ಸಿದ್ದಾಪುರ : ಕನ್ನಡ ಪತ್ರಿಕೋದ್ಯಮ ಚಿಂತಾಜನಕ ಸ್ಥಿತಿ ಯಲ್ಲಿದೆ. ಸಂಪಾದಕೀಯ, ಅಂಕಣಕಾರರೆಲ್ಲ ಮಾರಾಟವಾಗಿದ್ದಾರೆ. ಕೋಮುವಾದ ಹೆಚ್ಚಿಸುವ ಅಂಕಣಗಳು ಹೆಚ್ಚಾಗುತ್ತಿವೆ ಎಂದು ಖ್ಯಾತ ಪತ್ರಕರ್ತ, ಔಟ್ ಲುಕ್ ಪತ್ರಿಕೆಯ ಮಾಜಿ ಸಂಪಾದಕ ಕೃಷ್ಣಪ್ರಸಾದ್ ಮೈಸೂರು ಹೇಳಿದರು.
ಅವರು ರವಿವಾರ ಸಿದ್ಧಾಪುರ ಶಂಕರಮಠದಲ್ಲಿ ನಡೆದ ದೊಡ್ಮನೆ ಗಣೇಶ ಹೆಗಡೆ ಸ್ಮೃತಿ ಪುರಸ್ಕಾರ ಸಮಾರಂಭದಲ್ಲಿ ಕರಾವಳಿ ಮುಂಜಾವು ಪತ್ರಿಕೆಯ ಗಂಗಾಧರ ಹಿರೇಗುತ್ತಿಯವರಿಗೆ ಪುರಸ್ಕಾರ ನೀಡಿ ಪತ್ರಿಕೋದ್ಯಮ ಅಂದು-ಇಂದು ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಪತ್ರಿಕಾ ರಂಗದಲ್ಲಿ ತನಿಖಾ ವರದಿಗಳು ಇಲ್ಲವಾಗಿದೆ. ಇತ್ತೀಚಿನ ದಿನಗಳಲ್ಲಿ ತನಿಖಾ ಪತ್ರಕರ್ತರಾಗಲಿ, ಸಂಪಾದಕೀಯ ಬರೆಯುವವರಾಗಲಿ ಇಲ್ಲವಾಗಿದ್ದಾರೆ. ಟಿ.ವಿ ಮಾದ್ಯಮದಲ್ಲಂತೂ ಮನರಂಜನೆಗೆ ಹಾಗೂ ಸುದ್ದಿಗೆ ವ್ಯತ್ಯಾಸ ಗೊತ್ತಿಲ್ಲದವರು ಹೆಚ್ಚಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ಒಂದನೇ ಸ್ಥಾನದಲ್ಲಿದೆ. ಆ ಬಗ್ಗೆ ತನಿಖೆ ಮಾಡಿ ಬರೆಯುವ ಪತ್ರಕರ್ತರೇ ಇಲ್ಲ. ಪತ್ರಿಕಾವಲಯವೂ ಬ್ರಷ್ಟಾಚಾರದ ಕೆಸರಲ್ಲಿ ಮುಳುಗಿ ಹೋಗಿದೆ. ಜನರಲ್ಲಿ ವೈಚಾರಿಕತೆ ಬೆಳೆಸುವ ಕೆಲಸ ವಾಗುತ್ತಿಲ್ಲ. ನಾವು ಬರೆದಿದ್ದನ್ನು ಓದಬೇಕು ಎಂಬ ಪತ್ರಕರ್ತರಿಂದಾಗಿ ಜನರು ಪತ್ರಿಕೆಯ ಓದಿನಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳಿದರು.
ಕನ್ನಡ ಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗಡೆ ಮಾತನಾಡಿ, ಇಂದು ಪತ್ರಿಕಾರಂಗ ಸೇರಿದಂತೆ ಎಲ್ಲಾ ರಂಗದಲ್ಲೂ ಬಲಪಂಥ, ಎಡಪಂಥಗಳ ತಾಕಲಾಟ ನಡೆಯುತ್ತಿದೆ. ಇದರಿಂದಾಗಿ ಯಾವುದೇ ಪಂಥಕ್ಕೆ ಸೇರದವರ ಸ್ಥಿತಿ ಕಷ್ಟವಾಗಿದೆ ಎಂದರು.
ಪ್ರಶಸ್ತಿ ಪುರಸ್ಕೃತ ಗಂಗಾಧರ ಹಿರೇಗುತ್ತಿ ತಮ್ಮ ಪತ್ರಿಕಾ ಜೀವನದ ಪಯಣವನ್ನು ವಿವರಿಸಿದರು. ಪುರಸ್ಕಾರ ಕಾರ್ಯಕ್ರಮವನ್ನು ವಿಜಯ ಹೆಗಡೆ ದೊಡ್ಮನೆ ದಂಪತಿಗಳು ನೆರವೇರಿಸಿದರು.