ಸಿದ್ದಾಪುರ : ಸೇವಾ ಭಾರತಿ ಸಿದ್ದಾಪುರ ವತಿಯಿಂದ ಹೇರೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಣಲೇಬೈಲ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ಮಳೆಗಾಲದ ಸಂದರ್ಭವಾದ್ದರಿಂದ ಛತ್ರಿಗಳನ್ನು ವಿತರಣೆ ಮಾಡಲಾಯಿತು.
ಕೊರೋನಾ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದ ಸೇವಾ ಭಾರತಿಯ ಗಣೇಶ ನರಸಿಂಹ ಹೇರೂರು, ಆಶಾ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮುಂಚೂಣಿಯಲ್ಲಿದ್ದು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ ಎಂದರು. ಸಮಾಜದ ಸುರಕ್ಷತೆಯ ಬಗ್ಗೆ ಹಗಲಿರುಳು ಶ್ರಮಿಸುತ್ತಿರುವ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿ ಎಂದರು. ನೇರವಾಗಿ ಜನರ ನಡುವೆ ಇದ್ದು ಕೆಲಸ ಮಾಡಬೇಕಾದ ಅನಿವಾರ್ಯತೆ ನಿಮಗಿದೆ, ಕೊರೋನಾದಿಂದ ಸುರಕ್ಷಿತವಾಗಿರಲು ಮಾಸ್ಕ್, ಸ್ಯಾನಿಟೈಸರ್ ಇಂದಿನ ಅಗತ್ಯ, ಹಾಗಾಗಿ ಅವುಗಳನ್ನು ನೀಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗುರುಪ್ರಸಾದ ಹೆಗಡೆ ಹರ್ತೆಬೈಲ್ – ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸೇವಾ ಭಾರತಿಯ ಕಡೆಯಿಂದ ಕೊರೋನಾದ ಸಂಕಷ್ಟದ ಈ ಸಂದರ್ಭದಲ್ಲಿ ರಾಷ್ಟ್ರಾದ್ಯಂತ ವ್ಯಾಪಕವಾಗಿ ಸೇವಾಕಾರ್ಯಗಳು ನಡೆಯುತ್ತಿವೆ ಎಂದರು. ಲಸಿಕಾ ಅಭಿಯಾನದಲ್ಲಿ ಕೂಡಾ ನಮ್ಮ ಕಾರ್ಯಕರ್ತರು ಆರೋಗ್ಯ ಇಲಾಖೆಗೆ ನೆರವಾಗುತ್ತಿದ್ದಾರೆ, ರೋಗಿಗಳಿಗೆ ಅಗತ್ಯವಿರುವ ಔಷಧಿ ತಲುಪಿಸುವ ಕೆಲಸವಾಗುತ್ತಿದೆ, ತೀರಾ ಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ಹಂಚಿಕೆ ಕೂಡಾ ಮಾಡಲಾಗಿದೆ ಎಂದರು.
ರೋಗ ಬಾರದಂತೆ ಜಾಗೃತೆಯಿಂದ ಇರುವುದು ಹಾಗೂ ರೋಗನಿರೋಧಕ ಶಕ್ತಿವರ್ಧನೆ ಮಾಡಿಕೊಳ್ಳುವುದು ಒಳಿತು ಎಂದರು, ಹಾಗಾಗಿ ಇಮ್ಯುನಿಟಿ ಬೂಸ್ಟರ್ ಔಷಧವನ್ನೂ ನೀಡಲಾಗುತ್ತಿದೆ, ಸೇವಾ ಭಾರತಿಯ ಕಾರ್ಯಕರ್ತರನ್ನು ಸಂಪರ್ಕ ಮಾಡಿದರೆ ತಲುಪಿಸುತ್ತಾರೆ ಎಂದರು. ಈ ಸಂದರ್ಭದಲ್ಲಿ ತೀರ ಕಷ್ಟದಲ್ಲಿರುವ ಕುಟುಂಬದವರಿಗೆ ದಿನಸಿ ಕಿಟ್ ನೀಡಲಾಯಿತು.
ಆರ್.ಎಸ್.ಎಸ್ ಹೇರೂರು ಕಾರ್ಯವಾಹ ರಾಮಚಂದ್ರ ತಾರೇಸರ, ಸೇವಾ ಭಾರತಿಯ ಗಣೇಶ ಐನಬೈಲ್, ಮನೋಹರ ಹೇರೂರು ಹಾಗೂ ಆರೋಗ್ಯ ಇಲಾಖೆಯ ರೇವತಿ ಗೌಡ ಕಾರ್ಯಕ್ರಮದಲ್ಲಿದ್ದರು. ಆಶಾ ಕಾರ್ಯಕರ್ತರ ಪರವಾಗಿ ಶಾಂತಲಾ ನಾಯ್ಕ ಧನ್ಯವಾದ ಹೇಳಿದರು.