ಸಿದ್ದಾಪುರ : ಹಿಂದಿನ ವರ್ಷ ಜಿಲ್ಲೆಯ ಜನರನ್ನ ಕಾಡಿದ್ದ ಮಂಗನಕಾಯಿಲೆ ಈ ವರ್ಷ ಕೂಡ ಅಲ್ಲಲ್ಲಿ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ ನಡೀತಾ ಇದ್ರೂ ಕೂಡ ಮಂಗನಕಾಯಿಲೆ ಮತ್ತೆ ಮರುಕಳಿಸುತ್ತಿದೆ. ಹಿಂದಿನ ವರ್ಷ ಮಂಗನಕಾಯಿಲೆಗೆ ತುತ್ತಾಗಿ ಮರಣ ಹೊಂದಿದವರ ಹಾಗೂ ಕಾಯಿಲೆಗೆ ಒಳಗಾಗಿರೋ ಕುಟುಂಬದವರ ಪರಿಸ್ಥಿತಿಯನ್ನು ನೋಡಿದಾಗ ಜಿಲ್ಲೆ ಯಾವ ರೀತಿ ಕಡೆಗಣನೆಗೆ ಒಳಗಾಗಿದೆ ಅನ್ನೋದು ಸ್ಪಷ್ಟವಾಗಿ ಗೋಚರಿಸಲ್ಪಡುತ್ತದೆ.
ಜಿಲ್ಲೆಯ ಸಿದ್ದಾಪುರ ತಾಲೂಕೊಂದರಲ್ಲೇ ಹಿಂದಿನವರ್ಷ ಅತಿಹೆಚ್ಚು ಅಂದರೆ 83 ಜನ ಮಂಗನಕಾಯಿಲೆಗೆ ತುತ್ತಾಗಿದ್ದರು. ಅದರಲ್ಲಿ 12 ಜನ ಕಾಯಿಲೆಯ ಪಾಸಿಟಿವ್ ಅಂಶ ಇದ್ದವರೇ ಸಾವನ್ನಪ್ಪಿದ್ದರು. ಆದರೆ ಆರೋಗ್ಯ ಇಲಾಖೆಯ ಅಂಕಿ ಸಂಖ್ಯೆ ಪ್ರಕಾರ ಕೇವಲ 3 ಜನ ಮಾತ್ರ ಕಾಯಿಲೆಯಿಂದಾನೇ ಮರಣ ಹೊಂದಿದ್ದಾರೆ ಅಂತ ರಿಪೋರ್ಟ್ ಬಂದಿತ್ತು. ಮರಣ ಹೊಂದಿದವರಲ್ಲಿ 2 ಜನ ತಾಲೂಕಿನ ಬಾಳಗೋಡಿನವರು. ಆ ಎರಡೂ ಕುಟುಂಬಗಳು ಮೂಲತಃ ಆರ್ಥಿಕವಾಗಿ ದುರ್ಬಲ ಕುಟುಂಬಗಳೇ ಆಗಿದ್ದವು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಗಳವು. 2 ಕುಟುಂಬದ ಆರ್ಥಿಕ ಆಧಾರಸ್ತಂಭ ಆಗಿದ್ದವರೇ ಮರಣ ಹೊದಿದ್ದರಿಂದ ಆ ಕುಟುಂಬಗಳು ಚಿಂತಾಗ್ರಸ್ಥರಾಗಿದ್ದಾರೆ. ಒಂದು ಕುಟುಂಬವಂತೂ ಊರನ್ನೇ ಬಿಟ್ಟು ವಲಸೆ ಹೋಗಿದೆ. ಮನೆಯೆಲ್ಲಾ ಪಾಳು ಬಿದ್ದಿದೆ. ಮರಣ ಹೊಂದಿ 1 ವರ್ಷವಾದ್ರೂ ಕೂಡ ಇನ್ನೂವರೆಗೆ ಪರಿಹಾರ ದೊರೆತಿಲ್ಲ.
ಪಕ್ಕದ ಕ್ಷೇತ್ರವಾದ ಸಾಗರದಲ್ಲಿ ಈಗಾಗಲೇ ಮಂಗನಕಾಯಿಲೆಗೆ ಮರಣ ಹೊಂದಿದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ದೊರೆತಿದೆ. ಸ್ವತಃ ಸಭಾಧ್ಯಕ್ಷರ ಕ್ಷೇತ್ರವಾದ್ರೂ ಕೂಡ ಇನ್ನೂವರೆಗೆ ಪರಿಹಾರ ದೊರಕದಿರುವುದು ಕ್ಷೇತ್ರದ ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಇನ್ನು ರೋಗದಿಂದ ಬಳಲಿದವರ ಆರೋಗ್ಯ ಪರಿಸ್ಥಿತಿಯೂ ಹದಗೆಡುತ್ತಿದೆ. ಕೆಲಸ ಮಾಡಲು ಹೋದ್ರೆ ಸ್ವಲ್ಪ ಹೊತ್ತಿನಲ್ಲೇ ಸುಸ್ತಾಗುವಂತ ಅನುಭವವಾಗುತ್ತಿದ್ದು, ಮಾತೂ ಕೂಡ ತೊದಲುತ್ತಿದೆ ಅನ್ನೋದು ಸ್ವತಃ ಖಾಯಿಲೆಗೆ ಒಳಗಾಗಿರೋ ಲಂಬೋದರ ಹೆಗಡೆ ಬಾಳಗೋಡ್ ಅವರ ಮಾತು.
ಒಟ್ಟಿನಲ್ಲಿ ರೋಗಕ್ಕೆ ತುತ್ತಾಗಿ ಮರಣ ಹೊಂದಿದವರಿಗೆ ಕೂಡಲೇ ಪರಿಹಾರ ಘೋಷಿಸಬೇಕಿದ್ದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸಂಕಷ್ಟದ ಸಮಯಗಳಲ್ಲಿ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿರೋದು ದುರದೃಷ್ಟಕರ ಅನ್ನೋದು ಕ್ಷೇತ್ರದ ಜನರ ಅಭಿಪ್ರಾಯವಾಗಿದೆ.