ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ, ಅಂಕೋಲಾ ಭಾಗದಲ್ಲಿ ಮಂಗನಖಾಯಿಲೆ ಕಾಣಿಸಿಕೊಂಡಿದ್ದು ಜನರು ಆತಂಕಪಡುವಂತಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ಮಂಗನಖಾಯಿಲೆ ಫೆಬ್ರವರಿಯಿಂದಲೇ ಕಾಣಿಸಿಕೊಂಡಿದ್ದು ಇಲ್ಲಿಯವರೆಗೆ 36 ಜನರು ಈ ರೋಗದಿಂದ ಬಳಲಿದ್ದು ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.
2004ರಿಂದಲೂ ಈ ಮಂಗನಖಾಯಿಲೆ ತಾಲೂಕಿನಲ್ಲಿ ಮರಣಮೃದಂಗವನ್ನು ಬಾರಿಸುತ್ತಿದೆ. 2019ರಲ್ಲಿ ಸುಮಾರು 83 ಜನರಲ್ಲಿ ಕಾಣಿಸಿಕೊಂಡಿದ್ದ ಈ ಖಾಯಿಲೆ 13 ಜನರ ಮರಣಕ್ಕೂ ಕಾರಣವಾಗಿತ್ತು. ಬಹಳಷ್ಟು ಜನರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕಳೆದ ವರ್ಷ ಪ್ರಾರಂಭದಲ್ಲಿ ಶಿವಮೊಗ್ಗ ಜಿಲ್ಲೆಗೆ ಮಾತ್ರ ಉಚಿತ ಚಿಕಿತ್ಸೆ ನೀಡಲಾಗಿತ್ತು. ನಂತರ ಜಿಲ್ಲಾಪಂಚಾಯತ್ ಮುಖ್ಯಕಾರ್ಯದರ್ಶಿಗಳ ಹಾಗೂ ಜಿಲ್ಲಾಧಿಕಾರಿಗಳ ಸತತ ಪ್ರಯತ್ನದಿಂದ ನಮ್ಮ ಜಿಲ್ಲೆಯ ಮಂಗನಖಾಯಿಲೆ ರೋಗಿಗಳಿಗೂ ಉಚಿತ ಚಿಕಿತ್ಸೆನೀಡಲಾಯಿತು.
ಆದರೆ ಈ ವರ್ಷ ಸರಕಾರದ ಕೆಲವು ನಡಾವಳಿಯಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನಿರಾಕರಿಸಲಾಗಿತ್ತು. ಕಾಡಿನ ನಡುವೆ ಮನೆಯಿರುವ ಬದುಕಿನ ನಿರ್ವಹಣೆಗೆ ಕಾಡನ್ನೇ ಅವಬಿಸಿರುವ ಬಡವರಿಗೆ ಈ ರೋಗ ತಗುಲಿದ್ದು ಮಣಿಪಾಲದ ಲಕ್ಷಾಂತರ ರೂಪಾಯಿಯ ಚಿಕಿತ್ಸೆ ಇವರಿಗೆ ಗಗನಕುಸುಮವಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಸಾಕಷ್ಟು ಬಾರಿ ಸರಕಾರದ ಗಮನ ಸೆಳೆದಿದ್ದರೂ ಪ್ರಯೋಜನವಾಗಿರಲಿಲ್ಲ.
ಏಪ್ರಿಲ್ ತಿಂಗಳ ಪ್ರಾರಂಭದಿಂದಲೇ ಸಿದ್ದಾಪುರ ತಾಲೂಕಿನ ಕೊರ್ಲಕೈ ಹಾಗೂ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರವ್ಯಾಪ್ತಿಯಲ್ಲಿ ಮಂಗನಖಾಯಿಲೆ ತೀವ್ರತರವಾಗಿ ಕಾಡತೊಡಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ಏಪ್ರೀಲ್ 14 ರಂದು ಕ್ಯಾದಗಿ ಪಂಚಾಯತ್ ಸಭಾಭವನದಲ್ಲಿ ಮಂಗನಕಾಯಿಲೆ ಹಾಗೂ ಕೊರೊನಾ ವೈರಸ್ ಮುಂಜಾಗ್ರತಾ ಸಭೆಯನ್ನು ನಡೆಸಿದರು. ಈ ಸಭೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸುವ ಸಂದರ್ಭದಲ್ಲಿ ಸಾರ್ವಜನಿಕರು ಈ ಪ್ರದೇಶಕ್ಕೆ ಅನೂಕೂಲವಾಗಲು ಒಂದು ವೆಂಟಿಲೇಟರ್ ಹೊಂದಿರುವ ಅಂಬುಲೇನ್ಸ್ ಹಾಗೂ ಮಂಗನಕಾಯಿಲೆ ಚಿಕಿತ್ಸೆಗಾಗಿ ಆಯುಶ್ಮಾನ್ ಭಾರತ- ಆರೋಗ್ಯ ಕರ್ನಾಟಕ ಚಿಕಿತ್ಸಾ ಪ್ಯಾಕೇಜ್ ಅಳವಡಿಸಿ ಪ್ರತ್ಯೇಕ ಸೌಲಭ್ಯಗಳ ಮಂಜೂರಿ ಕೋಡ್ ರಚಿಸುವಂತೆ ಸಚಿವರ ಬಳಿ ಮನವಿ ಮಾಡಿದರು. ಅಲ್ಲದೆ ದನಕರುಗಳಿಗೆ ಅವಶ್ಯಕವಾದ ಔಷಧವನ್ನು ಖರೀದಿಸಲು ಏಳು ಪಂಚಾಯತಗಳಿಗೆ ಅವಶ್ಯ ಇರುವ ಅನುದಾನವನ್ನು ಜಿಲ್ಲಾಡಳಿತದಿಂದ ಮಂಜೂರಿಸಲು ವಿನಂತಿಸಿದ್ದರು.
ವಿಷಯದ ಗಂಭೀರತೆಯನ್ನು ಅರಿತ ಶಿವರಾಮ ಹೆಬ್ಬಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಬಳಿ ಮುಖತಃ ಈ ಬಗ್ಗೆ ಮಾತನಾಡಿ ಕೇವಲ ನಾಲ್ಕೇ ದಿನಗಳಲ್ಲಿ ಜಿಲ್ಲೆಗೆ ಮಂಗನಕಾಯಿಲೆ ಹಾಗೂ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗಾಗಿ ಅತ್ಯವಶ್ಯಕವಾಗಿರುವ ವೆಂಟಿಲೇಟರ್ ಹೊಂದಿರುವ ಅಂಬುಲೆನ್ಸ್ ಮಂಜೂರಿ ಮಾಡಿಸಿದ್ದಾರೆ ಹಾಗೂ ಮಂಗನ ಕಾಯಿಲೆಯನ್ನು ಆಯುಶ್ಮಾನ್ ಭಾರತ ಆರೋಗ್ಯ ಕರ್ನಾಟಕ ಚಿಕಿತ್ಸೆಯ ಪ್ಯಾಕೇಜ್ ಗೆ ಅಳವಡಿಸಿ ಪ್ರತೇಕ್ಯ ಕೋಡ್ ಅನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಜಿಲ್ಲಾಡಳಿತದಿಂದ ದನಕರುಗಳಿಗೆ ಅವಶ್ಯ ಇರುವ ಔಷಧಗಳನ್ನು ಖರೀದಿಸಲು ಸುಮಾರು 87.000 ರೂಪಾಯಿ ಅನುದಾನವನ್ನು ಪಶುಪಾಲನಾ ಇಲಾಖೆಗೆ ಶೀಘ್ರವಾಗಿ ಮಂಜೂರಿಸಿದ್ದಾರೆ. ಮಂಗನಕಾಯಿಲೆ ಚಿಕಿತ್ಸೆಗಾಗಿ ಆಯುಶ್ಮಾನ್ ಭಾರತ- ಆರೋಗ್ಯ ಕರ್ನಾಟಕ ಚಿಕಿತ್ಸಾ ಪ್ಯಾಕೇಜ್ ಅಳವಡಿಸಿ ಪ್ರತ್ಯೇಕ ಸೌಲಭ್ಯಗಳ ಮಂಜೂರಿ ಕೋಡ್ ಮೊದಲು ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಸಚಿವ ಶಿವರಾಮ ಹೆಬ್ಬಾರರ ಈ ಕ್ಷಿಪ್ರ ಕಾರ್ಯಚಟುವಟಿಕೆಗೆ ಜಿಲ್ಲೆಯ ಹಾಗೂ ತಾಲೂಕಿನ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದು, ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳು ಇನ್ನು ಮುಂದೆ ಬಗೆಹರಿಯಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
👌👍🙏 ಧನ್ಯವಾದಗಳು ಉಸ್ತುವಾರಿ ಸಚಿವರಾದ ಮಾನ್ಯ ಹೆಬ್ಬಾರ ಸರ್ ಗೆ