ಆದ್ಯೋತ್ ಸುದ್ದಿನಿಧಿ:
ಯಕ್ಷಗಾನ ಕಲೆ ಒಂದು ಕಷ್ಟಕರವಾದ ಕಲೆಯಾಗಿದ್ದು ನಾಟ್ಯ ಪ್ರಮುಖವಾಗಿದ್ದರೂ ಅರ್ಥಗಾರಿಕೆ ಹಾಗೂ ಅಭಿನಯವೂ ಅಷ್ಟೆ ಮುಖ್ಯವಾಗಿದೆ. ರಾತ್ರಿ ನಿದ್ದೆಗೆಟ್ಟು ಸಂಸಾರದಿಂದ ದೂರ ಉಳಿದು ಕಲೆಯ ಆರಾಧನೆಯ ಜೊತೆಗೆ ಜೀವನ ನಿರ್ವಹಣೆಯನ್ನು ಮಾಡಬೇಕಾದ ಅನಿವಾರ್ಯತೆ ಕಲಾವಿದರಿಗಿರುತ್ತದೆ ಹೀಗಾಗಿ ಯುವಪೀಳಿಗೆ ಈ ಕಲೆಯಿಂದ ಹಿಂದೆಸರಿಯುತ್ತಿದೆ ಇದರ ನಡುವೆಯೇ ಕೆಲವರು ಈ ಕಲೆಯ ಆಕರ್ಷಣೆಗೆ ಒಳಗಾಗಿ ಕಾಲಿಡುತ್ತಿರುವುದು ಆಶಾದಾಯಕ ಬೆಳವಣಿಗೆ ಇಂತಹ ಯುವಕರಲ್ಲಿ ಒಬ್ಬರು ಷಣ್ಮುಖ ಗೌಡ ಬಿಳೆಗೋಡು.
ಸಿದ್ದಾಪುರ ತಾಲೂಕಿನ ಬಿಳೆಗೋಡುನಲ್ಲಿ ಜನಿಸಿರುವ ಷಣ್ಮುಖ ಗೌಡ ಗುಣವಂತೆಯ ಕೆರಮನೆ ಶ್ರೀಮಯ ಕಲಾಕೇಂದ್ರದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕೆರಮನೆ ಶಂಭು ಹೆಗಡೆಯವರಿಂದ ಯಕ್ಷಗಾನದ ಶಿಕ್ಷಣವನ್ನು ಪಡೆದಿದ್ದಾರೆ. ಬಾಲ್ಯದಿಂದಲೂ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡಿದಿದ್ದ ಗೌಡರ ತಾಯಿಯ ತಂದೆ,ಸೋದರ ಮಾವಂದಿರು ಯಕ್ಷಗಾನ ಕಲಾವಿದರೆ ಆದರೆ ಇವರೆಲ್ಲರೂ ಹವ್ಯಾಸಿ ಕಲಾವಿದರು ಆದರೆ ಷಣ್ಮುಖ ಗೌಡ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ
ಗುಂಡಬಾಳ,ಮಂದಾರ್ತಿ ಮೇಳದಲ್ಲಿ ಸೇವೆ ಸಲ್ಲಿಸಿ ಕಳೆದ ಹತ್ತುವರ್ಷದಿಂದ ಸಾಲಿಗ್ರಾಮ ಮೇಳದ ಪ್ರಮುಖ ಸ್ತ್ರೀ ಪಾತ್ರಧಾರಿಗಳಾಗಿದ್ದಾರೆ. ಅಂಬೆ,ದಾಕ್ಷಾಯಣಿ,ಸುಭದ್ರೆ,ದ್ರೌಪದಿ ಮುಂತಾದ ಪಾತ್ರಗಳನ್ನು ಖ್ಯಾತಕಲಾವಿದರೊಡನೆ ನಟಿಸಿ ಸೈ ಎನಿಸಿಕೊಂಡಿದ್ದಾರೆ ಅಭಿಮಾನಿಗಳಲ್ಲಿ ಯಕ್ಷಗಾನದ ಉಮಾಶ್ರೀ ಎಂಬ ಹೆಸರನ್ನು ಪಡೆದಿದ್ದಾರೆ.
#
ಸಾಕಷ್ಟು ಯುವಕರಿಗೆ ಯಕ್ಷಗಾನದ ಒಲವು ಇದ್ದರೂ ಸೂಕ್ತ ಮಾರ್ಗದರ್ಶನವಿರುವುದಿಲ್ಲ ಈ ಕೊರತೆಯನ್ನು ನೀಗಿಸಲು ಷಣ್ಮುಖ ಗೌಡ ಯಕ್ಷೋನ್ಮುಖ ಕಲಾ ಬಳಗ ಸ್ಥಾಪಿಸಿದ್ದಾರೆ. ಯುವ ಪೀಳಿಗೆಗೆ ತರಬೇತಿ ನೀಡುವುದರ ಜೊತೆಗೆ ಯಕ್ಷಗಾನ ಪ್ರದರ್ಶನ ಎರ್ಪಡಿಸುವುದು,ತಾಳಮದ್ದಲೆ ನಡೆಸುವುದು ಇತ್ಯಾದಿ ಯಕ್ಷಗಾನ ಕಲೆಗೆ ಸಂಬಂಧಿಸಿದ ಕೆಲಸ ಮಾಡುವುದರ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎನ್ನುತ್ತಾರೆ ಷಣ್ಮುಖ ಗೌಡ.
#
ನಮ್ಮ ತಾಯಿಯ ಮನೆ ಕಡೆಯಿಮದ ಯಕ್ಷಗಾನ ಕಲಾವಿದರು ಇದ್ದರು ಕೆಲವು ಪುಂಡು ವೇಷಗಳನ್ನು ಮಾಡುವ ಮೂಲಕ ಯಕ್ಷಗಾನಕ್ಕೆ ಪ್ರವೇಶಿಸಿದೆ ಖ್ಯಾತ ಯಕ್ಷಗಾನ ಸ್ತ್ರೀವೇಷಧಾರಿಗಳಾದ ಭಾಸ್ಕರ ಜೋಷಿ ಶಿರಳಗಿ,ಅಶೊಕ ಭಟ್ಟ ಸಿದ್ದಾಪುರ ಇವರ ಒತ್ತಾಸೆಯಿಂದ ಸ್ತ್ರೀಪಾತ್ರವನ್ನು ಮಾಡಲಾರಂಭಿಸಿದೆ. ಅಂಬೆ,ಸುಭದ್ರೆ,ದೌಪದಿ ಇತ್ಯಾದಿ ಪಾತ್ರಗಳನ್ನು ಮಾಡಿದ್ದೇನೆ ಎಂದು ಹೇಳುತ್ತಾರೆ ಷಣ್ಮುಖ ಗೌಡ
.