ಆದ್ಯೋತ್ ಸುದ್ದಿನಿಧಿ:
2000ನೇ ಇಸ್ವಿಯಲ್ಲಿ ಕೊಲೆಯಾಗಿದ್ದ ಅಂದಿನ ಕಾರವಾರ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಆರೋಪಿಗೆ 21 ವರ್ಷಗಳ ನಂತರ ಅಂತೂ ಶಿಕ್ಷೆ ಪ್ರಕಟವಾಗಿದೆ.
ಶಾಸಕ ವಸಂತ ಅಸ್ನೋಟಿಕರ ಹತ್ಯೆ ಮಾಡಿದ್ದ ಆರೋಪಿ ರಾಜನ್ ಅಲಿಯಾಸ್ ಸಂಜಯ ಕಿಶನ್ ಮೊಹಿತೆ ಎನ್ನುವವನಿಗೆ
ಶಿರಸಿ1ನೇ ಅಧಿಕ ಜಿಲ್ಲಾ ಸತ್ರನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಹಾಗೂ 68000ರೂ.ದಂಡ ಪ್ರಕಟಿಸಲಾಗಿದೆ.
2000ನೇ ಇಸ್ವಿ ಫೆಬ್ರವರಿ-19 ರಂದು ರಾತ್ರಿ 8 ಗಂಟೆಯ ಸುಮಾರಿಗೆ ಕಾರವಾರದ ದೈವಜ್ಞ ಕಲ್ಯಾಣಮಂಟಪದಲ್ಲಿ ನಡೆಯಲಿರುವ ಮಗಳ ಮದುವೆಯ ಆರತಕ್ಷತೆಯ ತಯಾರಿಯನ್ನು ನೋಡಿಕೊಂಡು ಹೊರಬರುತ್ತಿರುವಾಗ ಇಬ್ಬರು ಹಂತಕರು ಬೈಕ್ ನಲ್ಲಿ ಬಂದು ಹಿಂದೆಕುಳಿತಿದ್ದ ಹಂತಕ ಸಂಜಯ ಮೊಹಿತೆ 4 ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದರು.
ಆಸ್ನೋಟಿಕರ ರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳಿದಿದ್ದರು.
ಸರಕಾರ ಸಿಓಡಿ ತನಿಖೆಗೆ ಆದೇಶಿಸಿತ್ತು.
ಹತ್ಯೆಯ ಸಂಚನ್ನು ರೂಪಿಸಿ ಸುಫಾರಿ ನೀಡಿ ಸಂಜಯ ಮೋಹಿತನಿಂದ ಕೊಲೆ ಮಾಡಿಸಿದ್ದ ಮುಖ್ಯ ಆರೋಪಿ ದಿಲೀಪ್ ನಾಯ್ಕ ವಿಚಾರಣೆ ಹಂತದಲ್ಲೆ ಹತ್ಯೆಯಾಗಿದ್ದ.ಸಂಚಿನಲ್ಲಿ ಭಾಗವಹಿಸಿದ್ದ ಇಬ್ಬರು ಆರೋಪಿಗಳನ್ನು ದೋಷಾರೋಪಣೆ ಸಲ್ಲಿಸುವ ಮೊದಲೇ ಮುಂಬೈ ಪೊಲೀಸ್ ಎನಕೌಂಟರ್ ಮಾಡಿದ್ದರು.ಈಗ ಇಬ್ಬರು ಆರೋಪಿಗಳು ಖುಲಾಸೆಗೊಂಡಿದ್ದು
ಗುಂಡು ಹಾರಿಸಿ ಹತ್ಯೆಗೈದವನಿಗೆ ಶಿಕ್ಷೆ ಪ್ರಕಟವಾಗಿದೆ.
ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರವಾರ ನ್ಯಾಯಾಲಯದಿಂದ ಶಿರಸಿ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಗೊಂಡಿತ್ತು.ಸರಕಾರಿ ಅಭಿಯೋಜಕಿ ಸುನಂದಾ ಈಶ್ವರಪ್ಪ ಮಡಿವಾಳ ಪ್ರಕರಣವನ್ನು ಯಶಸ್ವಿಯಾಗಿ ನಡೆಸಿ ಆರೋಪಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ.
ಒಂದು ಪ್ರಕರಣ 21 ವರ್ಷಗಳ ದೀರ್ಘಕಾಲದವರೆಗೆ ನಡೆದು ಆರೋಪಿಗೆ ಶಿಕ್ಷೆಯಾಗಿರುವುದು ನಿಜವಾಗಿದ್ದರೂ ಅಪರಾಧಿಗೆ ಮುಂದಿನ ಕಾನೂನು ಹೋರಾಟಕ್ಕೆ ಅವಕಾಶವಿದೆ ಅಲ್ಲಿ ಇನ್ನಷ್ಟು ವಿಳಂಬವಾದರೆ ಶಿಕ್ಷೆ ಪಡೆಯಲು ಅಪರಾಧಿ ಇರುವುದು ಅನುಮಾನ ಎಂಬುದು ಜನಸಾಮಾನ್ಯರ ಮಾತು.