ಶ್ರೀಹರಿಪಾದ ಸೇರಿದ ಪರ್ತಗಾಳಿಮಠದ ಶ್ರೀವಿದ್ಯಾಧಿರಾಜತೀರ್ಥರು

ಆದ್ಯೋತ್ ಸುದ್ದಿನಿಧಿ:
ಗೌಡಸಾರಸ್ವತ ಸಮಾಜದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀವಿದ್ಯಾಧಿರಾಜತೀರ್ಥರು ಸೋಮವಾರ
ಶ್ರೀಹರಿಪಾದವನ್ನು ಸೇರಿದ್ದಾರೆ.
ಯಾವುದೇ ಅನಾರೋಗ್ಯವನ್ನು ಹೊಂದಿರದ ನಿತ್ಯಾನುಷ್ಠಾನದಲ್ಲಿ ತೊಡಗಿಕೊಂಡಿದ್ದ ಗೋವಾದ ಪರ್ತಗಾಳಿಯ ಶ್ರೀಮಠದಲ್ಲಿ 77 ವಯಸ್ಸಿನ ಶ್ರೀಗಳು ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ
ಎಂದು ತಿಳಿದುಬಂದಿದೆ.

ಶ್ರೀಮನ್ಮಧ್ವಾಚಾರ್ಯರ ಸಿದ್ಧಾಂತವನ್ನು ಅನುಸರಿಸುತ್ತಿರುವ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ಪೀಠಗಳಲ್ಲಿ ಒಂದಾದ ಶ್ರೀ ಗೋಕರ್ಣ ಪರ್ತಗಾಳೀ ಜೀವೋತ್ತಮ ಮಠವು ಶ್ರೀನಾರಾಯಣತೀರ್ಥರಿಂದ ಪ್ರವರ್ತಿತವಾದಂತಹ ಮಠ. ಶ್ರೀರಾಮ ಹಾಗೂ ಶ್ರೀವೀರವಿಠ್ಠಲದೇವರನ್ನು ಮಠದ ಪ್ರಧಾನ ದೇವರು.
ಈ ಮಠದ ಪರಂಪರೆಯ ಶ್ರೀಇಂದಿರಾಕಾಂತತೀರ್ಥರ ತರುವಾಯ ಐವತ್ತಕ್ಕೂ ಹೆಚ್ಚಿನ ಚಾತುರ್ಮಾಸಗಳನ್ನು ಆಚರಿಸಿರುವವರು ಶ್ರೀವಿದ್ಯಾಧಿರಾಜತೀರ್ಥರು.

ಶ್ರೀಸೇನಾಪುರ ಲಕ್ಷ್ಮೀನಾರಾಯಣಾಚಾರ್ಯ ದಂಪತಿಗಳ ಪುತ್ರರಾಗಿ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯಲ್ಲಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಶ್ರೀರಾಘವೇಂದ್ರಾಚಾರ್ಯರು.
ಶ್ರೀದ್ವಾರಕಾನಾಥ ತೀರ್ಥರಿಂದ 1967ರ ಫೆಬ್ರವರಿ 26ರಂದು ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಿದ ಶ್ರೀರಾಘವೇಂದ್ರಾಚಾರ್ಯರು ಶ್ರೀವಿದ್ಯಾಧಿರಾಜತೀರ್ಥರಾದರು.

1973ರಲ್ಲಿ ಶ್ರೀದ್ವಾರಕಾನಾಥತೀರ್ಥರು ಪರಂಧಾಮವನ್ನು ಸೇರುವವರೆಗೂ ತಮ್ಮಗುರುಗಳ ಬಳಿಯಲ್ಲಿ ಅಧ್ಯಯನ ನಡೆಸಿದ ಶ್ರೀವಿದ್ಯಾಧಿರಾಜರು 1973ರ ಏಪ್ರಿಲ್ 5ರಂದು ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿದರು. ಪೀಠಾರೋಹಣದ ನಂತರ ಶಾಖಾಮಠಗಳ ಜೀರ್ಣೋದ್ಧಾರ, ದೇಗುಲಗಳ ನಿರ್ಮಾಣ, ಮೂಲಮಠದ ನವೀಕರಣ, ದಾಮೋದರ ಕುಂಡವೂ ಸೇರಿದಂತೆ ಅನೇಕ ಹಿಮಾಲಯದ ದುರ್ಗಮ ಪ್ರದೇಶಗಳ ಸಂದರ್ಶನ, ಗಂಗೋತ್ರಿಯಿಂದ ಗಂಗಾಸಾಗರ ಸಂಗಮದವರೆಗಿನ ಯಾತ್ರೆ, ಗಂಡಕೀ ಯಾತ್ರೆಯೂ ಸೇರಿದಂತೆ ಅಷ್ಟೋತ್ಕೃಷ್ಟ ವೈಷ್ಣವಕ್ಷೇತ್ರ ಸಂದರ್ಶನ (ಪಾದಯಾತ್ರೆಯಲ್ಲಿ) ಯಜ್ಞ, ಕೋಟಿ ಶ್ರೀರಾಮನಾಮ ಯಜ್ಞ, ಶತಕೋಟಿ ರಾಮನಾಮ ಯಜ್ಞ,ಮಹಾವಿಷ್ಣುಯಾಗ ಮೊದಲಾದ ಯಾಗಗಳ ನೇತೃತ್ವ, ಅಯೋಧ್ಯ, ಮಥುರಾ, ಕಂಚಿ ಮೊದಲಾದ ಸಪ್ತ ಮೋಕ್ಷದಾಯಕ ಕ್ಷೇತ್ರಗಳ ಸಂದರ್ಶನ, ಬದರೀಕ್ಷೇತ್ರದಲ್ಲಿ ಚಾತುರ್ಮಾಸ ಹೀಗೆ ಹಲವು ಹತ್ತು ವೈಷ್ಣವಕಾರ್ಯಗಳಲ್ಲಿ ಸದಾ ತತ್ಪರರಾದ ಶ್ರೀಸ್ವಾಮಿಗಳು ಆಸೇತು ಹಿಮಾಲಯ (ನೇಪಾಳದೇಶವೂ ಸೇರಿದಂತೆ) ಭಾರತವನ್ನು ಸಂಚರಿಸಿದ್ದಾರೆ.

ಶ್ರೀಗಳು 4-7-1998ರಲ್ಲಿ ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಮಾಧ್ವ ತತ್ತ್ವಜ್ಞಾನದ ಮೇರುಕೃತಿ ಶ್ರೀಜಯತೀರ್ಥರ ‘ಶ್ರೀಮನ್ನ್ಯಾಯಸುಧಾ’ಮಂಗಳಮಹೋತ್ಸವವನ್ನು ನೆರವೇರಿಸಿದರು.

ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿರುವ ಶ್ರೀಗಳು ಮಾಧ್ವ ತತ್ತ್ವಜ್ಞಾನದ ಬಹುತೇಕ ಎಲ್ಲಾ ಮಹತ್ತ್ವದ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವುದರೊಂದಿಗೆ ಸಂಸ್ಕೃತ ಕಾವ್ಯಗಳಾದ ಕುಮಾರಸಂಭವ, ಕೀರಾತಾರ್ಜುನೀಯ, ರಘುವಂಶ ಮೊದಲಾದವುಗಳ ಬಗ್ಗೆ ಸಹಾ ಅಸಾಧಾರಣವೈದುಷ್ಯವನ್ನು ಹೊಂದಿದ್ದಾರೆ. ಜ್ಯೋತಿಷ್ಯ,ಧರ್ಮಶಾಸ್ತ್ರ, ಆಗಮಶಾಸ್ತ್ರಗಳಲ್ಲಿಯೂ ಶ್ರೀಗಳ ಪಾಂಡಿತ್ಯ ಅಪೂರ್ವವಾದದ್ದು.
(ಸಂಗ್ರಹ)

About the author

Adyot

Leave a Comment