ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಸುದ್ದಿಗೋಷ್ಠಿ ನಡೆಸಿದರು.
ಭೀಮಣ್ಣ ನಾಯ್ಕ ಮಾತನಾಡಿ,ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ನಿಯಂತ್ರಿಸಲು ವಿಫಲವಾಗಿವೆ. ಇದನ್ನು ಖಂಡಿಸಿ ಈಗಾಗಲೇ ಕಾಂಗ್ರೆಸ್ನಿಂದ ೫ ದಿನ ಪ್ರತಿಭಟಿಸಲಾಗಿದೆ.
ಜು.೭ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಸಲಾಗುವುದು.
ರಾಜ್ಯದಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಹೀಗಾಗಿ ಇಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಆಕಾಂಕ್ಷಿಗಳಾಗುವುದು ಸಹಜ. ಆದರೆ ಆಕಾಂಕ್ಷಿಗಳೆಲ್ಲ ಅಭ್ಯರ್ಥಿಗಳಲ್ಲ ಪಕ್ಷ ಸಂಘಟನೆ ಬೂತ್ ಮಟ್ಟದಿಂದ ಆಗಬೇಕು. ತಳಮಟ್ಟದ ಕಾರ್ಯಕರ್ತರ ತೀರ್ಮಾನ, ಪಕ್ಷದ ಪ್ರಮುಖರ ತೀರ್ಮಾನವೇ ಅಂತಿಮವಾಗಿರುತ್ತದೆ. ಟಿಕೆಟ್ ಆಕಾಂಕ್ಷಿಗಳೆನಿಸಿಕೊಂಡವರು ಇದನ್ನು ತಿಳಿದುಕೊಳ್ಳಬೇಕು ಇವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನೀವು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಭೀಮಣ್ಣ ನಾಯ್ಕ,ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಸಂಘಟನೆಯಲ್ಲಿ ತೊಡಗಿ ಎಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ. ಅದೇ ರೀತಿ ಕಾರ್ಯಚಟುವಟಿಕೆ ನಡೆಯುತ್ತಿದೆ. ನಾನು ಕೂಡ ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ. ಅದೇ ಹಕ್ಕಿನಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಈ ಕ್ಷೇತ್ರದ ಟಿಕೆಟ್ ಕೇಳುತ್ತೇನೆ.ಕೆಪಿಸಿಸಿಯ 4 ರಾಜ್ಯಾಧ್ಯಕ್ಷರ ಅಡಿ ಕೆಲಸ ಮಾಡಿದ್ದೇನೆ. ಹಲವು ಚುನಾವಣೆಗಳನ್ನು ಗೆಲ್ಲಿಸಿದ್ದೇನೆ. ಇಲ್ಲಿ ಸಂಘಟನೆ ಮುಖ್ಯ. 12 ವರ್ಷಗಳ ಕಾಲ ಜಿಲ್ಲಾಧ್ಯಕ್ಷನಾಗಿ ಕಾರ್ಯ ಮಾಡಿದ್ದೇನೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ಬದಲಾವಣೆ ಕಾರ್ಯ ಪಕ್ಷದ ಆಂತರಿಕ ವ್ಯವಸ್ಥೆ. ಯಾರೇ ಜಿಲ್ಲಾಧ್ಯಕ್ಷರಾದರೂ ಅವರಿಗೆ ಸಹಕಾರ ನೀಡುವುದು ಪ್ರತಿ ಕಾರ್ಯಕರ್ತನ ಕರ್ತವ್ಯ. ಅದೇ ರೀತಿ ನಾನು ಕೂಡ ಸಹಕಾರ ನೀಡುತ್ತೇನೆ ಕೋವಿಡ್ ಸಂಕಷ್ಟಕ್ಕೆ ಕಾಂಗ್ರೆಸ್ ಸ್ಪಂದಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜಿಲ್ಲಾ ಪ್ರವಾಸ ಕೈಗೊಂಡು ಅಲ್ಲಿನ ಸ್ಥಿತಿಗತಿ ಪರಿಶೀಲಿಸಿ, ಕಾಂಗ್ರೆಸ್ ಕಾರ್ಯಕರ್ತರು ಕೋವಿಡ್ ನಿಯಂತ್ರಿಸಲು ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂಬುದನ್ನು ತಿಳಿಸುತ್ತಿದ್ದಾರೆ. ಅದೇ ರೀತಿ ಉತ್ತರ ಕನ್ನಡಕ್ಕೂ ಆಗಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ವಿ.ಎಸ್.ಆರಾಧ್ಯ, ದೀಪಕ ದೊಡ್ಡೂರು, ಶ್ರೀನಿವಾಸ ನಾಯ್ಕ, ಎಸ್.ಕೆ.ಭಾಗವತ, ಅಬ್ಬಾಸ್ ತೋನ್ಸೆ, ಜಗದೀಶ ಗೌಡ, ಬಸವರಾಜ ದೊಡ್ಮನಿ, ಕುಮಾರ ಜೋಶಿ ಉಪಸ್ಥಿತರಿದ್ದರು.