ಮಾನವೀಯತೆ ಮರೆತಿರುವ ಕಂದಾಯ ಅಧಿಕಾರಿಗಳು, ಸಿಗುತ್ತಿಲ್ಲ ಪ್ರಕೃತಿ ವಿಕೋಪದ ಪರಿಹಾರ

ಆದ್ಯೋತ್ ಸುದ್ದಿನಿಧಿ:
ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬುದೊಂದು ಗಾದೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಿಜವಾಗುತ್ತಿದೆ.
ಕಳೆದ ವರ್ಷದಂತೆ ಈ ವರ್ಷವೂ ರಾಜ್ಯದ್ಯಂತ ಹೆಚ್ಚಿನ ಮಳೆಯಾಗುತ್ತಿದ್ದು ಸಿದ್ದಾಪುರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ.ಮನೆಗಳು ನೆಲಸಮವಾಗುತ್ತಿದೆ,ಬೆಳೆದು ನಿಂತಿದ್ದ ಬೆಳೆ ನೀರುಪಾಲುಗುತ್ತಿದೆ.
ಸರಕಾರವೇನೋ ಹಾನಿಗೊಳಗಾದವರಿಗೆ ಪರಿಹಾರ ಮಾರ್ಗಸೂಚಿ ಪ್ರಕಟಿಸಿದೆ. ಆದರೆ ಸ್ಥಳೀಯ ಆಡಳಿತ ಮಾತ್ರ ಮನೆಹಾನಿಗೊಳಗಾದವರಿಗೆ ಮತ್ತಿಷ್ಟು ಹಾನಿಯನ್ನೆ ಮಾಡುತ್ತಿದೆ.
ಸ್ಥಳೀಯ ಆಡಳಿತದ ಪ್ರಕಾರ ತಾಲೂಕಿನಲ್ಲಿ 60 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 38 ಮನೆಗಳಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಹಸೀಲ್ದಾರರು ತಿರಸ್ಕರಿಸಿದ್ದಾರೆ.
ಇದರಿಂದ ಮನೆ ಹಾನಿಗೊಳಗಾಗಿರುವುದರ ಜೊತೆಗೆ ಪರಿಹಾರಕ್ಕೆ ಸಲ್ಲಿಸಿರುವ ಅರ್ಜಿಗೆ ಮಾಡಿರುವ ಖರ್ಚು ಹೆಚ್ಚಿನ ಹೊರೆಯನ್ನು ಫಲಾನುಭವಿಗಳು ಹೊರುವಂತಾಗಿದೆ.

ಸಿದ್ದಾಪುರ ತಾಲೂಕಿನ ವಾಜಗೋಡು ಗ್ರಾಪಂ ವ್ಯಾಪ್ತಿಯ ಕೆರಮನೆ ಬಿಜ್ಜಾಳ ಗ್ರಾಮದ ಎಸ್.ಸಿ.ಕಾಲೋನಿಯಲ್ಲಿರುವ ರಾಜೇಶ್ವರಿ ವೀರಭದ್ರ ಹಸ್ಲರ್ ಎನ್ನುವ ಬಡವಿಧವೆಯ ಮನೆ ಕಳೆದ ಅಗಸ್ಟ ತಿಂಗಳ ಮೊದಲವಾರದಲ್ಲಿ ಬಿದ್ದ ಭಾರಿ ಮಳೆಗೆ ಕುಸಿದುಬಿದ್ದಿದೆ. ಮನೆಶಿಥಿಲವಾಗಿದೆ ಎಂಬ ಕಾರಣದಿಂದ ಮಳೆ ಹೆಚ್ಚಾದ ದಿನ ಮೂರು ಕಿ.ಮಿ.ದೂರದಲ್ಲಿರುವ ತವರು ಮನೆಗೆ ಇಬ್ಬರು ಮಕ್ಕಳ ಸಮೇತ ಹೋಗುತ್ತಿದ್ದ ರಾಜೇಶ್ವರಿ ಮನೆ ಬಿದ್ದ ದಿನವೂ ತಾಯಿಯ ಮನೆಗೆ ಹೋಗಿದ್ದ ಕಾರಣ ಪ್ರಾಣ ಕಳೆದುಕೊಳ್ಳದೆ ಬಚಾವ್ ಆಗಿದ್ದಾಳೆ.

ಪ್ರಕೃತಿವಿಕೋಪದ ಪರಿಶೀಲನೆಗೆ ಬಂದ ಗ್ರಾಮಲೆಕ್ಕಾಧಿಕಾರಿ ಮನೆಯಲ್ಲಿ ವಾಸ್ತವ್ಯ ಇಲ್ಲ ಎಂದು ವರದಿ ನೀಡಿದ ಕಾರಣ ಬಡವಿಗೆ ಪ್ರಕೃತಿ ವಿಕೋಪದಿಂದ ಸಿಗುವ ಪರಿಹಾರವೂ ಸಿಕ್ಕಿಲ್ಲ ಇದರಿಂದ ವಾಸಕ್ಕೆ ಮನೆ ಇಲ್ಲದೆ ಬಡವಿ ಒದ್ದಾಡುವಂತಾಗಿದೆ.
ರಾಜೇಶ್ವರಿ ಹಸ್ಲರ್ ಪ್ರತಿವರ್ಷ ಗ್ರಾಪಂಗೆ ಮನೆ ಕಂದಾಯ ನೀಡುತ್ತಾರೆ,ಪ್ರತಿತಿಂಗಳು ವಿದ್ಯುತ್ ಬಿಲ್ ಪಾವತಿಸುತ್ತಾರೆ,ಈ ಭಾಗದಲ್ಲಿ ಸರಬರಾಜಾಗುವ ಕಿರುನೀರಾವರಿಗೆ ಸಂಬಂಧಿಸಿದ ವಿದ್ಯುತ್ ಮೀಟರ್ ಇವರ ಮನೆಯಲ್ಲಿ ಇದೆ ಆದರೂ ಕಂದಾಯ ಇಲಾಖೆಯವರು ಇವರು ವಾಸ್ತವ್ಯ ಇಲ್ಲ ಎಂದು ವರದಿ ನೀಡುತ್ತಾರೆ.
ಕಳೆದ ತಿಂಗಳು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಭೆ ನಡೆಸಿ, ಮನೆಹಾನಿ ಒಳಗಾದ ಅರ್ಜಿಗಳನ್ನು ತಿರಸ್ಕರಿಸಬೇಡಿ ನಿಯಮಕ್ಕೊಳಪಡುವಂತೆ ಸಾಧ್ಯವಾದಷ್ಟು ಪರಿಹಾರ ನೀಡಿ ಜನರು ನೊಂದಿರುತ್ತಾರೆ.ಅವರು ಒಂದಿಷ್ಟು ಸಾಂತ್ವಾನಗೊಳ್ಳುತ್ತಾರೆ ಎಂದು ಹೇಳಿದ್ದರು.
ಅದೇ ರೀತಿ ಪಟ್ಟಣದ ತಾಪಂ ಸಭಾಭವನದಲ್ಲಿ ಪರಿಶೀಲನಾ ಸಭೆ ನಡೆಸಿರುವ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರು ಮನೆಹಾನಿ,ಬೆಳೆಹಾನಿಗೊಳಗಾದವರ ಬಗ್ಗೆ ಇಲಾಖೆಯವರಿಗೆ ಸಹಾನುಭೂತಿ ಇರಬೇಕು.ನಿಯಮದಡಿಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಪರಿಹಾರ ಸಿಗುವಂತೆ ಮಾಡಬೇಕು ಎಂದು ಹೇಳಿದ್ದರು.
ಆದರೆ ತಾಲೂಕಿನ ಕಂದಾಯ ಅಧಿಕಾರಿಗಳು ಮಾನವೀಯತೆಯನ್ನು ಮರೆತು ಹೆಚ್ಚಿನ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.

ಬಗ್ಗೆ ಆದ್ಯೋತ್ ನ್ಯೂಸ್ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಗಮನಕ್ಕೆ ತಂದಿದ್ದು,ಪರಿಹಾರ ನೀಡಬೇಕಾದ್ದು ಆಡಳಿತದ ಕರ್ತವ್ಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಹಸೀಲ್ದಾರರಿಗೆ ಸೂಚಿಸುತ್ತೇನೆ ಎಂದಿದ್ದಾರೆ.
*********************************
ಕಳೆದ ಒಂದು ವರ್ಷದ ಹಿಂದೆ ನನ್ನ ಗಂಡ ತೀರಿಕೊಂಡಿದ್ದಾರೆ. ಮನೆ ಹಳೆಯದಾಗಿರುವುದರಿಂದ ಗಾಳಿಮಳೆ ಜೋರಾದಾಗ ನಾನು ಮಕ್ಕಳನ್ನು ಕರೆದುಕೊಂಡು ಮೂರು ಕಿ.ಮಿ.ದೂರದ ನನ್ನ ತಾಯಿಯ ಮನೆಗೆ ಹೋಗುತ್ತೇನೆ ಅದೇ ರೀತಿ ಕಳೆದ ತಿಂಗಳೂ ನಾನು ತವರು ಮನೆಗೆ ಹೋದಾಗ ಇಲ್ಲಿ ಮನೆ ಬಿದ್ದಿದೆ ಇಲ್ಲಿಗೆ ಪರಿಶೀಲನೆಗೆ ಬಂದವರು ನಾನು ಇಲ್ಲಿ ಉಳಿದಿಲ್ಲ ಎಂದು ಬರೆದುಕೊಂಡು ಹೋಗಿದ್ದಾರೆ ನಾನು ಬಡವಳಿದ್ದು ಕೂಲಿ ಮಾಡಿಕೊಂಡು ಚಿಕ್ಕ ಮಕ್ಕಳನ್ನು ಸಾಕುತ್ತಿದ್ದೇನೆ ವಾಸ್ತವ್ಯಕ್ಕೆ ಬೇರೆ ಮನೆಯೂ ಇಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಮನೆಕಳೆದುಕೊಂಡಿರುವ ಬಿಜ್ಜಾಳ ಗ್ರಾಮದ ರಾಜೇಶ್ವರಿ ಹಸ್ಲರ್

**********************************
ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಪರಿಶೀಲನೆಗೆ ಬಂದಾಗ ಫಲಾನುಭವಿಗಳಿಗೆ ತಿಳಿಸಿಲ್ಲ ಮನೆ ಬೀಳುವಾಗ ಅಲ್ಲಿ ವಾಸ್ತವ್ಯ ಇರಬೇಕು ಎನ್ನುವ ಅಧಿಕಾರಿಗಳ ವಾದ ಅಮಾನವೀಯವಾದುದು. ತಹಸೀಲ್ದಾರರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ವಾಸ್ತವಾಂಶವನ್ನು ತಿಳಿಯಬೇಕು ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಬೇಕು ವಿಧಾನಸಭಾಧ್ಯಕ್ಷರೂ ಆಗಿರುವ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೂಡಲೆ ಅಧಿಕಾರಿಗಳಿಗೆ ಇಂತಹ ಬಡವರಿಗೆ ಸಹಾಯ ಮಾಡುವಂತೆ ಸೂಚಿಸಬೇಕು ರಾಜೇಶ್ವರಿ ಹಸ್ಲರ್‍ಗೆ ಮನೆ ನೀಡಬೇಕು ಎಂದು ಆಗ್ರಹಿಸುತ್ತಾರೆ ವಾಜಗೋಡು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ ಐಸೂರು.
**********************************

About the author

Adyot

Leave a Comment