ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ್ ಮಾಧ್ಯಮದವರೊಂದಿಗೆ ಮಾತನಾಡಿ,
ಕರ್ನಾಟಕ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ತೆಗೆದುಕೊಂಡ ನಿಯಮಗಳನ್ನ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಪಾಲಿಸಲೇಬೇಕು. ಒಂದೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳು ಒಂದೊಂದು ನಿಯಮ ಮಾಡಿದರೆ ಸಾಧ್ಯವಿಲ್ಲ
ಇದರಲ್ಲಿ ಯಾವುದೇ ಸಡಿಲತೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಈಗಿರೋದು ಒಂದು ದಿನದ ಯಕ್ಷಗಾನ ಅಥವಾ ನಾಟಕದ ಪ್ರಶ್ನೆ ಅಲ್ಲ. ಇದು ಜಿಲ್ಲೆಯ ಜನರ ಭವಿಷ್ಯದ ಪ್ರಶ್ನೆ.ಕೊವಿಡ್ ಏನಾದರೂ ವ್ಯಾಪಿಸಿದರೆ ಆರ್ಥಿಕ ಉದ್ಯಮಗಳ ಮೇಲೆ
ಜಿಲ್ಲೆಯ ಪ್ರವಾಸೋದ್ಯಮದ ಮೇಲೆ,ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.ಇನ್ನು ಮುಂದೆ ಯಾರೂ ಒತ್ತಡ ತರಬೇಡಿ. ಸರಕಾರ ಸೂಚಿಸಿರುವ ಕೊವಿಡ್ ನಿಯಮಾವಳಿಗಳನ್ನು ಪಾಲಿಸಿದರೆ ಯಾವುದೇ ಕಾರ್ಯಕ್ರಮಕ್ಕೂ ಅಡ್ಡಿಪಡಿಸುವುದಿಲ್ಲ ಪರಿಸ್ಥಿತಿ ಬದಲಾದಂತೆ ಕಾನೂನು,ನಿಯಮ ಬದಲಾಗುತ್ತದೆ. ಇದು ಎಲ್ಲರಿಗೂ,ಎಲ್ಲದಕ್ಕೂ ಅನ್ವಯಿಸುತ್ತದೆ ಎಂದು ಹೆಬ್ಬಾರ ಹೇಳಿದರು.
ಇದಕ್ಕೂ ಮೊದಲು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಜೊತೆ ” ಜಿಲ್ಲಾ ಕ್ರೀಡಾಂಗಣದಲ್ಲಿ ನೂತನ ಒಳಾಂಗಣ ಕ್ರೀಡಾಂಗಣ ” ನಿರ್ಮಾಣ ಮಾಡುವ ಕುರಿತು ಸಭೆ ನಡೆಸಿದರು.
ಸಿದ್ದಾಪುರ ಕ್ರೀಡಾಂಗಣದ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದಾಪುರ ಕ್ರೀಡಾಂಗಣದ ಕಾಮಗಾರಿ ಎಲ್ಲಿವರೆಗೆ ಬಂದಿದೆ ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರ ನೀಡಲು ಅಧಿಕಾರಿಗಳು ತಡಬಡಾಯಿಸಿದರು
ಲೊಕೋಪಯೋಗಿ ಇಲಾಖೆಯ ಅಧಿಕಾರಿ ಕಾಮಗಾರಿಯ ಅಂದಾಜು ಕಳಿಸಿದ್ದೇವೆ ಎಂದು ಹೇಳಿದರು
ಆದರೆ ಇನ್ನೂ ಯುವಜನ ಮತ್ತು ಕ್ರೀಡಾ ಇಲಾಖೆಗೆ ಅಂದಾಜು ಬಂದಿಲ್ಲ ಅಂತ ಕ್ರೀಡಾ ಇಲಾಖೆ ಅಧಿಕಾರಿ ಉತ್ತರಿಸಿದರು.
ಇದರಿಂದ ಕೆರಳಿದ ಸಚಿವ ಶಿವರಾಮ್ ಹೆಬ್ಬಾರ್, ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದ್ದಾಗ ಇದೆಲ್ಲಾ ಸಂಭವಿಸುತ್ತೆ. ಸ್ಪೀಕರ್ ಕ್ಷೇತ್ರದ ಕಾಮಗಾರಿಯ ಬಗ್ಗೆಯೇ ಈ ರೀತಿಯ ಅಸಡ್ಡೆ ತೋರುತ್ತಿರೋದು ಖಂಡನೀಯ. ನೀವೆಲ್ಲಾ ಏನು ಕೆಲಸ ಮಾಡುತ್ತೀರಿ, ಇನ್ನು ಒಂದು ವಾರದೊಳಗಾಗಿ ಸಿದ್ದಾಪುರ ಕ್ರೀಡಾಂಗಣದ ಸಮಗ್ರ ಚಿತ್ರಣ ನನ್ನ ಮುಂದೆ ಇರಬೇಕು. ಏನೇನು ಕೆಲಸಗಳು ಆಗಬೇಕೋ ಅದನ್ನು ಒಂದು ವಾರದೊಳಗಾಗಿ ನನಗೆ ತಿಳಿಸಿ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದರು.
ಶಿರಸಿ ಕ್ರೀಡಾಂಗಣ ನಿರ್ಮಾಣದ ರೂಪರೇಷೆಗಳ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು ನಂತರ ಅರ್ಹ ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ ಅನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಎಲ್.ಟಿ.ಪಾಟೀಲ್,ಉಷಾ ಹೆಗಡೆ, ನಗರಸಭೆಯ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.