ಸರ್ವಸೇವಕ ಸಮಾವೇಶಕ್ಕೆ ವೇದಿಕೆಯಾದ ಗೋಸ್ವರ್ಗ

ಸಿದ್ದಾಪುರ : ಸೇವಕತ್ವ ಕನಿಷ್ಟವಲ್ಲ, ಮನುಷ್ಯತ್ವಕ್ಕಿಂತ ಮೇಲಿನ ಮೆಟ್ಟಿಲು, ಅದು ಶ್ರೇಷ್ಠ. ನಾನು ನನಗಾಗಿ ಎಂದು ಸಾಮಾನ್ಯರು ಯೋಚಿಸಿದರೆ ದೇವರು ಅನವರತ ವಿಶ್ವಹಿತ ಚಿಂತನೆ ಮಾಡುತ್ತಾನೆ. ಸಾರ್ವಭೌಮನಾದ ಶ್ರೀರಾಮಚಂದ್ರನೂ ತನ್ನ ಬಗ್ಗೆ ಚಿಂತನೆ ನಡೆಸದೇ ಜೀವಕೋಟಿಗಳ ಕಲ್ಯಾಣಕ್ಕಾಗಿ, ಸರ್ವಭೂಮಿಯ ಹಿತಚಿಂತನೆಗಾಗಿ ಕಾರ್ಯ ಮಾಡುತ್ತಾನೆ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.


ಶ್ರೀರಾಮದೇವ ಭಾನ್ಕುಳಿ ಮಠ ಆವಾರದ ಗೋಸ್ವರ್ಗದಲ್ಲಿ ಹಮ್ಮಿಕೊಂಡಿದ್ದ “ಸರ್ವಸೇವಕ ಸಮಾವೇಶ”ದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಸರ್ವಭೂಮಿಯ ಹಿತಚಿಂತನೆ ರಾಮನದಾದರೆ, ಸರ್ವಸೇವಕ ಹಿತ ಚಿಂತನೆ ಹನುಮಂತನದು. ಸೇವಕತ್ವ ದೇವತ್ವಕ್ಕೆ ಹತ್ತಿರ. ಸೇವಾ ಎನ್ನುವಲ್ಲಿ ಸಕಾರಾತ್ಮಕತೆಯಿದೆ, ಸಮರ್ಪಣೆಯಿದೆ. ದೇಶಭಕ್ತಿ, ದೇಶಕ್ಕೆ ಬದ್ಧತೆ ಇರುವವರು ಸೈನಿಕರಾಗಬೇಕು. ಸಮಯ, ಸೌಹಾರ್ದತೆ, ಸಾಮಥ್ರ್ಯ, ಸಹೋದರತೆ ಇರುವವರು ಸೇವಕರಾಗಬೇಕು. ಸೇವಕರಾದವರಿಗೆ ಅರ್ಜುನನ ಏಕಾಗ್ರತೆ, ಗುರಿ ಅಗತ್ಯ. ಶಿಷ್ಯರು ಎಂದೂ ತಬ್ಬಲಿಗಳಲ್ಲ, ಎಂತಹ ಸಂದರ್ಭದಲ್ಲಿಯೂ ನಿಮ್ಮೊಂದಿಗೆ ಗುರುಪೀಠವಿರುತ್ತದೆ. ಕಾರ್ಯಕರ್ತರ ನಡುವೆ ಸೌಹಾರ್ದತೆ ಬೆಳೆಸಲು ಗುರು ತಂತುವಿದೆ. ತಂದೆ-ತಾಯಿ ಎರಡೂ ಗುಣಗಳ ಹಿರಿಮೆ ಗುರುಪೀಠದಲ್ಲಿದೆ. ನಿಮ್ಮ ನೋವಿನ ದನಿಗೆ ನಾವು ಕಿವಿಯಾಗುತ್ತೇವೆ. ಗೋಸ್ವರ್ಗ ಸಪ್ತಸನ್ನಿಧಿಯಲ್ಲಿ ಇರುವ ನಾವು ಮಠದ ಧಾರಣಾ ಸಾಮರ್ಥ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಮುಂದೆ ವಿಶ್ವವಿದ್ಯಾಪೀಠದ ಬೆಳಕಿದೆ, ಬಹುದೊಡ್ಡ ಭವಿಷ್ಯವಿದೆ. 1500 ವರ್ಷಗಳ ಇತಿಹಾಸದಲ್ಲಿ ಯಾರೂ ಯೋಚಿಸದ ತಕ್ಷಶಿಲೆ ಮಾದರಿಯ ವಿಶ್ವವಿದ್ಯಾಲಯ ತಲೆಯೆತ್ತಲಿದೆ. ಭವಿಷ್ಯದಲ್ಲಿ ರಾಮರಾಜ್ಯ, ರಾಮಚರಣದೆಡೆಗೆ ನಮ್ಮೆಲ್ಲರ ಪಯಣ ಸಾಗಬೇಕು ಎಂದ ಶ್ರೀಗಳು ಸಂರಕ್ಷಣಾ ಪ್ರತಿಜ್ಞೆ ಬೋಧಿಸಿ ಸಕಲರಿಗೂ ಒಳಿತಾಗಲೆಂದು ಹರಸಿದರು.


ಅಪಘಾತಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ ಅವರ ಶುಶ್ರೂಷೆಗೆ ಶ್ರೀಗಳವರು ಮಠದಿಂದ 50 ಸಾವಿರ ರೂ. ಹಾಗೂ ರಾಘವಸೇನೆಯಿಂದ 30 ಸಾವಿರ ರೂ.ಗಳನ್ನು ಅವರ ಮಗನಿಗೆ ಆಶೀರ್ವಾದ ರೂಪದಲ್ಲಿ ನೀಡಿದರು.

About the author

Adyot

1 Comment

  • ಹರೇ ರಾಮ…. ಹೃದಯಸ್ಪರ್ಶೀ ಕಾರ್ಯಕ್ರಮ…. ಭಾಗವಹಿಸದವರಿಗೆ ತುಂಬಲಾರದ ನಷ್ಟ….

Leave a Comment