ಲಯನ್ಸ್ ಕ್ಲಬ್ ನಿಂದ ಮಾಸ್ಕ,ಸ್ಯಾನಿಟೈಸರ್ ವಿತರಣೆ : ಅಡಿಕೆ ತೋಟ ಹಾನಿ ಸಮಗ್ರವಾಗಿ ಪರಿಗಣಿಸಲು ಮನವಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸ್ಥಳೀಯ ಲಯನ್ಸ್ ಕ್ಲಬ್ ನಿಂದ ಮನೆಕೆಲಸ ಮಾಡುವವರಿಗೆ,ಅಟೋರಿಕ್ಷಾ ಚಾಲಕರಿಗೆ,ಕೂಲಿಕಾರರಿಗೆ, ಮಾಸ್ಕ್,ಸ್ಯಾನಿಟೈಸರ್ ವಿತರಿಸಲಾಯಿತು ಇದರ ಜೊತೆಗೆ ಕೊವಿಡ್ ಜಾಗೃತಿಯ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲ.ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ಖಾಯಿಲೆ ಬಗ್ಗೆ ಭಯ ಹೆಚ್ಚಾದಷ್ಟು ಅನಾರೋಗ್ಯ ಹೆಚ್ಚಾಗುತ್ತದೆ.ಕೊವಿಡ್ ಬಗ್ಗೆ ಜಗತ್ತಿನಾದ್ಯಂತ ಭಯ ಹುಟ್ಟಿಸಲಾಗುತ್ತಿದೆ. ಇದು ಒಂದಿಷ್ಟು ಸತ್ಯವಾದರೂ ಆತಂಕ ಪಡಬೇಕಾಗಿಲ್ಲ ಸಾಮಾಜಿಕ ಅಂತರ,ಸ್ಯಾನಿಟೈಸರ್ ಬಳಕೆ,ಹಾಗೂ ಮಾಸ್ಕ ಧರಿಸುವುದರಿಂದ ಕೊವಿಡ್‍ನಿಂದ ಪಾರಾಗಬಹುದು. ಕೊವಿಡ್ ಜಾಗೃತೆಗಾಗಿ ಹಲವು ಸಂಘಟನೆಗಳು ಆಶಾಕಾರ್ಯಕತೆಯರಿಗೆ,ಪೊಲೀಸ್‍ರಿಗೆ ಹಾಗೂ ಹಲವು ಕೊವಿಡ್ ವಾರಿಯರ್ಸಗಳಿಗೆ ವಿವಿಧ ರೀತಿಯ ಸಾಧನೆಗಳನ್ನು ವಿತರಿಸಿದ್ದಾರೆ ಆದರೆ ಮನೆಕೆಲಸದವರಿಗೆ,ಕೂಲಿಕಾರರಿಗೆ ಇಲ್ಲಿಯವರೆಗೆ ಯಾರು ವಿತರಿಸಿರಲಿಲ್ಲ ಈಗ ಲಯನ್ಸ್ ಕ್ಲಬ್ ಇವರನ್ನು ಗುರುತಿಸಿ ಮಾಸ್ಕ,ಸ್ಯಾನಿಟೆಸರ್ ನೀಡುತ್ತಿದೆ ಎಂದು ಹೇಳಿದರು.

ಲಯನ್ಸ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಮಾತನಾಡಿ,ಸಮಾಜ ಸ್ವಸ್ಥವಾಗಿರಬೇಕಾದರೆ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು,ಮನೆಕೆಲಸದವರು,ಕೂಲಿಕಾರರು ಸಮಾಜದ ಎಲ್ಲಾ ವಿಭಾಗದಲ್ಲೂ ಸಕ್ರೀಯವಾಗಿರುವವರು ಇಂತಹವರ ಆರೋಗ್ಯ ಸಮಾಜಕ್ಕೆ ಮುಖ್ಯವಾಗಿದೆ ಈ ಕಾರಣದಿಂದ ಲಯನ್ಸ್ ಕ್ಲಬ್ ಇಂತಹವರನ್ನು ಗುರುತಿಸಿ ಮಾಸ್ಕ್ ಹಾಗೂ ಸ್ಯಾನಿಟೇಸರ್ ನೀಡಲಾಗುತ್ತಿದೆ ಮತ್ತು ಸಮಾಜದ ಒಳಗೆ ಕೆಲಸ ಮಾಡುವ ಇವರಲ್ಲಿ ಜಾಗೃತಿ ಮೂಡಿದರೆ ಸಾಕಷ್ಟು ಜನರು ಜಾಗೃತರಾಗುತ್ತಾರೆ ಆದ್ದರಿಂದಲೇ ಇವರಿಗೆ ಕೊವಿಡ್ ಜಾಗೃತಿಯ ಕರಪತ್ರವನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.
ಲ.ಜಿ.ಜಿ.ಹೆಗಡೆ ಬಾಳಗೊಡು,ಲ.ರಾಘವೇಂದ್ರ ಭಟ್ಟಕಲ್ಲಾಳ,ಲ.ಪ್ರಶಾಂತ ಶೇಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಸಿದ್ದಾಪುರ ತಾಲೂಕಿನಲ್ಲಿ ಮಳೆಯಿಂದ ಅಡಿಕೆ ತೋಟಗಳು ಹಾನಿಯಾಗಿದ್ದು ಸಮಗ್ರ ಹಾನಿಯನ್ನು ಪರಿಗಣಿಸಿ ಪರಿಹಾರ ನೀಡಲು ಮನವಿ:

ಅಗಸ್ಟ ತಿಂಗಳಿನಲ್ಲಿ ಬೀಸಿದ ಬಾರಿಗಾಳಿ-ಮಳೆಯಿಂದಾಗಿ ಸಿದ್ದಾಪುರ ತಾಲೂಕಿನಲ್ಲಿ ಅಡಿಕೆ ತೋಟಕ್ಕೆ ಸಾಕಷ್ಟು ಹಾನಿಯುಂಟಾಗಿದ್ದು ಇದನ್ನು ಸಮಗ್ರ ಹಾನಿ ಎಂದು ಪರಿಗಣಿಸಿ ಎಕರೆಗೆ 60-70ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೆಮ್ಮನಬೈಲ್ ವ್ಯವಸಾಯ ಸೇವಾಸಹಕಾರಿ ಸಂಘದ ಅಧ್ಯಕ್ಷ ಬಿ.ಆರ್.ನಾಯ್ಕ ನೇತೃತ್ವದಲ್ಲಿ ಸಹಕಾರಿ ಸಂಘದ ಸದಸ್ಯರು ಹಾಗೂ ರೈತರು ಗುರುವಾರ ತಹಸೀಲ್ದಾರ ಮಂಜುಳಾ ಭಜಂತ್ರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನಾದ್ಯಂತ ಅಗಸ್ಟ್ ತಿಂಗಳಿನಲ್ಲಿ ಬೀಸಿದ ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಪ್ರತಿ ಎಕರೆಗೆ 25-30 ಅಡಿಕೆ ಮರಗಳು ಮುರಿದು ಬಿದ್ದಿರುತ್ತದೆ.ಅಲ್ಲದೆ ಮರಕ್ಕೆ ಮರ ಬಡಿದು ಭಾರಿ ಪ್ರಮಾಣದಲ್ಲಿ ಅಡಿಕೆ ಉದುರಿ ಬಿದ್ದಿರುತ್ತದೆ.ಒಂದು ಅಡಿಕೆ ಮರ ನೆಟ್ಟು ಫಲಬರಲು ಕನಿಷ್ಠ ಹತ್ತುವರ್ಷ ಬೇಕಾಗುತ್ತದೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಎರಡು ಕಾರಣದಿಂದ ಒಂದು ಎಕರೆಗೆ 60-70ಸಾವಿರರೂ. ಹಾನಿಯಾಗಿರುತ್ತದೆ. ಅಲ್ಲದೆ ತಾಲೂಕಿನ ಪ್ರತಿಯೊಬ್ಬರ ತೋಟದಲ್ಲೂ ಹಾನಿಯಾಗಿರುವುದರಿಂದ ಪ್ರತಿಯೊಬ್ಬ ರೈತರಿಂದ ಅರ್ಜಿ ಪಡೆದು ಸ್ಥಳಪರಿಶೀಲಿಸುವುದು ಬಿಟ್ಟು ಸಮಗ್ರಹಾನಿ ಎಂದು ಪರಿಗಣಿಸಿ ಶೀಘ್ರದಲ್ಲೆ ಪರಿಹಾರ ವಿತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸೇವಾಸಹಕಾರಿ ಸಂಘದ ಉಪಾಧ್ಯಕ್ಷ ನಾಗರಾಜ ಹೆಗಡೆ,ಎನ್.ಎಲ್.ಗೌಡ,ರಾಮಚಂದ್ರ ನಾಯ್ಕ,ಗಣಪತಿ ಈರಾ ಗೌಡ,ಮೋಹನ ಗೌಡ ಜೆಡಿಎಸ್ ತಾಲೂಕಾ ಅದ್ಯಕ್ಷ ಎಸ್.ಕೆ.ನಾಯ್ಕ ಕಡಕೇರಿ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment