ಸ್ವಾತಂತ್ರ್ಯ ಹೋರಾಟದಲ್ಲಿ ಸಿದ್ದಾಪುರದ ಮಹಿಳೆಯರು

ಆದ್ಯೋತ್ ಸುದ್ದಿನಿಧಿ:ಕೆಕ್ಕಾರ ನಾಗರಾಜ ಭಟ್ಟ ಸಿದ್ದಾಪುರ.
ಬಹುತೇಕ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರು ಭಾಗವಹಿಸಿದ ದಾಖಲೆ ದೇಶದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಸಂಗ್ರಾಮದಲ್ಲಿ 208 ಮಹಿಳೆಯರು ಧುಮುಕಿ ಬ್ರಿಟಿಷರ ಹಿಂಸೆ ಅನುಭವಿಸಿದ್ದು ದೇಶಭಕ್ತಿಯ ಪ್ರತೀಕವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಕರನಿರಾಕರಣೆ ಸತ್ಯಾಗ್ರಹವು ಅತ್ಯಂತ ರೋಮಾಂಚಕಾರಿಯಾದುದು.ಈ ಕರನಿರಾಕರಣೆಯಲ್ಲಿ ವಿಶೇಷವಾಗಿ ಸಿದ್ದಾಪುರ ತಾಲೂಕಿನ ಮಾವಿಗುಂಡಿಯಲ್ಲಿ ಹಾಗೂ ಅಕ್ಕುಂಜಿ ಗ್ರಾಮದಲ್ಲಿ ನಡೆದ ಮಹಿಳೆಯರ ಉಪವಾಸ ಸತ್ಯಾಗ್ರಹ-ಸೆರೆವಾಸವು ದೇಶಭಕ್ತಿ, ಛಲ, ಸಂಕಲ್ಪ, ತ್ಯಾಗ ಹಾಗೂ ಧೈರ್ಯದ ನಿದರ್ಶನವಾಗಿದೆ.
1932ರಲ್ಲಿ ಕರನಿರಾಕರಣೆ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಸ್ತ್ರವಾಗಿ ಹೋರಾಟಗಾರರು ಕಂಡುಕೊಂಡಿದ್ದರು. ಕರ ನೀಡದವರ ಚರ-ಸ್ಥಿರ ಸೊತ್ತುಗಳನ್ನು ಬ್ರಿಟಿಷ್ ಅಧಿಕಾರಿಗಳು ಹರಾಜು ಹಾಕುತ್ತಿದ್ದರು. ಹರಾಜಿನಲ್ಲಿ ದೊರೆತ ಹಣವನ್ನು ಕರಬಾಕಿಗೆ ಜಮಾ ಮಾಡಿಕೊಳ್ಳಲಾಗುತ್ತಿತ್ತು. ಸಂದರ್ಭದ ಲಾಭ ಪಡೆಯಲು ಕೆಲ ದೇಶದ್ರೋಹಿಗಳು ಮುಂದಾಗಿ ಅಲ್ಪ ಬೆಲೆಗೆ ಹರಾಜಿನ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಇಂತಹ ಕುಟಿಲ ವ್ಯಕ್ತಿಗಳನ್ನು ಸಮಾಜ ಗುರುತಿಸಿ ಅವರಿಗೆ ಬುದ್ಧಿ ಕಲಿಸುವಲ್ಲಿ ಸಹ ಮುಂದಾಗಿತ್ತು.

1932ರ ಮೇ 18 ರಂದು ಮಾವಿನಗುಂಡಿಯಲ್ಲಿ ಕರ ನೀಡದ ರೈತರ ಬೆಲೆಬಾಳುವ ಎಮ್ಮೆಗಳನ್ನು ರಸ್ತೆ ಕೆಲಸದ ಕಾರಕೂನ ಹಾಗೂ ಓರ್ವ ಹವಾಲ್ದಾರ ಪಡೆದುಕೊಂಡರು. ಇದರಿಂದ ಕೆಂಡಾಮಂಡಲವಾದ ತಾಲೂಕಿನ ಮಹಿಳೆಯರನೇಕರು ವಿಶೇಷವಾಗಿ ಬಾಣಂತಿಯರು, ವಯಸ್ಸಾದವರು ಸಹಿತವಾಗಿ ಅಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. ಬ್ರಿಟಿಷ್ ಅಧಿಕಾರಿಗಳು ಯಾವರೀತಿಯ ಹಿಂಸೆ ನೀಡಿದರೂ ಸತ್ಯಾಗ್ರಹಿಗಳ ದೃಢ ನಿರ್ಧಾರ ಬದಲಾಗಲಿಲ್ಲ. ತ್ಯಾಗಲಿ ಭುವನೇಶ್ವರಮ್ಮ(32 ದಿವಸಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು),ಕಲ್ಲಾಳ ಲಕ್ಷ್ಮಮ್ಮ(21 ದಿನಗಳ ಉಪವಾಸ ಸತ್ಯಾಗ್ರಹ) ಇವರುಗಳೊಂದಿಗೆ ದೊಡ್ಮನೆ ಮಹಾದೇವಮ್ಮ, ಕುಳಿಬೀಡು ಗಣಪಮ್ಮ, ಹಣಜೀಬೈಲು ದುಗ್ಗಮ್ಮ, ಕುಳೀಬೀಡು ಭಾಗೀರಥಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡ ಮಾದೇವಮ್ಮ, ಹೆಗ್ಗಾರ ದೇವಮ್ಮ ಮುಂತಾದವರು ಸತತ ಸತ್ಯಾಗ್ರಹ ನಡೆಸಿದರು. ಅಲ್ಲಿಯೇ ಇದ್ದ ಚಿಕ್ಕ ಜೈಲಿನ ಕೊಠಡಿಯಲ್ಲಿ ಈ ಮಹಿಳೆಯರನ್ನು ಬಂಧಿಸಿ ಇಡಲಾಗಿತ್ತು. ಅಂದು ಈ ಮಹಿಳೆಯರ ದಿಟ್ಟ ಹೋರಾಟವು ದೇಶದ ಗಮನವನ್ನು ಸಹ ಸೆಳೆದಿತ್ತು. ಮದ್ರಾಸಿನ “ಹಿಂದೂ”ಪತ್ರಿಕೆ ಹಾಗೂ “ದಿ ಫ್ರೀ ಪ್ರೆಸ್ ಜರ್ನಲ್‍ನಂತಹ ಪತ್ರಿಕೆಗಳು ಮಾವಿನಗುಂಡಿಯ ಮಹಿಳೆಯರ ಹೋರಾಟದ ಗಾಥೆಯನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ರಾಷ್ಟ್ರಮಟ್ಟದ ಘಟನೆಯಾಗಿ ವರದಿಮಾಡಿ ಸ್ವಾತಂತ್ರ್ಯ ಪ್ರೇಮಿಗಳಲ್ಲಿ ದೇಶಾಭಿಮಾನ ಹೆಚ್ಚಿಸಿತ್ತಲ್ಲದೇ ಬ್ರಿಟಿಷ್ ಅಧಿಕಾರಿಗಳಿಗೆ ನಡುಕ ಹುಟ್ಟುವಂತೆ ಮಾಡಿತ್ತು.

ಸತ್ಯಾಗ್ರಹಿ ಸ್ತ್ರೀಯರನ್ನು ಕಂಡು ಮಾಲುಕೊಂಡವರಲ್ಲಿ ಒಬ್ಬನು ತನ್ನಲ್ಲಿದ್ದ ಎಮ್ಮೆಯನ್ನು ದಾನಪತ್ರ ಬರೆದು ಬಿಟ್ಟುಕೊಟ್ಟರೆ, ಮತ್ತೊಬ್ಬನು ಎಮ್ಮೆ ಮಾರಿದ್ದನು. ಆತನಿಗೆ ಬಂದ ಹಣವನ್ನು ನೀಡುವಂತೆ ಶ್ರೀಮತಿ ಗೌರಮ್ಮ ಸೇರಿದಂತೆ ಇತರ ಸತ್ಯಾಗ್ರಹಿಗಳು ಉಪವಾಸ ವ್ರತ ತೊಟ್ಟರು. ಪೊಲೀಸರು ಮಹಿಳಾ ಸತ್ಯಾಗ್ರಹಿಗಳನ್ನು ಹೊಡೆದು ಬಂಧಿಸಿ ಸಿದ್ದಾಪುರಲ್ಲಿಯ ಲಾಕಪ್ಪಿನಲ್ಲಿಟ್ಟರೂ ಅವರ್ಯಾರೂ ಎದೆಗುಂದಲಿಲ್ಲ. ವಿಚಾರಣೆ ನಡೆಸಿದ ಪೋಲೀಸರು ಅವರನ್ನು ಒದ್ದು, ಗುದ್ದಿ, ಎಳೆದುಕೊಂಡು ಹೋಗಿ ದೊಡ್ಮನೆ ನಾಗೇಶ ಹೆಗಡೆಯವರ ಮನೆಯ ಎದುರು ಎಸೆದರು. ಸ್ತ್ರೀಯರ ಮೈಯಿಂದ ಧಾರಾಕಾರವಾಗಿ ರಕ್ತ ಹರಿದು ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ವೈದ್ಯರು ಬಂದು ಔಷಧೋಪಚಾರ ಮಾಡಿದ ಮೇಲೆ ಅವರಿಗೆ ಎಚ್ಚರಾಯಿತು. ಮರುದಿನವೂ ಗೌರಮ್ಮನವರನ್ನು ಜೈಲಿಗೆ ತರಲಾಯಿತು. ಗೌರಮ್ಮನವರಂತೂ ಜೈಲಿನಲ್ಲಿದ್ದಾಗ ಊಟವಿರಲಿ ಹಣ್ಣು ತಂದು ತಿನ್ನಲು ಕೊಟ್ಟರೂ ಅದನ್ನು ನಿರಾಕರಿಸಿದರು. “ನಾನು ಮಹಾತ್ಮಾ ಗಾಂಧಿಯವರ ಸೈನ್ಯದ ಸೈನಿಕೆ ಇದ್ದೇನೆ, ಸತ್ಯಾಗ್ರಹಿ ಇದ್ದೇನೆ. ಹಿಡಿದ ವ್ರತವನ್ನೆಂದಿಗೂ ಬಿಡುವುದಿಲ್ಲ. ಸತ್ಯಾಗ್ರಹಿ ಮಾಲು ಸತ್ಯಾಗ್ರಹಿಗೆ ಹಿಂದಿರುಗಿ ಕೊಡಲ್ಪಡಬೇಕು. ಇಲ್ಲವೇ ಅನ್ಯಾಯದ ಸರಕಾರಕ್ಕೆ ಸಜಾ ಆಗಬೇಕು. ಇವೆರಡರಲ್ಲಿ ಒಂದು ಆಗುವವರೆಗೂ ನಾನು ನೀರು ಹೊರತೂ ಮತ್ತೇನನ್ನೂ ಮುಟ್ಟುವುದಿಲ್ಲ. ನಿಮ್ಮ ಶಿಕ್ಷೆ ಎಷ್ಟು,ಒಂದು ವರುಷವೋ ಎರಡು ವರುಷವೋ ಓದಿ ಹೇಳಿಬಿಡಿರಿ” ಎಂದು ಘಂಟಾಘೋಷ ಮಾಡಿದರು. ಅಂದು ಸತ್ಯಾಗ್ರಹಿ ಎ.ಎನ್.ಚನ್ನಪ್ಪ ಅವರು ಸಿದ್ದಾಪುರ ಪೇಟೆಯಲ್ಲಿ ಡಂಗುರ ಹೊಡೆದು “ನಿನ್ನೆ ದಿನ ಶ್ರೀಮತಿ ಗೌರಮ್ಮ ಮುಂತಾದ ಸ್ತ್ರೀ ಸತ್ಯಾಗ್ರಹಿಗಳ ಮೇಲೆ ನಡೆದ ಅನ್ಯಾಯದ ಬಗ್ಗೆ ಖಂಡಿಸಲು ಎಲ್ಲರೂ ಹರತಾಳ ಮಾಡಿ” ಎಂದು ಕರೆನೀಡಿದರು. ಕೂಡಲೇ ಸಿದ್ದಾಪುರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳೂ ಮುಚ್ಚಿ ಹರತಾಳ ಆಚರಿಸಿದವು. ಸತ್ಯಾಗ್ರಹಿ ಚನ್ನಪ್ಪನವರು ಕೈದಾದರು. ಮಾಮಲೇದಾರರು-ಫೌಜದಾರ, ಇನ್ಸಪೆಕ್ಟರ್, ಶ್ಯಾನುಭೋಗ, ಪಟೇಲರು ಮತ್ತು ಪೋಲೀಸರೊಡಗೂಡಿ ನೀವು ಹರತಾಳ ಮಾಡಿದರೆ ಆರ್ಡಿನನ್ಸ ಮುರಿದಂತಾಗುತ್ತದೆ. ನಿಮಗೆ 1 ಸಾವಿರ ರೂ. ದಂಡ ಮತ್ತು 1 ವರ್ಷ ಸಜಾ ಆಗುತ್ತದೆ ಎಂದು ಅಂಗಡಿಕಾರರಿಗೆ ಧಮಕಿ ಹಾಕಿದರು. ಆದರೂ ಯಾರೊಬ್ಬರೂ ಅಂಗಡಿ ಬಾಗಿಲು ತೆರೆಯದೇ ಧೈರ್ಯ ಮೆರೆದರು.

…………………………………
ಸಿದ್ದಾಪುರದಿಂದ ಶಿರಸಿಯಿಂದ ಹೊರಡುತ್ತಿದ್ದ ಸತ್ಯಾಗ್ರಹ ಕರಪತ್ರವು ಅಕ್ಕುಂಜಿ ಗ್ರಾಮದಲ್ಲಿ ನಡೆದ ಕರನಿರಾಕರಣೆ ಕುರಿತು, ಸಿದ್ದಾಪುರದ ಅಂದಿನ ಪೋಲೀಸರ ಹಿಂಸಾತ್ಮಕ ಕೃತ್ಯದ ಕುರಿತು “ಸಿದ್ದಾಪುರ ಪೋಲೀಸರ ರಾಕ್ಷಸೀ ನೃತ್ಯ” ಎಂಬ ಶಿರೋನಾಮೆಯಲ್ಲಿ ಬಣ್ಣಿಸಿದೆ. ಕರಪತ್ರದಲ್ಲಿಯ ಕೋಟ್ಸ ಹೀಗೆ ತಿಳಿಸುತ್ತದೆ. ” ಸ್ತ್ರೀಯರನ್ನು ಸಾಯಬಡಿದರು, ಮೈಯ್ಯೆಲ್ಲ ಗುದ್ದಿದರು, ಕೋವಿಯಿಂದ ತಿವಿದರು, ಲಾಠಿಯಿಂದ ಹೊಡೆದರು, ಬಳೆ ಒಡೆದರು, ಬಾಯಿಗೆ ಬಂದಂತೆ ಬೈಯ್ದರು, ಕೇಸರೀ ಸೀರೆ ಜಗ್ಗಿ ಸುಲಿದು ಬೇರೇ ಸೀರೆ ಕೊಟ್ಟರು. ಸ್ತ್ರೀಯರು ಮೂರ್ಛೆ ಹೋದರು” ಹೀಗೆ ಅಂದಿನ ಸತ್ಯಾಗ್ರಹಿ ಸ್ತ್ರೀಯರು ಅನುಭವಿಸಿದ ನರಕ ಯಾತನೆಯನ್ನು ಕರಪತ್ರ ಬಿಂಬಿಸುತ್ತದೆ. “ಅಕ್ಕುಂಜಿಯಲ್ಲಿ ಸತ್ಯಾಗ್ರಹಿಗಳ ಮಾಲನ್ನು ಲಿಲಾವಿನಲ್ಲಿ ಕೊಂಡಿದ್ದ ಜನರ ಮನೆಯ ಮುಂದೆ ಸತ್ಯಾಗ್ರಹ ಮಾಡಿ ಮಾಲನ್ನು ಹಿಂದಿರುಗಿಸಲು ಹಿಂದುಸ್ತಾನೀ ಸೇವಾದಳದ ಶಿಕ್ಷಣ ವಿದ್ಯಾಪೀಠದ ಡೈರೆಕ್ಟರ್ ಕೆ.ಎ.ವೆಂಕಟರಾಮಯ್ಯನವರ ಧರ್ಮಪತ್ನಿ ಶ್ರೀಮತಿ ಗೌರಮ್ಮನವರು, ಕಲ್ಲಾಳ ಮಹಾಬಲೇಶ್ವರ ಭಟ್ಟರ ಧರ್ಮಪತ್ನಿ ಶ್ರೀಮತಿ ಕಾವೇರಮ್ಮನವರು, ಹಣಜೀಬೈಲ ಶ್ರೀಮತಿ ದುಗ್ಗಮ್ಮನವರು, ಶಿರಳಗಿಯ ಶ್ರೀಮತಿ ಭಾಗೀರಥಮ್ಮನವರು ಈ ನಾಲ್ಕು ಜನ ಸ್ತ್ರೀಯರು ಅಕ್ಕುಂಜಿ ಗ್ರಾಮಕ್ಕೆ ತಾ. 16-4-32 ನೇ ದಿನ ಹೋದರು” ಎಂದೂ ಅಂದಿನ ಘಟನೆಯನ್ನು ಕರಪತ್ರದಲ್ಲಿ ತಿಳಿಸಲಾಗಿದೆ.
…….

ಈ ಹಿಂದೆ ಮಹಿಳಾ ಸತ್ಯಾಗ್ರಹವನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಸಿದ್ದಾಪುರದ ಮಾವಿನಗುಂಡಿಯಲ್ಲಿ ಆಕರ್ಷಕವಾಗಿ ಸ್ಮಾರಕ ನಿರ್ಮಿಸಲಾಗಿತ್ತಾದರೂ ಇಂದು ಅದು ಕಾಲನ ತುಳಿತಕ್ಕೆ ಸಿಲುಕಿ ತನ್ನ ಮೂಲ ಉದ್ದೇಶವನ್ನು ಬಿಂಬಿಸುವಲ್ಲಿ ವಂಚಿತವಾಗಿದೆ. ದೇಶದಾದ್ಯಂತ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿಯಾದರೂ ಅದನ್ನು ಸುಸ್ಥಿತಿಗೆ ತರುವ ಕಾರ್ಯ ಆಡಳಿತದಿಂದ ಆಗಬೇಕಿತ್ತು. ಇನ್ನು ಮುಂದಾದರೂ ಅಲ್ಲಿಯ ಸ್ಮಾರಕವನ್ನು ಮತ್ತಷ್ಟು ಆಕರ್ಷಣೀಯವಾಗಿ ರೂಪಿಸಿ ಅದನ್ನು ಪ್ರವಾಸಿ ತಾಣವಾಗಿ ರೂಪಿಸಿದಲ್ಲಿ ಅಂದಿನ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ನ್ಯಾಯ ನೀಡಿದಂತಾಗುತ್ತದೆ.
….

About the author

Adyot

1 Comment

Leave a Comment