ಆದ್ಯೋತ್ ಸುದ್ದಿನಿಧಿ:
ಅನಾರೋಗ್ಯದಿಂದ ಬಳಲುತ್ತಿದ್ದ ಶಿರಾ ಶಾಸಕ ಬಿ. ಸತ್ಯನಾರಾಯಣ ವಿಧಿವಶವಾಗಿದ್ದಾರೆ.
ತುಮಕೂರಿನ ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಬಿ. ಸತ್ಯನಾರಾಯಣ ಮಂಗಳವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು 15 ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಿವರ್‌ಗೆ ಸಂಬಂಧಿಸಿದ ತೊಂದರೆಯಿಂದ ಸತ್ಯನಾರಾಯಣ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶಾಸಕರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಒಂದುವರ್ಷದ ಹಿಂದೆಯೇ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿ ಚೇತರಿಸಿಕೊಂಡಿದ್ದ ಸತ್ಯನಾರಾಯಣ ಇತ್ತೀಚೆಗೆ ನ್ಯೂಮೋನಿಯಾದಿಂದ ಬಳಲುತ್ತಿದ್ದರು.
ನಾಲ್ಕು ಬಾರಿ ಶಾಸಕರಾಗಿದ್ದ ಇವರು ದಿ.ಜೆ.ಹೆಚ್.ಪಾಟೀಲ ಸಚೀವ ಸಂಪುಟದಲ್ಲಿ ಕಾರ್ಮಿಕ ಸಚೀವರಾಗಿ ಕಾರ್ಯನಿರ್ವಹಿಸಿದ್ದರಲ್ಲದೆ ತುಮಕೂರು ಜಿಲ್ಲಾ ಉಸ್ತುವಾರಿ ಸಚೀವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಶಿರಾ ತಾಲೂಕಿನ ಭುವನಹಳ್ಳಿ ಗ್ರಾಮದ ಸತ್ಯನಾರಾಯಣ ಸರಳ ವ್ಯಕ್ತಿತ್ವವನ್ನು ಹೊಂದಿದ್ದು ದೇವೆಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.ಸತ್ಯಣ್ಣ ಎಂದೇ ಗುರುತಿಸಿಕೊಂಡಿದ್ದ ಇವರು ಟಿ.ಬಿ ಜಯಚಂದ್ರ ವಿರುದ್ದ ಎರಡು ಬಾರಿ ಸೋತಿದ್ದರು.
ಇದು ನನ್ನ ಕೊನೆಯ ಚುನಾವಣೆ ಎಂದು ಪ್ರಚಾರ ಮಾಡಿ ಈ ಬಾರಿ ಭಾರಿ ಅಂತರದಿಂದ ಟಿಬಿಜೆಯವರನ್ನು
ಸೋಲಿಸಿದ್ದರು.ಕುಮಾರಸ್ವಾಮಿ ಸಂಪುಟದಲ್ಲಿ ಸಚೀವರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿತ್ತು.
*****
ಶಾಸಕ ಬಿ.ಸತ್ಯನಾರಾಯಣ ನಿಧನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಕಾಗೇರಿಯವರು,ಸೌಮ್ಯ ಸ್ವಭಾವದ,ದಕ್ಷ ಆಡಳಿತಗಾರರಾಗಿದ್ದ ಹಿರಿಯ ಸದಸ್ಯ ಬಿ.ಸತ್ಯನಾರಾಯಣರ ನಿಧನ ಅಪಾರ ಶೋಕಕ್ಕೆ ಕಾರಣವಾಗಿದ್ದು
ಅವರು ಪ್ರತಿನಿಧಿಸುವ ಕ್ಷೇತ್ರಕ್ಕೆ,ರಾಜ್ಯಕ್ಕೆ ನಷ್ಟವಾಗಿದೆ.
ಭಗವಂತನು ಇವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಇವರ ಕುಟುಂಬಕ್ಕೆ ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.