ಆದ್ಯೋತ್ ಸುದ್ದಿನಿಧಿ:
ಅಡಿಕೆ ಕೃಷಿ ಉತ್ಪನ್ನದ ಮೇಲೆ ಮಾರುಕಟ್ಟೆ ಶುಲ್ಕ ವಿನಾಯತಿ ನೀಡುವಂತೆ ಕರ್ನಾಟಕ ಅರೇಕಾ ಛೆಂಬರ್ ಆಫ್ ಕಾಮರ್ಸ(ರಿ) ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ರಾಜ್ಯ ಸರಕಾರದ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರನ್ನು ಕೋರಿದ್ದಾರೆ.
ಈ ಕುರಿತು ಅರೇಕಾ ಛೇಂಬರ್ ಸದಸ್ಯರು ಗುರುವಾರ ನಿರ್ದೇಶಕರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಕೇಂದ್ರ ಸರಕಾರವು ಇತ್ತೀಚೆಗೆ ಸುಗ್ರಿವಾಜ್ಞೆ ಮೂಲಕ ಮಾರುಕಟ್ಟೆ ಪ್ರಾಂಗಣದ ಹೊರಗಡೆ ನಡೆಯುವ ವ್ಯಾಪಾರ-ವಹಿವಾಟಿಗೆ ಮಾರುಕಟ್ಟೆ ಶುಲ್ಕವನ್ನು ಸಂಪೂರ್ಣ ರಿಯಾಯತಿ ಮಾಡಿದೆ. ಆದರೆ ಅಡಿಕೆ ಕೃಷಿ ಉತ್ಪನ್ನವು ಸಂಪೂರ್ಣ ವ್ಯವಹಾರವನ್ನು ಮಾರುಕಟ್ಟೆ ಪ್ರಾಂಗಣದಲ್ಲೇ ನಡೆಸುತ್ತಿದೆ. ಇದೀಗ ಕೇಂದ್ರದ ಸುಗ್ರಿವಾಜ್ಞೆಯಿಂದ ಈಗ ವಹಿವಾಟು ನಡೆಸುತ್ತಿರುವ ವ್ಯವಹಾರಸ್ಥರು ಮಾರುಕಟ್ಟೆ ಶುಲ್ಕ ತಪ್ಪಿಸಲು ಪ್ರಾಂಗಣದ ಹೊರಗಡೆ ವ್ಯವಹಾರ ನಡೆಸಲು ಪ್ರಾರಂಭಿಸಬಹುದು. ಇದರಿಂದ ಪ್ರಾಂಗಣದ ವಹಿವಾಟು ಕುಂಠಿತಗೊಳ್ಳುವ ಸಾಧ್ಯತೆಯಿದೆ. ಕೇಂದ್ರ ಸರಕಾರ ಘೋಷಿಸಿರುವ ಒಂದು ದೇಶ-ಒಂದು ತೆರಿಗೆ ಸುಗ್ರಿವಾಜ್ಞೆ ನಂತರ ಉತ್ತರ ಪ್ರದೇಶ, ಬಿಹಾರ ಹಾಗೂ ಆಸ್ಸಾಂ ರಾಜ್ಯಗಳು ಮಾರುಕಟ್ಟೆ ಶುಲ್ಕವನ್ನುರದ್ದುಮಾಡಿವೆ. ಅಡಿಕೆಗೆ ಈಗಾಗಲೇ ಜಿಎಸ್ಟಿ ಪಾವತಿಸುತ್ತಿರುವುದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯುವ ವಹಿವಾಟಿಗೆ ಕೂಡ ಮಾರುಕಟ್ಟೆ ಶುಲ್ಕ ರದ್ದು ಮಾಡಿದಲ್ಲಿ ಮುಂದೆಯೂ ಸಹ ಮಾರುಕಟ್ಟೆ ಪ್ರಾಂಗಣದಲ್ಲಿ ಉತ್ತಮ ವ್ಯವಹಾರ ನಡೆದು ರೈತರಿಗೆ ಸ್ಪರ್ಧಾತ್ಮಕ ಬೆಲೆ ನೀಡಲು, ಉತ್ತಮ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿಧಿಸುತ್ತಿರುವ ಮಾರುಕಟ್ಟೆ ಶುಲ್ಕವನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.