ಸಿದ್ದಾಪುರ : ಜಿಲ್ಲೆಯ ಸಿದ್ದಾಪುರ ತಾಲೂಕಿನ ವಾಜಗೋಡಿನಲ್ಲಿ ಗ್ರಾಮ ಪಂಚಾಯತ್ ಸಭಾ ಕೊಠಡಿ ಹಾಗೂ ಎನ್. ಆರ್.ಎಂ.ಎಲ್ ಯೋಜನೆಯಡಿ ನಿರ್ಮಾಣವಾದ ಅಗರಬತ್ತಿ ಘಟಕ ಸಭಾಧ್ಯಕ್ಷರಿಂದ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, 4.90 ಲಕ್ಷ ವೆಚ್ಚದಲ್ಲಿ ಅತ್ಯುತ್ತಮವಾಗಿ ಸಭಾ ಕೊಠಡಿಯನ್ನ ನಿರ್ಮಿಸಲಾಗಿದೆ. ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಶೌಚಾಲಯ ಕೂಡ ಸ್ಥಾಪನೆಯಾಗಿದೆ. ಪಂಚಾಯತ್ ದಿಂದ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಜನಕ್ಕೆ ಏನು ಬೇಕೋ ಅದನ್ನ ಕೊಡೋ ಪ್ರಯತ್ನ ಮಾಡಲಾಗುತ್ತಿದೆ. 5 ವಿಶೇಷ ಯೋಜನೆಗಳ ಮೂಲಕ ಈ ಪಂಚಾಯತ್ ಹೆಮ್ಮೆಯಿಂದ ಹೇಳಿಕೊಳ್ಳೋ ವ್ಯವಸ್ಥೆಗಳನ್ನ ಮಾಡಿದೆ. ಇದಕ್ಕೋಸ್ಕರ ಪಂಚಾಯತವನ್ನ ಅಭಿನಂದಿಸುತ್ತೇನೆ. ಶಾಸನಬದ್ಧ ಅನುದಾನಗಳಲ್ಲಿ ಸಿಬ್ಬಂದಿ ವೇತನ ಹಾಗೂ ವಿದ್ಯುತ್ ಬಿಲ್ ಗಳನ್ನ ಕಟ್ಟಬೇಕು ಅನ್ನೋ ಕರಾರಿನ ಮೇಲೆ 10 ಲಕ್ಷ ರೂಪಾಯಿಗಳನ್ನ ನೀಡಲಾಗುತ್ತೆ. ಅದನ್ನ ಸರಿತೂಗಿಸಿಕೊಂಡು ಹೋಗೋದು ಸವಾಲಿನ ಕೆಲಸ. ಬರುವ ದಿನಗಳಲ್ಲಿ ಈ ಸ್ವತ್ತು ಯೋಜನೆಯ ಸಮಸ್ಯೆಗಳನ್ನ ಸಂಪೂರ್ಣವಾಗಿ ಬಗೆಹರಿಸುತ್ತೇವೆ. ಅಧಿಕಾರ ವಿಕೇಂದ್ರೀಕರಣ ಪದ್ಧತಿಯಲ್ಲಿ ಗ್ರಾಮ ಪಂಚಾಯತ್ ಗಳು ಬಲಗೊಳ್ಳಬೇಕು. ಪಂಚಾಯತ್ ಗಳು ಬಲಗೊಂಡಾಗ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಅಂದರು.
ಕಾರ್ಯಕ್ರಮದಲ್ಲಿ ವಾಜಗೋಡ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯ ನಾಗರಾಜ್ ನಾಯ್ಕ, ತಾಲೂಕಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.