ಸಿದ್ದಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ತಾಲೂಕಿನ ಪತ್ರಕರ್ತರಿಗೆ ಎನ್ 95 ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು. ಪತ್ರಕರ್ತರು ಸುದ್ದಿ ಸಂಗ್ರಹಿಸಲು ಜನರ ಮಧ್ಯದಲ್ಲಿ ಇದ್ದು ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಕೊರೋನಾದಿಂದ ರಕ್ಷಣೆಗಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಇಂದಿನ ಅಗತ್ಯತೆಯಾಗಿವೆ, ಆದ್ದರಿಂದ ಮಾಸ್ಕ್ ಹಾಗೂ ಲಿಕ್ವಿಡ್ ಹ್ಯಾಂಡ್ ಸ್ಯಾನಿಟೈಜರ್ ನೀಡುತ್ತಿದ್ದೇವೆ ಎಂದರು.
‘ಸೇವೆಯೇ ಸಂಘಟನೆ’ ಎಂಬ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕತ್ವದ ಸೂಚನೆಯ ಮೇರೆಗೆ ಬಿಜೆಪಿ ಕಾರ್ಯಕರ್ತರು ಕೋವಿಡ್ ಮೊದಲ ಹಾಗೂ ಎರಡನೇ ಅಲೆಗಳ ಸಂದರ್ಭದಲ್ಲಿ ಸೇವಾಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಕುಟುಂಬ ವ್ಯವಸ್ಥೆಯಲ್ಲಿ ಮನೆ ಎಂದಮೇಲೆ ಎಲ್ಲಾ ವಯೋಮಾನದವರು ಇರುವುದು ಸಹಜ, ಹಾಗಾಗಿ ಹೊರಗಡೆ ಮತ್ತು ಮನೆಗೆ ತೆರಳಿದವರು ಸೂಕ್ತ ಎಚ್ಚರಿಕೆ ವಹಿಸಿ ಎಂದು ಪತ್ರಕರ್ತರಲ್ಲಿ ಮನವಿ ಮಾಡಿದರು. ಸಮಾಜದ ಮಧ್ಯೆ ಕಾರ್ಯನಿರ್ವಹಿಸುವ ನೀವು ರೋಗ ಬರದಂತೆ ಜಾಗೃತೆ ವಹಿಸಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಸುರಕ್ಷಿತವಾಗಿರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದಾಪುರ ಮಂಡಲ ಪ್ರಧಾನ ಕಾರ್ಯದರ್ಶಿ ಎಸ್ ಕೆ ಮೇಸ್ತಾ, ಸಾಮಾಜಿಕ ಜಾಲತಾಣ ಸಂಚಾಲಕ ಗಣೇಶ ಮೇಸ್ತಾ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಉಪಾಧ್ಯಕ್ಷ ಶಿವಶಂಕರ ಕೋಲಸಿರ್ಸಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.