ಮೂರು ಬಾರಿ ಗುಜರಾತಿನ ಮುಖ್ಯಮಂತ್ರಿಗಳಾಗಿ, ರಾಜ್ಯದ ಆಡಳಿತ ಸುಧಾರಣೆಗೆ ಅವರು ತೆಗೆದುಕೊಂಡ ದಿಟ್ಟ ಕ್ರಮಗಳು ಅನುಕರಣೀಯ. ರಾಜ್ಯದ ಅಭಿವೃದ್ಧಿಗೆ ಭದ್ರವಾದ ಅಡಿಪಾಯ ಹಾಕಿದ್ದಷ್ಟೇ ಅಲ್ಲ, ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳ್ಳುವಂತಹ ವ್ಯವಸ್ಥೆಯನ್ನು ರೂಪಿಸಿದ ಪಕ್ಕಾ ಕೆಲಸಗಾರ ನಮೋ. ಎಲ್ಲ ವಿರೋಧಗಳನ್ನೂ ಎದುರಿಸಿದರೂ ಕೂಡಾ, ಧೃತಿಗೆಡದೆ ಸಾಮಾಜಿಕ ಚಿಂತನೆಯೊಂದಿಗೆ ಹಾಗೂ ಅಭಿವೃದ್ದಿಯ ಸ್ಪಷ್ಟ ಕಲ್ಪನೆಯೊಂದಿಗೆ, ದೂರದರ್ಶಿತ್ವದೊಂದಿಗೆ ಒಬ್ಬ ಮುತ್ಸದ್ದಿ ರಾಜಕೀಯ ನೇತಾರನಾಗಿ ಹೊರಹೊಮ್ಮಿದ್ದು; ಹಾಗೂ ಇದೇ ಕಾರಣಕ್ಕೆ ಸಹಜವಾಗಿ 2014ರಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಬಲ್ಲ ರೀತಿಯಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದು ಮೋದಿಜೀ ವೈಶಿಷ್ಟ್ಯ.
2014ರಲ್ಲಿ ಭ್ರಮನಿರಸನಗೊಂಡು ಕುಳಿತಿದ್ದ ದೇಶವಾಸಿಗಳ ಮನದಲ್ಲಿ ಹೊಸ ಭರವಸೆಯನ್ನು ಮೂಡಿಸಿದ ನಾಯಕ, ದೇಶದ ಉದ್ದಗಲಕ್ಕೂ ಸಂಚರಿಸಿ ಬಹುದೊಡ್ಡ ಜನಾದೇಶವನ್ನು ಬಿಜೆಪಿಗೆ ದೊರಕಿಸಿಕೊಟ್ಟ ಸ್ಟಾರ್ ಕ್ಯಾಂಪೇನರ್ ಚಾಯ್ ವಾಲಾ ಮೋದಿಜೀ. ತಮ್ಮ ನಾಯಕತ್ವದ ಜೊತೆಗೆ ಬದಲಾಗುತ್ತಿರುವ ಶ್ರೇಷ್ಠ ಭಾರತದ ಕಲ್ಪನೆಯನ್ನು ಬಿತ್ತಿದ್ದು ಮಾತ್ರವಲ್ಲ – ಅದು ಜನರನ್ನು ಮುಟ್ಟುವಂತೆ ಮಾಡಿದ್ದು, ಬದಲಾವಣೆಯು ಕೇವಲ ರಾಜಕೀಯ ಕಾರಣಕ್ಕಾಗಿಯೋ ಅಥವಾ ಕಾಂಗ್ರೆಸ್ ಬೇಡ ಎಂಬ ಕಾರಣಕ್ಕಾಗಿಯೋ ಅಲ್ಲ, ಹೊರತಾಗಿ ಶ್ರೇಷ್ಠ ಭಾರತವನ್ನಾಗಿಸಲು ಬಿಜೆಪಿ ಎಂಬ ಧನಾತ್ಮಕ ಚಿಂತನೆಯನ್ನು ಜನರ ಮನಸ್ಸಿಗೆ ತಲುಪಿಸಿದ್ದು; ಜನತೆಗೆ ಕೊಟ್ಟ ಭರವಸೆಗಳನ್ನು ಸಾಕಾರಗೊಳಿಸುತ್ತ, ಸರಕಾರ ಹಾಗೂ ಪಾರ್ಟಿಯ ಮೇಲಿನ ಜನರ ವಿಶ್ವಾಸವನ್ನು ಹೆಚ್ಚಿಸಿಕೊಂಡು 2019ರಲ್ಲಿ ಮತ್ತೊಮ್ಮೆ ಅಭೂತಪೂರ್ವ ವಿಜಯದೊಂದಿಗೆ ಭಾರತದ ಆಡಳಿತದ ಚುಕ್ಕಾಣಿ ಹಿಡಿದ ಚೌಕೀದಾರ ನರೇಂದ್ರ ದಾಮೋದರದಾಸ್ ಮೋದಿ! ಸಪ್ಟೆಂಬರ್ 17ರಂದು 70ರ ವಸಂತಕ್ಕೆ ಕಾಲಿಡುತ್ತಿರುವ ಮೋದಿಯವರದ್ದು ತಾನೊಬ್ಬ ಪ್ರಧಾನ ಸೇವಕ ಎಂಬ ಭಾವ, ಅವರ ಈ ಸಮರ್ಪಣಾ ಭಾವವೇ ಇಂದು ಮೋದಿಜೀಯವರಿಗೆ ವ್ಯಾಪಕ ಜನಮನ್ನಣೆಯು ದೊರಕುವಂತೆ ಮಾಡಿದೆ – ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ!
2014ರಲ್ಲಿ ಮೊದಲ ಬಾರಿಗೆ ಅಧಿಕಾರ ದೊರೆತು ಸಂಸತ್ ಭವನವನ್ನು ಪ್ರವೇಶಿಸುವಾಗ, ಅತ್ಯಂತ ವಿನಮೃತೆಯಿಂದ ಪ್ರಜಾಪ್ರಭುತ್ವದ ದೇಗುಲದ ಮೆಟ್ಟಿಲುಗಳಿಗೆ ನಮಸ್ಕರಿಸಿದವರು ಮೋದಿಜೀ. ಜನರ ಆಶೋತ್ತರಗಳಿಗೆ ಉತ್ತರದಾಯಿ ತಾನೆಂಬ ಕಾರಣವರಿತು ಸಾಮಾಜಿಕ ಸುಧಾರಣೆ, ಆರ್ಥಿಕ ಸುಧಾರಣೆಗೆ ಕ್ರಮಗಳು, ಆಡಳಿತಾತ್ಮಕ ವ್ಯವಸ್ಥೆಯ ಸರಳೀಕರಣ ಹಾಗೂ ಅಂತರಾಷ್ಟ್ರೀಯವಾಗಿ ಭಾರತದ ಸ್ಥಾನಮಾನ ವೃದ್ಧಿಸುವಂತೆ ನೋಡಿಕೊಳ್ಳುವುದರ ಜೊತೆಗೆ ನೆರೆರಾಷ್ಟ್ರಗಳ ಕಿರುಕುಳಕ್ಕೆ ಉತ್ತರ ಕೊಡುವ ದಿಟ್ಟತನ ತೋರಿದವರು ನಮೋ.
ಜಾಗತಿಕವಾಗಿ ಯಾವುದೋ ಕೆಲವು ದೇಶಗಳ ಸಣ್ಣ ಗುಂಪಿಗೆ ಸಿಲುಕದೇ, ಭಾರತದ ಹಿತವನ್ನು ಮನದಲ್ಲಿರಿಸಿಕೊಂಡು ಯಾವ – ಯಾವ ರಾಷ್ಟ್ರದೊಂದಿಗೆ ಯಾವ ರೀತಿಯ ಸಂಬಂಧನ್ನು ಬೆಳೆಸಿಕೊಳ್ಳಬೇಕೆಂಬ ಚಿಂತನೆಯೊಂದಿಗೆ ವಿಶ್ವದಾದ್ಯಂತ ಪ್ರವಾಸ ಮಾಡಿರುವಂತದ್ದು ನಮಗೆಲ್ಲ ತಿಳಿದೇ ಇದೆ. ಜೊತೆಗೆ ಜಾಗತಿಕ ಸಮಸ್ಯೆಗಳಿಗೆ ಭಾರತದ ನಿಲುವು ಏನೆಂಬುದನ್ನು ಸ್ಪಷ್ಟ ಪ್ರತಿಪಾದನೆ ಮಾಡಿ ಮುನ್ನಡೆದಿರುವ ಕಾರಣದಿಂದಾಗಿ, ಇದುವರೆಗೆ ನಮ್ಮೆಡೆಗೆ ತಿರುಗಿ ನೋಡದಿದ್ದ ದೇಶಗಳಿಂದು ಭಾರತದ ಕಡೆಗೆ ಗಮನಕೊಡಲಾರಂಭಿಸಿವೆ. ವಿಶ್ವದ ಸಮಸ್ಯೆಗಳಿಗೆ ಭಾರತ ಸೂಚಿಸುವ ಪರಿಹಾರ ಮಾರ್ಗವೇನೆಂದು ತಿಳಿಯಲು ಜಗತ್ತು ಇಂದು ಕಾಯುತ್ತದೆ, ಮತ್ತು ಈ ಕಾರ್ಯಸಾಧಿಸಿ ಮೋದಿಜೀ ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಯಶಸ್ವೀ ವಿದೇಶಾಂಗ ನೀತಿಯು ಅಧ್ಯಯನ ಯೋಗ್ಯವೆಂದು ವ್ಯಾಖ್ಯಾನಿಸಿದರೆ ಮೋದಿಯವರ ವಿದೇಶ ಪ್ರವಾಸವನ್ನು ಟೀಕೆಮಾಡಿದ್ದ ರಾಜಕೀಯ ವಿರೋಧಿಗಳು ಮೆಲ್ಲಗೆ ತಮ್ಮ ಬಿಲಗಳನ್ನು ಸೇರಿಕೊಳ್ಳಬಹುದು.
ನೆರೆಯ ದೇಶಗಳ ಗಡಿ ತಂಟೆಗಳಿಗೆ ಬಗ್ಗದೇ, ನಮ್ಮ ನಿಲುವನ್ನು ಜಾಗತಿಕ ವೇದಿಕೆಗಳಲ್ಲಿ ಕೂಡಾ ಸ್ಪಷ್ಟ ಪಡಿಸುವುದರ ಜೊತೆಗೆ ನಮ್ಮ ಸೇನೆಯ ಸ್ಥೈರ್ಯವನ್ನು ಹೆಚ್ಚಿಸಿರುವ ಕಾರ್ಯವೂ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯ ಸರ್ಕಾರದಿಂದಲೇ ಆಗಿದೆ. ಬೆಳ್ಳಂಬೆಳಗ್ಗೆ ಲೇಹ್‍ನತ್ತ ಪ್ರಯಾಣ ಬೆಳೆಸಿದ ನಮೋ, 11,000 ಅಡಿ ಎತ್ತರದ ಪರ್ವತ ಶ್ರೇಣಿ ನಿಮುವಿನಲ್ಲಿ ಸೈನಿಕರನ್ನುದ್ದೇಶಿಸಿ ಆಡಿದ ಮಾತುಗಳು, ದೇಶವಾಸಿಗಳಿಗೆ ಅಭಿಮಾನ – ಹೆಮ್ಮೆಯೆನಿಸಿದರೆ; ಅತ್ತ ನೆರೆಯ ಚೀನಾಗೆ ಯಾವ ಸಂದೇಶವನ್ನು ರವಾನಿಸಬೇಕೋ ಆ ಸಂದೇಶವನ್ನು ಮುಟ್ಟಿಸಿವೆ! ಇನ್ನು ನರೇಂದ್ರ ಮೋದಿಯವರ ಶಬ್ಧಗಳಿಗೆ ಇರುವ ಶಕ್ತಿ : ಅವರ ಸಮಾವೇಶಗಳು ಲಕ್ಷ-ಲಕ್ಷ ಸಂಖ್ಯೆಯಲ್ಲಿ ಜನಸಾಗರವು ಹರಿದು ಬರುವಂತೆ ಮಾಡುತ್ತವೆ, ಚುನಾವಣಾ ಸಮಾವೇಶಗಳಲ್ಲಿನ ಮಾತಿನ ಮೊನಚು ವಿರೋಧಿಗಳನ್ನು ಕಂಗೆಡಿಸುತ್ತವೆ, ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳು ಮತ್ತು ಹೊಸ-ಹೊಸ ಯೋಜನೆಗಳನ್ನು ಜನಭಾಗೀದಾರಿಯೊಂದಿಗೆ ನಮೋ ತಲುಪಿಸಿದ ರೀತಿ ಅನನ್ಯ, ಮತ್ತು ಸಾಮಾಜಿಕ ಜವಾಬ್ಧಾರಿಗಳ ಕುರಿತಾಗಿ ಮೋದಿಯವರ ಮಾತುಗಳು ಮೋಡಿ ಮಾಡದಿರದು. ಮನ್ ಕಿ ಬಾತ್ ನಂತಹ ಸರಳ ಸಂವಹನದ ವೇದಿಕೆಯ ಮೂಲಕ ಕೋಟಿ – ಕೋಟಿ ಜನರೊಂದಿಗೆ ನಿರಂತರ ಸಂವಹನ ಮೋದಿಯವರಿಂದ ಸಾಧ್ಯವಾಗಿದೆ.
‘ದಿಟದಿ ನಾವು ಅಳಿಸಬೇಕು ನುಡಿಯ ನಡೆಯ ಅಂತರ’ ಎಂಬ ಸಾಲುಗಳಿಗೆ ಅನ್ವರ್ಥದಂತೆ ನಡೆಯುತ್ತಿರುವವರು ನರೇಂದ್ರ ಮೋದಿ; ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿಗಳು ನೀಡಿದ ಸ್ವಚ್ಛ ಭಾರತದ ಕರೆ ಇಂದು ದೊಡ್ಡ ಅಭಿಯಾನವಾಗಿದೆ, ಯಾವುದೇ ಹಮ್ಮು – ಬಿಮ್ಮುಗಳಿಲ್ಲದೆ ಸ್ವತಃ ತಾವೇ ಸ್ವಚ್ಛತಾ ಕಾರ್ಯಕ್ಕಾಗಿ ಪೊರಕೆ ಹಿಡಿದಿದ್ದಾರೆ, ಶೌಚಾಲಯ ನಿರ್ಮಾಣಕ್ಕೆ ತಾವೇ ಟಾಪಿ ಹಿಡಿದು ಸಿಮೆಂಟು ಹಾಕಿದ್ದಾರೆ. ಹಿಂದೊಮ್ಮೆ ಪುಸ್ತಕವೊಂದನ್ನು ಬಿಡುಗಡೆ ಮಾಡುವಾಗ ಮೇಲಿನ ತಿಳಿಹಾಳೆಯನ್ನು ಬಿಸಾಡಿದರೆ ವೇದಿಕೆಯಲ್ಲಿ ಕಸವಾದೀತೆಂದು ಮೆಲ್ಲನೆ ತನ್ನದೇ ಉಡುಪಿನ ಕಿಸೆಗೆ ತುರುಕಿದ್ದಾರೆ. ಒಬ್ಬ ನಾಯಕನನ್ನು ಜನರು ಇಷ್ಟಪಡಲು, ಅನುಸರಿಸಲು ಇಂತಹ ಅನೇಕ ಸಂದರ್ಭಗಳನ್ನು ಉಲ್ಲೇಖಿಸಬಹುದು, ಹಾಗೂ ಮೋದಿಯವರು ಅಷ್ಟರಲ್ಲೇ ಇನ್ಯಾವುದೋ ಮಾದರಿ ನಡೆಗಾಗಿ ಜನಕ್ಕೆ ಇನ್ನಷ್ಟು ಆಪ್ತವಾಗಿರುತ್ತಾರೆ. ತಮ್ಮ ಸಂಬಳದ ಬಹುಪಾಲನ್ನು, ತಮಗೆ ದೊರೆತ ಪುರಸ್ಕಾರಗಳ ಮೊತ್ತವನ್ನು, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ಮಾಡಿ ಮೋದಿ ಮುಂದೆ ಸಾಗಿರುತ್ತಾರೆ. ಪದವಿಗೆ ಅಂಟಿಕೊಳ್ಳದೇ ಅಚ್ಚರಿ ಮೂಡಿಸುತ್ತಾರೆ.
ದೇಶ ಮೊದಲು ಎಂಬುದು ಕೇವಲ ಘೋಷಣೆಯಾಗಿ ಉಳಿದಿಲ್ಲ, ಮೋದಿಯವರ ಬಿಜೆಪಿ ಸರ್ಕಾರದಲ್ಲಿ ಅದು ಸಾಕಾರಗೊಳ್ಳುತ್ತಿರುವುದು ಜನರ ಅನುಭವಕ್ಕೆ ಬರುತ್ತಿದೆ. ಕಳೆದ ಕೆಲ ದಶಕಗಳಲ್ಲಿ ಸೇನೆಯ ಶಕ್ತಿಯನ್ನು ಹೆಚ್ಚಿಸುವಂತಹ ಪ್ರಾಮಾಣಿಕ ಪ್ರಯತ್ನವಾಗಿರಲಿಲ್ಲ. ಸೇನೆಗೆ ಬೇಕಿರುವ ಅಗತ್ಯ ಶಸ್ತ್ರಾಸ್ತ್ರಗಳ ಪೂರೈಕೆಗೆ ಕ್ರಮ ಕೈಗೊಂಡಿರುವುದರಿಂದ, ಮತ್ತು ರಕ್ಷಣಾ ವೆಚ್ಚವನ್ನು ಆದ್ಯತೆಯಾಗಿ ಪರಿಗಣಿಸಿ – ಅತ್ಯಂತ ಪಾರದರ್ಶಕವಾಗಿ ರಾಫೆಲ್ ಖರೀದಿಗೆ ಮಾಡಿಕೊಂಡ ಒಪ್ಪಂದಗಳನ್ನು ಜನರು ಒಪ್ಪಿದ್ದಾರೆ. ದೇಶೀಯವಾಗಿ ರಕ್ಷಣಾ ಉಪಕರಣಗಳ ತಯಾರಿಕೆಗೆ, ತಂತ್ರಜ್ಞಾನ ಅಭಿವೃದ್ಧಿಗೆ ಬಾರತವು ಇಂದು ಇಡುತ್ತಿರುವ ಹೆಜ್ಜೆಗಳು – ಮೇಕ್ ಇನ್ ಇಂಡಿಯಾದಿಂದ – ಮೇಡ್ ಇನ್ ಇಂಡಿಯಾದತ್ತ ಸಾಗುವ ನಮ್ಮ ದೂರಗಾಮಿ ಲಕ್ಷ್ಯಕ್ಕೆ ಮೆಟ್ಟಿಲುಗಳಾಗಿ ಪರಿಣಮಿಸುತ್ತಿವೆ. ನೂರಾಮೂವತ್ತೈದು ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೋವಿಡ್-19 ಸಂದರ್ಭದಲ್ಲಿ ನಮೋ ಸರ್ಕಾರ ಕೈಗೊಂಡ ಕ್ರಮಗಳು, ಮತ್ತು ಲಾಕ್ ಡೌನ್ ಸಮಯದಲ್ಲಿ ಜನಸಾಮಾನ್ಯರ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿರುವುದು, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನೂ ಜೊತೆಗೆ ತೆಗೆದುಕೊಂಡು ಹೋಗುವುದರಲ್ಲಿ ಸಫಲವಾಗಿರುವುದು – ಇವೆಲ್ಲವೂ ಸಾಧ್ಯವಾಗಿದೆ.
ಆತ್ಮ ನಿರ್ಭರ ಭಾರತ : ಇಷ್ಟೆಲ್ಲದರ ನಡುವೇ ಭಾರತವು ಸ್ವಾವಲಂಭಿಯಾಗಿ, ಸದೃಢವಾಗಿ ಎದ್ದು ನಿಲ್ಲಬೇಕೆಂದರೆ, ದೇಶೀಯ ಉತ್ಪನ್ನಗಳ ಬಳಕೆ ಹೆಚ್ಚಬೇಕು, ಸ್ಥಳೀಯವಾಗಿ ಉತ್ಪಾದನೆಯಾದ ವಸ್ತುಗಳಿಗೆ ಮನ್ನಣೆ ದೊರಕಬೇಕು, ಅವುಗಳ ಮೌಲ್ಯವರ್ಧನೆಯಾಗಿ, ಮಾರುಕಟ್ಟೆ ದೊರಕಬೇಕೆಂದು ಆತ್ಮ ನಿರ್ಭರ ಭಾರತದ ಕಲ್ಪನೆಯನ್ನು ಜನತೆಯ ಎದುರು ಪ್ರಸ್ತಾಪಿಸಿದರು. ಬಿ ವೋಕಲ್ ಫಾರ್ ಲೋಕಲ್ ಎಂದು ಮಾರ್ಮಿಕವಾಗಿ ಕರೆ ನೀಡಿದರು. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರದ ಜಿಡಿಪಿಯ 10% ಅಂದರೆ, 20 ಲಕ್ಷ ಕೋಟಿಯ ಬೃಹತ್ ಆರ್ಥಿಕ ಪುನಶ್ಚೇತನದ ಪ್ಯಾಕೇಜ್ ಅನ್ನು ಘೋಷಿಸಿದರು, ಹಾಗೂ ತ್ವರಿತವಾಗಿ ಅನುಷ್ಠಾನಗೊಳ್ಳುವಂತೆ ಸಮರೋಪಾದಿಯಲ್ಲಿ ಕ್ರಮಗಳಾದವು. ಎಂಎಸ್‍ಎಂಇ ಸೆಕ್ಟರಿಗೆ, ಬ್ಯಾಂಕ್ ಹೊರತಾದ ಆರ್ಥಿಕ ಸಂಸ್ಥೆಗಳಿಗೆ, ಗೃಹ ನಿರ್ಮಾಣ ಆರ್ಥಿಕ ಸಂಸ್ಥೆಗಳಿಗೆ ನೆರವು, ರೈತರಿಗೆ, ಮೀನುಗಾರರು, ಪಶುಸಂಗೋಪನೆಯಲ್ಲಿ ತೊಡಗಿದವರು, ವಲಸೆ ಕಾರ್ಮಿಕರಿಗೆ, ಉದ್ಯೋಗ ಖಾತ್ರಿ ಕೆಲಸಗಾರರಿಗೆ, ತಂತ್ರಜ್ಞಾನ ಆದಾರಿತ ಶಿಕ್ಷಣ ವ್ಯವಸ್ಥೆಗೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ, ರಕ್ಷಣೆ, ನಾಗರಿಕ ವಿಮಾನಯಾನ – ಹೀಗೆ ಸರ್ವಸ್ಪರ್ಷಿ – ಸರ್ವವ್ಯಾಪಿಯಾದ ಬೃಹತ್ ಆರ್ಥಿಕ ನೆರವನ್ನು ನೀಡಲು ಅತ್ಯಂತ ಕಷ್ಟದ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಾಧ್ಯವಾಗುತ್ತದೆಯೆಂದರೆ, ನಾಯಕತ್ವಕ್ಕೆ ನಮೋ ಎನ್ನಲೇ ಬೇಕಲ್ಲವೇ!?
ನವಭಾರತ ನಿರ್ಮಾಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ : ಇಂದಿನ ಕಾಲಮಾನಕ್ಕೆ ತಕ್ಕದಾದ ಹಾಗೂ ಇಂದಿನ ಅವಶ್ಯಕತೆಗಳಿಗೆ ಪೂರಕವಾದ, ಯುವಜನತೆಯ ಆಶೋತ್ತರಗಳನ್ನು ಈಡೇರಿಸಬಲ್ಲ, ಜ್ಞಾನಾರ್ಜನೆಯ ಜೊತೆಗೆ ಅವರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ನೆರವಾಗಬಲ್ಲ ಆಯ್ಕೆಯಿರುವಂತಹ ಶಿಕ್ಷಣ ನೀತಿಯ ಅಗತ್ಯವನ್ನು ಮನಗಂಡು ಈ ಹೊಸ ಶಿಕ್ಷಣ ಕ್ರಮವನ್ನು ಜಾರಿಗೆ ತರಲಾಗಿದೆ. ಯುವಜನತೆಯಲ್ಲಿರುವ ಪ್ರಶ್ನೆ ಕೇಳುವ ಮನೋಭಾವ, ಕುತೂಹಲ, ಸೃಜನಶೀಲತೆ ಹಾಗೂ ಅನ್ವೇಷಣೆಯ ಮನೋಭಾವ ಇವುಗಳನ್ನೆಲ್ಲ ಪ್ರೋತ್ಸಾಹಿಸುವ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಲ್ಲಿಯೂ ದಿಟ್ಟತನವೇ ಗೋಚರವಾಗಿದೆ. ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿರಂತರವಾಗಿ ಜನರೊಂದಿಗೆ, ಶಿಕ್ಷಣ ತಜ್ಞರೊಂದಿಗೆ ಸಂವಹನ, ಚರ್ಚೆಯನ್ನು ನಡೆಸಿಯೂ – ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿರುವುದು ಈ ಸರ್ಕಾರದ ವೃತ್ತಿಪರತೆಯ ಸೂಚಕವೂ ಹೌದು.
ವಿಶ್ವ ನಾಯಕ : ಕಳೆದ ವರ್ಷ ಯುನೈಟೆಡ್ ನೇಶನ್ಸ ಜನರಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮೋದಿಜೀ ಮಾಡಿದ ಭಾಷಣದಿಂದ ‘ವಿಶ್ವ ಭ್ರಾತೃತ್ವ – ವಸುದೈವ ಕುಟುಂಬಕಂ’ ಎಂಬ ಭಾರತೀಯ ಆದರ್ಶದ ಚಿಂತನೆಯ ಅನಾವರಣವೂ ಆಗಿತ್ತು. ವಿಶ್ವದಲ್ಲಿ ಶಾಂತಿ ಹಾಗೂ ಸೌಹಾರ್ಧ ಭಾವ ಜಾಗೃತವಾಗಲೆಂಬ ಮೋದಿಯವರ ಆಶಯಕ್ಕೆ ಜಾಗತಿಕ ನಾಯಕರು ಮೆಚ್ಚುಗೆಯ ಮಾತನಾಡಿರುವುದು ಒಂದೆಡೆಯಾದರೆ, ವೈಚಾರಿಕ ಭಿನ್ನತೆಯನ್ನು ಹೊಂದಿರುವ – ಅನ್ಯ ಪಕ್ಷಗಳ ಅನೇಕ ಭಾರತೀಯ ನಾಯಕರೂ ಕೂಡಾ ನಮೋ ಚಿಂತನೆಗೆ ತಲೆದೂಗಿದ್ದರು. ಅನವರತ ರಾಷ್ಟ್ರಹಿತವನ್ನೇ ಲಕ್ಷ್ಯವಾಗಿರಿಕೊಂಡು, ದಣಿವರಿಯದೇ ಭಾರತವನ್ನು ವಿಶ್ವಗುರುವಾಗಿಸಲು ಶ್ರಮಿಸುತ್ತಿರುವ ನರೇಂದ್ರ ಮೋದಿಯವರು ಜಾಗತಿಕ ನೇತಾರರೆಂಬುದು ದಿಟ.
“ಜನುಮ ದಿನದಂದು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರಿಗೆ ಆತ್ಮೀಯ ಶುಭ ಹಾರೈಕೆಗಳು.”
“ಜೈ ಹಿಂದ್.”
– ಗುರುಪ್ರಸಾದ ಹೆಗಡೆ ಹರ್ತೆಬೈಲ್,
ಜಿಲ್ಲಾ ಕಾರ್ಯದರ್ಶಿ, ಬಿಜೆಪಿ ಉತ್ತರ ಕನ್ನಡ
***************************************
**********************************
**********************************
**********************************
***********************************
👍
Covered all .Very Nice Writings .ಅತ್ಯುತ್ತಮ ವಿಷಯ ಸಂಗ್ರಹ ಆಧಾರಿತ ಬರಹ .
Very good article Sir. Happy birthday Modi ji.