ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಪ್ರಧಾನಮಂತ್ರಿಗ್ರಾಮ ಸಡಕ್ ಯೋಜನೆ-3ನೇ ಹಂತದಲ್ಲಿ ಸುಮಾರು 25 ಕಿ.ಮಿ.ರಸ್ತೆಗೆ ಮಂಜೂರಾಗಿದೆ.ಮೆಣಸಿ-ವಂದಾನೆ-ಕುಡಗೋಡು 4.66ಕಿ.ಮಿ.ರಸ್ತೆಗೆ 4.32 ಕೋಟಿರೂ.,ಹಳೆಬೇಡ್ಕಣಿಯಿಂದ ಹಲಗೇರಿ-ಆಡುಕಟ್ಟಾ-ಕುಂಬಾರಕುಳಿ 5.98ಕಿಮಿ 4.42ಕೋಟಿರೂ.ವೆಚ್ಚದ ರಸ್ತೆಗೆ ಸೋಮವಾರ ವಂದಾನೆ ಸಮೀಪದ ಬೇಗಾರನಲ್ಲಿ ಭೂಮಿ ಪೂಜೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತಕುಮಾರ ಹೆಗಡೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ
ಇತ್ತೀಚೆಗೆ ಗುಜರಾತ್ ಅಹ್ಮದಾಬಾದ್‍ನಲ್ಲಿ ದೇಶದ ಎಲ್ಲಾ ರಾಜ್ಯಗಳ ಸ್ಪೀಕರ್ ಸಮಾವೇಶ ನಡೆಯಿತು.ಇದರಲ್ಲಿ ರಾಷ್ಟ್ರಪತಿಗಳು,ಉಪರಾಷ್ಟ್ರಪತಿಗಳು ಭಾಗವಹಿಸಿದ್ದರು ಸಭೆಯಲ್ಲಿ ಭಾಗವಹಿಸಿದ್ದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು
ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ವ್ಯಾಪಕ ಚರ್ಚೆಯಾಗಬೇಕಾಗಿದೆ ಈ ದಿಸೆಯಲ್ಲಿ ಸ್ಪೀಕರ್ ಪ್ರಯತ್ನ ಮಾಡಬೇಕು ಎಂದಿದ್ದರು ಆದ್ದರಿಂದ ಡಿ.7 ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ಕೊನೆಯ ಎರಡು ದಿನ ಅಂದರೆ ಡಿ.14-15ರಂದು ಈ ಬಗ್ಗೆ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ಕಾಗೇರಿಯವರು ಹೇಳಿದರು.
ಸಿದ್ದಾಪುರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.ಬಸ್ ನಿಲ್ದಾಣ ಉದ್ಘಾಟನೆ ಜನವರಿ15ರೊಳಗೆ ಆಗುತ್ತದೆ.ಮಿನಿವಿಧಾನಸೌಧದ ಕಾರ್ಯಗಳು ಮುಗಿಯುತ್ತಾ ಬಂದಿದೆ.ರಸ್ತೆಗಳು ಹದಗೆಟ್ಟಿರುವುದು ನಿಜವಾದರೂ ಇದಕ್ಕೆ ಕಾರಣ ಹಿಂದಿನ ಕಾಂಗ್ರೆಸ್ ಸರಕಾರ.ಅವರ ಆಡಳಿತದ ಆರು ವರ್ಷದ ಅವಧಿಯಲ್ಲಿ ಸಿದ್ದಾಪುರ 1750ಕಿ.ಮಿ ಗ್ರಾಮೀಣ ರಸ್ತೆಗೆ ಕೇವಲ 1-ಕೋಟಿರೂ.ಕೊಡುತ್ತಿದ್ದರು ಆದರೆ ಈಗ ಪರಿಸ್ಥಿತಿ ಬದಲಾಗಿದೆ ಸಾಕಷ್ಟು ಅನುದಾನಗಳನ್ನು ತರಲಾಗುತ್ತಿದೆ ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ರಸ್ತೆಗಳು ಸುಧಾರಣೆ ಆಗುತ್ತದೆ ಎಂದು ಭರವಸೆ ನೀಡಿದರು
ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ಅಭಿವೃದ್ಧಿ ಎಂದರೆ ಕೇವಲ ರಸ್ತೆ ನಿರ್ಮಾಣ,ಗಟಾರ ನಿರ್ಮಾಣವಷ್ಟೆ ಅಲ್ಲ ಬೇರೆ ಬೇರೆ ರೀತಿಯಿಂದ ಹೊಸ ಆಯಾಮದಲ್ಲಿ ಅಭಿವೃದ್ಧಿ ಆಗಬೇಕಿದೆ ಜಗತ್ತು ಬದಲಾಗುತ್ತಿದೆ ಅದಕ್ಕೆ ತಕ್ಕಂತೆ ನಮ್ಮ ಅಭಿವೃದ್ಧಿಯ ಆದ್ಯತೆಯೂ ಬದಲಾಗಬೇಕು ಕೇಂದ್ರ ಸರಕಾರ ಈ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲಾ ಯೋಜನೆಗಳನ್ನು ತರಲಾಗುತ್ತಿದೆ ಹೊನ್ನಾವರ ಹಾಗೂ ಅಂಕೋಲಾಗಳಲ್ಲಿ ಬಂದರು ನಿರ್ಮಾನ ಮಾಡಲಾಗುತ್ತಿದೆ ಇದರಿಂದ ಈಡೀ ಜಿಲ್ಲೆಗೆ ಅನುಕೂಲವಾಗಲಿದೆ,ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ,ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ,ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್,ಕೃಷ್ಣಮೂರ್ತಿ ಮಡಿವಾಳ ಉಪಸ್ಥಿತರಿದ್ದರು.