನೂ ಬದಲಾಯಿಸಿದೆ. ಕೇವಲ ಶರೀರದ ಮೇಲಾಗುವ ದುಷ್ಪರಿಣಾಮವಲ್ಲದೇ ಮಾನಸಿಕವಾಗಿ ಕುಸಿಯುವ ಕಂಟಕವಾಗಿಯೂ ಕಾಡಿದೆ. ಈ ರೋಗ ಕಂಟಕದಿಂದ ಪಾರಾಗಬೇಕೆಂದರೆ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ.

btrhdr

2 ನೇ ಅಲೆಯನ್ನು ಸರಕಾರ, ಸಮಾಜ ಒಟ್ಟಾಗಿ ಯಶಸ್ವಿಯಾಗಿ ಎದುರಿಸಿದೆ. ಮೂರನೇ ಅಲೆ ಹೇಗೆ ಬರುತ್ತದೆ ಗೊತ್ತಿಲ್ಲ. ಬರುವ ಮುನ್ನ ಅದನ್ನು ಎಲ್ಲ ರೀತಿಯಲ್ಲೂ ಎದುರಿಸಲು ನಾವು ಸಜ್ಜಾಗಬೇಕಿದೆ. ರೋಗ ನಿರೋಧಕ ಶಕ್ತಿ ಪಡೆದುಕೊಂಡಲ್ಲಿ ಅದನ್ನು ಸವಾಲಾಗಿ ಎದುರಿಸಲು ಸಾಧ್ಯ ಎಂದರು.
ಈ ಕಾರ್ಯಕ್ರಮದ ಕುರಿತಾಗಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚೀವರ ಜೊತೆಗೆ ಚರ್ಚಿಸಿದ್ದೇನೆ. 224 ಶಾಸಕರಿಗೂ ಪತ್ರ ಬರೆದು ಇಂಥ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಕೋರಿದ್ದೇನೆ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಮೊದಲು ಕಾರ್ಯಕ್ರಮ ಮಾಡಲಾಗಿದೆ.ಇದು ಕೇವಲ ಈ ಸಭೆಗಷ್ಟೇ ಸೀಮಿತವಾಗಬಾರದು. ಇದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಸಮಾಜದ ಇನ್ನಿತರರಿಗೆ ಈ ಬಗ್ಗೆ ಅರಿವು ಮೂಡಿಸುವ ಜನಾಂದೋಲನವಾಗಬೇಕು. ಇಲ್ಲಿ ಪಾಲ್ಗೊಳ್ಳುವ ಆಯುರ್ವೇದ, ಆಲೋಪತಿ ವೈದ್ಯರುಗಳ, ಯೋಗ ಶಿಕ್ಷಕರ ಅನುಭವ,ಅನಿಸಿಕೆಗಳನ್ನು ಅಳವಡಿಸಿಕೊಳ್ಳುವ ಇಶ್ಚಾಶಕ್ತಿ ಹೊಂದಬೇಕು ಎಂದರು.
ಡಾ|ಶ್ರೀಧರ ವೈದ್ಯ, ಡಾ|ರೂಪಾ ಭಟ್ ರೋಗ ನಡವಳಿಕೆ, ಆರೋಗ್ಯ ಪದ್ಧತಿಯ ಮೂಲಕ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಕುರಿತಂತೆ, ಯೋಗ ಶಿಕ್ಷಕ ಮಂಜುನಾಥ ನಾಯ್ಕ ಯೋಗ, ಪ್ರಾಣಾಯಾಮದಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಕುರಿತಂತೆ ಮಾತನಾಡಿದರು.
ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಅಧ್ಯಕ್ಷತೆವಹಿಸಿದ್ದರು. ತಹಸೀಲದಾರ್ ಪ್ರಸಾದ ಎಸ್.ಎ. ಪ್ರಾಸ್ತಾವಿಕ ಮಾತನಾಡಿದರು. ತಾಪಂ ಮುಖ್ಯಾಧಿಕಾರಿ ಪ್ರಶಾಂತರಾವ್, ಆರೋಗ್ಯಾಧಿಕಾರಿ ಡಾ|ಲಕ್ಷ್ಮೀಕಾಂತ ನಾಯ್ಕ, ಪಿ.ಐ. ಕುಮಾರ ವೇದಿಕೆಯಲ್ಲಿದ್ದರು. ಅಂಬಿಕಾ ಹಾಗೂ ದೀಪಾ ಹೆಗಡೆ ಪ್ರಾರ್ಥಿಸಿದರು. ಹರೀಶ ನಾಯ್ಕ ಸ್ವಾಗತಿಸಿದರು. ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ವಂದಿಸಿದರು. ಎಂ.ಆರ್.ಭಟ್ಟ ನಿರೂಪಿಸಿದರು.

About the author

Adyot

Leave a Comment