ಆದ್ಯೋತ್ ಸುದ್ದಿನಿಧಿ:
ಅಡಿಕೆ ಸೆಸ್ ಇಳಿಕೆಗೆ ಕರ್ನಾಟಕ ಅರೇಕಾ ಚೇಂಬರ್ ಆಫ್ ಕಾಮರ್ಸನಿಂದ ಸ್ವಾಗತ.
ಮಾರುಕಟ್ಟೆ ಶುಲ್ಕವನ್ನು ರದ್ದು ಪಡಿಸುವ ಕುರಿತಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬರಲಾಗಿತ್ತು. ಈ ನಡುವೆ ಕೇಂದ್ರ ಸರಕಾರವು ಕೃಷಿ ಉತ್ಪನ್ನ ಮಾರುಕಟ್ಟೆಗೆ ನೂತನ ಕಾನೂನಿನ ಮೂಲಕ ಸುಗ್ರಿವಾಜ್ಞೆ ಹೊರಡಿಸಿದ ನಂತರ ನಮ್ಮ ಹೋರಾಟವನ್ನು ಮತ್ತಷ್ಟು ಚುರುಕು ಗೊಳಿಸಿ ನಿಗದಿತ ಶುಲ್ಕದಿಂದ ಆಗುವ ಗೊಂದಲಗಳ ಕುರಿತು ರಾಜ್ಯಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು ಇದೀಗ ಕರ್ನಾಟಕ ಸರಕಾರವು ನಮ್ಮ ಬೇಡಿಕೆಯನ್ನು ಮನ್ನಿಸಿ ಕ್ಯಾಬಿನೆಟ್‍ನಲ್ಲಿ 1.50 ಇರುವ ಮಾರುಕಟ್ಟೆ ಶುಲ್ಕವನ್ನು 0.35 ಕ್ಕೆ ನಿಗದಿಪಡಿಸಿದ್ದನ್ನು ಸಂತಸದಿಂದ ಸ್ವಾಗತಿಸುತ್ತೇವೆ ಎಂದು ಕರ್ನಾಟಕ ಅರೇಕಾ ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರ ಸರಕಾರ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯಿದೆಯಿಂದ ಮಾರುಕಟ್ಟೆ ಹೊರಗಡೆ ಖರೀದಿ ಮಾಡುವ ಅಡಿಕೆಗೆ ಯಾವುದೇ ಸೆಸ್ ಇರಲಿಲ್ಲ. ಆದರೆ ಎಪಿಎಂಸಿ ಒಳಗೆ ಖರೀದಿಸುವ ಅಡಿಕೆಗೆ ಶೇ.1 ತೆರಿಗೆ ವಿಧಿಸಲಾಗುತ್ತಿತ್ತು. ಇದನ್ನು ಸರಿಪಡಿಸಿಕೊಡುವವರೆಗೆ ಮಾರುಕಟ್ಟೆಯಲ್ಲಿ ನಡೆಯುವ ಟೆಂಡರ್ ಪ್ರಕ್ರಿಯೆಯಿಂದ ದೂರವಿರಲು ವರ್ತಕರು ನಿರ್ಧರಿಸಿದ್ದರು. ಕೇಂದ್ರ ರಾಜ್ಯ ಸರಕಾರಗಳ ಎರಡು ಕಾನೂನುಗಳಿಂದ ಆಗುವ ದುಷ್ಪರಿಣಾಮಗಳನ್ನು ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಮಾರ್ಗದರ್ಶಕ ಓಂಕಾರಪ್ಪ ಇತರರು ಅರೇಕಾ ಟಾಸ್ಕಫೋರ್ಸ ಅಧ್ಯಕ್ಷ ಶಾಸಕ ಅರಗ ಜ್ಞಾನೇಂದ್ರ, ಸಚಿವ ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹಾಲಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ ಇವರುಗಳಿಗೆ ಮನವರಿಕೆ ಮಾಡಿಕೊಟ್ಟರು.
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರುಗಳನ್ನೂ ಕರ್ನಾಟಕ ಅರೇಕಾ ಚೇಂಬರ್ ಆಫ್ ಕಾಮರ್ಸನ ಕಾರ್ಯದರ್ಶಿ ರವಿ ಪಾಟೀಲ, ಕೋಶಾಧ್ಯಕ್ಷ ಲೋಕೇಶ ಹೆಗಡೆ, ಸಹಕಾರ್ಯದರ್ಶಿ ಎಂ.ಆರ್.ಹೆಗಡೆ, ಯಲ್ಲಾಪುರ ವರ್ತಕ ಸಂಘದ ಪ್ರತಿನಿಧಿಗಳೊಂದಿಗೆ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗಿತ್ತು.
ಇದೀಗ ನಮ್ಮ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈಡೇರಿಸಿದ್ದು ಅವರಿಗೂ ಸಚಿವ ಸಂಪುಟಕ್ಕೂ, ಸಾಂಘಿಕ ಪ್ರಯತ್ನಕ್ಕೆ ಸಹಕರಿಸಿದ ಎಲ್ಲ ಅಡಿಕೆ ಮಾರುಕಟ್ಟೆ ವರ್ತಕರ ಸಂಘದ ಪದಾಧಿಕಾರಿಗಳಿಗೂ, ವರ್ತಕರಿಗೂ ಚೇಂಬರ್‍ನಿಂದ ಕೃತಜ್ಞತೆ ಸಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಆದ್ಯೋತ್ ನ್ಯೂಸ್ ಜೊತೆಗೆ ಮಾತನಾಡಿದ ಆರ್.ಎಸ್.ಹೆಗಡೆ,ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಕೊವಿಡ್ ಸಂಕಷ್ಟ ಕಾಲದಲ್ಲೂ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿದ ಮುಖ್ಯಮಂತ್ರಿಗಳನ್ನು ಶಾಸಕರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಇವರನ್ನು ಕರ್ನಾಟಕ ಅರೇಕಾ ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಉಪಾಧ್ಯಕ್ಷ ಡಿ.ಎಂ.ಶಂಕರಪ್ಪ, ಕೋಶಾಧ್ಯಕ್ಷ ಲೋಕೇಶ ಹೆಗಡೆ, ನಿರ್ದೇಶಕರಾದ ಪಟೇಲ ಶಿವಕುಮಾರ ಭೀಮಸಮುದ್ರ, ಪ್ರವೀಣ ಚೆನ್ನಗಿರಿ, ಆರ್ಯವೈಶ್ಯ ಅಭಿವೃದ್ಧಿ ಮಂಡಳದ ಅಧ್ಯಕ್ಷ ಡಿ.ಎಸ್.ಅರುಣಕುಮಾರ, ಶಿವಮೊಗ್ಗಾ ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಜೆ.ಆರ್.ವಾಸುದೇವ, ಎಪಿಎಂಸಿ ನಿರ್ದೇಶಕ ನಾಗರಾಜ ಶಿವಮೊಗ್ಗಾ, ಮೆಮ್ಕೋಸ್, ತುಮ್ಕೋಸ್ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ಮಾಡಿ ಅಭಿನಂದಿಸಿದ್ದೇವೆ
ಮುಂದಿನ ದಿನಗಳಲ್ಲಿ ಸಂಪೂರ್ಣ ಸೆಸ್ ತೆಗೆಯಲಾಗುವುದು ಬ ಭರವಸೆ ಇದೆ.ಆದ್ದರಿಂದ ಅಡಿಕೆ ವ್ಯಾಪಾರಿಗಳು ಪ್ರತಿಭಟನೆಯನ್ನು ಮುಕ್ತಾಯಗೊಳಿಸಿ ಟೆಂಡರ್‍ನಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.