ಸಿದ್ದಾಪುರ: ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ನಾಟ್ಯ ವಿನಾಯಕ ಎಲ್ಲರ ಬದುಕಿಗೆ ಆನಂದ ಕೊಡುವವನು. ಮನಸ್ಸಿಗೆ ಮುದ ನೀಡುವವನೇ ದೊಡ್ಡವನು. ಆದ್ದರಿಂದ ಅವನೇ ಶ್ರೇಷ್ಠ ಅಂತ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಅವರು ತಾಲೂಕಿನ ಇಟಗಿ ಕಲಗದ್ದೆ ಶ್ರೀಯಕ್ಷಗಾನ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ ಮಹಾಗಣಪತಿ ಯೋಗ ಪಟ್ಟಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ಮಾಡಿದರು. ಆನಂದ ಸಮುದ್ರ ಆದವನೇ ಗಣಪತಿ. ನಾಟ್ಯ ಆನಂದದ ಪ್ರತೀಕ. ಗಣಪತಿಯೆ ಇಲ್ಲಿ ನೃತ್ಯ ಮಾಡುತ್ತಿದ್ದಾನೆ. ಮೋದಕ ಪ್ರಿಯನು ಮೋದಕ ಇಟ್ಟುಕೊಂಡಿದ್ದು ಅನಂದದ ಮೋದ ಅದು. ಭಗವಂತ ನಮಗೆ ಸಂತೋಷ ಕೊಡಲು ಅದರಲ್ಲೂ ನಾಟ್ಯ ಭಂಗಿಯಲ್ಲಿ ನಿಂತಿದ್ದಾನೆ ಎಂದರು. ವಿನಾಯಕನ ಸನ್ನಿಧಿ ಎಂದರೆ ಸಮಾಧಾನ, ನೆಮ್ಮದಿ ಕೊಡುತ್ತದೆ. ಇಲ್ಲಿ ಎಲ್ಲ ಜೀವಿಗಳಿಗೂ ಆನಂದದ ಪ್ರಸಾದ ಪುಷ್ಪದಲ್ಲಿ ಸಿಗಲಿ ಎಂದರು. ಇದೇ ಸಂದರ್ಭದಲ್ಲಿ ನಾಟ್ಯ ವಿನಾಯಕ ದೇವಾಲಯದ ನಾಟ್ಯಾಂಗಣ, ಯಜ್ಞ ಮಂಟಪ, ಸೆಲ್ಕೋ ಬೆಳಕು ಲೋಕಾರ್ಪಣೆ, ನಾಲ್ಕು ದಿನಗಳ ಮಹಾಯೋಗ ಪಟ್ಟಾಭಿಷೇಕ ಮಹೋತ್ಸವಕ್ಕೆ ಶ್ರೀಗಳು ಚಾಲನೆ ನೀಡಿದರು.
ಸಿಗಂಧೂರೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ಟ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಸೆಲ್ಕೋ ಸೋಲಾರ ಅಧಿಕಾರಿ ದತ್ತಾತ್ರಯ ಭಟ್ಟ ಮುಂತಾದವರು ಹಾಜರಿದ್ದರು.