ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬರ ಗ್ರಾಮಪಂಚಾಯತ ವ್ಯಾಪ್ತಿಯ ನದಿಬಾಗ ಹಾಗೂ ಸುತ್ತಮುತ್ತಲ ಗ್ರಾಮದ ಸುಮಾರು 38 ಮನೆಗಳಿಗೆ ನೀರು ನುಗ್ಗಿದ್ದು ಜನರು ಅತಂತ್ರರಾಗಿದ್ದಾರೆ.
ಕಳೆದ ಮೂರು-ನಾಲ್ಕು ದಿನದಿಂದ ಉತ್ತರಕನ್ನಡದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಶುಕ್ರವಾರ ಬೆಳಿಗ್ಗೆಯಿಂದಲೇ ಅಂಕೋಲಾ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ.
ರಾತ್ರಿ 8 ಗಂಟೆಯಿಂದ ಬೆಳಂಬರ ಗ್ರಾಪಂ ವ್ಯಾಪ್ತಿಯ ಸುಮಾರು 38 ಮನೆಗಳಿಗೆ ನೀರು ನುಗ್ಗಲು ಪ್ರಾರಂಭಿಸಿದೆ.
ಜನರ ವಸ್ತುಗಳು ನೀರ ಪಾಲಾಗಿದ್ದು ಉಳಿದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಷಯ ತಿಳಿದ ತಹಸೀಲ್ದಾರ ಉದಯ ಕುಂಬಾರ, ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪರಶುರಾಮ್ ಸಾವಂತ ಗ್ರಾಮ ಲೆಕ್ಕಾಧಿಕಾರಿ ರವೀಂದ್ರ ಬಾಬು, ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ, ತಕ್ಷಣವೇ ಸ್ಥಳಕ್ಕೆ ಧಾವಿಸಿ 38 ಮನೆಗಳ ಒಟ್ಟು 65ಜನರನ್ನು ಬೆಳಂಬರ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ ಹಾಗೂ ಅವರಿಗೆ ಅವಶ್ಯಕ ಆಹಾರ ಪೂರೈಸಲು ಸಂತ್ರಸ್ತ ಕೇಂದ್ರವನ್ನು ತೆರೆಯಲಾಗಿದೆ.