ಆದ್ಯೋತ್ ಸುದ್ದಿನಿಧಿ.:
ಲಯನ್ಸ್ ಕ್ಲಬ್ ವನಮಹೋತ್ಸವ ಕಾರ್ಯಕ್ರಮ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಲೊಕೊಪಯೋಗಿ ಇಲಾಖೆಯ ಕಚೇರಿಯ ಆವರಣದಲ್ಲಿ ಸೋಮವಾರ ಸ್ಥಳೀಯ ಲಯನ್ಸ್ ಕ್ಲಬ್‍ನವರು ಅಧ್ಯಕ್ಷೆ ಶ್ಯಾಮಲಾ ಹೆಗಡೆ ನೇತೃತ್ವದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಣೆ ಮಾಡಿದರು.
ಲಯನ್ಸ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಮಾತನಾಡಿ, ಪ್ರತಿವರ್ಷವೂ ಲಯನ್ಸ್ ಕ್ಲಬ್ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸುತ್ತಿದೆ. ಈ ವರ್ಷ ಪಟ್ಟಣದ ಸರಕಾರಿ ಕಚೇರಿಗಳ ಆವರಣದಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಪರಿಸರ ಉಳಿಸುವುದು ಇದರ ಪ್ರಮುಖ ಉದ್ದೇಶವಾಗಿದ್ದು ಮರಗಿಡಗಳು ಬೆಳೆದರೆ ಮಾತ್ರ ಮಳೆಬೆಳೆಗಳು ಸಮೃದ್ಧವಾಗಿ ಆಗಲು ಸಾಧ್ಯವಿದೆ. ಮರಗಳು ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ-ಪಕ್ಷಿಗಳಿಗೂ ಆಶ್ರಯ ನೀಡುತ್ತವೆ. ಲಯನ್ಸ್ ಸಂಸ್ಥೆ ಪ್ರತಿವರ್ಷ ಶಾಲೆಗಳಲ್ಲಿ ಗಿಡಗಳನ್ನು ನೆಡುತ್ತಿತ್ತು ಆದರೆ ಈ ಬಾರಿ ಸರಕಾರಿ ಕಚೇರಿಯ ಆವರಣದಲ್ಲಿ ನೆಡಲು ತೀರ್ಮಾನಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸವನ್ನು ಲಯನ್ಸ್ ಸಂಸ್ಥೆ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಡಾ.ರವಿ ಹೆಗಡೆ ಹೂವಿನಮನೆ,ಆರ್.ಎಂ.ಹೆಗಡೆ ಬಾಳೆಸರ,ಎ.ಜಿ.ನಾಯ್ಕ ಅವರಗುಪ್ಪ,ಸಿ.ಎಸ್.ಗೌಡರ್,ಸತೀಶ ಗೌಡರ್,ಜಿ.ಜಿ.ಹೆಗಡೆ ಬಾಳಗೋಡು,ರವಿ ಪಾಟೀಲ,ರಾಘವೇಂದ್ರ ಭಟ್ಟ,ಪ್ರಶಾಂತ ಶೇಟ್,ಉಪತಹಸೀಲ್ದಾರ ಎನ್.ಐ.ಗೌಡ,ಇಂಜನೀಯರ್ ಅನಿಲಕುಮಾರ ಮುಂತಾಧವರು ಉಪಸ್ಥಿತರಿದ್ದರು
*****
ರಾಯಣ್ಣ ಪ್ರತಿಮೆ ಪುನರ್ ಪ್ರತಿಷ್ಠಾಪಿಸಲು ಆಗ್ರಹಿಸಿ ಮನವಿ
ಅಗಸ್ಟ್15ರಂದು ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸರಕಾರ ಪುನಃ ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಣಧೀರ ಪಡೆಯ ಸ್ಥಳಿಯ ಘಟಕದ ಸದಸ್ಯರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಂತ ನಾಯ್ಕ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ ಮಂಜುಳಾ ಭಜಂತ್ರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ರಾಯಣ್ಣನ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಿದ್ದು ಅದನ್ನು ಕೆಲವು ದುಷ್ಕರ್ಮಿಗಳ ಒತ್ತಾಸೆಯಿಂದ ಪೊಲೀಸ್‍ರು ಅವಮಾನಕರವಾಗಿ ತೆರವುಗೊಳಿಸಿದ್ದಾರೆ.ಇದನ್ನು ಕರ್ನಾಟಕ ರಣಧೀರ ಪಡೆ ತೀವ್ರವಾಗಿ ಖಂಡಿಸುತ್ತಿದ್ದು,ರಾಯಣ್ಣನ ಪ್ರತಿಮೆಗೆ ಹಾಗೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವಡಗಾವ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಕ್ರಮ ತೆಗೆದುಕೊಳ್ಳಬೇಕು ಹಾಗೂ ಅದೇ ಸ್ಥಳದಲ್ಲಿ ಸರಕಾರವೇ ಮುಂದೆ ನಿಂತು ಅದೇ ಸ್ಥಳದಲ್ಲಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಬೇಕು ಇಲ್ಲವಾದಲ್ಲಿ ರಾಜ್ಯದ್ಯಂತ ಕನ್ನಡಪರ ಸಂಘಟನೆಗಳ ಜೊತೆಗೆ ಕರ್ನಾಟಕ ರಣಧೀರ ಪಡೆ ಹಾಗೂ ರಾಯಣ್ಣನ ಅಭಿಮಾನಿಗಳು ತೀವ್ರವಾದ ಪ್ರತಿಭಟನೆಯನ್ನು ನಡೆಸುತ್ತೇವೆ ಎಮದು ಮನವಿಯಲ್ಲಿ ಹೇಳಲಾಗಿದೆ.
ಈ ಸಂದರ್ಭದಲ್ಲಿ ರಣಧೀರಪಡೆಯ ತಾಲೂಕು ಉಪಾಧ್ಯಕ್ಷ ರವಿಕುಮಾರ ನಾಯ್ಕ,ಅನಿಲ ನಾಯ್ಕಕೊಠಾರಿ,ರಾಜೇಶ ನಾಯ್ಕ,ದಿನೇಶ ನಾಯ್ಕ,ಅಭಿಜಿತ್ ನಾಯ್ಕ,ಸಚಿನ್ ನಾಯ್ಕ,ಆದರ್ಶ ಹೊಸಮಂಜು ಮುಂತಾದವರು ಉಪಸ್ಥಿತರಿದ್ದರು.