ಇಂದು ರಸ್ತೆಗಿಳಿಯದ ಶಿರಸಿ ವಿಭಾಗದ ಬಸ್ ಗಳು

ಆದ್ಯೋತ್ ಸುದ್ದಿನೀಧಿ:
ಶುಕ್ರವಾರ ದಿಢೀರ್ ಆಗಿ ಪ್ರಾರಂಭವಾದ ರಾಜ್ಯರಸ್ತೆ ಸಾರಿಗೆ ನೌಕರರ ಮುಷ್ಕರ ಶನಿವಾರ ಕೂಡಾ ಮುಂದುವರಿದಿದ್ದು ರಾಜ್ಯಾದ್ಯಂತ ಇಂದು ಕೂಡಾ ಬಸ್ ಗಳು ರಸ್ತೆಗೆ ಇಳಿದಿಲ್ಲ.
ಶುಕ್ರವಾರ ಉತ್ತರಕನ್ನಡ ಜಿಲ್ಲೆಯಲ್ಲಿ ಬಂದ್ ನಡೆದಿರಲಿಲ್ಲ.
ದೂರದ ಊರುಗಳಿಗೆ ಹೋಗುವ ಬಸ್ ಗಳನ್ನು ಬಿಟ್ಟಿರಲಿಲ್ಲ ಆದರೆ ಜಿಲ್ಲೆಯ ಒಳಭಾಗದಲ್ಲಿ ಹಾಗೂ ಗ್ರಾಮಾಂತರ ಭಾಗದಲ್ಲಿ ಬಸ್ ಗಳ ಸಂಚಾರವಿತ್ತು. ಆದರೆ ಶನಿವಾರ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಶಿರಸಿ ಬಸ್ ಡಿಪೋ ಸೇರಿದಂತೆ ಶಿರಸಿ ವಿಭಾಗದ 6 ಡಿಪೊದಿಂದ ಬಸ್ ಹೊರಡುತ್ತಿಲ್ಲ ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಶಿರಸಿ ವಿಭಾಗದಲ್ಲಿ ಅನಂತ ಸುಬ್ಬರಾವ್ ನೇತೃತ್ವದ ಎಐಟಿಯುಸಿ ಸಂಘಟನೆಯ ಸದಸ್ಯರು ಹೆಚ್ಚಾಗಿದ್ದಾರೆ.
ಸಾರಿಗೆ ಮುಷ್ಕರಕ್ಕೆ ಎಐಟಿಯುಸಿ ಬೆಂಬಲ ಕೊಡದ ಕಾರಣ ನಿನ್ನೆ ಬಸ್ ರಸ್ತೆಗಿಳಿದಿತ್ತು ಆದರೆ ರಾಜ್ಯದ ಬೇರೆ ಬೇರೆ ವಿಭಾಗದಲ್ಲಿ ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆಯ ಬಿಸಿ ಹೆಚ್ಚಾದ ಕಾರಣ ಇಂದು ಎಲ್ಲರೂ ಸ್ವ- ಇಚ್ಛೆಯಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.

ಶಿರಸಿ ವಿಭಾಗದಲ್ಲಿ 6000-7000 ನೌಕರರಿದ್ದು ಸುಮಾರು 500ಕ್ಕೂ ಹೆಚ್ಚು ಬಸ್ ಗಳಿವೆ.
ಶಿರಸಿಯಲ್ಲಿ ಸುಮಾರು140ಕ್ಕೂ ಹೆಚ್ಚು ಬಸಗಳಿದ್ದು ರಾಜ್ಯದ ಬೇರೆ ಬೇರೆ ಕಡೆಗಳಿಗೆ ಬಸ್ ಸಂಚರಿಸುತ್ತದೆ ಚಾಲಕ- ನಿರ್ವಾಹಕರು 800ಕ್ಕೂ ಹೆಚ್ಚು ಇದ್ದು ಉಳಿದ ಸಿಬ್ಬಂದಿಗಳು ಸೇರಿ 1500ಕ್ಕೂ ಹೆಚ್ಚು ಜನರಿದ್ದಾರೆ.

ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಮುಖಂಡರು ಹೇಳುವವರೆಗೆ ನಾವು ಪ್ರತಿಭಟನೆ ಮುಂದುವರಿಸುತ್ತೇವೆ.ಶಿರಸಿ ಡಿಪೋದಿಂದ ಬಸ್ ಸಂಚಾರ ಇರುವುದಿಲ್ಲ.
ಪ್ರಭಾಕರ ಶೆಟ್ಟಿ
ಅಧ್ಯಕ್ಷರು
ಶಿರಸಿ ಡಿಪೋ

About the author

Adyot

Leave a Comment