ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೊವಿಡ್ ಪ್ರಕರಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬುಧವಾರ ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿಯವರು ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ ಉಳ್ಳಾಗಡ್ಡಿಯವರು, ಸಿದ್ದಾಪುರದಲ್ಲಿ ಈಗಾಗಲೇ ಕೊವಿಡ್ ಪ್ರಕರಣ ಪತ್ತೆಯಾಗಿದೆ ಮಹಾರಾಷ್ಟ್ರದ ಥಾಣೆಯಿಂದಸಿದ್ದಾಪುರಕ್ಕೆ ಬಂದಿರುವ ಓರ್ವ ವ್ಯಕ್ತಿಯಲ್ಲಿ ಕೊರೊನಾ ಪಾಸಿಟೀವ್ ಬಂದಿದೆ. ಸಾರ್ವಜನಿಕರು ಭಯಪಡಬೇಕಾದ ಅವಶ್ಯಕತೆ ಇಲ್ಲ. ಆದರೆ ಮುನ್ನೆಚ್ಚರಿಕೆವಹಿಸಬೇಕಾಗಿದೆ. ಸಾಮಾಜಿಕ ಅಂತರದ ಬಗ್ಗೆ ಜನರಲ್ಲಿ ಕಾಳಜಿ ಕಂಡು ಬರುತ್ತಿಲ್ಲ. ಇದು ಅಪಾಯಕಾರಿಯಾಗಿದ್ದು ಜನರು ಎಚ್ಚರಿಕೆವಹಿಸಬೇಕಾಗಿದೆ. ಸಾಮಾಜಿಕ ಅಂತರ ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಎಚ್ಚರಿಸಿದರು.
ಸೇವಾಸಿಂಧು ಮೂಲಕ ಪರವಾನಿಗೆ ಪಡೆದು ಮೇ 17 ರಂದು ಥಾಣೆಯಿಂದ ಹೊರಟು ನಿಪ್ಪಾಣಿಗೆ ಬಂದು ಶಿರಸಿಯ ಮೂಲಕ ಸಿದ್ದಾಪುರಕ್ಕೆ ಮೇ 19ರ ಸಂಜೆ 5 ಗಂಟೆಗೆ ಬಂದು ತಲುಪಿದ್ದ ಈ ವ್ಯಕ್ತಿಯನ್ನು ಅವರ ಪತ್ನಿ, ಇಬ್ಬರು ಗಂಡುಮಕ್ಕಳು ಹಾಗೂ ಓರ್ವ ಮಗಳೊಂದಿಗೆ ಕವಂಚೂರನ ಕಿತ್ತೂರ ರಾಣಿ ಚನ್ನಮ್ಮ ಹಾಸ್ಟೆಲ್‍ನ ಕ್ವಾರಂಟೆನ್ ಕೇಂದ್ರದಲ್ಲಿ ಒಂದೇ ಕೊಠಡಿಯಲ್ಲಿ ಸಾಕಷ್ಟು ಅಂತರದಲ್ಲಿ ಇರಿಸಲಾಗಿತ್ತು. ಇದೀಗ ಅವರ ವೈದ್ಯಕೀಯ ವರದಿ ಪಾಸಿಟೀವ್ ಬಂದಿದ್ದರಿಂದ ಸದರಿ ವ್ಯಕ್ತಿಯನ್ನು ಕಾರವಾರಕ್ಕೆ ಸಕಲ ಮುಂಜಾಗೃತೆಗಳೊಂದಿಗೆ ಕಳಿಸಲಾಗುತ್ತಿದೆ ಎಂದು ಹೇಳಿದರು. ಪಾಸಿಟಿವ್ ಬಂದ ವ್ಯಕ್ತಿಯ ಜೊತೆಗಿದ್ದವರ ವೈದ್ಯಕೀಯ ವರದಿ ದೊರೆಯಬೇಕಾಗಿದೆ. ಸಿದ್ದಾಪುರದ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಒಟ್ಟೂ 149 ಜನರಿದ್ದಾರೆ. 39 ಜನರ ತಪಾಸಣಾ ವರದಿ ಲಭ್ಯವಾಗಿದ್ದು ಎಲ್ಲರದೂ ನೆಗೆಟಿವ್ ಬಂದಿದೆ. 56 ಜನರ ಸ್ಯಾಂಪಲ್ ಕಳಿಸಿದ್ದು ವರದಿ ಬರಬೇಕಿದೆ. ಇನ್ನೂ 110 ಜನರ ಸ್ಯಾಂಪಲ್ ಸಂಗ್ರಹಿಸಿದ್ದು ಅದನ್ನು ತಪಾಸಣೆಗೆ ಕಳಿಸಬೇಕಾಗಿದೆ ಎಂದು ಹೇಳಿದ ಅವರು ಮಹಾರಾಷ್ಟ್ರದಿಂದ 129 ಜನ, ಗುಜರಾತ್, ಡೆಲ್ಲಿ, ಕೇರಳದಿಂದ ತಲಾ ಮೂವರು, ತೆಲಂಗಾಣದಿಂದ 13 ಜನ ತಾಲೂಕಿಗೆ ಬಂದಿದ್ದು ಎಲ್ಲರನ್ನೂ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಓರ್ವ ವ್ಯಕ್ತಿ ವಿದೇಶದಿಂದ ಬರುತ್ತಿದ್ದು ಅವರನ್ನೂ ಕ್ವಾರಂಟೈನ ಮಾಡಲಾಗುತ್ತಿದೆ ಎಂದು ಹೇಳಿದರು. ತಹಸೀಲ್ದಾರ ಮಂಜುಳಾ ಭಜಂತ್ರಿ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಸಿಪಿಐ ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.