ಆದ್ಯೋತ್ ಸುದ್ದಿನಿಧಿ
ಪುರಾತನ ಕಾಲದಿಂದಲೂ ಬ್ರಿಟಷರ ಆಶ್ರಯದಲ್ಲಿಯೂ ಲೋಕೊಪಯೋಗಿ ರಸ್ತೆ ಎಂದು ಸರಕಾರದ ದಾಖಲೆಯಲ್ಲಿ ಪ್ರಸ್ತಾಪಿಸಲ್ಪಟ್ಟ ನಿಲ್ಕುಂದ ಮಾರ್ಗವಾಗಿ ಬಡಾಳ ವರೆಗೂ ಕುಮಟ ಸಂಪರ್ಕ ಕಲ್ಪಿಸುವ ರಸ್ತೆ ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಚಾರಕ್ಕೆ ಸಂಪೂರ್ಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸರ್ವಋತು ರಸ್ತೆಗೆ ಅಗ್ರಹಿಸಿ ದಿನಾಂಕ 18 ಗುರುವಾರ ಬೃಹತ್ ಪಾದಯಾತ್ರೆಯನ್ನು ಸಂಘಟಿಸಲು ತಿರ್ಮಾನಿಸಲಾಗಿದೆ.
ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ನೇತೃತ್ವದಲ್ಲಿ, ತಂಡಾಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೀರಾ ಗೌಡ ಅಧ್ಯಕ್ಷತೆಯಲ್ಲಿ ನಿಲ್ಕುಂದದಲ್ಲಿ ಶುಕ್ರವಾರ ಜರುಗಿದ ಸಾರ್ವಜನಿಕ ಸಭೆಯಲ್ಲಿ ನಿರ್ಣಯಿಸಲಾಗಿದ್ದು ರಸ್ತೆಗಾಗಿ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಲಾಗಿದೆ.
ಪುರಾತನ ಕಾಲದಿಂದಲೂ ಕರಾವಳಿ ಭಾಗಕ್ಕೆ ಘಟ್ಟದ ಮೇಲಿನ ಪ್ರದೇಶಕ್ಕೆ ಏಕೈಕ ಸಂಪರ್ಕ ರಸ್ತೆ ಇದಾಗಿತ್ತು. ತದನಂತರ ದೇವಿಮನೆ ಘಟ್ಟದ ರಸ್ತೆ ಮಾಡಲ್ಪಟ್ಟಿದ್ದು. ತದನಂತರ ನಿಲ್ಕುಂದ-ಕುಮಟ ಸಂಪರ್ಕದ ರಸ್ತೆ ಸರಕಾರ ಮತ್ತು ಜನಪ್ರತಿನಿಧಿಗಳಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾಧಕರ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹೋರಾಟ ಅನಿವಾರ್ಯವೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು. ಈ ರಸ್ತೆಯ ನಂತರ ಸ್ಥಾಪಿತವಾದ ದೇವಿಮನೆ ರಸ್ತೆ ಅಭಿವೃದ್ದಿಗೆ ಸರಕಾರ ಲಕ್ಷ್ಯ ವಹಿಸಿತ್ತೆ ವಿನಹ ನಿಲ್ಕುಂದ-ಬಡಾಳ ರಸ್ತೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ.
ಸಿದ್ಧಾಪುರ ತಾಲೂಕಿನ ನಿಲ್ಕುಂದ, ತಂಡಾಗುಂಡಿ, ಹೆಗ್ಗರಣೆ, ಜಾನ್ಮನೆ ಕೆಲವು ಭಾಗದವರಿಗೆ ಕೇವಲ 30-35 ಕೀ.ಮಿ ಅಂತರದಲ್ಲಿ ಕುಮಟಕ್ಕೆ ತಲುಪಲು ಅವಕಾಶವಿದ್ದು ಅಸಮರ್ಪಕ ರಸ್ತೆ ನಿರ್ವಹಣೆಯಿಂದ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಭಾಗದವರು ಈಗ 55-60 ಕೀಮಿ ದೂರ ಪ್ರಯಾಣಿಸಿ ಕುಮಟಕ್ಕೆ ತಲುಪುವ ಪ್ರಯಾಸ ಮಾಡುತ್ತಿದ್ದಾರೆ.
ಹಿಗಾಗಿ ಸಿದ್ಧಾಪುರ ತಾಲೂಕಿನ 7 ಕೀ.ಮಿ, ಕುಮಟ ತಾಲೂಕಿನ 7 ಕೀ.ಮಿ ದುರಸ್ತಿ ಮತ್ತು ಕಾಮಗಾರಿ ಕಾರ್ಯ ಆಗಬೇಕು ಎಂದು ಆಗ್ರಹಿಸಿ ಈ ದಿಶೆಯಲ್ಲಿ ಸರಕಾರದ ಗಮನ ಸೆಳೆಯಲು ಈ ಭಾಗದ ಜನಸಾಮಾನ್ಯರ ಮೂಲಭೂತ ಸೌಕರ್ಯದಲ್ಲಿ ಒಂದಾದ ಈ ಸರ್ವಋತು ರಸ್ತೆಯನ್ನಾಗಿ ಮಾಡಲು ನಿರಂತರ ಹೋರಾಟ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ.
ಸಭೆಯಲ್ಲಿ ನಾಗುಪತಿ ಗೌಡ ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ರವೀಶ್ ಗೌಡ, ಸೀತಾರಾಮ ಗೌಡ ನೀರಗಾನ ಜಿಲ್ಲಾ ಸಂಚಾಲಕರು, ಎಪಿಎಂಸಿ ಸದಸ್ಯರು ಸೀತಾರಾಮ ನಿಂಗಾ ಗೌಡ, ದೇವೆಗೌಡ ಹೆಗ್ಗೆ, ರಮೇಶ ನಾಯ್ಕ, ಮಂಜುನಾಥ ನಾಯ್ಕ ಹೊಂಡಗದ್ದೆ, ಸೀತಾರಾಮ ಗೌಡ ಹುಕ್ಕಳಿ, ಹರಿಹರ ನಾಯ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 300 ಕ್ಕೂ ಹೆಚ್ಚು ಗ್ರಾಮಸ್ಥರು ಉಪಸ್ಥಿತರಿದ್ದರು.
ಸರ್ವಋತು ರಸ್ತೆಗೆ ಅಗ್ರಹಿಸಿ ಫೆಬ್ರವರಿ 18 ಗುರುವಾರ ಮುಂಜಾನೆ 9:30 ಗಂಟೆಗೆ ನಿಲ್ಕುಂದದಿಂದ ಬೃಹತ್ ಪಾದಯಾತ್ರೆ ಪ್ರಾರಂಭವಾಗಿ ಕರ್ಮನಘಟಗಿಯಿಂದ 2 ಕಿ.ಮಿ ದೂರದಲ್ಲಿರುವ ಸಿದ್ಧಾಪುರ–ಕುಮಟ ಗಡಿಯಾದ ಪೆರಲಮಾರಿಯಲ್ಲಿಯವರೆಗೂ 7 ಕಿ.ಮಿ ಪಾದಯಾತ್ರೆಯೂ 11 ಗಂಟೆಗೆ ತಲುಪಿ ಸಭೆಯಾಗಿ ಪರಿವರ್ತನೆಗೊಳ್ಳುವುದು. ಸದ್ರಿ ಸಭೆಗೆ ಕಂದಾಯ, ಪೋಲಿಸ್, ಲೋಕೊಪಯೋಗಿ ಹಾಗೂ ಅರಣ್ಯ ಇಲಾಖೆಯವರಿಗೆ ಮುಂಚಿತವಾಗಿ ಸಭೆಯಲ್ಲಿ ಉಪಸ್ಥಿತರಿದ್ದು, ರಸ್ತೆ ದುರಸ್ಥಿಗೆ ಮತ್ತು ವಿಳಂಬಕ್ಕೆ ಕಾರಣದ ಸ್ಪಷ್ಪೀಕರಣ ನೀಡುವಂತೆ ಅಗ್ರಹಿಸಲಾಗುವುದೆಂದು ಸಭೆಯಲ್ಲಿ ತಿರ್ಮಾನಿಸಲಾಗಿದೆ.