ಸಿದ್ದಾಪುರ : ಜಿಲ್ಲೆಯ ಶಾಸಕಿಯೊಬ್ಬರ ಹೆಸರಿನಲ್ಲಿ ನಡೆಯುತ್ತಿರೋ ಭೃಷ್ಟಾಚಾರದ ಕುರಿತು ತನಿಖೆ ನಡೆಸಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಕರ್ನಾಟಕ ರಾಷ್ಟ್ರ ಸಮಿತಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಆಗ್ರಹಿಸಿದ್ದಾರೆ.
ಈ ಕುರಿತು ಸಿದ್ದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗರಾಜ್ ನಾಯ್ಕ, ಬೆಂಗಳೂರಿನ ಗುತ್ತಿಗೆದಾರರೊಬ್ಬರು 80 ಕೋಟಿ ಕಾಮಗಾರಿಯನ್ನು ಮಾಡಿದ್ದರು. ಅದರ ಬಿಲ್ ಕಡತ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪಾಸ್ ಅಗದಿದ್ದನ್ನು ಗಮನಿಸಿದ ಕಾರವಾರದ ವ್ಯಕ್ತಿಯೋರ್ವರು ಅದನ್ನ ಪಾಸ್ ಮಾಡಿಸೋಕೆ 7 ಲಕ್ಷ ರೂಪಾಯಿ ಹಣವನ್ನ ಪಡೆದು ವಂಚಿಸಿದ್ದಾರೆ. ಈ ಹಣವನ್ನ ವಾಪಸ್ ಪಡೆಯಲು ನನ್ನ ಸಹಾಯವನ್ನ ಕೇಳಿದ್ದಾರೆ. ಆ ಕಾರವಾರದ ವ್ಯಕ್ತಿ ನಾನು ಶಾಸಕಿಯೋರ್ವರಿಗೆ ಆಪ್ತನಿದ್ದು, ಆ ಶಾಸಕಿಗೆ ಮುಖ್ಯಮಂತ್ರಿಗಳು ಆಪ್ತರಿರೋದ್ರಿಂದ ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ ಅಂತ ವಂಚಿಸಿರುತ್ತಾರೆ. ಈ ಭೃಷ್ಟಾಚಾರದಲ್ಲಿ ಯಾರ್ಯಾರು ಪಾಲ್ಗೊಂಡಿದ್ದಾರೆ ಅನ್ನೋದನ್ನ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.
ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಸಿಬಿ ಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದರ ಬಗ್ಗೆ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಕೂಡ ಮುಖ್ಯಮಂತ್ರಿಗಳ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದಾರೆ ಎಂದರು.