ಅದ್ಯೋತ್ ಪ್ರವಾಸಿ ಡೆಸ್ಕ್ : ಸುಂದರವಾದ ದಟ್ಟ ಕಾನನದ ನಡುವೆ ಕಲ್ಲುಬಂಡೆಗಳಿಂದಲೇ ನಿರ್ಮಿತವಾದಂತಿರೋ ಅಲಯದಲ್ಲಿ ಕಂಗೊಳಿಸುತ್ತಿರೋ ಶಿವಲಿಂಗ, ಎದುರುಗಡೆ ಕಲ್ಲಿನ ಮಂಟಪದಲ್ಲಿ ಕುಳಿತಿರೋ ಕಲ್ಲಿನ ಬಸವ, ಆಲಯದ ಪಕ್ಕದಲ್ಲಿ ಕಲ್ಲುಬಂಡೆಗಳಿಂದ ಧುಮ್ಮಿಕ್ಕಿ ಅದ್ಭುತ ಜಲಪಾತವನ್ನು ಸೃಷ್ಟಿಸಿರೋ ಸರಳಾ ನದಿ.. ಇಂತಹ ಒಂದು ಸೃಷ್ಟಿಯ ಸುಂದರ ನಿರ್ಮಾಣದ ಸ್ಥಳವೇ ‘ಭೀಮೇಶ್ವರ’.
ಇತಿಹಾಸ : ಭೀಮೇಶ್ವರ ದೇವಾಲಯ ಕರ್ನಾಟಕದ ಅತಿ ಪುರಾತನ ದೇಗುಲಗಳಲ್ಲೊಂದು. ಭೀಮೇಶ್ವರ ದೇವಾಲಯವನ್ನು ದ್ವಾಪರಯುಗದ ಮಹಾಭಾರತದ ಭೀಮ ನಿರ್ಮಿಸಿದನೆಂಬ ಪ್ರತೀತಿ ಇದೆ. ಅಜ್ಞಾತವಾಸದ ಕಾಲದಲ್ಲಿ ಧರ್ಮರಾಯನ ಅಪ್ಪಣೆಯಂತೆ ಶಿವರಾತ್ರಿಯ ದಿನ ಭೀಮನು ಶಿವನ ಲಿಂಗವನ್ನು ತಂದು ಈ ಪ್ರದೇಶದಲ್ಲಿ ಸ್ಥಾಪಿಸಿ ಕಲ್ಲಿನ ಮಂಟಪವನ್ನು ನಿರ್ಮಾಣ ಮಾಡಿದ್ದನು. ಭೀಮನು ಶಿವಲಿಂಗವನ್ನ ಸ್ಥಾಪಿಸಿದ್ದರಿಂದ ಈ ಸ್ಥಳಕ್ಕೆ ಭೀಮೇಶ್ವರ ಅನ್ನೋ ಹೆಸರು ಬಂತು. ಈ ಪ್ರದೇಶ ಕಲ್ಲುಬಂಡೆಗಳಿಂದಲೇ ಆವೃತ್ತವಾಗಿದ್ದರಿಂದ ನೀರಿನ ಸೆಲೆಯೇ ಇರಲಿಲ್ಲ. ಶಿವಲಿಂಗಕ್ಕೆ ಅಭಿಷೇಕ ಮಾಡಲು ನೀರಿನ ಅವಶ್ಯಕತೆ ಎದುರಾಯಿತು. ಆಗ ಅರ್ಜುನನು ಕಲ್ಲು ಬಂಡೆಗೆ ತನ್ನ ಬಾಣ ಪ್ರಯೋಗ ಮಾಡಿದಾಗ ಸರಳೆಯು ನದಿಯ ರೂಪದಲ್ಲಿ ಹರಿಯಲಾರಂಭಿಸಿದಳು ಅನ್ನೋ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೆ ಸರಳಾ ನದಿಯ ನೀರು ಬತ್ತದೇ ಇರೋದು ವಿಶೇಷ.
ಈ ಭೀಮೇಶ್ವರ ಕ್ಷೇತ್ರವು ಸಾಗರ ಹಾಗೂ ಭಟ್ಕಳದ ಗಡಿ ಪ್ರದೇಶದಲ್ಲಿದ್ದು, ಸಾಗರ – ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಭೀಮೇಶ್ವರ ಕ್ರಾಸ್ ನಿಂದ ಸುಮಾರು 2 ಕಿಲೋಮೀಟರ್ ಕಡಿದಾದ ರಸ್ತೆಯಲ್ಲಿ ಸಾಗಿದಾಗ ಶ್ರೀ ಕ್ಷೇತ್ರ ಭೀಮೇಶ್ವರ ದರ್ಶನವಾಗುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರೋ ಭೀಮೇಶ್ವರದ ರಸ್ತೆಯಲ್ಲಿ ಸಾಗುವುದು ಒಂದು ಸಾಹಸವೇ ಸರಿ. ಮಳೆಗಾಲದಲ್ಲಿ ಇಲ್ಲಿಗೆ ಹೋಗುವವರು ಜಾಗೃತೆಯಿಂದ ಸಾಗಬೇಕು.
ಹಾಗಿದ್ರೆ ಹೋಗೋದು ಹೇಗೆ?
* ಸಾಗರದಿಂದ ಭಟ್ಕಳ ಹೆದ್ದಾರಿಯಲ್ಲಿ ರಸ್ತೆ ಮಾರ್ಗವಾಗಿ ಸುಮಾರು 68 ಕಿಲೋಮೀಟರ್ ಸಾಗಬೇಕು.
* ಸಿದ್ದಾಪುರದಿಂದ ಜೋಗ ಕಾರ್ಗಲ್ ರಸ್ತೆ ಮಾರ್ಗದಲ್ಲಿ 61 ಕಿಲೋಮೀಟರ್ ಸಾಗಬೇಕು.
* ರೈಲಿನ ಮೂಲಕ ಬರುವವರು ತಾಳಗುಪ್ಪ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಸುಮಾರು 50 ಕಿಲೋಮೀಟರ್ ಸಾಗಬೇಕು.