ಬೆಳಕಿನ ಹಬ್ಬ ದೀಪಾವಳಿ

ಆದ್ಯೋತ್ ವಿಶೇಷ——
ಭಾರತದ ಹಿಂದೂ ಸಂಸ್ಕೃತಿಯ ಪ್ರತಿಯೊಂದು ಹಬ್ಬವು ಪ್ರಕೃತಿಯೊಡನೆ ಅವಿನಾಭಾವಿ ಸಂಬಂಧವನ್ನು ಹೊಂದಿರುತ್ತದೆ
ಪ್ರಕೃತಿಯನ್ನು ಉಪಭೋಗಿಸುವ ವಸ್ತು ಎಂದು ಭಾವಿಸದೆ ಅದನ್ನು ದೈವವೆಂದು,ಲಕ್ಷ್ಮೀ ಎಂದು ಪೂಜಿಸುವುದೇ ನಮ್ಮ ಭಾರತೀಯ ಸಂಸ್ಕಾರ.ಪಶು,ಪಕ್ಷಿ,ಕಲ್ಲು,ಮಣ್ಣು,ಆಕಾಶ,ನೀರು ಹೀಗೆ ಪ್ರತಿಯೊಂದರಲ್ಲೂ ದೈವತ್ವವನ್ನು ಕಾಣುವ ಉದಾತ್ತ ಮನೋಸಂಸ್ಕಾರವೇ ನಮ್ಮ ಭಾರತೀಯತೆ.
ಭಾರತೀಯರೆಲ್ಲ ವಾಸ್ತವಿಕವಾಗಿ ಪೂಜಿಸುವುದು ಪ್ರಕೃತಿ ರೂಪಿ ಪರಮಾತ್ಮನನ್ನೇ ಎನ್ನುವುದು ವೇದಾಗಮ ಜಾನಪದಗಳೆಲ್ಲ ರಂಗಗಳಲ್ಲೂಎದ್ದು ಕಾಣುವ ಸತ್ಯ.

ದೀಪಾವಳಿ ಎನ್ನುವುದು ಕೇವಲ ಬಾಹ್ಯವಾಗಿ ದೀಪವನ್ನು ಬೆಳಗಿಸುವುದಕ್ಕೆ ಸೀಮಿತವಲ್ಲ ಇದು ನಮ್ಮೊಳಗಿನ ಬೆಳಕನ್ನು ಹೊರತರುವ ಹಬ್ಬ.ಇದು ಅರಿವಿನ ಪ್ರಜ್ಞೆಯನ್ನು ಹೊರತರುವ ಒಂದು ಪ್ರಕ್ರಿಯೆ.
ದೀಪಾವಳಿ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಹಬ್ಬ. ಕಾರ್ತೀಕದೀಪೋತ್ಸವ, ದೀಪೋತ್ಸವ, ಯಕ್ಷರಾತ್ರಿ ಮುಂತಾದ ನಾಮಾಂತರಗಳನ್ನು ಪ್ರಾಚೀನ ಉಲ್ಲೇಖಗಳಲ್ಲಿ ಕಾಣಬಹುದು.

ದೀಪಾವಳಿಯನ್ನು ಕೆಲವು ಭಾಗದಲ್ಲಿ ಮೂರು ದಿನ ಕೆಲವು ಭಾಗದಲ್ಲಿ ಐದು ದಿನ ಆಚರಿಸುವ ಪದ್ದತಿ ಇದೆ.
ಕಾರ್ತೀಕ ಮಾಸದುದ್ದಕ್ಕೂ ದೀಪೋತ್ಸವವನ್ನು ಆಚರಿಸಲಾಗುತ್ತದೆಯಾದರೂ ಆಶ್ವಿಜ ಮಾಸದ ಕೊನೆಯ ಮೂರು ದಿವಸಗಳನ್ನೂ ಕಾರ್ತೀಕ ಮಾಸದ ಮೊದಲ ಎರಡು ದಿನಗಳನ್ನೂ ವಿಶೇಷವಾಗಿ ದೀಪಾವಳಿ ಉತ್ಸವವೆಂದೇ
ಆಚರಿಸುತ್ತಾರೆ.

ದೀಪ ಎನ್ನುವುದು ಭಾರತೀಯರ ಅವಿಭಾಜ್ಯ ಅಂಗ.ದೀಪ ಎನ್ನುವುದು ಸೂರ್ಯನ ಪ್ರತಿರೂಪ.ಬೆಳಗಿನ ಸೂರ್ಯನಿಗೆ ನಮಸ್ಕಾರ ಮಾಡುವುದರೊಂದಿಗೆ ಪ್ರಾರಂಭವಾಗುವುದು ನಮ್ಮ ದಿನಚರಿ.ಇದು ಜ್ಞಾನದ ಹಸಿವನ್ನು ನೀಗುವುದಕ್ಕಾಗಿ,ಒಲೆಗೆ ಪೂಜೆ ಮಾಡಿ ಬೆಂಕಿ ಹಚ್ಚುವುದರೊಂದಿಗೆ ನಮ್ಮ ದೈಹಿಕ ಹಸಿವನ್ನು ನೀಗಿಸಿಕೊಳ್ಳುತ್ತೇವೆ.ನಮ್ಮ ಜೀವನದ ಸಂಸ್ಕಾರಗಳನ್ನು ಪಡೆಯುವುದು ಅಗ್ನಿಸಾಕ್ಷಿಯಾಗಿ ಪ್ರತಿದಿನ ದೇವರ ಎದುರು ದೀಪ ಬೆಳಗಿಸುತ್ತೇವೆ ಒಟ್ಟಾರೆ ದೀಪ ನಮ್ಮ ಜೀವನದಲ್ಲಿ ಬೆಸೆದುಕೊಂಡಿದೆ.

ಈ ಜ್ಞಾನ ಸ್ವರೂಪಿ ದೀಪವನ್ನು ಆರಾಧಿಸುವ ಹಬ್ಬ ದೀಪಾವಳಿ
ಮನೆಮಂದಿ ಸೇರಿ ಹಾಡು,ನೃತ್ಯ,ಪೂಜೆ ಮಾಡಿ ಸಂತೋಷ ಪಡುವ ಹಬ್ಬ

ದೀಪಾವಳಿಯು ಐದು ದಿವಸಗಳ ಉತ್ಸವ. ಆಶ್ವಿನ ತ್ರಯೋದಶಿಯಂದು ‘ನೀರು ತುಂಬುವ ಹಬ್ಬ‘ಮನೆಯ ಕೊಳೆ ಕಸಗಳನ್ನು ಆಚೆಗೆ ಬಿಸುಟು, ಗೋಡೆಗಳಿಗೆ ಸುಣ್ಣ ಬಳಿದು, ಮನೆಯಂಗಳವನ್ನು ತೊಳೆಯುವುದು, ಸಿಹಿಯೂಟವನ್ನುಂಡು ಮರುದಿನದ ಹಬ್ಬಕ್ಕೆ ತಯಾರಾಗುವುದೇ ಈ ದಿನದ ಮುಖ್ಯ ಕಲಾಪ.

ಎರಡನೆಯ ದಿನ ನರಕಚತುರ್ದಶಿ ಮನೆಯ ಹಿರಿಯ ತಾಯಿ ಎಲ್ಲರಿಗೂ ತಿಲಕ ಹಚ್ಚಿ ಎಣ್ಣೆ ಶಾಸ್ತ್ರ ಮಾಡುತ್ತಾಳೆ. ಆ ಬಳಿಕ ಮನೆ ಮಂದಿಯೆಲ್ಲ ಅಭ್ಯಂಗ ಸ್ನಾನದ ಸುಖವನ್ನು ಸವಿಯುತ್ತಾರೆ. ಹೊಸ ಬಟ್ಟೆ ಧರಿಸಿ, ಮನೆಯಲ್ಲೆಲ್ಲೂ ಧ್ವಜ- ಪತಾಕೆ- ಮಾಲೆ- ತೋರಣಗಳನ್ನು ಕಟ್ಟಿ ಶೋಭೆಗೊಳಿಸುತ್ತಾರೆ. ರಂಗವಲ್ಲಿಗಳನ್ನು ರಚಿಸುತ್ತಾರೆ. ಗೋ ಪೂಜೆ, ತುಳಸೀ ಪೂಜೆ, ಹೊಸ್ತಿಲ ಪೂಜೆಗಳನ್ನು ಮುಗಿಸಿ ಎಲ್ಲರೂ ಪೂಜಾ ಮಂದಿರದಲ್ಲಿನೆರೆದು ಕುಲದೈವದ ಪೂಜೆಯನ್ನೂ ಕೃಷ್ಣ-ಲಕ್ಷ್ಮೀಯರ ಪೂಜೆಯನ್ನೂ ಮಾಡುತ್ತಾರೆ. ಆ ಬಳಿಕ ಗುರು ಹಿರಿಯರಿಗೆ ನಮಿಸಿ ಪರಸ್ಪರ ಸಿಹಿ ಹಂಚಿಕೊಂಡೇ ಆ ಬಳಿಕ ಉಪಾಹಾರ ಮಾಡುತ್ತಾರೆ.

ದೀಪಾವಳಿಯ ಅಮಾವಸ್ಯೆಯು ಜೈನರ ಪಾಲಿಗೆ ಬಹಳ ಮಹತ್ವದ ದಿನ. ಮೋಕ್ಷಲಕ್ಷ್ಮೀ ಪೂಜೆಯ ವ್ರತ. ಸಕಲ ಭೋಗಗಳನ್ನೀಯುವ ಲಕ್ಷ್ಮಿ ಭೋಗಾತೀತವಾದ ಆತ್ಮಜ್ಞಾನವನ್ನೂ ನೀಡುವ ತಾಯಿ. ಹಾಗಾಗಿ ಭೋಗಕ್ಕೂ ಯೋಗಕ್ಕೂ ಅವಳೇ ಉಪಾಸ್ಯ ಎನ್ನುವುದು ಇಲ್ಲಿನ ಭಾವ. ಕನ್ನಡದ ನೆಲದಲ್ಲಿ ಕೆಲವರು ರೈತಾಪಿ ಜನಾಂಗಗಳು ಅಮಾವಾಸ್ಯೆಯಂದು ಕೇದಾರೇಶ್ವರ ವ್ರತವನ್ನು ಅಥವಾ ಕೇದಾರಗೌರೀ ವ್ರತವನ್ನು ಆಚರಿಸುತ್ತಾರೆ.

ಬಲಿಪಾಡ್ಯಮಿ. ಸಜ್ಜನನಾದ ಬಲಿಚಕ್ರವರ್ತಿಯು ರಾಕ್ಷಸರ ರಾಜ. ಇವನ ಸಜ್ಜನಿಕೆಯ ಕೀರ್ತಿಯನ್ನು ಅಪ ಬಳಕೆ ಮಾಡಿದ ರಾಕ್ಷಸರು, ದೇವ-ಮಾನವರುಗಳು ಲೋಕಗಳನ್ನೆಲ್ಲ ಆಕ್ರಮಿಸಿದ್ದರು. ರಾಕ್ಷಸರನ್ನು ಅವರವರ ಲೋಕಗಳಿಗೆ ಓಡಿಸಲೆಂದು ವಿಷ್ಣುವು ವಾಮನಾವತಾರ ತಾಳಿದ ದಿನವೆಂದು ಇದು ಪ್ರಸಿದ್ಧ. ಮೂರು ಹೆಜ್ಜೆ ದಾನವನ್ನು ಪಡೆಯುವ ನೆಪದಲ್ಲಿ ರಾಕ್ಷಸರು ಅಪಹರಿಸಿದ ಇತರರ ಲೋಕಗಳನ್ನೆಲ್ಲ ಮರಳಿ ಪಡೆದು, ಅವರವರಿಗೆ ಹಿಂದಿರುಗಿಸಿದ ವಿಷ್ಣುವು, ಬಲಿಯ ಭಕ್ತಿಗೂ ವಿಶೇಷಾನುಗ್ರಹವನ್ನು ಮಾಡುತ್ತಾನೆ. ಅವನ ಮನೆಯ ಬಾಗಿಲನ್ನೂ ಸದಾ ಕಾಯುವ ವೃತ್ತಿಯನ್ನು ಹಿಡಿಯುತ್ತಾನೆ.

ಯಮದ್ವಿತೀಯಹಬ್ಬ. ಇದು ಸೋದರ-ಸೋದರಿಯರ ಹಬ್ಬ. ಈ ಹಬ್ಬಕ್ಕೆ ಭಾರತಾದ್ಯಂತ ಬೇರೆಬೇರೆ ಹೆಸರುಗಳಿವೆ- ಭಗಿನೀದ್ವಿತೀಯ, ಭಾಯಿಭೀಜ…, ಸೋದರ ಬಿದಿಗೆ, ಯಮನ ಹಬ್ಬ, ಯಮುನಾ ಹಬ್ಬ ಇತ್ಯಾದಿ. ಯಮುನೆಯು ತನ್ನ ಅಣ್ಣ ಯಮನನ್ನು ಈ ದಿನದಂದು ಆಹ್ವಾನಿಸಿ ಊಟವಿತ್ತು ಆದರಿಸಿದಳಂತೆ. ವರವೇನು ಬೇಕೆಂದಾಗ ಆಕೆ ”ಈ ದಿನದಂದು ಸೋದರರನ್ನು ಅನ್ನ ಪಾನಗಳಿಂದ ಸತ್ಕರಿಸುವ ಸ್ತ್ರೀಯರಿಗೆ ದೀರ್ಘಾಯಸ್ಸನ್ನು ಸೌಮಂಗಲ್ಯವನ್ನೂ ಕರುಣಿಸು,” ಎಂದು ಕೇಳಿಕೊಂಡಳಂತೆ. ಅಕ್ಕ ತಂಗಿಯರ ಮನೆಗಳಿಗೆ ತೆರಳಿ ಔತಣದಲ್ಲಿ ಭಾಗವಹಿಸಿ ನಕ್ಕು ನಲಿದು ಕಾಣಿಕೆ ಕೊಟ್ಟು ತೆಗೆದುಕೊಳ್ಳುವ ಸಂಭ್ರಮ ಇಂದಿಗೂ ಬಹಳ ಪ್ರದೇಶಗಳಲ್ಲಿ ಭರ್ಜರಿಯಾಗಿ ನಡೆಯುತ್ತದೆ. ಈ ಎಲ್ಲ ಸುಂದರ ಆಚಾರಗಳಲ್ಲೂ ಭಕ್ತಿ, ವಿಶ್ವಾಸ, ದಾನ, ಧರ್ಮಗಳಲ್ಲದೇ ಸ್ನೇಹ, ಬಾಂಧವ್ಯ, ಸಡಗರ, ಔತಣ, ಕಲಾಭಿಜ್ಞತೆಗಳೂ ಕೂಡಿವೆ ಎನ್ನುವುದು ನಮ್ಮ ಸಂಸ್ಕೃತಿಯ ಹಿರಿಮೆ.
ಕೊವಿಡ್ ಎಂಬ ಮಹಾಮಾರಿ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ ನಾವು ದೀಪಾವಳಿಯನ್ನು ಸರಳವಾಗಿ ಆಚರಿಸೋಣ.ನಮ್ಮ ಹಬ್ಬ ದೀಪ ಬೆಳಗಿಸುವುದಕ್ಕೆ ಸೀಮಿತವಾಗಿರಲಿ, ಬಾರಿ ಪಟಾಕಿಯನ್ನು ಬಿಡೋಣ,ಪೂಜೆ,ಅಲಂಕಾರಕ್ಕೆ ಹೆಚ್ಚು ಮಹತ್ವ ಕೊಡೋಣ,ಸಾಮಾಜಿಕ ಅಂತರ ಪಾಲಿಸುವುದು,ಮಾಸ್ಕ್ ಧರಿಸುವುದು,ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಕೊವಿಡ್ ಮಹಾಮಾರಿಯನ್ನು ಓಡಿಸೋಣ.
ನಮ್ಮೆಲ್ಲ ಓದುಗರಿಗೂ,ಲೇಖಕರಿಗೂ,ಜಾಹೀರಾತುದಾರರಿಗೂ ದೀಪಾವಳಿಯ ಶುಭಹಾರೈಕೆಗಳು.

About the author

Adyot

Leave a Comment