ಪುಷ್ಪಕ ಯಾನ ಎಂಬ ವಿಶಿಷ್ಟ ಯಕ್ಷಗಾನ ಪ್ರಯೋಗ
ಯಕ್ಷಗಾನದ ಪರಂಪರೆಯಲ್ಲಿ ಬದಲಾವಣೆಗಳು ನಿರಂತರವಾಗಿ ನಡೆಯುತ್ತಿದೆ.ಪೌರಾಣಿಕ ಪ್ರಸಂಗದಿಂದ ಹೊರಳಿ ಜಾನಪದ,ಐತಿಹಾಸಿಕ ಹೀಗೆ ಸಾಗಿದ ಯಕ್ಷಗಾನ ಕತೆಗಳು ಇಂದು ಸಿನೇಮಾ ಕತೆಗಳನ್ನು ಬಳಸಿ ಯಕ್ಷಗಾನ ರಚಿಸಲಾಗುತ್ತಿದೆ. ಹಿಂದೆ ಬಾಲಗೋಪಾಲವೇಷದ ಪ್ರವೇಶದೊಂದಿಗೆ ಯಕ್ಷಗಾನ ಪ್ರಾರಂಭಿಸಿ ಸ್ತ್ರೀವೇಷ,ಒಡ್ಡೋಲಗ ನಂತರ ಯಕ್ಷಗಾನದ ಕತೆ ಪ್ರಾರಂಭವಾಗುತ್ತಿತ್ತು. ಆದರೆ ಈಗ ನೇರವಾಗಿ ಕತೆ ಪ್ರಾರಂಭಿಸಲಾಗುತ್ತಿದೆ.ಈಡೀ ರಾತ್ರಿ ನಡೆಯುತ್ತಿದ್ದ ಯಕ್ಷಗಾನ ಈಗ ಮೂರು ಗಂಟೆಗೆ ಇಳಿದಿದೆ.ಅದೇ ರೀತಿ ಏಕವ್ಯಕ್ತಿಯ ಯಕ್ಷಗಾನ ಪ್ರಯೋಗವೂ ನಡೆದಿದೆ. ಆದರೆ ಇದು ನಾಟ್ಯಕ್ಕೆ ಸೀಮಿತವಾಗಿತ್ತು.
ಆದರೆ ಇತ್ತಿಚೆಗೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹೊಸೂರು ಶಂಕರಮಠದಲ್ಲಿ ಒಂದು ವಿಶಿಷ್ಟ ಯಕ್ಷಗಾನ ಪ್ರಯೋಗ ನಡೆಯಿತು. ಭೂಕೈಲಾಸ ಯಕ್ಷಗಾನದಬ್ರಾಹ್ಮಣವಟು(ಗಣಪತಿ)ರಾವಣ,ಶಿವ,ಪಾರ್ವತಿ,ಕೈಕಸೆ ಹೀಗೆ ಐದು ಪಾತ್ರಗಳನ್ನು ಒಬ್ಬರೆ ವ್ಯಕ್ತಿ ಮಾಡುವ ಮೂಲಕ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದ್ದಾರೆ.
ಪುಷ್ಪಕಯಾನದ ಮೂಲಕ ಯಕ್ಷಗಾನವನ್ನು ಕೇವಲ ಒಂದು ದೃಶ್ಯಕ್ಕೆ,ಕೇವಲ ನಾಟ್ಯಕ್ಕೆ ಸೀಮಿತಗೊಳಿಸದೆ ಹಾಸ್ಯ,ರೌದ್ರ,ಕರುಣೆ,ಭಾವ ಹೀಗೆ ಹಲವು ವಿಧದಲ್ಲಿ ಪ್ರಸ್ತುತಪಡಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿರುವುದು ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ಟ ಕ್ಯಾದಗಿ.
ಭೂಕೈಲಾಸ ಯಕ್ಷಗಾನವನ್ನು 80 ನಿಮಿಷಕ್ಕೆ ಸೀಮಿತಗೊಳಿಸಿಕೊಂಡು ಪುಷ್ಪಕಯಾನವನ್ನು ಹೆಣೆಯಲಾಗಿದೆ. ಆತ್ಮಲಿಂಗವನ್ನು ಭೂಮಿಯ ಮೇಲಿಟ್ಟು ರಾವಣನಿಂದ ಪೆಟ್ಟು ತಿಂದು ಪ್ರವೇಶ ಮಾಡುವ ಗಣಪತಿಯಿಂದ ಪ್ರಸಂಗ
ಪ್ರಾರಂಭವಾಗುತ್ತದೆ.ಇಲ್ಲಿ ಗಣಪತಿ ಕೇವಲ ಪಾತ್ರವಲ್ಲ ನಿರೂಪಕನೂ ಹೌದು.
ಮುಂದೆ ಕೈಕಸೆಯು ಮರಳು ಲಿಂಗ ಮಾಡಿಪೂಜಿಸಿದ್ದು ಆತ್ಮಲಿಂಗ ತರುತ್ತೇನೆಂದು ಹೊರಟ ರಾವಣ ಕೈಲಾಸ ಗಿರಿಯನ್ನು ಎತ್ತಿದ್ದು ಶಿವನಿಂದ ಪಾರ್ವತಿಯನ್ನು ಪಡೆದಿದ್ದು ನಂತರ ಮೂರ್ಖತನದ ಅರಿವಾಗಿ ಪುನಃ ತನ್ನ ರುಂಡವನ್ನು ಕಡಿದು ವೀಣೆ ಮಾಡಿ ಸಾಮಗಾನ ಸ್ತುತಿ ಹಾಡಿ ಶಿವನನ್ನು ಒಲಿಸಿಕೊಂಡಿದ್ದು,ನಂತರ ಶಿವನಿಂದ ಆತ್ಮಲಿಂಗ ಪಡೆದದ್ದು ದಾರಿಯಲ್ಲಿ ಗಣಪತಿಯಿಂದ ಆದ ಮೋಸದಿಂದ ಆತ್ಮಲಿಂಗ ಭೂಮಿಯಲ್ಲಿ ಇಳಿದಿದ್ದು ಇಲ್ಲಿಗೆ ಪುಷ್ಪಕಯಾನ ಮುಗಿಯುತ್ತದೆ.
ಗಣಪತಿ,ಶಿವ,ಪಾರ್ವತಿ,ರಾವಣ,ಕೈಕಸೆ ಈ ಐದು ಪಾತ್ರಗಳನ್ನು ಸಮರ್ಥವಾಗಿ ತೂಗಿಸಿದ್ದು ಮಹಾಬಲೇಶ್ವರ ಭಟ್ಟ.
ಭಟ್ಟರು ಹಾಸ್ಯ ಕಲಾವಿದರಾದ್ದರಿಂದ ಈಡೀ ಪ್ರಯೋಗದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಅಲ್ಲದೆ ಬ್ರಾಹ್ಮಣವಟುವಿನ ರೂಪಿನಲ್ಲಿರುವ ಗಣಪತಿಯಾಗಿ ಅವರ ಅಭಿನಯ ಉತ್ತಮವಾಗಿದೆ. ಹಾಗಂತ ತಾನು ಕೇವಲ ಹಾಸ್ಯ ಪಾತ್ರಕ್ಕೆ ಸೀಮಿತನಲ್ಲ ಎನ್ನುವುದನ್ನು ರಾವಣನ ಪಾತ್ರದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ.
ಈ ಪ್ರಯೋಗ ಯಶಸ್ವಿಯಾಗಲು ಪ್ರಮುಖ ಕಾರಣ ಯಕ್ಷಗಾನ ಭಾಗವತ ರಾಘವೇಂದ್ರ ಮಯ್ಯ. ಕಲಾವಿದ ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ ಅಣಿಯಾಗುವ ಸಮಯದಲ್ಲಿ ಅವರು ತನ್ನ ಗಾನದಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಯಕ್ಷಗಾನ ಪ್ರಸಂಗಕರ್ತೃ ದೇವಿದಾಸ ಈಶ್ವರಮಂಗಲ ಗೀತ ಸಾಹಿತ್ಯ ಸುಮಧುರವಾಗಿದೆ.ಪೌರಾಣಿಕ ಪ್ರಸಂಗವನ್ನು ಅತಿ ಕಡಿಮೆ ಬದಲಾವಣೆಗಳೊಂದಿಗೆ ಇಂತಹ ಪ್ರಯೋಗಕ್ಕೆ ಅಣಿಮಾಡುವುದು ಸುಲಭವಲ್ಲ ವಿ.ಉಮಾಕಾಂತ ಭಟ್ಟಕೆರೆಕೈ ಇದಕ್ಕೆ ಮಾರ್ಗದರ್ಶನವನ್ನು,ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ತಾಂತ್ರಿಕ ಸಲಹೆಯನ್ನು ನೀಡಿದ್ದರಿಂದ ಈ ಪ್ರಯೋಗ ಯಶಸ್ವಿಯಾಗಿದೆ.
ಯಕ್ಷಗಾನ ಮೂಲ ಚೌಕಟ್ಟಿನಲ್ಲಿ ಇಂತಹ ಪ್ರಯೋಗ ನಡೆಯುವುದು ಯಕ್ಷಗಾನದ ಉಳಿವಿಗೆ ಅವಶ್ಯಕ.
(ಲೇಖಕರು-ಡಿ.ಜಿ)