ಸಿದ್ದಾಪುರ : ಮಂಗಳೂರಿನ ಘಟನೆ ಪೊಲೀಸ್ ವೈಫಲ್ಯವಲ್ಲ, ಇದು ದುಷ್ಕರ್ಮಿಗಳ ವೈಫಲ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸಿದ್ದಾಪುರ ತಾಲೂಕಿನ ಕೋರ್ಲಕೈ ಗ್ರಾಮ ಪಂಚಾಯತ್ ದ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಈಶ್ವರಪ್ಪ ಮಾಧ್ಯಮಗಳ ಜೊತೆ ಮಾತನಾಡಿ, ದುಷ್ಕರ್ಮಿಗಳು ರಾಜ್ಯದಲ್ಲಿ ಗೊಂದಲ ಉಂಟುಮಾಡಿ ಸಾವು ನೋವನ್ನ ಉಂಟು ಮಾಡುವ ಪ್ರಯತ್ನ ಮಾಡಿದರು. ಆದರೆ ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವತ್ತರಾಗಿ, ಬಾಂಬ್ ಇಟ್ಟವನ ಸುಳಿವನ್ನ ಕೂಡ ಕಂಡುಹಿಡಿದಿದ್ದಾರೆ. ಪೊಲೀಸರ ಈ ಕೆಲಸವನ್ನ ನಾವು ಶ್ಲಾಘಿಸಬೇಕಿದೆ. ದುಷ್ಕರ್ಮಿಗಳ ವಿರುದ್ಧ ಪಕ್ಷಾತೀತವಾಗಿ ಖಂಡಿಸೋ ದಿಟ್ಟ ನಿಲುವನ್ನ ಎಲ್ಲಾ ಪಕ್ಷದವರು ತೆಗೆದುಕೊಳ್ಳಬೇಕು. ಬಾಂಬ್ ಅನ್ನ ಪೊಲೀಸರೇ ಇಟ್ಟು ಇದನ್ನ ಸೃಷ್ಟಿ ಮಾಡಿದ್ದಾರೆ ಅನ್ನೋ ಹೇಳಿಕೆ ಖಂಡನೀಯ. ಇದು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸೋ ಕೆಲಸ. ಈ ರೀತಿಯ ಕೆಲಸವನ್ನ ಯಾರೂ ಮಾಡಬಾರದು ಅಂದರು.
ಸದ್ಯದಲ್ಲೇ ಸಚಿವ ಸಂಪುಟವನ್ನು ವಿಸ್ತರಿಸಲಾಗುವುದು. ಪೂರ್ಣ ಬಹುಮತ ಬಾರದೇ ಇದ್ದುದರಿಂದ ಈ ರೀತಿ ಆಗಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿ ಆಗದೇ ಇರುವುದರಿಂದ ಕೆಲವರು ರಾಜೀನಾಮೆ ಕೊಟ್ಟು ನಮಗೆ ಬೆಂಬಲ ನೀಡಿದರು. ಅವರಿಗೆಲ್ಲ ಸಚಿವ ಸ್ಥಾನ ಸಿಗೋದ್ರಲ್ಲಿ ಯಾವುದೇ ಅನುಮಾನ ಬೇಡ. ಮುಖ್ಯಮಂತ್ರಿಗಳು ವಿದೇಶ ಪ್ರವಾಸ ಮುಗಿಸಿ ಬಂದ ಕೂಡಲೇ ಸಂಪುಟ ವಿಸ್ತರಣೆ ಆಗಲಿದೆ. ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯುತ್ತಾರೆ ಅನ್ನೋ ಪ್ರಭಾಕರ ಭಟ್ಟರ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಅಂದರು.