ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಸಿದ್ದಾಪುರದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ “ಶ್ರೀ ರಾಮೇಶ್ವರ ಸಾವಯವ ಕೃಷಿಪರಿವಾರ ಫಾರ್ಮಲ್ ಪ್ರೊಡ್ಯೂಸರ್ ಕಂ.ಲಿ.” ರೈತ ಉತ್ಪಾದಕ ಸಂಸ್ಥೆಯ ಕಚೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,ಕೃಷಿಯಲ್ಲಿ ಹೊಸತನ ಮತ್ತು ಪ್ರಯೋಗಶೀಲತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಸ್ವಾವಲಂಬತನ ಸಾಧಿಸಬೇಕು. ರೈತರು ಪ್ರಾಕೃತಿಕ ವಿಕೋಪದ ಜೊತೆಗೆ ಕಾಡುಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ ಇಂತಹ ಸಂದಿಗ್ದ ಸಂದರ್ಭದಲ್ಲಿ ರೈತರು ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಒಗ್ಗಿಕೊಳ್ಳಬೇಕು. ಸಾವಯವ ಪದಾರ್ಥಗಳನ್ನು ಬೆಳೆದಲ್ಲಿ ಅಪಾರ ಬೇಡಿಕೆಯಿದೆ. ನಿಂತ ನೀರಾಗಿ ಯೋಚಿಸದೇ ಪರಿಹಾರೋಪಾಯ ಕಂಡುಕೊಂಡು ಹೊಸಜಗತ್ತಿನ ಬೇಡಿಕೆಯನ್ನು ಪೂರೈಸುವತ್ತ ಶ್ರಮವಹಿಸಬೇಕು. “ಇಟಗಿ ಬ್ರ್ಯಾಂಡ್” ಎಂದು ಗುರುತಿಸುವ ರೀತಿಯಲ್ಲಿ ಯಾವುದಾದರೂ ನಿರ್ಧಿಷ್ಟ ಉತ್ಪನ್ನವನ್ನು ಹೊರತರಬೇಕು ಎಂದು ಹೇಳಿದ ಕಾಗೇರಿ,
ಪ್ರಧಾನಮಂತ್ರಿಗಳು ಆತ್ಮನಿರ್ಭರ ಭಾರತ ಯೋಜನೆಯನ್ನು ಹುಟ್ಟುಹಾಕಿದ್ದು ಅದರಲ್ಲಿ ಸಂಘಟಿತವಾಗಿ ತೊಡಗಿಸಿಕೊಳ್ಳುವ ಮೂಲಕ ಬದಲಾವಣೆ ಸಾಧ್ಯ ಎಂದು ಹೇಳಿದರು.
ಸ್ಕೊಡ್‍ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಮಾತನಾಡಿ, ರೈತರು ಸ್ವಾವಲಂಭಿಗಳಾಗುವ ದಿಸೆಯಲ್ಲಿ ಕಾನೂನಾತ್ಮಕ ಹಾಗೂ ವ್ಯಾವಹಾರಿಕವಾಗಿ ಜಿಲ್ಲೆಯಲ್ಲಿ 5 ಸಂಸ್ಥೆಗಳನ್ನು ಕಟ್ಟಲಾಗುತ್ತಿದೆ. ಈ ಸಂಸ್ಥೆಗಳು ರೈತರ ಹಾಗೂ ಸರಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತವೆ. ರೈತರು ಇರುವಷ್ಟೇ ಭೂಮಿಯಲ್ಲಿ ಹೆಚ್ಚಿನ ಬೆಳೆ ಬೆಳೆಯುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಇಂತಹ ಸಂಸ್ಥೆಗಳನ್ನು ಹುಟ್ಟುಹಾಕಲಾಗುತ್ತಿದೆ ಎಂದರು.
ಇಟಗಿ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷ ರಮೇಶ ಹೆಗಡೆ, ರೈತರು ಬೆಳೆದ ಬೆಳೆಗೆ ಅವರೇ ಬೆಲೆ ನಿರ್ಧರಿಸುವ ಕಾಲ ಬರುವಂತಾಗಬೇಕು ಎಂದರಲ್ಲದೇ ಸಾಲಮನ್ನಾದಲ್ಲಿ ಆದ ತೊಡಕಿನ ವಿವರ ನೀಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ನಾಗರಾಜ ನಾಯ್ಕ, ಶ್ರೀರಾಮೇಶ್ವರ ದೇವಾಲಯದ ಮೊಕ್ತೇಸರ ಚಂದ್ರಶೇಖರ ಹೆಗಡೆ, ಸಹಾಯಕ ಕೃಷಿ ನಿರ್ದೇಶಕ ಪ್ರಶಾಂತ ಜಿ.ಎಸ್. ಇತರರು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಇಟಗಿ ಕೃಷಿ ಪರಿವಾರದ ಅಧ್ಯಕ್ಷ ಗೋವಿಂದರಾಜು ರಾಘವ ಹೆಗಡೆ ವಹಿಸಿ ನೂತನ ಸಂಸ್ಥೆಯಲ್ಲಿ ಲಾಭವನ್ನು ಇಟ್ಟುಕೊಳ್ಳದೇ ರೈತರ, ರೈತಕೂಲಿಕಾರರ ಅಗತ್ಯತೆಗಳನ್ನು ಪೂರೈಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದರು.
ಮೇಘನಾ ಅವಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕೃಷಿ ಪರಿವಾರದ ಸಂಸ್ಥಾಪಕ ಅಧ್ಯಕ್ಷ ರಮಾನಂದ ಹೆಗಡೆ ಕೊಡ್ತಗಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಗಜಾನನ ಕೊಡ್ತಗಣಿ ನಿರ್ವಹಿಸಿದರು. ರಮಾನಂದ ಹರಗಿ ವಂದಿಸಿದರು.