ಆದ್ಯೋತ ನ್ಯೂಸ್ ಡೆಸ್ಕ್: ರಾಜ್ಯ ರಾಜಕೀಯವೂ ಕುತೂಹಲ ಮೂಡಿಸುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಹತ್ತಿರವಾಗುತ್ತಿರುವ ಇಬ್ಬರು ಪ್ರಮುಖ ನಾಯಕರು ಮತ್ತಷ್ಟು ಹತ್ತಿರವಾಗಲಿದ್ದಾರೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭಾರಿ ರಾಜಕೀಯ ಬದಲಾವಣೆಯಾಗುವುದರ ಜೊತೆಗೆ ಪ್ರಾದೇಶಿಕವಾಗಿ ಹೊಸ ರಾಜಕೀಯ ಪಕ್ಷ ರಚನೆಯಾಗುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುವ ಎಲ್ಲಾ ಸಾಧ್ಯತೆಗಳಿದ್ದು ಯಾರ ಯಾರ ಅದೃಷ್ಟ ಬದಲಾಗಲಿದೆಯೋ ಹೇಳಲು ಆಗುತ್ತಿಲ್ಲ. ಪರಸ್ಪರ ಕೆಸರೆರೆಚಾಟ ಮಾಡಿಕೊಳ್ಳುತ್ತ ಹಾವು- ಮುಗುಸಿಯಂತೆ ಕಚ್ಚಾಡುತ್ತಿದ್ದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಹತ್ತಿರವಾಗಿದ್ದಾರೆ.
ದೇವೆಗೌಡರು ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ ಎಂಬ ಪುರಾತನ ಸೇಡನ್ನು ಸಾಧ್ಯವಾದಾಗಲೆಲ್ಲ ತೀರಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರು ಕುಮಾರಸ್ವಾಮಿ ಸರಕಾರವನ್ನು ಕೆಡವಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದರು ಎನ್ನುವುದು ಹಳೆಸುದ್ದಿ. ತದನಂತರದಲ್ಲಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ತೆರೆಗೆ ಸರಿಸಲು ನಡೆಯುತ್ತಿರುವ ಪ್ರಯತ್ನದಂತೆ ಕಾಂಗ್ರೇಸ್ ನಲ್ಲಿ ಸಿದ್ದರಾಮಯ್ಯನವರನ್ನು ತೆರೆಗೆ ಸರಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಎರಡೂ ಪಕ್ಷಕ್ಕೂ ಈ ಇಬ್ಬರು ನಾಯಕರು ಅನಿವಾರ್ಯವಾಗಿದ್ದಾರೆ.
ಆದರೆ ಇಬ್ಬರನ್ನು ತೆರೆಗೆ ಸರಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಸುಳ್ಳಲ್ಲ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರಿಗೆ ಮರೆವಿನ ಖಾಯಿಲೆ ಇದೆ ಎಂಬ ಸುದ್ದಿ ಬಿಜೆಪಿಯಲ್ಲೇ ಹರಿಯಬಿಡಲಾಗುತ್ತಿದೆ. ಅವರಿಗೆ ಅವಮಾನ ಮಾಡಬೇಕು, ಅವರು ಆಡಳಿತ ನಡೆಸಲು ವಿಫಲರಾಗಿದ್ದಾರೆ ಎಂದು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿದೆ. ಕೇಂದ್ರ ಸರಕಾರ ತನ್ನದೇ ಪಕ್ಷದ ಮುಖ್ಯಮಂತ್ರಿಗೆ ಕೊಡಬೇಕಾದ ಅನುದಾನ ಕೊಡದೆ ಕಾಟಕೊಡುತ್ತಿದೆ. ಇವೆಲ್ಲವೂ ಮಿತಿಮಿರಿದರೆ ಯಡಿಯೂರಪ್ಪ ಬಿಜೆಪಿಯಿಂದ ಹೊರಬರಲಿದ್ದಾರೆ. ಅದೇರೀತಿ ಕಾಂಗ್ರೇಸ್ ಅಧ್ಯಕ್ಷ ಪದವಿ ಸಿದ್ದರಾಮಯ್ಯ ಗುಂಪಿನಿಂದ ಜಾರಿದೆ. ಆದರೆ ಪ್ರತಿಪಕ್ಷದ ನಾಯಕನ ಸ್ಥಾನ ಅವರ ಕೈಯಲ್ಲಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿದ್ದರೂ ಅವರ ಮನಸ್ಸಿನಲ್ಲಿ ಕಾಂಗ್ರೆಸ್ ವಿರೋಧಿ ಭಾವನೆ ಇದೆ. ಇದರ ಜೊತೆಗೆ ಮೂಲ ಕಾಂಗ್ರೆಸಿಗರು ಸಿದ್ದರಾಮಯ್ಯನವರನ್ನು ಒಪ್ಪುತ್ತಿಲ್ಲ. ಒಂದುವೇಳೆ ಹೈಕಮಾಂಡ್ ಸಿದ್ದರಾಮಯ್ಯನವರನ್ನು ಹಿಡಿತಕ್ಕೆ ತೆಗೆದಕೊಳ್ಳಲು ಹೊರಟರೆ ಅವರು ಸಿಡಿಯುವುದು ಖಂಡಿತ. ಅಂತಹ ಸಮಯದಲ್ಲಿ ಲಿಂಗಾಯತ ಸಮೂಹದ ಯಡಿಯೂರಪ್ಪ ಕುರುಬ ಸಮೂಹದ ಸಿದ್ದರಾಮಯ್ಯನವರ ಸಮ್ಮಿಳನದೊಂದಿಗೆ ಕರ್ನಾಟಕದಲ್ಲಿ ಹೊಸಪಕ್ಷ ರಚನೆಯಾದರೂ ಆಶ್ಚರ್ಯವಿಲ್ಲ.
ದೆಹಲಿ ಚುನಾವಣೆ ಹಲವು ನಾಯಕರಲ್ಲಿ ಹಲವು ರೀತಿಯ ಲೆಕ್ಕಾಚಾರವನ್ನು ಹುಟ್ಟುಹಾಕಿದೆ. ಸಂಘಪರಿವಾರ ಯಾವುದೇ ರೀತಿಯ ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪನವರಿಲ್ಲದೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಅದೇ ರೀತಿ ಕಾಂಗ್ರೇಸ್ ನ ಹಿರಿಯ ಪಳೆಯುಳಿಕೆಗಳು ಏನೇ ಲೆಕ್ಕಾಚಾರ ಹಾಕಿದರೂ ಸಿದ್ದರಾಮಯ್ಯ ಇಲ್ಲವಾದರೆ ಕಾಂಗ್ರೆಸ್ ಅಧಿಕಾರಕ್ಕೆ ಹೋಗಲಿ, ವಿರೋಧ ಪಕ್ಷವಾಗಲೂ ಸಾಧ್ಯವಿಲ್ಲ. ಈ ಹೊಸ ಆಟ ಕುತೂಹಲವಾಗಿದೆ.
S Right thinking